ಮೈತ್ರಿ ಕಲಹ ಕಮಲಕ್ಕೆ ಅನುಕೂಲ: ರಾಜ್ಯದಲ್ಲಿ ಮೂರೂ ಪಕ್ಷಗಳ ಹಣೆಬರಹ ತಿದ್ದಲಿರುವ ಮೂರು ಮತ್ತೊಂದು ಕ್ಷೇತ್ರ

kannada t-shirts

ಬೆಂಗಳೂರು:ಮೇ-20: ಎರಡೂವರೆ ದಶಕದಿಂದಲೂ ಲೋಕಸಭಾ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆಯನ್ನೇ ಕಂಡಿದ್ದ ಕರ್ನಾಟಕ ಈ ಬಾರಿ ಬದಲಾದ ಪರಿಸ್ಥಿತಿಯಲ್ಲಿ ಬಿಜೆಪಿ ವರ್ಸಸ್ ಮೈತ್ರಿ ಹಣಾಹಣಿಗೆ ಸಾಕ್ಷಿಯಾಗಿದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮುಂದುವರಿಯಬಾರದು ಎಂಬ ಉದ್ದೇಶದಿಂದ ರಾಜ್ಯದಿಂದಲೇ ಚಾಲನೆಗೊಂಡ ಮಹಾಘಟಬಂಧನ ಬಿಜೆಪಿ ಸಂಖ್ಯೆಯನ್ನು ತೀವ್ರವಾಗಿ ಕಡಿತಗೊಳಿಸುವ ಉದ್ದೇಶ ಹೊಂದಿತ್ತು. ಬುಡಮಟ್ಟದಿಂದಲೇ ಪರಸ್ಪರರನ್ನು ದ್ವೇಷಿಸುವ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ಕಂಡುಬಂದ ಸಹಜ ಭಿನ್ನಾಭಿಪ್ರಾಯಗಳ ಕಾರಣಕ್ಕೆ ಬಿಜೆಪಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಸಫಲವಾದರೂ, ಕಾಂಗ್ರೆಸ್​ಗೆ ಒಂದೆರಡು ಸ್ಥಾನ ಹೆಚ್ಚುವುದು ಬಿಟ್ಟರೆ ಅನಿರೀಕ್ಷಿತ ಫಲಿತಾಂಶ ಸಾಧ್ಯತೆ ಕಡಿಮೆ ಎಂಬ ಅಂಶ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.

2017ರಲ್ಲಿ 17 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 17-19 ಸಂಸದರು, 9 ಜಯಿಸಿದ್ದ ಕಾಂಗ್ರೆಸ್ 7-9 ಸಂಸದರು, 2 ಕ್ಷೇತ್ರದಲ್ಲಿ ಜಯಿಸಿದ್ದ ಜೆಡಿಎಸ್ 1-3 ಗೆಲ್ಲುವ ಸಾಧ್ಯತೆಯಿದೆ. ಮಂಡ್ಯ ಸೇರಿ ರಾಜ್ಯದ ನಾಲ್ಕು ಕ್ಷೇತ್ರಗಳಲ್ಲಿ ಹೊರಹೊಮ್ಮುವ ಫಲಿತಾಂಶವೇ ಒಟ್ಟಾರೆ ಚುನಾವಣೆಯ ಹಣೆಬರಹವನ್ನು ತಿಳಿಸಲಿದೆ.

ನಾಲ್ಕು ಕ್ಷೇತ್ರಗಳೇ ನಿರ್ಣಾಯಕ: ರಾಜ್ಯದ 28 ಕ್ಷೇತ್ರಗಳಲ್ಲಿ ಯಾವ ಅಭ್ಯರ್ಥಿ ಪರ ಹೆಚ್ಚಿನ ಜನರು ಮತದಾನ ಮಾಡಿದ್ದಾರೆ ಎಂಬ ಅಂದಾಜು ಸಿಗುತ್ತಿದ್ದರೂ ನಾಲ್ಕು ಕ್ಷೇತ್ರಗಳ ಮತದಾರರು ಮಾತ್ರ ಗುಟ್ಟುಬಿಟ್ಟುಕೊಡಲು ಸಿದ್ಧರಿಲ್ಲ. ಇಡೀ ಚುನಾವಣೆಯಲ್ಲಿ ಕೇಂದ್ರಬಿಂದುವಾಗಿದ್ದ ಮಂಡ್ಯ ಸೇರಿ ನಾಲ್ಕು ಕ್ಷೇತ್ರಗಳ ಫಲಿತಾಂಶ ಮೇ 23ರ ಅಂತಿಮ ಕ್ಷಣದವರೆಗೂ ತುದಿಗಾಲಲ್ಲಿ ನಿಲ್ಲುವಂತೆ ಮಾಡುವ ಎಲ್ಲ ಲಕ್ಷಣಗಳೂ ಇವೆ ಎಂಬುದು ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಸದ್ದು ಗದ್ದಲದ ಪ್ರಚಾರ, ಘಟಾನುಘಟಿಗಳ ಸ್ಪರ್ಧೆ, ಪ್ರಮುಖ ನಾಯಕರುಗಳ ತಂತ್ರಗಾರಿಕೆಗಳು ಈ ಕ್ಷೇತ್ರಗಳಲ್ಲಿ ಒಟ್ಟಾಗಿದೆ. ಮದಗಜಗಳ ಕಾಳಗದಲ್ಲಿ ಮತದಾರರು ಯಾರ ಕಡೆ ಒಲಿದಿದ್ದಾರೋ ಕಾದು ನೋಡಬೇಕಿದೆ.

ಚಿಂಚೋಳಿ, ಕುಂದಗೋಳದಲ್ಲೂ ಬಿಜೆಪಿ?

ಮೈತ್ರಿ ಸರ್ಕಾರ ವರ್ಸಸ್ ಬಿಜೆಪಿ ಎಂಬಂತಾಗಿದ್ದ ಕುಂದಗೋಳ, ಚಿಂಚೋಳಿ ಉಪಸಮರದಲ್ಲಿ ಪ್ರಬಲ ಹಣಾಹಣಿ ಏರ್ಪಟ್ಟಿದ್ದು, ಕಾಂಗ್ರೆಸ್​ನ 2 ಸ್ಥಾನವನ್ನೂ ಬಿಜೆಪಿ ಕಿತ್ತುಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಚಿಂಚೋಳಿಯಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ಡಾ.ಉಮೇಶ್ ಜಾಧವ್ ಬಿಜೆಪಿಯಿಂದ ಲೋಕಸಭೆಗೆ ಸ್ಪರ್ಧಿಸಿದ್ದು, ಉಪಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿರುವ ಅವರ ಪುತ್ರ ಡಾ.ಅವಿನಾಶ್ ಜಾಧವ್ ಜಯಿಸುವ ಸಾಧ್ಯತೆ

ಇದೆ. ಮಲ್ಲಿಕಾರ್ಜುನ ಖರ್ಗೆ ವಿರೋಧಿ ಬಣ ಬಿಜೆಪಿಗೆ ಆಗಮಿಸಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಬಿಜೆಪಿ ನಡೆಸಿದ ಜಾತಿ ಲೆಕ್ಕಾಚಾರಗಳು ವರವಾಗಬಹುದು. ಜಾಧವ್ ಕುಟುಂಬಕ್ಕೆ ಕ್ಷೇತ್ರದಲ್ಲಿರುವ ಸದಭಿಪ್ರಾಯವೂ ಸೇರಿ ಫಲಿತಾಂಶ ಬಿಜೆಪಿ ಪರ ವಾಲಬಹುದು ಎನ್ನಲಾಗುತ್ತಿದೆ. ಸಚಿವರಾಗಿದ್ದ ಸಿ.ಎಸ್.ಶಿವಳ್ಳಿ ನಿಧನದಿಂದ ತೆರವಾಗಿದ್ದ ಕುಂದಗೋಳದಲ್ಲಿ ಕುಸುಮಾವತಿ ಶಿವಳ್ಳಿ ಹಾಗೂ ಬಿಜೆಪಿಯ ಎಸ್.ಐ. ಚಿಕ್ಕನಗೌಡ್ರ ನಡುವೆ ಪ್ರಬಲ ಪೈಪೋಟಿ ಎದುರಾಗಿದೆ. ಅಂತಿಮ ಕ್ಷಣದಲ್ಲಿ ಫಲಿತಾಂಶ ಎತ್ತ ಬೇಕಾದರೂ ವಾಲಬಹುದು. ಕುಸುಮಾವತಿ ಬಗ್ಗೆ ಅನುಕಂಪದ ಅಲೆ ಇದ್ದರೂ ಪ್ರಾರಂಭದಲ್ಲಿ ಕಾಂಗ್ರೆಸ್​ನಲ್ಲಿ ಉಂಟಾದ ಗೊಂದಲಗಳಿಂದ ಹಿನ್ನಡೆಯಾಗಿತ್ತು. ಈ ಹಿನ್ನಡೆಯ ಲಾಭವನ್ನು ಬಿಜೆಪಿ ಪಡೆದಿದೆ ಎನ್ನಲಾಗುತ್ತಿದ್ದರೂ, ಯಾವ ಪ್ರಮಾಣದಲ್ಲಿ ಫಲ ಲಭಿಸಿದೆ ಎಂಬುದು ಅಂತಿಮ ಫಲಿತಾಂಶದಲ್ಲಿ ಗೊತ್ತಾಗಲಿದೆ.

ರಾಜ್ಯಾದ್ಯಂತ ಸುದ್ದಿಜಾಲ

ರಾಜ್ಯದ ನಂ.1 ದಿನಪತ್ರಿಕೆ ಆಗಿರುವ ವಿಜಯವಾಣಿ ಹಾಗೂ ತ್ವರಿತಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ದಿಗ್ವಿಜಯ 247 ನ್ಯೂಸ್ ರಾಜ್ಯಾದ್ಯಂತ ಹೋಬಳಿ ಮಟ್ಟದವರೆಗೂ ವರದಿಗಾರರ ಜಾಲ ವಿಸ್ತರಿಸಿಕೊಂಡಿದೆ. ಈಗಾಗಲೇ ಅನೇಕ ದಿನಗಳಿಂದ ಮತಭಾರತ ಪುಟ ಮೀಸಲಿಟ್ಟು ಪ್ರತಿ ಕ್ಷೇತ್ರದ ಅಂದಿನ ಬೆಳವಣಿಗೆ ಜತೆಗೆ ಚುನಾವಣಾ ಚಿತ್ರಣ, ಮತದಾರರ ಮನದಾಳವನ್ನು ನೀಡುತ್ತಲೇ ಬಂದಿದೆ. ಬೃಹತ್ ಜಾಲ ಬಳಸಿ ಮಹಿಳೆಯರು, ಯುವಜನತೆ, ನೀತಿ ನಿರೂಪಕರು, ಪ್ರಭಾವಿಗಳು, ಉದ್ಯಮಿಗಳು, ಸರ್ಕಾರಿ ನೌಕರರು, ಕಾರ್ವಿುಕರು, ರೈತರು ಸೇರಿ ಸಮಾಜದ ಎಲ್ಲ ವರ್ಗಗಳಿಗೂ ಸಮಾನ ಪ್ರಾತಿನಿಧ್ಯ ನೀಡಿ ಸಮೀಕ್ಷೆ ನಡೆಸಲಾಗಿದೆ.

ಸಮೀಕ್ಷೆ ಮಾನದಂಡ

ಕೇಂದ್ರ ಸರ್ಕಾರ ಹಾಗೂ ವಿಶೇಷವಾಗಿ ಪ್ರಧಾನಿ ಮೋದಿ ಕುರಿತು ಜನರಿಗಿರುವ ಆಸ್ಥೆ, ಕೇಂದ್ರ ಸರ್ಕಾರದ ವಿರುದ್ಧ ಧ್ವನಿ, ಮಹಾಘಟಬಂಧನ, ರಾಜ್ಯದಲ್ಲಿ ಮೈತ್ರಿ ಪಕ್ಷಗಳ ಸಮನ್ವಯತೆ, ಸಂಸದರ ಕುರಿತು ಜನಾಭಿಪ್ರಾಯ, ಸ್ಥಳೀಯ ವಿಚಾರಗಳ ಪ್ರಾಮುಖ್ಯತೆ, ದೇಶದ ರಕ್ಷಣೆ ವಿಷಯಕ್ಕೆ ಸ್ಪಂದನೆ ಸೇರಿ 10ಕ್ಕೂ ಹೆಚ್ಚು ಅಂಶಗಳನ್ನು ಆಧಾರವಾಗಿಸಿ ಮತದಾರರಿಂದ ಮಾಹಿತಿ ಪಡೆದು ಸಮೀಕ್ಷೆ ಸಿದ್ಧಪಡಿಸಲಾಗಿದೆ.

ರಾಜ್ಯದಲ್ಲಿ ದೋಸ್ತಿಗೆ ಶಾಕ್

ಬೆಂಗಳೂರು: ರಾಜ್ಯದಲ್ಲಿ ಮೋದಿ ಅಲೆ ಪ್ರಬಲವಾಗಿದೆ ಎಂಬ ಮಾತಿಗೆ ದೇಶದ ಎಲ್ಲ ಸುದ್ದಿ ಸಂಸ್ಥೆಗಳು ನಡೆಸಿದ ಮತದಾನೋತ್ತರ ಸಮೀಕ್ಷೆಯಲ್ಲಿ ಪುಷ್ಠಿ ನೀಡಿವೆ. ರಾಷ್ಟ್ರೀಯ ಸುದ್ದಿವಾಹಿನಿಗಳು, ಸಮೀಕ್ಷಾ ಸಂಸ್ಥೆಗಳು ಪ್ರತ್ಯೇಕ ಅಥವಾ ಸಹಭಾಗಿತ್ವದಲ್ಲಿ ನಡೆಸಿದ ಸಮೀಕ್ಷೆಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿ ಕನಿಷ್ಠ 15 ಹಾಗೂ ಗರಿಷ್ಠ 25 ಸ್ಥಾನ ಗೆಲ್ಲಬಹುದು ಎಂದಿವೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿಗೆ ರಾಜ್ಯದಲ್ಲಿ ನಿರೀಕ್ಷೆಗಿಂತಲೂ ಕಡಿಮೆ ಅಂದರೆ ಕನಿಷ್ಠ 2 ಸ್ಥಾನ ಮಾತ್ರ ಗೆಲ್ಲಬಹುದು, ಗರಿಷ್ಠ 13ರವರೆಗೂ ಏರಬಹುದೆಂದು ತಿಳಿಸಲಾಗಿದೆ.

ಬಹುತೇಕ ಸಂಸ್ಥೆಗಳು ಕಾಂಗ್ರೆಸ್ ಪ್ಲಸ್ ಎಂದು ಜೆಡಿಎಸ್ ಅನ್ನೂ ಜತೆಗೆ ಸೇರಿಸಿರುವ ಕಾರಣಕ್ಕೆ ಈ ಪೈಕಿ ಎರಡೂ ಪಕ್ಷಗಳಲ್ಲಿ ಹಂಚಿಕೆ ಬಗ್ಗೆ ಸ್ಪಷ್ಟತೆಯಿಲ್ಲ. ಕೆಲ ಸಂಸ್ಥೆ ಸಮೀಕ್ಷೆ ನೋಡಿದರೆ, ಜೆಡಿಎಸ್ 1-3 ಸ್ಥಾನ ಗೆಲ್ಲುವ ಸಾಧ್ಯತೆ ನಿರೀಕ್ಷಿಸಲಾಗಿದೆ. ಸಿ ವೋಟರ್, ಜನ್ ಕಿ ಬಾತ್, ಮೈ ಎಕ್ಸಿಸ್ ಹೊರತುಪಡಿಸಿ 10ಕ್ಕೂ ಹೆಚ್ಚು ಸಮೀಕ್ಷೆಗಳು ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಗೆಲುವಿನತ್ತ ಧನಾತ್ಮಕ ದೃಷ್ಟಿ ನೆಟ್ಟಿಲ್ಲ. ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಜಯಿಸುವ ಸಾಧ್ಯತೆಯನ್ನೇ ಬಹುತೇಕ ಸಮೀಕ್ಷೆಗಳು ನೀಡಿವೆ.

ನಾಲ್ಕು ಆಚೀಚೆ

2014ರಲ್ಲಿ ಲೋಕಸಭೆ ಮತದಾನೋತ್ತರದಲ್ಲಿ ಅತ್ಯಂತ ನಿಖರ ಸಂಖ್ಯೆ ನೀಡಿದ್ದ ಟುಡೇಸ್ ಚಾಣಕ್ಯ ಕರ್ನಾಟಕಕ್ಕೆ ನೀಡಿರುವ ಸಮೀಕ್ಷೆ ಮೈತ್ರಿ ಸರ್ಕಾರಕ್ಕೆ ಬಹುದೊಡ್ಡ ಅಘಾತವನ್ನೇ ನೀಡುವಂತಿದೆ. ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು 22 ಸ್ಥಾನ ಗೆಲ್ಲುತ್ತೇವೆ ಎಂದಿದ್ದರೆ, ಚಾಣಕ್ಯ ಸಮೀಕ್ಷೆ ಬಿಜೆಪಿಗೆ ಬರೊಬ್ಬರಿ 23 ಸ್ಥಾನ ನೀಡಿದೆ. ಅದರಲ್ಲೂ +/- 4 ಸ್ಥಾನ ಎಂದಿರುವುದು ಮೈತ್ರಿ ಸರ್ಕಾರಕ್ಕಂತೂ ಆಘಾತಕಾರಿ. ಅದೇ ರೀತಿ ಮೈತ್ರಿಯ 5 ಅಭ್ಯರ್ಥಿಗಳು ಜಯಿಸಬಹುದು ಎಂದಿದ್ದು, 4 ಆಚೀಚೆ ಎಂದು ತಿಳಿಸಿದೆ. ದಕ್ಷಿಣ ಭಾರತದ ದ್ವಾರದಲ್ಲಿ ಬಿಜೆಪಿಯನ್ನು ಸೋಲಿಸಿ ರಾಷ್ಟ್ರ ಮಟ್ಟದಲ್ಲಿ ಮಹಾಘಟಬಂಧನಕ್ಕೆ ಮುನ್ನುಡಿ ಬರೆದಿದ್ದ ಕರ್ನಾಟಕದಲ್ಲಿ ಬಿಜೆಪಿ ಈ ಮಟ್ಟಿನ ಸಾಧನೆ ಮಾಡಿದ್ದೇ ಆದಲ್ಲಿ ಮೈತ್ರಿ ಸರ್ಕಾರದ ಮೂಲ ಉದ್ದೇಶವೇ ನಶಿಸಿ ಹೋಗಿ ಸರ್ಕಾರಕ್ಕೆ ಆಪತ್ತು ಎದುರಾದರೂ ಅಚ್ಚರಿಯಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
ಕೃಪೆ:ವಿಜಯವಾಣಿ

ಮೈತ್ರಿ ಕಲಹ ಕಮಲಕ್ಕೆ ಅನುಕೂಲ: ರಾಜ್ಯದಲ್ಲಿ ಮೂರೂ ಪಕ್ಷಗಳ ಹಣೆಬರಹ ತಿದ್ದಲಿರುವ ಮೂರು ಮತ್ತೊಂದು ಕ್ಷೇತ್ರ
lok-sabha-elections-2019-exit-poll-election-result-congress-bjpjds-rahul-gandhi-pm-narendra-modi

website developers in mysore