ರಾಷ್ಟ್ರೀಯ ರೈತ ಮುಖಂಡರ ದುಂಡುಮೇಜಿನ ರೈತ ಪರಿಷತ್ ಸಭೆಯಲ್ಲಿ ಹಲವು ತೀರ್ಮಾನ..

ಬೆಂಗಳೂರು,ಮಾರ್ಚ್,20,2022(www.justkannada.in): ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ರೈತ ಮುಖಂಡರ ದುಂಡುಮೇಜಿನ ರೈತ ಪರಿಷತ್ ಸಭೆಯ  ಹಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದ್ದು,ರಾಜ್ಯ ಈ ತೀರ್ಮಾನಗಳ ಬಗ್ಗೆ ಗಂಭೀರವಾಗಿ ಪರಿಗಣಿಸಲು  ಮನವಿ ಮಾಡಲಾಯಿತು.

ಭಾರತ ದೇಶದ ವಿವಿದ ರಾಜ್ಯಗಳಲ್ಲಿ ರೈತರು, ಹಾಗೂ ಕೃಷಿ ಕ್ಷೇತ್ರ ಅನುಭವಿಸುತ್ತಿರುವ ಸಮಸ್ಯೆಗಳು ಕುರಿತು  ದುಂಡು ಮೇಜಿನ ರೈತ ಪರಿಷತ್ ನಡೆಸಲಾಯಿತು.  ಈ ಸಭೆಯಲ್ಲಿ ಈ ಕೆಳಕಂಡ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಕೃಷಿ ಉತ್ಪನ್ನಗಳ ಮೇಲೆ ರಸಗೊಬ್ಬರ, ಕೀಟನಾಶಕ ಹನಿನೀರಾವರಿ ಉಪಕರಣಗಳ ಮೇಲೆ ವಿಧಿಸಿರುವ ಜಿಎಸ್ಟಿ ರದ್ದುಗೊಳಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು. ಪ್ರಸಕ್ತವಾಗಿರುವ ರೈತರ ಸಾಲ ನೀತಿ ಬದಲಾಯಿಸಿ ಕೃಷಿ ಭೂಮಿ ಮೌಲ್ಯದ ಶೇಕಡಾ 75ರಷ್ಟು ಸಾಲ ನೀಡುವಂತೆ ನೀತಿ ರೂಪಿಸಬೇಕು . ಕಬ್ಬಿನ ಎಫ್ ಆರ್ ಪಿ ದರವನ್ನು ರೈತರ ಹೊಲದಲ್ಲಿನ ದರ ಎಂದು ನಿಗದಿಪಡಿಸಬೇಕು, ಕಬ್ಬಿನಿಂದ ಉತ್ಪಾದಿಸುವ ಎಥನಾಲ್ ಘಟಕ ಆರಂಭಕ್ಕೆ  ಸಮೀಪದಲ್ಲಿರುವ ಸಕ್ಕರೆ ಕಾರ್ಖಾನೆ ಅನುಮತಿಬೇಕೆಂಬ ನಿಯಮದ ಮೀತಿ ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು,

ಎಲ್ಲಾ ಕೃಷಿ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿಗೊಳಿಸಿ ಶಾಸನಾತ್ಮಕ ಖಾತ್ರಿ ನೀಡುವಂತೆ ಕಾನೂನು ಜಾರಿಗೆ ತರಬೇಕು. ಎಲ್ಲ ಕೃಷಿ ಉತ್ಪನ್ನ ಬೆಳೆಗಳಿಗೂ ಫಸಲ್ ಬಿಮಾ ಬೆಳೆ ವಿಮೆ ಜಾರಿ ತರಬೇಕು. ಅತಿವೃಷ್ಟಿ-ಅನಾವೃಷ್ಟಿ ಆಕಸ್ಮಿಕ ಬೆಂಕಿ ಪ್ರವಾಹ ಹಾನಿ ಬೆಳೆ ನಾಶ ಪರಿಹಾರ ಮಾನದಂಡ ಬದಲಾಯಿಸಬೇಕು. ಅರಿಶಿನ ಮೇಲಿನ ಜಿಎಸ್ಟಿ ತೆರಿಗೆಯನ್ನು ರದ್ದು ಪಡಿಸಲು ಕೇಂದ್ರಕ್ಕೆ ಒತ್ತಾಯಿಸಬೇಕು.

ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಿದಂತೆ ರಾಜ್ಯದಲ್ಲಿ ಎಪಿಎಂಸಿ ಕಾಯ್ದೆ ,ಭೂ ಸುಧಾರಣೆ ಕಾಯ್ದೆ ತಿದ್ದುಪಡಿ  ರದ್ದುಗೊಳಿಸುವ ಬಗ್ಗೆ, ಸರ್ಕಾರದ ನಿರ್ಧಾರ ಪ್ರಕಟಿಸಬೇಕು. ಅರಣ್ಯ ವನ್ಯಮೃಗಗಳ ಸಂರಕ್ಷಣೆ, ಮಾನವ ರಕ್ಷಣಾ ಕಾನೂನು 1972ಕ್ಕೆ ತಿದ್ದುಪಡಿ ತರುವಂತೆ ಕೇಂದ್ರಕ್ಕೆ ಒತ್ತಾಯಿಸಬೇಕು. ತೆಲಂಗಾಣ ಸರ್ಕಾರ ಜಾರಿಗೆ ತಂದಿರುವ ರೈತ ಬಂಧು ಯೋಜನೆ ಕರ್ನಾಟಕದಲ್ಲಿಯೂ ಜಾರಿಗೆ ತಂದು ಪ್ರತಿ ರೈತರಿಗೆ ಪ್ರತಿ ಎಕರೆಗೆ ಪ್ರತಿ ವರ್ಷ 10 ಸಾವಿರ ಪ್ರೋತ್ಸಾಹಧನ ನೀಡುವ ಯೋಜನೆ ಜಾರಿಗೆ ತರಬೇಕು.

ತೆಲಂಗಾಣ ಸರಕಾರ ಜಾರಿ ಮಾಡಿರುವ  ಪ್ರತಿ ರೈತ ಕುಟುಂಬಕ್ಕೆ ಐದು ಲಕ್ಷ ರೂಗಳ ಜೀವ ವಿಮಾ ಯೋಜನೆಯನ್ನು ಕರ್ನಾಟಕದಲ್ಲಿಯೂ ಜಾರಿಗೆ ತರಬೇಕು. ತಮಿಳುನಾಡಿನಲ್ಲಿ ಪ್ರತಿ ಟನ್ ಕಬ್ಬಿಗೆ ಎಫ್ ಆರ್ ಪಿ ದರದ ಮೇಲೆ ಹೆಚ್ಚುವರಿಯಾಗಿ 200 ರೂಪಾಯಿ ನೀಡಲಾಗುತ್ತದೆ ಅದರಂತೆ ಕರ್ನಾಟಕದಲ್ಲಿಯೂ ನೀಡಬೇಕು

ಕೊರೋನ ಲಾಕ್ ಡೌನ್ ಸಂಕಷ್ಟದಲ್ಲಿ ಸಿಲುಕಿರುವ ಎಲ್ಲಾ ರೈತ ಉತ್ಪಾದಕ ಸಂಸ್ಥೆಗಳಿಗೆ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿ ಹೊಸ ಸಾಲ ಎಂದು ಪರಿಗಣಿಸಿ ಕಾರ್ಯಯೋಜನೆಗಳನ್ನು ರೂಪಿಸಿಕೊಂಡು ಮುನ್ನಡೆಸಲು ಪ್ರೋತ್ಸಾಹಿಸಬೇಕು

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಈ ಬಗ್ಗೆ ಗಂಭೀರವಾಗಿ ಗಮನ ಹರಿಸಬೇಕು ಎಂದು ರಾಷ್ಟ್ರೀಯ ರೈತ ಮುಖಂಡರ ದುಂಡುಮೇಜಿನ ರೈತ ಪರಿಷತ್ ಒತ್ತಾಯಿಸಿದೆ. ಈ ಸಭೆಗೆ ಕರ್ನಾಟಕ ತಮಿಳುನಾಡು ಕೇರಳ ,ಆಂಧ್ರ, ತೆಲಂಗಾಣ  ಮಹಾರಾಷ್ಟ್ರ, ಹರಿಯಾಣ, ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿ ಚರ್ಚಿಸಲಾಗಿದೆ.

ಈ ನಿಯೋಗದಲ್ಲಿ ರಾಷ್ಟ್ರೀಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಾಗೂ ಅರಿಶಿನ ಬೆಳೆಗಾರರ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕುರುಬೂರು ಶಾಂತಕುಮಾರ್ ರಾಷ್ಟ್ರೀಯ ಅರಿಶಿನ ಬೆಳೆಗಾರರ ಸಂಘದ ಅಧ್ಯಕ್ಷ ದೈವಸಿಗಾಮಣಿ ತಮಿಳುನಾಡು, ರಾಮ ಗೌಂಡರ್ , ರಾಷ್ಟ್ರೀಯ ಉಪಾಧ್ಯಕ್ಷ ಕೆ ನರಸಿಂಹ ನಾಯ್ಡು ತೆಲಂಗಾಣ, ಕೆ ವಿ ಬಿಜು ಕೇರಳ, ಶ್ವೇತ್ಕರಿ ಸಂಘಟನೆಯ ವಿನಾಯಕ ರಾವ್ ಪಾಟೀಲ್ ಮಹಾರಾಷ್ಟ್ರ , ರಾಷ್ಟ್ರೀಯ ರೈತ ಒಕ್ಕೂಟದ ದಶರಥರೆಡ್ಡಿ ಆಂಧ್ರಪ್ರದೇಶ್, ವೆಂಕಟೇಶ್ವರ ರಾವ್ ತೆಲಂಗಾಣ ,ರಾಜ್ಯ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ವೀರನಗೌಡ ಪಾಟೀಲ್, ಸುರೇಶ್ ಮ ಪಾಟೀಲ್, ಬಸವರಾಜ ಪಾಟೀಲ್, ರಮೇಶ್ ಹೂಗಾರ್, ಹತ್ತಳ್ಳಿ ದೇವರಾಜ್ ಎನ್ ಎಚ್ ದೇವಕುಮಾರ್, ಗುರುಸಿದ್ದಪ್ಪ, ಮುಂತಾದವರಿದ್ದರು

Key words: Many decisions – meeting – Farmers -Roundtable.