ವಿಶ್ವ ಶಿಕ್ಷಣ ಮತ್ತು ಆರ್ಥಿಕ ಸಮಾವೇಶಗಳಲ್ಲಿ ಪಾಲ್ಗೊಳ್ಳಲು ಲಂಡನ್, ದಾವೋಸ್ ಗೆ ಸಚಿವ ಅಶ್ವತ್ ನಾರಾಯಣ್  ಪ್ರಯಾಣ.

kannada t-shirts

ಬೆಂಗಳೂರು,ಮೇ,18,2022(www.justkannada.in):  ಲಂಡನ್ ನಗರದಲ್ಲಿ ಇದೇ 19ರಂದು ನಡೆಯಲಿರುವ ಕಾಮನ್ ವೆಲ್ತ್ ರಾಷ್ಟ್ರಗಳ ಶಿಕ್ಷಣ ಸಮಾವೇಶ, 22ರಿಂದ ಅಲ್ಲೇ ನಡೆಯಲಿರುವ ವರ್ಲ್ಡ್ ಎಜುಕೇಷನ್ ಫೋರಂ ಸಮಾವೇಶ ಮತ್ತು 23ರಿಂದ ಸ್ವಿಜರ್ಲೆಂಡಿನ ದಾವೋಸ್ ನಗರದಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಸಮಾವೇಶದಲ್ಲಿ ಉನ್ನತ ಶಿಕ್ಷಣ ಮತ್ತು ಐಟಿ-ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ ನಾರಾಯಣ್ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಇದೇ ಇಂದು ಲಂಡನ್ನಿಗೆ ಪ್ರಯಾಣ ಬೆಳೆಸಲಿದ್ದಾರೆ.

ಕಾಮನ್ ವೆಲ್ತ್ ಶಿಕ್ಷಣ ಸಮಾವೇಶವನ್ನು ಅಂತಾರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮವು ಏರ್ಪಡಿಸಿದ್ದು, ಸಾರ್ವಜನಿಕ ನೀತಿ ನಿರೂಪಣೆಗಳ ಮೇಲೆ ಚರ್ಚಿಸುವ ಚಿಂತಕರ ಚಾವಡಿ ಮತ್ತು ಸರಕಾರೇತರ ಸ್ವಯಂಸೇವಾ ಸಂಸ್ಥೆ `ಬ್ರಿಗೇಡ್ ಇಂಡಿಯಾ’ ಕೂಡ ಕೈಗೂಡಿಸಿದೆ.

ಇದರಲ್ಲಿ ಭಾರತ, ಯುನೈಟೆಡ್ ಕಿಂಗ್ಡಂ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮುಂತಾದ ದೇಶಗಳ 150ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಇಲ್ಲಿ ಅಶ್ವತ್ ನಾರಾಯಣ್ ಅವರು, 2020ರಲ್ಲಿ ಘೋಷಿಸಲಾದ ಭಾರತದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಧಾನವಾಗಿ ಇಟ್ಟುಕೊಂಡು, `21ನೇ ಶತಮಾನದಲ್ಲಿ ರಾಷ್ಟ್ರೀಯ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವುದು ಹೇಗೆ?’ ಎನ್ನುವ ಬಗ್ಗೆ ಮಾತನಾಡಲಿದ್ದಾರೆ.

ಈ ಸಮಾವೇಶದಲ್ಲಿ ಮುಖ್ಯವಾಗಿ, ಭಾರತದಲ್ಲಿ ಉನ್ನತ ಶಿಕ್ಷಣದ ಹಂತದಲ್ಲಿ ಬೋಧನೆ ಮತ್ತು ಕೌಶಲ್ಯ ಕಲಿಕೆಗಳ ನಡುವೆ ಇರುವ ಅಂತರವನ್ನು ಕುರಿತು ಕೂಡ ಚರ್ಚೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಮಾವೇಶದಲ್ಲಿ ಉನ್ನತ ಶಿಕ್ಷಣ ಸಂಶೋಧಕರು ಮತ್ತು ಎಡ್-ಟೆಕ್ ಪರಿಣಿತರು ಕೂಡ ಮಾತನಾಡಲಿದ್ದಾರೆ.

ಇದಾದ ಬಳಿಕ ವರ್ಲ್ಡ್ ಎಜುಕೇಷನ್ ಫೋರಂನಲ್ಲಿ ಸಚಿವರು 22 ಮತ್ತು 23ರಂದು ಪಾಲ್ಗೊಳ್ಳಲಿದ್ದು, ರಾಜ್ಯದ ವಿ.ವಿ.ಗಳು ವಿದೇಶೀ ಸಂಸ್ಥೆಗಳೊಂದಿಗೆ ಮಾಡಿಕೊಳ್ಳಬಹುದಾದ ಒಡಂಬಡಿಕೆಗಳು, ಟ್ವಿನ್ನಿಂಗ್ ಡಿಗ್ರಿ, ಬೋಧನೆ ಮತ್ತು ಸಂಶೋಧನಾ ವಿನಿಮಯ ಇತ್ಯಾದಿಗಳ ಬಗ್ಗೆ ಚರ್ಚಿಸಲಿದ್ದಾರೆ.

ಈ ಸಂದರ್ಭದಲ್ಲಿ ಸಚಿವರು ಸ್ಕಾಟ್ ಲ್ಯಾಂಡ್ ನಲ್ಲಿ ಇರುವ ಪ್ರತಿಷ್ಠಿತ ಎಡಿನ್ ಬರೊ ವಿವಿ ಮತ್ತು ದುಂಡಿ ವಿಶ್ವವಿದ್ಯಾಲಯಗಳ ಮುಖ್ಯಸ್ಥರ ಜತೆ ಸಭೆಗಳನ್ನು ಇಟ್ಟುಕೊಂಡಿದ್ದಾರೆ. ವಿವಿಧ ದೇಶಗಳ ಸಚಿವರ ಹಂತದ ಸಭೆಗಳಲ್ಲಿ ಕೂಡ ಭಾಗಿಯಾಗಲಿದ್ದಾರೆ.

ತಮ್ಮ ವಿದೇಶ ಪ್ರವಾಸದ ಕೊನೆಯ ಘಟ್ಟದಲ್ಲಿ ಸಚಿವ ಅಶ್ವಥ್ ನಾರಾಯಣ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ದಾವೋಸ್ ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು, ರಾಜ್ಯದ ಐಟಿ ಮತ್ತು ಬಿಟಿ ಕ್ಷೇತ್ರಗಳಲ್ಲಿ ಹೂಡಿಕೆಗೆ ಇರುವ ಸಮೃದ್ಧ ಅವಕಾಶಗಳನ್ನು ಕುರಿತು ಮನದಟ್ಟು ಮಾಡಿಕೊಡಲಿದ್ದಾರೆ.

ಸಚಿವರ ಜತೆ ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲ್ ಜೋಶಿ ಅವರು ನಿಯೋಗದಲ್ಲಿ ತೆರಳಲಿದ್ದಾರೆ.

Key words: Minister -Ashwath Narayan -travels – Davos- London

website developers in mysore