ಮಂಡ್ಯಕ್ಕೆ ಬಂತು ಮತ್ತೆ 40 ಆಕ್ಸಿಜನ್ ಕಾನ್ಸಂಟ್ರೇಟರ್: ಸಚಿವರ ಕಾಳಜಿಯನ್ನು ಶ್ಲಾಘಿಸಿದ ಜಿಲ್ಲೆಯ ಜನ

ಮಂಡ್ಯ, ಮೇ 23, 2021: ಮಂಡ್ಯ ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಅವರು ಹಗಲಿರುಳು ಶ್ರಮಿಸುತ್ತಿದ್ದು, ಸರ್ಕಾರದಿಂದ ಬರಬೇಕಾದ ಎಲ್ಲ ಸೌಲಭ್ಯಗಳನ್ನು ಸೂಕ್ತ ಸಮಯಕ್ಕೆ ಜಿಲ್ಲೆಗೆ ತಲುಪುವಂತೆ ನೋಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ಎಲ್ಲಿಯೂ ಆಕ್ಸಿಜನ್ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ಬಹುಮುಖ್ಯ. ಹೀಗಾಗಿ ಜಂಬೋ ಸಿಲಿಂಡರ್ ಜೊತೆಯಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಕೂಡ ಸಾಕಷ್ಟು ಪ್ರಮಾಣದಲ್ಲಿ ಜಿಲ್ಲೆಗೆ ಬರುವಂತೆ ನೋಡಿಕೊಳ್ಳುತ್ತಿದ್ದಾರೆ. ಇದರ ಫಲವಾಗಿ ಇಂದು ಜಿಲ್ಲೆಗೆ ಇನ್ನೂ 40 ಆಕ್ಸಿಜನ್ ಕಾನ್ಸಂಟ್ರೇಟರ್ ಬಂದಿದೆ.

ಬೆಂಗಳೂರಿನ ಬೊಮ್ಮಸಂದ್ರದಲ್ಲಿರುವ ಸಿಎಸ್ ಆರ್ ಗ್ರೂಪ್ ನ ಮಹೇಂದ್ರ ಸಿಐಇ ಆಟೋಮೊಟಿವ್ ಲಿಮಿಟೆಡ್,  ಸನ್ಸೆರಾ ಇಂಜಿನಿಯರಿಂಗ್ ಲಿಮಿಟೆಡ್ ಹಾಗೂ ಸುಪ್ರಜಿತ್ ಇಂಜಿನೀಯರಿಂಗ್ ಲಿಮಿಟೆಡ್ ನಿಂದ 40 ಆಕ್ಸಿಜನ್ ಕಾನ್ಸಂಟ್ರೇಟರ್ ಅನ್ನು ಮಂಡ್ಯ ಜಿಲ್ಲೆಗೆ ನೀಡಿದ್ದಾರೆ. ಕೊರೋನಾ ಸೋಂಕಿತರು ಆಕ್ಸಿಜನ್ ಬೆಡ್ ಅಗತ್ಯವೆನಿಸಿದಾಗ ತಕ್ಷಣವೇ ಆಸ್ಪತ್ರೆಯತ್ತ ಮುಖಮಾಡಬೇಕು. ಸಮಯಕ್ಕೆ ಸರಿಯಾಗಿ ಆಸ್ಪತ್ರೆ ತಲುಪದಿದ್ದರೆ ಸೋಂಕಿತರು ಪ್ರಾಣವಾಯುವಿಗಾಗಿ ಚಡಪಡಿಸುವ ಸ್ಥಿತಿ ಎದುರಾಗುತ್ತದೆ. ಒಂದುವೇಳೆ ಆಸ್ಪತ್ರೆ ತಲುಪಿದರೂ ಬೆಡ್ ಸಿಗುವಲ್ಲಿ ವಿಳಂಬವಾದರೆ ಇನ್ನಷ್ಟು ಆತಂಕ. ಈ ಎಲ್ಲ ಸಮಸ್ಯೆ ಬರಬಾರದು ಎಂಬ ಕಾರಣಕ್ಕೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಅವರು ಮನವಿ ಮಾಡಿರುವ ಹಿನ್ನೆಲೆಯಲ್ಲಿ  ಈ ಆಕ್ಸಿಜನ್ ಕಾನ್ಸಂಟ್ರೇಟರ್ ಅನ್ನು ನೀಡಿದ್ದಾರೆ.

15 ದಿನಗಳ ಹಿಂದೆ ಡಿಸಿಎಂ ಅಶ್ವಥನಾರಾಯಣ್ ಅವರ ನೇತೃತ್ವದ ಯುನೈಟೆಡ್ ವೇ ಬೆಂಗಳೂರು ಸಂಸ್ಥೆ ಜೊತೆಯಾಗಿರುವ ಆಕ್ಷನ್ ಕೋವಿಡ್  ಟೀಂ 40 ಆಕ್ಸಿಜನ್ ಕಾನ್ಸಂಟ್ರೇಟರ್ ಅನ್ನು ಮಂಡ್ಯ ಜಿಲ್ಲೆಗೆ ನೀಡಿತ್ತು. ಸಿಎಸ್ ಆರ್ ಗ್ರೂಪ್ ನಿಂದ ಜಿಲ್ಲೆಗೆ ಇಂದು 40 ಆಕ್ಸಿಜನ್ ಕಾನ್ಸಂಟ್ರೇಟರ್ ಬಂದಿದೆ. ಸೋಂಕಿತರು ಇರುವ ಕಡೆಯಲ್ಲೇ ಆಕ್ಸಿಜನ್ ಕಾನ್ಸಂಟ್ರೇಟರ್ ಇಟ್ಟು ಚಿಕಿತ್ಸೆ ನೀಡಬಹುದು. ಇದರಿಂದ ಸೋಂಕಿತರು ಅಲೆದಾಡುವ ಗೋಜಲು ತಪ್ಪಲಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಈಗಾಗಲೆ 40 ಆಕ್ಸಿಜನ್ ಕಾನ್ಸಂಟ್ರೇಟರ್ ಇದ್ದು, ಇದರ ಜೊತೆಗೆ ಈಗ ಇನ್ನೂ 40 ಆಕ್ಸಿಜನ್ ಕಾನ್ಸಂಟ್ರೇಟರ್ ಬಂದಿದ್ದು, ಕೋವಿಡ್-19 ಸೋಂಕಿತರು ಇನ್ನಷ್ಟು ನಿರಾಳರಾಗಬಹುದು. ಇದೆ ವೇಳೆ ಸಿಎಸ್ ಆರ್ ಗ್ರೂಪ್ ಗೆ ಸಚಿವ ಡಾ. ನಾರಾಯಣಗೌಡ ಅಭಿನಂದನೆ ಸಲ್ಲಿಸಿದ್ದಾರೆ.

ಸಚಿವ ಡಾ. ನಾರಾಯಣಗೌಡ ಅವರು ಮಾಡಿದ ಈ ಕಾರ್ಯಕ್ಕೆ ಜನಸಾಮಾನ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಜಿಲ್ಲೆಯಲ್ಲೇ ಆಕ್ಸಿಜನ್ ಉತ್ಪಾದನಾ ಘಟಕವೂ ಆರಂಭವಾಗುತ್ತಿದ್ದು, ಕೆಲವೇ ದಿನಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ಆಕ್ಸಿಜನ್ ಪೂರೈಕೆ ಯಥೇಚ್ಚವಾಗಿ ಆಗಲಿದೆ. ಜಂಬೋ ಸಿಲಿಂಡರ್ ಜೊತೆಗೆ ಆಕ್ಸಿಜನ್ ಕಾನ್ಸಂಟ್ರೇಟರ್ ಕೂಡ ಬಂದಿರುವುದರಿಂದ ಸದ್ಯಕ್ಕೆ ಕೊರೋನಾ ಸೋಂಕಿತರಿಗೆ ಅಗತ್ಯವಿರುವ ಆಕ್ಸಿಜನ್ ಜಿಲ್ಲೆಯಲ್ಲಿ ಲಭ್ಯವಿದೆ.