ಮೇಕದಾಟು ಯೋಜನೆ :ಸುಪ್ರೀಂಕೋರ್ಟ್ ಗೆ ತಮಿಳುನಾಡು ಅರ್ಜಿ ಸರಿಯಾದ ಕ್ರಮ ಅಲ್ಲ-ಸಿಎಂ ಬೊಮ್ಮಾಯಿ ಖಂಡನೆ.

ಮೈಸೂರು,ಜೂನ್,8,2022(www.justkannada.in): ಕರ್ನಾಟಕದ ಮೇಕದಾಟು ಯೋಜನೆ ತಡೆಗಾಗಿ ಸುಪ್ರೀಂಕೋರ್ಟ್ ಗೆ ತಮಿಳುನಾಡು ಅರ್ಜಿ ಸಲ್ಲಿಸಿರುವುದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಖಂಡನೆ ವ್ಯಕ್ತಪಡಿಸಿದ್ದಾರೆ.

ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಿದರು. ನಗರದ ಮಂಡಕಳ್ಳೀ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿಗೆ, ಬಿಜೆಪಿ ಮುಖಂಡರು ಸ್ವಾಗತ ಕೋರಿದರು.

ಮಂಡಕಳ್ಳಿ ವಿಮಾನ ನಿಲ್ದಾಣದಿಂದ ನೇರವಾಗಿ ಸಚ್ಛಿದಾನಂದ ಆಶ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ತೆರಳಿದರು. ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಮೇಕದಾಟು ಯೋಜನೆ ತಡೆ ಹಿಡಿಯುವ ಸುಪ್ರೀಂಕೋರ್ಟ್‌ ಗೆ ತಮಿಳುನಾಡು ಅರ್ಜಿ ಹಾಕಿದೆ. ಇದು ನ್ಯಾಯ ಸಮ್ಮತವಲ್ಲ. ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡುವಂತೆ ಸುಪ್ರೀಂಕೋರ್ಟ್‌ ಗೆ ಅರ್ಜಿ ಸಲ್ಲಿಸಿರುವುದು ಸರಿಯಾದ ಕ್ರಮವೂ ಅಲ್ಲ. ಸುಪ್ರೀಂಕೋರ್ಟ್ ನಮಗೆ ನೋಟಿಸ್ ಕೊಟ್ಟಿದ್ದರು. ಅದಕ್ಕೆ ನಾವು ಸಮರ್ಥವಾದ ಉತ್ತರ ಕೊಟ್ಟಿದ್ದೇವೆ ಎಂದರು.

ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರ ಸುಪ್ರೀಂಕೋರ್ಟ್ ಆದೇಶದನ್ವಯ ರಚನೆಯಾಗಿದೆ. ಕಾವೇರಿ ನದಿಗೆ ಸಂಬಂಧಪಟ್ಟಂತೆ ಯಾವ ಯೋಜನೆ ಜಾರಿಗೊಳಿಸಬೇಕು, ಜಾರಿಗೊಳಿಸಬಾರದು ಎಂದು ತೀರ್ಮಾನ ಮಾಡುವ ಅಧಿಕಾರ ಪ್ರಾಧಿಕಾರಕ್ಕೆ ಮಾತ್ರ ಇದೆ. ಮೇಕೆದಾಟು ಯೋಜನೆ ಸಂಬಂಧ ಈಗಾಗಲೇ 16-17 ಸಭೆಗಳು ಆಗಿವೆ ಎಂದರು.

ಇನ್ನು ಲೊಕಾಯುಕ್ತ ನೇಮಕ ಪ್ರಕ್ರಿಯೆ ಪ್ರಗತಿಯಲ್ಲಿದೆ. ಶೀರ್ಘವೇ ಲೋಕಾಯುಕ್ತ ನೇಮಕವಾಗುತ್ತೆ. ಆ ವಿಚಾರದಲ್ಲಿ ಇನ್ನು ವಿಳಂಬವಾಗುವುದಿಲ್ಲ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ರಾಜ್ಯಸಭಾ ಚುನಾವಣಾ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ,  ನಾವು ಯಾರಿಗೂ ಆಫರ್ ನೀಡಿಲ್ಲ. ಜೆಡಿಎಸ್- ಕಾಂಗ್ರೆಸ್ ಏನು ಮಾಡುತ್ತಾರೋ ಗೊತ್ತಿಲ್ಲ. ನಮಗೆ ಮೂರು ಸ್ಥಾನ ಗೆಲ್ಲಲು ಮತಗಳಿವೆ. ನಾವು ಚುನಾವಣೆ ಗೆಲ್ಲುತ್ತೇವೆ ಎಂದರು.

ರಾಜ್ಯದಲ್ಲಿ ಚಡ್ಡಿ ರಗಳೆ ವಿಚಾರಕ್ಕೆ ಉತ್ತರಿಸಲು ಸಿಎಂ ಬೊಮ್ಮಾಯಿ ನಿರಾಕರಿಸಿದರು.

Key words: mekedatu-Plan-Taminadu – Supreme Court-CM Bommai