ಮಲ್ಲೇಶ್ವರ ಮಾರುಕಟ್ಟೆ ಅಭಿವೃದ್ಧಿ ಯೋಜನೆ 2022 ಮೇ ತಿಂಗಳಲ್ಲಿ ಪೂರ್ಣ- ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ್

 

ಬೆಂಗಳೂರು,ಜುಲೈ,31,2021(www.justkannada.in):  ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಮಲ್ಲೇಶ್ವರ ಮಾರುಕಟ್ಟೆ ನಿರ್ಮಾಣ ಯೋಜನೆ ಮುಂದಿನ ವರ್ಷದ ಮೇ ತಿಂಗಳ ಒಳಗಾಗಿ ಪೂರ್ಣವಾಗುತ್ತದೆ ಎಂದು ಕ್ಷೇತ್ರದ ಶಾಸಕರೂ ಆದ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ತಿಳಿಸಿದರು.

ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಡಿಎ ವತಿಯಿಂದ ಕೈಗೆತ್ತಿಕೊಳ್ಳಲಾಗಿರುವ ಯೋಜನೆಗಳ ಬಗ್ಗೆ ಇಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಆಯುಕ್ತ ರಾಜೇಶ್ ಗೌಡ ಹಾಗೂ ಇನ್ನಿತರೆ ಉನ್ನತ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಅವರು ಈ ವಿಷಯ ತಿಳಿಸಿದರು.

ಮಲ್ಲೇಶ್ವರ ಜನತೆಗೆ ಈ ಮಾರುಕಟ್ಟೆ ಬಹಳ ಮುಖ್ಯವಾದದ್ದು. ಕಾರಣಾಂತರಗಳಿಂದ ಯೋಜನೆ ವಿಳಂಬವಾಗಿದೆ. ಅತ್ಯಂತ ವೈಜ್ಞಾನಿಕವಾಗಿ ನಿರ್ಮಾಣವಾಗುತ್ತಿರುವ ಈ ಮಾರುಕಟ್ಟೆ ಸಂಕೀರ್ಣದ ಬೇಸ್ಮೇಟ್ ಮತ್ತು ಐದನೇ ಮಹಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದ್ದು, 421 ಕಾರು ಮತ್ತು 350 ದ್ವಿಚಕ್ರ ವಾಹನಗಳನ್ನು ನಿಲ್ಲಿಸುವಷ್ಟು ಜಾಗ ಮೀಸಲಿಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ವಿಳಂಬವಾಗಿರುವ ಈ ಯೋಜನೆಯನ್ನು ಮುಂದಿನ ಮೇ ತಿಂಗಳೊಳಗೆ ಮುಗಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಮುಂದಿನ ವಾರ ಬಿಡಿಎ ಅಧ್ಯಕ್ಷರ ಜತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಯೋಜನೆಗೆ ವೇಗ ನೀಡಲಾಗುವುದು ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

ಸದಾಶಿವನಗರ ಬಿಡಿಎ ಸಂಕೀರ್ಣಕ್ಕೆ ಹೊಸ ಯೋಜನೆ:

ಸದಾಶಿವನಗರದ ಆಯಕಟ್ಟಿನ ಜಾಗದಲ್ಲಿರುವ ಹಳೆಯ ಬಿಡಿಎ ಕಾಂಪ್ಲೆಕ್ಸ್ ಅನ್ನು ತೆರವುಗೊಳಿಸಿ ಸರಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಆತ್ಯಾಧುನಿಕವಾಗಿ ಹೊಸ ಸಂಕೀರ್ಣವನ್ನು ಮರು ನಿರ್ಮಾಣ ಮಾಡುವ ಬಗ್ಗೆ ಇದೇ ವೇಳೆ ಚರ್ಚೆ ನಡೆಸಲಾಯಿತು. 1958ರಲ್ಲಿ ನಿರ್ಮಾಣವಾಗಿರುವ ಈ ಕಟ್ಟಡದಲ್ಲಿ ಸದ್ಯಕ್ಕೆ 21 ಮಳಿಗೆಗಳಿದ್ದು, ಮಾಸಿಕ ಕೇವಲ 5 ಲಕ್ಷ ರೂ. ಆದಾಯ ಬರುತ್ತಿದೆ. ನಗರದ ಹೃದಯ ಬಾಗದಲ್ಲಿರುವ ಈ ಜಾಗದಿಂದ ಇನ್ನೂ ಹೆಚ್ಚಿನ ಆದಾಯ ಬರುವಂತೆ ಮಾಡಬೇಕು ಎಂದು ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದರು.

ಈ ಸಂಕೀರ್ಣ ಅಭಿವೃದ್ಧಿಗೆ ಈ ಹಿಂದೆಯೇ ಪ್ರಯತ್ನ ನಡೆದಿತ್ತು. ಒಪ್ಪಂದವೂ ಆಗಿತ್ತಲ್ಲದೆ, ಅದು ಜಾರಿಗೆ ಬರಲಿಲ್ಲ. ಈಗ ಹೊಸದಾಗಿ ಯೋಜನೆಯನ್ನು ರೂಪಿಸಿ ಇವತ್ತಿನ ಮಾನದಂಡಗಳಿಗೆ ತಕ್ಕಂತೆ ಆಧುನಿಕವಾಗಿ  ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ ಎಂದು ವಿಶ್ವನಾಥ ತಿಳಿಸಿದರು.

Key words: Malleswara -Market -Development -Plan –Completed- May 2022-Former- DCM Dr. Ashwaththanarayana