ಶಾಲಾ ಮಕ್ಕಳಿಗೆ ನೈತಿಕ ವಿಷಯ ಕಲಿಸಲು ನಮ್ಮ ತಕರಾರು ಇಲ್ಲ : ಸಿದ್ದರಾಮಯ್ಯ.

mangalore-siddu

 

ಮಂಗಳೂರು, ಮಾ.19, 2022 : ನೈತಿಕ ವಿಷಯವನ್ನು ಶಾಲಾ ಮಕ್ಕಳಿಗೆ ಕಲಿಸಲು ನಮ್ಮ ತಕರಾರು ಇಲ್ಲ. ನಾವು ಸಂವಿಧಾನ ಮತ್ತು ಜಾತ್ಯಾತೀತತೆಯಲ್ಲಿ ನಂಬಿಕೆ ಇಟ್ಟವರು.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪಠ್ಯ ವಿಷಯದಲ್ಲಿ ಭಗವದ್ಗೀತೆ ಸೇರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದು ಹೀಗೆ..

ನೈತಿಕ ವಿಷಯವನ್ನು ಶಾಲಾ ಮಕ್ಕಳಿಗೆ ಕಲಿಸಲು ನಮ್ಮ ತಕರಾರು ಇಲ್ಲ. ನಾವು ಸಂವಿಧಾನ ಮತ್ತು ಜಾತ್ಯಾತೀತತೆಯಲ್ಲಿ ನಂಬಿಕೆ ಇಟ್ಟವರು. ಮಕ್ಕಳಿಗೆ ಭಗವದ್ಗೀತೆ, ಖುರಾನ್, ಬೈಬಲ್ ಯಾವುದನ್ನಾದರೂ ಹೇಳಿಕೊಡಲಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕಾದುದ್ದು ಮುಖ್ಯ. ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಅನುಗುಣವಾಗಿ ಉತ್ತಮ ಶಿಕ್ಷಣ ಸಿಗಬೇಕು. ಭಗವದ್ಗೀತೆ ಹೇಳಿಕೊಟ್ಟರೆ ತಪ್ಪೇನಿಲ್ಲ. ನಮಗೂ ಮನೆಯಲ್ಲಿ ರಾಮಾಯಣ, ಮಹಾಭಾರತ, ಭಗವದ್ಗೀತೆ ಹೇಳಿಕೊಟ್ಟಿದ್ದಾರೆ. ನಾವೇನು ಹಿಂದೂಗಳಲ್ಲವೆ. ಹಳ್ಳಿಗಳಲ್ಲಿ ನಾಟಕಗಳಲ್ಲಿ ಇವುಗಳನ್ನು ಹಾಡೋದು ನೋಡಿದ್ದೇವೆ. ನಾವು ಭಗವದ್ಗೀತೆ, ಖುರಾನ್, ಬೈಬಲ್ ಇವು ಯಾವುದಕ್ಕೂ ವಿರೋಧ ಮಾಡಲ್ಲ. ನಮ್ಮದು ಬಹು ಸಂಸ್ಕೃತಿಯ ದೇಶ, ಶಿಕ್ಷಣದಲ್ಲಿ ಕಲಿಸುವ ವಿಷಯ ಸಂವಿಧಾನ ಬದ್ಧವಾಗಿರಬೇಕು ಅಷ್ಟೆ. ಸಹಿಷ್ಣುತೆ ಮತ್ತು ಸಹಬಾಳ್ವೆಯಲ್ಲಿ ನಮಗೆ ನಂಬಿಕೆ ಇದೆ.

ಕಾಶ್ಮೀರಿ ಫೈಲ್ ಸಿನೆಮಾ ಮೂಲಕ ಸತ್ಯ ತೋರಿಸದ್ರೆ ಯಾರಿಗೂ ತೊಂದರೆ ಇಲ್ಲ. ಕಾಶ್ಮೀರದಲ್ಲಿ ಭಯೋತ್ಪಾದಕರು ಏನೆಲ್ಲಾ ಮಾಡಿದರು, ಕಾಶ್ಮೀರಿ ಪಂಡಿತರಿಗೆ ಏನು ತೊಂದರೆ ಮಾಡಿದರು, ಆ ಕಾಲದಲ್ಲಿ ಯಾರ ಸರ್ಕಾರ ಇತ್ತು? ಇದನ್ನೆಲ್ಲ ತೋರಿಸಬೇಕು. ಸತ್ಯ ಹೇಳಿದ್ರೆ ಯಾರಿಗೂ ಸಮಸ್ಯೆ ಇಲ್ಲ. ಇದರ ಜೊತೆಗೆ ಲಿಖಿಂಪುರ್ ನ ಹಿಂಸಾಚಾರದ ಸಿನೆಮಾವನ್ನು ಮಾಡಿ ಜನರಿಗೆ ತೋರಿಸಲಿ.
ನಾನು ಚಿತ್ರಮಂದಿರಕ್ಕೆ ಹೋಗಿ ಸಿನೆಮಾ ನೋಡಿದ್ದು ತುಂಬಾ ಕಡಿಮೆ, ಬಹುತೇಕ ಸಿನೆಮಾಗಳನ್ನು ನಾನು ನೋಡಿಲ್ಲ, ಅದರಲ್ಲಿ ಇದೂ ಒಂದು. ಸಿನೆಮಾ ನೋಡಲೇ ಬೇಕು ಅಂತ ಎಲ್ಲಿದೆ?

ನಮ್ಮದು ಮೃದು ಹಿಂದೂತ್ವವಾಗಲೀ, ಕಠೋರ ಹಿಂದುತ್ವವಾಗಲೀ ಅಲ್ಲ. ನಾವು ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟಿದ್ದೇವೆ, ಸಂವಿಧಾನ ಹೇಳಿದಂತೆ ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸುತ್ತೇವೆ. ಅದು ಇತರೆ ಧರ್ಮಗಳಾದ ಕ್ರಿಶ್ಚಿಯನ್ ಧರ್ಮ ಆಗಿರಲಿ, ಮುಸ್ಲಿಂ ಧರ್ಮ ಆಗಿರಲಿ, ಸಿಖ್‌ ಧರ್ಮವಾಗಿರಲಿ, ಪಾರಸಿ ಧರ್ಮವಾಗಿರಲಿ, ಬೌದ್ಧ ಧರ್ಮ ಆಗಿರಲಿ ಎಲ್ಲರನ್ನು ಸಮಾನವಾಗಿ ಕಾಣುತ್ತೇವೆ.

ಹಿಜಾಬ್ ತೀರ್ಪಿನ ಬಗ್ಗೆ ಅಸಮಧಾನ ಇರುವವರು ಬಂದ್ ಮಾಡಿದ್ದಾರೆ, ಆದರೆ ನ್ಯಾಯಾಂಗದ ನಿರ್ಣಯವನ್ನು ಯಾರೂ ಕೂಡ ವಿರೋಧ ಮಾಡಬಾರದು.
ಹಿಂದೂ ಧಾರ್ಮಿಕ ಕಾರ್ಯಕ್ರಮಗಳ ಸ್ಥಳದಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂಬ ಅಭಿಯಾನದ ಕುರಿತು ಪ್ರತಿಕ್ರಿಸಿದ ಅವರು ಯಾವುದೇ ಧರ್ಮವಾಗಿರಲಿ ಅವರು ಕೋಮುವಾದ ಮಾಡಕೂಡದು. ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದರು.

key words : mangalore-siddu