ಮಲ್ಲಿಕಾರ್ಜುನ ಖರ್ಗೆ ಅವರ ಮಗನಿಗೆ ಪ್ರೋಮೋಟ್ ಮಾಡಿದರೇ, ಜಾಧವ್ ಅವರೇನು ಮಗನ ಕತ್ತು ಹಿಚುಕುತ್ತಿದ್ದಾರಾ’ ?-ಸಿದ್ದರಾಮಯ್ಯ ವಾಗ್ದಾಳಿ…

kannada t-shirts

ಕಲ್ಬುರ್ಗಿ,ಮೇ,11,2019(www.justkannada.in): ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ದ ಪದೇ ಪದೇ ಹರಿಹಾಯುತ್ತಿದ್ದ ಕಲ್ಬುರ್ಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ವಿರುದ್ದ ಮಾಜಿ ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಮಗನಿಗೆ ಪ್ರೋಮೋಟ್ ಮಾಡಿದರೆ, ಉಮೇಶ್  ಜಾಧವ್ ಏನು ಅವರ ಮಗನ ಕತ್ತು ಹಿಚುಕುತ್ತಿದ್ದಾರಾ ಎಂದು ಕಿಡಿಕಾರಿದರು.

ಚಿಂಚೋಳಿ ಅರಣಕಲ್ ಗ್ರಾಮದಲ್ಲಿ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿದ್ದರಾಮಯ್ಯ, ದುಡ್ಡು‌ ತಗೊಂಡು ಬಿಜೆಪಿ ಹೋಗಿಲ್ಲ. ನನ್ನ ಸ್ವಾಭಿಮಾನಕ್ಕೆ‌ ಧಕ್ಕೆ ಆಗಿದ್ದಕ್ಕೆ ಬಿಜೆಪಿಗೆ ಹೋದೆ ಎಂದು ಉಮೇಶ್ ಜಾಧವ್ ಏನಾದರೂ ನೆಪ ಹೇಳಬಹುದು. ಆದರೆ ನೀನು ಬಾಂಬೆಯಲ್ಲಿ ಇದ್ದುದು ಸುಳ್ಳಾ? ಸುಮ್ಮನೆ ಒಪ್ಪಿಕೊಂಡು‌ ಬಿಡು ಎಂದು ವಾಗ್ದಾಳಿ ನಡೆಸಿದರು.

ಒಬ್ಬೊಬ್ಬ ಎಂಎಲ್ ಎ ಗಳಿಗೆ  25ರಿಂದ 30 ಕೋಟಿ ಕೊಟ್ಟಿದ್ದಾರೆ. , ಖರ್ಗೆ ವಿರುದ್ದ‌ ಚುನಾವಣೆಗೆ ನಿಲ್ಲುವುದಕ್ಕಾಗಿ ಜಾಧವ್ 50 ಕೋಟಿ ತೆಗೆದುಕೊಂಡಿದ್ದಾನೆ ಎಂದು ಎಲ್ಲಾ ಹೇಳುತ್ತಿದ್ದಾರೆ. ಖರ್ಗೆ ಅವರಿಗೆ ಮಗನ ಮೇಲೆ ವ್ಯಾಮೋಹ,  ಎನ್ಕರೇಜ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಜಾಧವ್ ಈಗ ಚುನಾವಣೆಗೆ ತಮ್ಮ ಮಗನನ್ನೇ ನಿಲ್ಲಿಸಿದ್ದಾರಲ್ಲ ಇದಕ್ಕೆ ಏನು ಹೇಳುತ್ತಾರೆ ಎಂದು ಪ್ರಶ್ಬಿಸಿದರು.

ಜೆಡಿಎಸ್ ಬಿಟ್ಟು ಸಿದ್ದರಾಮಯ್ಯ ಕಾಂಗ್ರೆಸ್  ಗೆ ಸೇರಿದ್ದಾರೆ ಎನ್ನುವ ಬಿಜೆಪಿ ನಾಯಕ ಆರ್ ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ,  ನಾನು ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶ ಮಾಡಿದ್ದಕ್ಕೆ ನನ್ನನ್ನು ಉಚ್ಛಾಟನೆ ಮಾಡಲಾಗಿತ್ತು ಹಾಗಾಗಿ ಕಾಂಗ್ರೆಸ್ ಸೇರಿದ್ದೆ ಎಂದು ಸ್ಪಷ್ಟಪಡಿಸಿ ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಅಶೋಕ್ ಗೆ ಬುದ್ದಿ ಇದೆಯಾ? ಎಂದು ಪ್ರಶ್ನೆ‌ ಮಾಡಿದರು.

ಸೇವಾಲಾಲ್  ಜಯಂತಿ ಮಾಡಿದ್ದು, ಸುರಗೊಂಡನಕೊಪ್ಪ, ಲಾಲ್ ಧರಿ‌ ಅಭಿವೃದ್ದಿಗೆ ಕೈಗೊಂಡಿದ್ದು ಯಾರು? ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದು ಯಾರು? ಎಸ್ ಸಿ, ಎಸ್ ಟಿಗೆ ಬಡ್ತಿಯಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಅಂದು ಸುಗ್ರಿವಾಜ್ಞೆ ಮಾಡಿದ್ದು ಯಾರು? ಬಿಜೆಪಿ ಮಾಡಿದ್ದಾ? ನೀನ್ ಮಾಡಿದ್ದಾ ಜಾಧವ್? ಇದೆಲ್ಲ ನಾನು ನಮ್ಮ ಪಕ್ಷ ಮಾಡಿದ್ದು ಎಂದು ಸಿದ್ದರಾಮಯ್ಯ ಕುಟುಕಿದರು.

ಸಾಮಾಜಿಕ ನ್ಯಾಯ ಬದ್ದತೆಗೆ ವಿರುದ್ದವಿರುವ ಸಂವಿಧಾನ ಸುಡುವ, ಸಂವಿಧಾನ ಬದಲಾವಣೆ ಮಾಡುವ ಪಕ್ಷಕ್ಕೆ ನೀವು ಹೋಗಿದ್ದೀರಲ್ಲ ಜಾಧವ ನಿಮಗೆ ನಾಚಿಕೆಯಿಲ್ಲವೇ?  ಸಂವಿಧಾನ ಬದಲಾದರೆ ಮೀಸಲಾತಿ ಹೋಗುತ್ತದೆ. ನಿಮಗಿರುವ ಹಕ್ಕುಗಳು ನಾಶವಾಗುತ್ತವೆ. ಇದು ನಿಮಗೆ ಬೇಕಾ? ಬೇಡ. ಒಂದೇ ಒಂದು ಓಟು ಹಾಕಬೇಡಿ ಎಂದು ಮನವಿ ಮಾಡಿದರು. ಸ್ವಾರ್ಥ ರಾಜಕಾರಣಕ್ಕಾಗಿ ಪಕ್ಷ‌ ತೊರೆದು ಬಿಜೆಪಿ ಸೇರಿದ ಜಾಧವ್ ನಿಗೆ ಸೋಲಿಸಿ ಹೋರಾಟಗಾರ ರಾಠೋಡ್ ನನ್ನು ಗೆಲ್ಲಿಸಿ ಎಂದು ಕರೆ ನೀಡಿದರು.

ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ‌. ಇದಕ್ಕೆ ಮಿಸ್ಟರ್ ನರೇಂದ್ರ ಮೋದಿ ಕಾರಣ ಎಂದು ಆರೋಪಿಸಿದ ಅವರು, ಯೋಜನಾ ಆಯೋಗವನ್ನು ರದ್ದುಗೊಳಿಸಿ ನೀತಿ ಆಯೋಗ ರಚಿಸಿದಿರಲ್ಲ ಏನು ಬದಲಾವಣೆಯಾಗಿದೆ.? ಎಂದು ಪ್ರಶ್ನಿಸಿದರು.

ವೇದಿಕೆಯಲ್ಲಿ ಸಂಸದರಾದ‌ ಎಂ ಮಲ್ಲಿಕಾರ್ಜುನ ಖರ್ಗೆ, ಎಂ ಬಿ ಪಾಟೀಲ್,  ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಸಿಎಂ ಇಬ್ರಾಹಿಂ, ಅಮರೇಗೌಡ ಬಯ್ಯಾಪುರ, ಜಿ.ನಾರಾಯಣರಾವ್, ಶರಣಪ್ಪ ಮಟ್ಟೂರು,  ಮಾಜಿ ಸಚಿವರಾದ ಶರಣಪ್ರಕಾಶ್ ಪಾಟೀಲ್, ಬಾಬುರಾವ್ ಚವ್ಹಾಣ್, ಬಾಬು ಹೊನ್ನಾನಾಯಕ್, ತಿಪ್ಪಣಪ್ಪ ಕಮಕನೂರು, ಜಲಜಾ ನಾಯಕ್ ಸೇರಿದಂತೆ ಮತ್ತಿತರಿದ್ದರು.

Key words: Mallikarjun Kharge -promote – son-Jadhav – son –Siddaramaiah-outrage

website developers in mysore