ಗಡಿ ಕನ್ನಡಿಗರಿಗೆ ಮಹಾರಾಷ್ಟ್ರ ಆರೋಗ್ಯ ವಿಮೆ: ಮಹಾರಾಷ್ಟ್ರ ಸಚಿವ ಸಂಪುಟದ  ನಿರ್ಣಯಕ್ಕೆ ಸಿಎಂ ಬೊಮ್ಮಾಯಿ ತೀವ್ರ ಖಂಡನೆ.

ಬೆಂಗಳೂರು, ಮಾರ್ಚ್ 16,2023(www.justkannada.in): ಗಡಿ ಕನ್ನಡಿಗರಿಗೆ ಆರೋಗ್ಯ ವಿಮೆ ಯೋಜನೆಯ ಮಹಾರಾಷ್ಟ್ರ ಸಚಿವ ಸಂಪುಟದ  ನಿರ್ಣಯವನ್ನು ತೀವ್ರವಾಗಿ ಖಂಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ  ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕರ್ನಾಟಕ ಗಡಿ ಭಾಗದ ಜನರಿಗೆ ಆರೋಗ್ಯ ಯೋಜನೆ ವಿಮೆ ಯೋಜನೆಯನ್ನು ಮಹಾರಾಷ್ಟ್ರದ ಸಂಪುಟ ನಿರ್ಣಯ ಘೋಷಿಸಿರುವುದು ಅಕ್ಷಮ್ಯ ಅಪರಾಧ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿದಾಗ ಸುಪ್ರೀಂಕೋರ್ಟ್ ಆದೇಶ ಬರುವವರೆಗೆ ಕಾಯಬೇಕು. ಯಾವುದೇ ಪ್ರಚೋದನೆ ಯಾಗಬಾರದೆಂದು ಒಪ್ಪಲಾಗಿತ್ತು. ಈಗ ಅದರ ಉಲ್ಲಂಘನೆಯಾಗಿದೆ. ಕೂಡಲೇ ಆಜ್ಞೆಯನ್ನು ಹಿಂದೆಗೆದುಕೊಳ್ಳಬೇಕು. ಈ ವಿಚಾರವನ್ನು ಗೃಹ ಸಚಿವರ ಗಮನಕ್ಕೂ ತರಲಾಗುವುದು. ಈ ರೀತಿಯ ಯೋಜನೆಗಳನ್ನು ನಾವೂ ಕೂಡ ಪ್ರಕಟಿಸಬಹುದು. ಹಲವಾರು ತಾಲ್ಲೂಕುಗಳು, ಗ್ರಾಮ ಪಂಚಾಯಿತಿ ಗಳು ಮಹಾರಾಷ್ಟ್ರದಲ್ಲಿ ನಮಗೆ ನ್ಯಾಯ ಸಿಗುತ್ತಿಲ್ಲ, ಕರ್ನಾಟಕಕ್ಕೆ ಸೇರಬೇಕು ಎಂದು ಈಗಾಗಲೇ ನಿರ್ಣಯ ಮಾಡಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಇದ್ದಾಗ ಮಹಾರಾಷ್ಟ್ರದ ಸರ್ಕಾರ ಬಹಳ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದರು.

ಕೆಪಿಟಿಸಿಎಲ್ ನೌಕರರಿಗೆ ಶೇ 20 ರಷ್ಟು   ವೇತನ ಪರಿಷ್ಕರಣೆ

ಕೆ.ಪಿ.ಟಿ. ಸಿ.ಎಲ್ ನೌಕರರು ವೇತನ ಪರಿಷ್ಕರಣೆಗೆ ಬೇಡಿಕೆ ಇಟ್ಟಿದ್ದರು. ನಮ್ಮ ಮಂತ್ರಿಗಳು ಸುದೀರ್ಘವಾಗಿ ಚರ್ಚಿಸಿ ಶೇ 20 ರಷ್ಟು ವೇತನ ಪರಿಷ್ಕರಣೆಗೆ  ಒಪ್ಪಿದ್ದು,  ಇಂದು ಆದೇಶ ಹೊರಡಿಸಲಾಗುವುದು ಎಂದರು.

ಸಾರಿಗೆ ನೌಕರರಿಗೆ ಶೇ 15 ರಷ್ಟು ವೇತನ ಪರಿಷ್ಕರಣೆ

ಸಾರಿಗೆ ಇಲಾಖೆ ನೌಕರರಿಗೆ ಶೇ 15 ರಷ್ಟು ವೇತನ ಪರಿಷ್ಕರಣೆ ಮಾಡಲು ತೀರ್ಮಾನ ಮಾಡಲಾಗಿದೆ.  ಈ ಎರಡೂ ಆಜ್ಞೆ ಇಂದು ಹೊರಡಿಸಲಾಗುವುದು ಎಂದರು.

ಕಾಡ್ಗಿಚ್ಚು ನಿಯಂತ್ರಣಕ್ಕೆ ಕ್ರಮ

ಬೇಸಿಗೆ ಕಾಲದಲ್ಲಿ ಅಲ್ಲಲ್ಲಿ ಕಾಡ್ಗಿಚ್ಚು  ಆಗುತ್ತಿದೆ. ಸಾಧ್ಯತೆಯಿರುವೆಡೆಯಲ್ಲಿ ಪೂರ್ವಭಾವಿ ತಾಂತ್ರಿಕ  ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ.  ಪ್ರಸ್ತುತ ಕಾಡ್ಗಿಚ್ಚನ್ನು ನಂದಿಸುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: Maharashtra -Health Insurance – Border Kannadigas-CM Bommai -condemned