ಎಂಇಎಸ್ ಪುಂಡಾಟ ಪ್ರಕರಣ: ನನಗೆ ಗೃಹಖಾತೆ ಕೊಟ್ಟು ನೋಡಿ ಬೊಮ್ಮಾಯಿಯವರೇ ಎಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್.

ವಿಜಯಪುರ, ಡಿಸೆಂಬರ್,18,2021(www.justkannada.in):  ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ವಿರೂಪಗೊಳಿಸಿ ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಎಂಇಎಸ್ ಪುಂಡಾಟ ಮೆರೆದ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ , ನನಗೆ ಗೃಹ ಖಾತೆ ಕೊಟ್ಟರೆ ಕೋಮು ಗಲಭೆಯ ಮಾತಿರಲಿ, ಒಬ್ಬನೂ ಕಮಕ್ ಕಿಮಕ್ ಎನ್ನದಂತೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಈ ಕುರಿತು ವಿಜಯಪುರದಲ್ಲಿ ಇಂದು ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,  ರಾಜ್ಯದಲ್ಲಿ ಕೋಮು ಗಲಭೆಗೆ ಸಂಪೂರ್ಣ ಕಡಿವಾಣ ಹಾಕಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನಗೆ ಗೃಹ ಖಾತೆ ಕೊಟ್ಟು ನೋಡಲಿ. ಹಾಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಒಳ್ಳೆಯ ವ್ಯಕ್ತಿ. ಅವರಿಗೆ ಕಂದಾಯ, ಅರಣ್ಯ ಖಾತೆಗಳು ಸೂಕ್ತ. . ನನಗೆ ಗೃಹ ಖಾತೆ ಕೊಟ್ಟು ನೋಡಿ ಎಂದು ಹೇಳಿದರು.

ರಾಜ್ಯದಲ್ಲಿ ಪದೇ ಪದೇ ಕೋಮು ಸೌಹಾರ್ಧಕ್ಕೆ ಧಕ್ಕೆ ಉಂಟಾಗುತ್ತಿವೆ. ಮತೀಯ ಭಾವನೆ ಕೆರಳಿಸುವ ಗಲಾಟೆಗಳು ಹೆಚ್ಚುತ್ತಿವೆ. ಇಂಥ ಘಟನೆಯಲ್ಲಿ ಸರ್ಕಾರ ದಿಟ್ಟ ಕ್ರಮ ತೆಗೆದುಕೊಳ್ಳಬೇಕು. ಮೆತ್ತಗೆ ಮಾತನಾಡಿದರೆ ಕೆಲವರಿಗೆ ಅರ್ಥವಾಗುವುದಿಲ್ಲ, ಇದರಿಂದ ಕಾನೂನು ಪಾಲನೆ ಅಸಾಧ್ಯ. ದೇಶ ವಿರೋಧಿ ಕೃತ್ಯದಲ್ಲಿ ತೊಡಗುವವರು ಎಂದಿಗೂ ನಮ್ಮ ಅಣ್ಣ- ತಮ್ಮಂದಿರಾಗಲು ಸಾಧ್ಯವಿಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು.

Key words:  MES –give-home minister-position-MLA-Basanagowda patil yatnal