ರಾಜಧಾನಿ ಬೆಂಗಳೂರಿನಲ್ಲಿ ‘ ಡೇಟಿಂಗ್ ಆ್ಯಪ್‌ ‘ ಗಳ ಮೂಲಕ ಹೆಚ್ಚುತ್ತಿದೆ ಆನ್‌ಲೈನ್ ಸ್ಕ್ಯಾಮ್ ..!

 

ಬೆಂಗಳೂರು, ಆಗಸ್ಟ್ ೭, ೨೦೨೧ (www.justkannada.in): ಡೇಟಿಂಗ್ ಆ್ಯಪ್ ಒಂದರಲ್ಲಿ ಪ್ರೀಮಿಯಂ ಸದಸ್ಯತ್ವ ದೊರಕಿಸಿಕೊಡುವುದಾಗಿ ನಂಬಿಸಿ ಬೆಂಗಳೂರು ನಗರದ ೪೫-ವರ್ಷ-ವಯಸ್ಸಿನ ಸಾಫ್ಟ್ವೇರ್ ಇಂಜಿನಿಯರ್ ಒಬ್ಬರಿಂದ ಬರೋಬ್ಬರಿ ರೂ.೩೭.೩ ಲಕ್ಷ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ!

ಸಂತ್ರಸ್ತನನ್ನು ಬೆಂಗಳೂರಿನ ಕಮ್ಮನಹಳ್ಳಿಯ ಸೇವಾನಗರದ ನಿವಾಸಿ ರಘುಪತಿ ಎಂದು ಗುರುತಿಸಲಾಗಿದೆ. ಇವರು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಒಮ್ಮೆ ಇಂಟೆರ್‌ನೆಟ್‌ನಲ್ಲಿ ಬ್ರೌಸ್ ಮಾಡುತ್ತಿದ್ದಾಗ ಆನ್‌ಲೈನ್ ಡೇಟಿಂಗ್ ಆ್ಯಪ್ ಒಂದರ ಕಡೆ ಆಕರ್ಷಿತಗೊಂಡು ಸದಸ್ಯತ್ವ ಪಡೆಯಲು ಪ್ರಯತ್ನಿಸಿದ್ದಾರೆ.

ಇದಾದ ನಂತರ, ಆ ಡೇಟಿಂಗ್ ವೆಬ್‌ಸೈಟ್‌ನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡ ಓರ್ವ ಅನಾಮಧೇಯ ಇವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಈ ಡೇಟಿಂಗ್ ಆ್ಯಪ್‌ನಲ್ಲಿ ಸದಸ್ಯತ್ವ ಪಡೆದರೆ ಚೆಂದದ ಬೆಡಗಿಯರೊಂದಿಗೆ ಸಂಘ ಬೆಳೆಸಬಹುದು ಎಂದೆಲ್ಲಾ ನಂಬಿಸಿ ಹಣ ಪಾವತಿಸುವಂತೆ ಪುಸಲಾಯಿಸಿದ್ದಾನೆ. ಇದರಿಂದ ಪುಳಕಿತರಾದ ರಘುಪತಿ ತಮ್ಮ ಎಸ್‌ಬಿಐ ಖಾತೆಯಿಂದ ಹಣ ಪಾವತಿಸಲು ಆರಂಭಿಸಿದ್ದಾರೆ. ಈ ಪ್ರಕಾರ ಅವರು ತಮ್ಮ ಇಡೀ ಉಳಿತಾಯದ ಹಣವನ್ನು ಪಾವತಿಸಿದ್ದಷ್ಟೇ ಅಲ್ಲದೆ, ಏಪ್ರಿಲ್ ೨೦೨೧ರವರೆಗೂ ತಮ್ಮ ಕೆಲವು ಸ್ನೇಹಿತರಿಂದಲೂ ಸಾಲ ಪಡೆದುಕೊಂಡಿದ್ದರೆ.

ರಘುಪತಿಗೆ ಸಾಲ ನೀಡಿದ ಸ್ನೇಹಿತರು ಹಣ ವಾಪಸ್ ನೀಡುವಂತೆ ಪೀಡಿಸುವುದು ಹೆಚ್ಚಾದಾಗ ರಘುಪತಿಗೆ ತಾವು ಮೋಸ ಹೋಗಿರಬಹುದೆಂದು ಅನಿಸಿದೆ. ಕೂಡಲೇ ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ದೂರು ಪಡೆದಿರುವ ಪೊಲೀಸರು ರಘುಪತಿ ಅವರ ಬ್ಯಾಂಕ್ ಖಾತೆ ವಿವರಗಳನ್ನು ಪಡೆದು ವಂಚಕನನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.
ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿ ೨೬-ವರ್ಷ-ವಯಸ್ಸಿನ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ತಮ್ಮ ಫೇಸ್‌ಬುಕ್‌ನ ಓರ್ವ ಮಹಿಳಾ ಸ್ನೇಹಿತೆಯಿಂದ ವಂಚನೆಗೆ ಈಡಾಗಿದ್ದಾರೆ. ಫೇಸ್‌ಬುಕ್ ಮೂಲಕ ಸ್ನೇಹ ಕುದುರಿಸಿದ ಯುವತಿ ಕ್ರಮೇಣ ಖಾಸಗಿ ಸಂಭಾಷಣೆಯಲ್ಲಿ ತೊಡಗುವಂತೆ ಮಾಡಿ, ಆ ಸಂಭಾಷಣೆಗಳನ್ನೆಲ್ಲಾ ರೆಕಾರ್ಡ್ ಮಾಡಿಕೊಂಡು ಆತನಿಂದ ರೂ.೫೧,೦೦೦ ಪೀಕಿದ್ದಾಳೆ.

ಕ್ರಮೇಣ ಇದೇ ರೀತಿ ಹಣ ಪೀಕುವ ಪೀಡನೆ ಹೆಚ್ಚಾದಂತೆ, ಮುನೆಕೊಳಲಿನ ಸಂತ್ರಸ್ತ ದೀಪಕ್ ವೈಟ್‌ಫೀಲ್ಡ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಮೇ ತಿಂಗಳಲ್ಲಿ ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವತಿಯೊಂದಿಗೆ ಈತ ಕ್ರಮೇಣ ಮೊಬೈಲ್ ದೂರವಾಣಿ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ. ಕೆಲವೇ ದಿನಗಳ ನಂತರ ಯುವತಿ ಈತನನ್ನು ತನ್ನ ಮಾದಕ ಮಾತುಗಳಿಂದ ಆಕರ್ಷಿಸಿ ನಗ್ನ ಚಿತ್ರಗಳನ್ನು ಕಳುಹಿಸುವಂತೆ ಪುಸಲಾಯಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಆತನ ಅರಿವಿಗೆ ಬಾರದಂತೆ ಆತನ ಮಾತುಗಳನ್ನು ಹಾಗೂ ಸಂದೇಶಗಳನ್ನು ರೆಕಾರ್ಡ್ ಮಾಡಿಕೊಂಡಿರುವ ಯುವತಿ ಆತನನ್ನು ಬ್ಲಾಕ್‌ಮೇಲ್ ಮಾಡಲು ಆರಂಭಿಸಿದ್ದಾಳೆ. ಒಂದು ವೇಳೆ ತನ್ನ ಮಾತುಗಳನ್ನು ಕೇಳದಿದ್ದರೆ ಆ ಚಿತ್ರಗಳು, ವೀಡಿಯೊ ಹಾಗೂ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಹೆದರಿಸಿದ್ದಾಳೆ. ತನ್ನ ಗೌರವ ಮಣ್ಣುಪಾಲಾಗುವುದೆಂದು ಹೆದರಿ ಯುವಕ ತನ್ನ ಡಿಜಿಟಲ್ ವ್ಯಾಲೆಟ್ ಖಾತೆಯಿಂದ ರೂ.೫೧,೦೦೦ ವರ್ಗಾಯಿಸಿರುವುದಾಗಿ ದೂರಿದ್ದಾನೆ!

ವೈಟ್‌ಫೀಲ್ಡ್ ಪೊಲೀಸರು, ಹಣ ಎಲ್ಲಿಗೆ ವರ್ಗಾವಣೆ ಆಗಿದೆ ಎಂಬ ವಿವರಗಳನ್ನು ಸಂಗ್ರಹಿಸಿ, ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ವೈಟ್‌ಪೀಲ್ಡ್ ಪೊಲೀಸರು ಇದೇ ವರ್ಷ ಏಪ್ರಿಲ್ ತಿಂಗಳಲ್ಲಿ, ಇದೇ ರೀತಿಯ ಪ್ರಕರಣವೊಂದಲ್ಲಿ, ೨೬-ವರ್ಷ-ವಯಸ್ಸಿನ ಐಎಎಸ್ ಆಕಾಂಕ್ಷಿ ಯುವಕನೋರ್ವನ ನಗ್ನ ಚಿತ್ರಗಳನ್ನು ಸಂಗ್ರಹಿಸಿ, ಆತನನ್ನು ಬ್ಲಾಕ್‌ಮೇಲ್ ಮಾಡಿ, ಬೆದರಿಸಿ ಹಣ ಪೀಕಲು ಪ್ರಯತ್ನಿಸಿದ ಪ್ರಕಣರಕ್ಕೆ ಸಂಬಂಧಪಟ್ಟಂತೆ ರಾಜಸ್ಥಾನ ಮೂಲದ ಇಬ್ಬರನ್ನು ಪತ್ತೆ ಹಚ್ಚಿ ಜೈಲಿಗೆ ತಳ್ಳಿದ್ದರು.

ಸುದ್ದಿ ಮೂಲ: ಬೆಂಗಳೂರ್ ಮಿರರ್

 

KEY WORDS : love-game-dating-apps-become-warehouse-for-online-scammers