ಮಹಾರಾಷ್ಟ್ರ, ತೆಲಂಗಾಣ ಸಿಎಂಗೆ ಪತ್ರ

ಬೆಂಗಳೂರು:ಆ-6: ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ಮಾಹಿತಿ ನೀಡದೆ ಭಾರೀ ಪ್ರಮಾಣದಲ್ಲಿ ನೀರನ್ನು ಕೃಷ್ಣಾ ನದಿಗೆ ಹರಿಸುತ್ತಿರುವುದರಿಂದ ಸಾಕಷ್ಟು ಸಮಸ್ಯೆಗಳಾಗಿದ್ದು, ಈ ಬಗ್ಗೆ ರಾಜ್ಯದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ನಿಯಮಿತವಾಗಿ ನೀರು ಹರಿಸುವತ್ತ ಗಮನ ಹರಿಸುವಂತೆ ಕೋರಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಅವರಿಗೆ ಪತ್ರ ಬರೆದಿದ್ದಾರೆ.

ಜತೆಗೆ ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ದೊಡ್ಡ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದರಿಂದ ರಾಜ್ಯದ ಕೆಲ ಜಲಾಶಯ ಭರ್ತಿಯಾಗಿದ್ದು, ಹೊರ ಹರಿವಿನ ಪ್ರಮಾಣ ಹೆಚ್ಚಾಗಲಿದೆ. ಆ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಯಡಿಯೂರಪ್ಪ ಅವರು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್‌ ಅವರಿಗೆ ಪತ್ರ ಬರೆದಿದ್ದಾರೆ.

ಭಾನುವಾರ ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ, ಮಹಾರಾಷ್ಟ್ರ ಸರ್ಕಾರವು ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿ ಹಾಗೂ ಉಪನದಿಗಳಿಗೆ ಕೆಲ ದಿನಗಳಿಂದ ಭಾರೀ ಪ್ರಮಾಣದಲ್ಲಿ ನೀರು ಹರಿಬಿಡುತ್ತಿದೆ. ಕೋಯ್ನಾ ಜಲಾಶಯದಿಂದ ಆರಂಭದಲ್ಲಿ 20,000ದಿಂದ 50000 ಕ್ಯುಸೆಕ್‌ ನೀರು ಹರಿಬಿಡಲಾಗುತ್ತಿತ್ತು. ಬಳಿಕ 50,000ದಿಂದ 80,000 ಕ್ಯುಸೆಕ್‌ ಹಾಗೂ ಎರಡು ದಿನಗಳಲ್ಲಿ 1.25 ಲಕ್ಷ ಕ್ಯುಸೆಕ್‌ ನೀರು ಹರಿಬಿಡಲಾಗಿದೆ.

ಇದರಿಂದಾಗಿ ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ರಾಯಚೂರು, ಕಲಬುರಗಿ ಹಾಗೂ ಯಾದಗಿರಿಯಲ್ಲಿ ಸಾಕಷ್ಟು ಹಾನಿಯಾಗಿದ್ದು, ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ ಎಂದು ಪತ್ರದಲ್ಲಿ ಉಲ್ಲೇಖೀಸಲಾಗಿದೆ. ಭಾರೀ ಪ್ರಮಾನದಲ್ಲಿ ಕೃಷ್ಣಾ ನದಿಗೆ ನೀರು ಹರಿಸುತ್ತಿರುವುದರಿಂದ ಈ ಜಿಲ್ಲೆಗಳಲ್ಲಿ ಜನ- ಜಾನುವಾರುಗಳಿಗೆ ಹಾನಿಯಾಗಿದೆ.

ಹಾಗಾಗಿ ಜಲಾಶಯದಿಂದ ನೀರು ಹರಿಸುವ ಪ್ರಮಾಣವನ್ನು ಸಮರ್ಪಕವಾಗಿ ಮೇಲ್ವಿಚಾರಣೆ ನಡೆಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಬೇಕು. ಏಕಾಏಕಿ ಭಾರಿ ಪ್ರಮಾಣದಲ್ಲಿ ನೀರು ಹರಿಸುವ ಬದಲಿಗೆ ಹಂತ ಹಂತವಾಗಿ ನಿಯಮಿತವಾಗಿ ಹೊರ ಹರಿವಿನ ಪ್ರಮಾಣ ಹೆಚ್ಚಿಸುವಂತೆ ಸೂಚಿಸಬೇಕು. ಹೊರ ಹರಿವಿನ ಬಗ್ಗೆ ಕರ್ನಾಟಕದ ಅಧಿಕಾರಿಗಳಿಗೆ ಮುಂಚಿತವಾಗಿಯೇ ನಿಯಮತಿವಾಗಿ ಮಾಹಿತಿ ನಿಯಮಿತವಾಗಿ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಕೃಪೆ:ಉದಯವಾಣಿ

ಮಹಾರಾಷ್ಟ್ರ, ತೆಲಂಗಾಣ ಸಿಎಂಗೆ ಪತ್ರ

letter-to-maharashtra-telangana-cm