‘ಮೈಸೂರು ರಾಜವಂಶಸ್ಥ’ ಎಂದು ಹೇಳಿಕೊಂಡು ವೈವಾಹಿಕ ವೆಬ್‌ ಸೈಟ್‌ಗಳ ಮೂಲಕ ಮಹಿಳೆಯರನ್ನು ವಂಚಿಸುತ್ತಿದ್ದ ವ್ಯಕ್ತಿ ಬಂಧನ.

ಬೆಂಗಳೂರು, ಜುಲೈ 13, 2021 (www.justkannada.in): ವೈವಾಹಿಕ ವೆಬ್‌ಸೈಗಳ ಮೂಲಕ ತಾನು ‘ಮೈಸೂರು ರಾಜವಂಶಸ್ಥ ಎಂದು ಮತ್ತು ಅಮೇರಿಕಾದಲ್ಲಿ ಸಾಪ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ ಎಂದು ಹೇಳಿಕೊಂಡು ಹಲವು ಮಹಿಳೆಯರನ್ನು ವಂಚಿಸಿ ಹಣ ವಸೂಲಿ ಮಾಡುತ್ತಿದ್ದ 33-ವರ್ಷ-ವಯಸ್ಸಿನ ಓರ್ವ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.jk

ವೈಟ್‌ಫೀಲ್ಡ್ ಸೈಬರ್ ಎಕನಾಮಿಕ್ ಅಂಡ್ ನಾರ್ಕೊಟಿಕ್ಸ್ ಸೆಲ್‌ ನ ಪೊಲೀಸರ ಪ್ರಕಾರ, ಸಿದ್ದಾರ್ಥ್ ಕೆ. ಅಲಿಯಾಸ್ ಸಿದ್ದಾರ್ಥ್ ಅರಸ್ ಅಲಿಯಾಸ್ ಸ್ಯಾಂಡಿ ಅಲಿಯಾಸ್ ವಿನಯ್ ಅಲಿಯಾಸ್ ಮುತ್ತು ಎಂಬ ಬೇರೆ ಬೇರೆ ಹೆಸರುಗಳಲ್ಲಿ ಗುರುತಿಸಿಕೊಳ್ಳುತ್ತಿದ್ದ ಈ ಆರೋಪಿ ಮೈಸೂರು ಜಿಲ್ಲೆಯ ಬೈಲುಕುಪ್ಪೆಯನವಾಗಿದ್ದು 7ನೇ ತರಗತಿಯಲ್ಲೇ ಶಾಲೆಯಿಂದ ಹೊರಗುಳಿದವನಾಗಿದ್ದಾನೆ.

ಆರೋಪಿ ಸ್ಪ್ಯಾನಿಷ್ ಹಾಗೂ ಆಂಗ್ಲ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವುದನ್ನು ಕಲಿತಿದ್ದ. ಈ ಭಾಷೆಗಳನ್ನು ಆತ ಮೈಸೂರಿನ ಬಳಿಯಿರುವ ಬೈಲಕುಪ್ಪೆ ನಿರಾಶ್ರಿತರ ಶಿಬಿರದಲ್ಲಿ ವಾಸಿಸುತ್ತಿರುವ ಟಿಬೇಟನ್ನರಿಂದ ಕಲಿತುಕೊಂಡಿದ್ದ ಎನ್ನಲಾಗಿದೆ.

“ವಿವಿಧ ವೈವಾಹಿಕ ವೆಬ್‌ಸೈಟ್‌ ಗಳಲ್ಲಿ ತನ್ನ ವ್ಯಕ್ತಿಚಿತ್ರಣವನ್ನು ಸೃಷ್ಟಿಸಿ ತಾನು ಮೈಸೂರು ರಾಜವಂಶಸ್ಥನೆಂದು, ಹಾಗೂ ಅಮೇರಿಕಾದಲ್ಲಿ ಪ್ರಮುಖ ಐಟಿ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದ. ಮೈಸೂರು ರಾಜವಂಶಸ್ಥರ ನಕಲಿ ಚಿತ್ರಗಳನ್ನು ಸೃಷ್ಟಿಸಿ, ಆ ಚಿತ್ರದಲ್ಲಿ ತಾನೂ ಸಹ ರಾಜವಂಶಸ್ಥರ ಮಕ್ಕಳಲ್ಲಿ ಪೈಕಿ ಒಬ್ಬ ಎನ್ನುವಂತೆ ಬಿಂಬಿಸುತ್ತಿದ್ದ. ಅಮೇರಿಕನ್ ಶೈಲಿಯ ಆಂಗ್ಲ ಭಾಷೆ ಹಾಗೂ ಸ್ಪ್ಯಾನಿಷ್ ಭಾಷೆಗಳಲ್ಲಿ ಸಂಭಾಷಣೆ ನಡೆಸುವ ಮೂಲಕ ವಂಚಿಸುತ್ತಿದ್ದ,” ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ ಈತ, ಒಮ್ಮೆ ಮಹಿಳೆಯ ವಿಶ್ವಾಸ ಗಳಿಸಿದ ನಂತರ, ತುರ್ತು ವೈದ್ಯಕೀಯ ಪರಿಸ್ಥಿತಿಯೊಂದು ಎದುರಾಗಿದ್ದು ಅದಕ್ಕೆ ಸ್ವಲ್ಪ ಹಣ ಬೇಕು ಎಂದು ತಿಳಿಸುತ್ತಿದ್ದ. ಅದನ್ನು ನಂಬಿದ ಕೆಲವು ಸಂತ್ರಸ್ತರು ಆತ ನೀಡಿದ ಬ್ಯಾಂಕ್ ಖಾತೆ ಸಂಖ್ಯೆಗೆ ಹಣ ವರ್ಗಾಯಿಸಿದ್ದಾರೆ.

30 ವರ್ಷ ವಯಸ್ಸಿನ ಗುರುತು ಬಹಿರಂಗ ಪಡಿಸಲು ಇಚ್ಛಿಸದ ಓರ್ವ ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ಸಿದ್ದಾರ್ಥನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಈತ, ಓರ್ವ ಪ್ರಾಧ್ಯಾಪಕರೂ ಒಳಗೊಂಡಂತೆ ಈ ರೀತಿ ಮೂರು ಮಹಿಳೆಯರನ್ನು ವಂಚಿಸಿ ರೂ.42 ಲಕ್ಷ ವಸೂಲಿ ಮಾಡಿದ್ದಾನಂತೆ!

ಸುದ್ದಿ ಮೂಲ: ಇಂಡಿಯನ್ ಎಕ್ಸ್ಪ್ರೆಸ್

Key words: Man -arrested – defrauding- women- matrimonial –websites-mysore