8 ರಾಜ್ಯಗಳ 59 ಕ್ಷೇತ್ರಗಳಲ್ಲಿ, ಕುಂದಗೋಳ, ಚಿಂಚೋಳಿಯಲ್ಲಿ ಮತದಾನ ಆರಂಭ

kannada t-shirts

ನವದೆಹಲಿ:ಮೇ-19: ಕಳೆದ ಮೂರು ತಿಂಗಳಿನಿಂದ ಲೋಕಸಭೆ ಚುನಾವಣೆಯ ಗುಂಗಿನಲ್ಲೇ ಮುಳುಗಿದ್ದ ಭಾರತ ಕೊನೆಯ ಹಂತದ ಮತಸಮರ ಆರಂಭವಾಗಿದೆ. ಒಟ್ಟು 8 ರಾಜ್ಯಗಳ 59 ಕ್ಷೇತ್ರಗಳಿಗೆ ಏಳನೇ ಹಾಗೂ ಅಂತಿಮ ಸುತ್ತಿನ ಮತದಾನದಲ್ಲಿ 10.17 ಕೋಟಿ ಮತದಾರರು 918 ಅಭ್ಯರ್ಥಿಗಳ ಹಣೆಬರಹ ಬರೆಯಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸಿರುವ ವಾರಾಣಸಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರ ಚುಕ್ಕಾಣಿ ಹಿಡಿಯುವುದಕ್ಕೆ ನಿರ್ಣಾಯಕವೆಂದೇ ಗುರುತಿಸ ಲಾಗಿರುವ ಪ್ರಮುಖ ಕ್ಷೇತ್ರಗಳಿಗೂ 7ನೇ ಹಂತದಲ್ಲಿ ಮತದಾನ ನಡೆಯುತ್ತಿರುವುದು ತೀವ್ರ ಕುತೂಹಲ ಕೆರಳಿಸಿದೆ. ಅಂತಿಮ ಚರಣದ ಮತದಾನದ ಬಳಿಕ ಫಲಿತಾಂಶಕ್ಕೆ ನಾಲ್ಕು ದಿನವಷ್ಟೇ ಬಾಕಿ ಉಳಿದಿರುವುದರಿಂದ ಎಲ್ಲರ ಚಿತ್ತ ಮೇ 23ರತ್ತ ನೆಟ್ಟಿದೆ.

3 ತಿಂಗಳ ಪ್ರಕ್ರಿಯೆ: ಲೋಕಸಭೆ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಮಾರ್ಚ್​ನಲ್ಲಿ ಪ್ರಕಟಿಸಿತ್ತು. ಅದರೊಂದಿಗೆ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿತ್ತು. ಏಪ್ರಿಲ್ 11ರಂದು ಆರಂಭವಾಗಿದ್ದ ಮತದಾನ ಮೇ 19ರಂದು ಕೊನೆಗೊಳ್ಳುತ್ತಿದೆ. ಎಲ್ಲ 542 ಕ್ಷೇತ್ರಗಳ ಮತ ಎಣಿಕೆ ಮೇ 23ರಂದು ನಡೆಯಲಿದೆ.

ಏಳು ಹಂತದ ಮತದಾನ: ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಬಿಹಾರದಲ್ಲಿ ಎಲ್ಲ 7 ಹಂತಗಳಲ್ಲಿ ಚುನಾವಣೆ ನಡೆದಿರುವುದು ವಿಶೇಷ. ಜಮ್ಮು ಮತ್ತು ಕಾಶ್ಮೀರದಲ್ಲಿ 5 ಹಂತದಲ್ಲಿ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್​ಗಳಲ್ಲಿ ಒಂದೇ ಹಂತದಲ್ಲಿ ಮತದಾನ ಮುಗಿದಿದೆ. ಜಾರ್ಖಂಡ್, ಬಿಹಾರ ಹಾಗೂ ಉತ್ತರಪ್ರದೇಶದ ಕೆಲವು ಭಾಗಗಳಲ್ಲಿ ಬೆಳಗ್ಗೆ 7ಕ್ಕೆ ಮತದಾನ ಆರಂಭವಾಗಿದ್ದು, ಸಂಜೆ 4 ಗಂಟೆಗೆ ಮತದಾನ ಅವಧಿ ಮುಕ್ತಾಯಗೊಳ್ಳಲಿದೆ. ಉಳಿದೆಲ್ಲ ಕಡೆಗಳಲ್ಲಿ ಸಂಜೆ 6ರವರೆಗೆ ಮತ ಚಲಾವಣೆಯಾಗಲಿದೆ.

ಹಣ ಹಂಚಿಕೆ ಹಾಗೂ ಚುನಾವಣಾ ಅಕ್ರಮ ಆರೋಪದಲ್ಲಿ ರದ್ದುಗೊಂಡಿರುವ ತಮಿಳುನಾಡಿನ ವೆಲ್ಲೂರು ಕ್ಷೇತ್ರದಲ್ಲಿ ಚುನಾವಣೆ ಇನ್ನಷ್ಟೇ ಘೋಷಣೆ ಆಗಬೇಕಿದೆ.

ಚುನಾವಣೆ ವಿಶೇಷ

# ಪುಲ್ವಾಮಾ ಉಗ್ರ ದಾಳಿ, ಶ್ರೀಲಂಕಾ ಸರಣಿ ಸ್ಪೋಟದ ಬಳಿಕ ಉಗ್ರರ ಸಂಭಾವ್ಯ ದಾಳಿ ಕುರಿತು ಎಚ್ಚರಿಕೆ ಇರುವ ಹೊರತಾಗಿಯೂ ಯಾವುದೇ ಅಡ್ಡಿ ಎದುರಾಗದಂತೆ ಚುನಾವಣೆ ಪ್ರಕ್ರಿಯೆ ಯಶಸ್ವಿ

#ಲೋಕಸಭೆ ಚುನಾವಣೆ ಕಾರಣಕ್ಕಾಗಿಯೇ 2009 ಹಾಗೂ 2014ರಲ್ಲಿ ಐಪಿಎಲ್ ಕ್ರಿಕೆಟ್ ಟೂರ್ನಿಯನ್ನು ದಕ್ಷಿಣ ಆಫ್ರಿಕಾ ಹಾಗೂ ಯುಎಇಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಈ ಬಾರಿ ಐಪಿಎಲ್ ಪೂರ್ಣಗೊಳಿಸಿಯೂ ಚುನಾವಣೆ ನಡೆಸಲಾಗಿದೆ.

#ರಮಜಾನ್ ಪ್ರಯುಕ್ತ ಮತದಾನ ಮುಂದೂಡಿಕೆ ಆಗಿರುವ ಹಲವು ನಿದರ್ಶನ ಗಳಿವೆ. ಆದರೆ ಈ ಚುನಾವಣೆ ಯಲ್ಲಿ ಅದಕ್ಕೂ ಅವಕಾಶ ಸಿಕ್ಕಿಲ್ಲ

# ಸಾಲು ಸಾಲು ಪರೀಕ್ಷೆಗಳ ಸವಾಲನ್ನೂ ಮೀರಿ ಚುನಾವಣೆ ನಡೆಸಿರುವುದು ಮತ್ತೊಂದು ಹೆಗ್ಗಳಿಕೆ

ಪ್ರಥಮ ಮತದಾರನಿಂದ ಇಂದು ಹಕ್ಕು ಚಲಾವಣೆ

1951ರಲ್ಲಿ ನಡೆದಿದ್ದ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ದೇಶದ ಮೊದಲ ಮತದಾರನಾಗಿ ಮತ ಚಲಾಯಿಸಿದ್ದ ವ್ಯಕ್ತಿ ಏಳನೇ ಹಂತದಲ್ಲಿ ಮತ ಚಲಾಯಿಸಲಿದ್ದಾರೆ. ಹಿಮಾಚಲ ಪ್ರದೇಶದ ಕಲ್ಪ ಗ್ರಾಮದ 102 ವರ್ಷಗಳ ಶ್ಯಾಮ್ ಶರಣ್ ನೇಗಿ ಅವರನ್ನು ಮತದಾನಕ್ಕಾಗಿ ಭಾನುವಾರ ಗೌರವದಿಂದ ಮತಗಟ್ಟೆಗೆ ಕರೆತರಲಿದ್ದೇವೆ ಎಂದು ಕಿನ್ನೌರ್ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇಂದು ಸಂಜೆ ಎಕ್ಸಿಟ್ ಪೋಲ್

ಮತದಾನ ಪೂರ್ಣಗೊಳ್ಳುತ್ತಲೇ ಸಂಜೆ 5.30ರ ಬಳಿಕ ಮತದಾನೋತ್ತರ ಸಮೀಕ್ಷಾ ವರದಿಗಳು ಪ್ರಕಟವಾಗಲಿದೆ. ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲೂ ಕೆಲವು ಖಾಸಗಿ ಸಂಸ್ಥೆಗಳು ಪ್ರಕಟಿಸಿದ್ದ ಸಮೀಕ್ಷಾ ವರದಿ ಫಲಿತಾಂಶಕ್ಕೆ ಸಮೀಪವಿತ್ತು. ಹೀಗಾಗಿ ಎಕ್ಸಿಟ್ ಪೋಲ್ ಕುತೂಹಲ ಕೆರಳಿಸಿದೆ.

7ನೇ ಹಂತ ಬಿಜೆಪಿಗೇಕೆ ನಿರ್ಣಾಯಕ

ಇಂದು ಮತದಾನ ನಡೆಯುತ್ತಿರುವ 59 ಕ್ಷೇತ್ರಗಳ ಪೈಕಿ 33 ಕ್ಷೇತ್ರಗಳಲ್ಲಿ ಬಿಜೆಪಿ 2014ರ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ 3ರಲ್ಲಿ ಗೆದ್ದಿದ್ದರೆ ಟಿಎಂಸಿ 9 ಹಾಗೂ ಇತರರು 14 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು. ಈ ಸಾಧನೆ ಬಿಜೆಪಿಗೆ ಸ್ಪಷ್ಟ ಬಹುಮತ ತಂದುಕೊಡುವಲ್ಲಿ ನೆರವಾಗಿತ್ತು. ಹೀಗಾಗಿಯೇ 7ನೇ ಹಂತದ ಮತದಾನ ಬಿಜೆಪಿ ಪಾಲಿಗೆ ನಿರ್ಣಾಯಕ ಎಂದೇ ವಿಶ್ಲೇಷಿಸಲಾಗುತ್ತಿದೆ.

ಗುಹೆಯಲ್ಲಿ ನಮೋ ಧ್ಯಾನ

ಲೋಕಸಭೆ ಚುನಾವಣೆ ಅಂತಿಮ ಘಟ್ಟ ತಲುಪಿರುವಂತೆಯೇ ಎರಡು ದಿನಗಳ ಭೇಟಿಗಾಗಿ ಉತ್ತರಾಖಂಡಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಕೇದಾರನಾಥನ ದರ್ಶನ ಪಡೆದರು. ಸುಮಾರು ಅರ್ಧ ಗಂಟೆ ಕಾಲ ಪೂಜೆ ಮತ್ತು ಅರ್ಚನೆ ನೆರವೇರಿಸಿದ ಬಳಿಕ 2 ಕಿ.ಮೀ ದೂರದಲ್ಲಿರುವ ಗುಹೆಗೆ ಕಾಲ್ನಡಿಗೆಯಲ್ಲೇ ತೆರಳಿ ಧ್ಯಾನಕ್ಕೆ ಕುಳಿತರು. ಭಾನುವಾರ ಬೆಳಗಿನವರೆಗೂ ಮೋದಿ ಅವರ ಧ್ಯಾನ ಮುಂದುವರಿಯುವುದಾಗಿ ತಿಳಿದು ಬಂದಿದೆ. ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿ ಬದರೀನಾಥಕ್ಕೆ ತೆರಳಿರುವ ಮೋದಿ ಭಾನುವಾರ ದರ್ಶನ ಕೈಗೊಳ್ಳಲಿದ್ದಾರೆ. ಕೇದಾರನಾಥನ ದರ್ಶನದ ವೇಳೆ ಮೋದಿ ಅವರು ಸಾಂಪ್ರದಾಯಿಕ ಪಹಾರಿ ಉಡುಗೆ ತೊಟ್ಟಿದ್ದು ಗಮನ ಸೆಳೆಯಿತು.

7ನೇ ಹಂತದ ಮತದಾನದ ವೇಳೆ ದಾಖಲೆ ಪ್ರಮಾಣದಲ್ಲಿ ಮತ ಚಲಾಯಿಸುವಂತೆ ಮತದಾರರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

ಪಶ್ಚಿಮ ಬಂಗಾಳದ ದಕ್ಷಿಣ ಕೋಲ್ಕತ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಕೆ. ಬೋಸ್​ ಸಿಟಿ ಕಾಲೇಜಿನ ಮತಗಟ್ಟೆಯಲ್ಲಿ ಮತಚಲಾಯಿಸಿದರು.

ಪಪಂಜಾಬ್​ನ ಜಲಂಧರ್​ನ ಗರ್ಹಿ ಗ್ರಾಮದ ಮತಗಟ್ಟೆಯಲ್ಲಿ ಕ್ರಿಕೆಟಿಗ ಹರಭಜನ್​ ಸಿಂಗ್​ ಮತಚಲಾಯಿದರು.

ಪಟನಾದ ಮತಗಟ್ಟೆ ಸಂಖ್ಯೆ 49ರಲ್ಲಿ ಮತ ಚಲಾಯಿಸಿದ ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್​ ಮೋದಿ. ಪಟನಾದ ರಾಜಭವನದ ಶಾಲೆಯ ಮತಗಟ್ಟೆ ಸಂಖ್ಯೆ 326ರಲ್ಲಿ ಬಿಹಾರ ಸಿಎಂ ನಿತೀಶ್​ ಕುಮಾರ್​ ಮತ ಚಲಾಯಿಸಿದರು.

ಇನ್ನು ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ನಡೆಯುತ್ತಿದ್ದು, ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾನ ಆರಂಭವಾಗಿದೆ. ಕುಂದಗೋಳ ಕ್ಷೇತ್ರದಲ್ಲಿ 214 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 33 ಮತಗಟ್ಟೆಗಳನ್ನು ಸೂಕ್ಷ್ಮ ಮತ್ತು 38 ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ. ಕ್ಷೇತ್ರದಲ್ಲಿ 97,526 ಪುರುಷ ಹಾಗೂ 91,907 ಮಹಿಳಾ, 259 ಸೇವಾ ಮತದಾರರು ಹಾಗೂ ನಾಲ್ವರು ಇತರರು ಸೇರಿ ಒಟ್ಟು 1,89,435 ಮತದಾರರಿದ್ದಾರೆ.

ಕುಂದಗೋಳದ ಸಂಶಿ ಗ್ರಾಮದ ಮತಗಟ್ಟೆ 131ರಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ. 10 ನಿಮಿಷ ತಡವಾಗಿ ಮತದಾನ ಆರಂಭವಾಗಿದೆ. ಚಿಂಚೋಳಿ ಐನೋಳಿ ಗ್ರಾಮದ ಮತಗಟ್ಟೆ ಸಂಖ್ಯೆ 111ರಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಮತದಾನ 5 ನಿಮಿಷ ಸ್ಥಗಿತವಾಗಿತ್ತು.

8 ರಾಜ್ಯಗಳ 59 ಕ್ಷೇತ್ರಗಳಲ್ಲಿ, ಕುಂದಗೋಳ, ಚಿಂಚೋಳಿಯಲ್ಲಿ ಮತದಾನ ಆರಂಭ
lok sabha election-2019,last phase,kundagola,chinchili,byelection,voting

website developers in mysore