ವಿವಿಗಳು ಜನರ ನಂಬಿಕೆ ಉಳಿಸಿಕೊಳ್ಳಲಿ: ಪ್ರೊ.ಚಟಪಲ್ಲಿ

ಕೃಷಿಕ ಎಪಿಚಂದ್ರಶೇಖರ್‌ಗೆ ಗದಗ ಗ್ರಾಮೀಣ ವಿವಿ ಗೌರವ ಡಾಕ್ಟರೇಟ್ ಪ್ರದಾನ

ಮೈಸೂರು, ಏಪ್ರಿಲ್ 17, 2023 (www.justkannada.in): ಹಸಿರಿನ ಸಿರಿಯ ನಡುವೆ ಕೃಷಿ ಸಾಧಕ ಎ.ಪಿ.ಚಂದ್ರಶೇಖರ್ ಅವರಿಗೆ ಗೌರವ ಡಾಕ್ಟರೇಟ್ ಅನ್ನು ಭಾನುವಾರ ಪ್ರದಾನ ಮಾಡಲಾಯಿತು.

ಎಚ್‌ಡಿಕೋಟೆ ರಸ್ತೆಯ ಕಳಲವಾಡಿಯಲ್ಲಿರುವ ಇಂದ್ರಪ್ರಸ್ಥ ತೋಟದಲ್ಲಿ ಆಯೋಜಿಸಲಾಗಿದ್ದ ಸರಳ ಸಮಾರಂಭದಲ್ಲಿ ಗದಗದ ಗ್ರಾಮೀಣಾಭಿವೃದ್ದಿ ವಿಶ್ವವಿದ್ಯಾನಿಲಯದ ಈ ಬಾರಿಯ ಗೌರವ ಡಾಕ್ಟರೇಟ್ ಅನ್ನು ಚಂದ್ರಶೇಖರ್ ಅವರು ಸ್ವೀಕರಿಸಿದರು. ವಿಶ್ವವಿದ್ಯಾನಿಲಯದ ಕುಲಪತಿ ಡಾ.ವಿಷ್ಣುಕಾಂತ ಚಟಪಲ್ಲಿ ಅವರು, ವಿವಿ ಅಧಿಕಾರಿಗಳು, ಕುಟುಂಬಸ್ಥರು ಹಾಗೂ ಹಿತೈಷಿಗಳ ಉಪಸ್ಥಿತಿಯಲ್ಲಿ ಡಾಕ್ಟರೇಟ್ ಪ್ರದಾನ ಮಾಡಿದರು. ಕಳೆದ ಮಾರ್ಚ್ ೮ರಂದೇ ಘಟಿಕೋತ್ಸವ ನಡೆದಿದ್ದರೂ ಚಂದ್ರಶೇಖರ್ ಅಂದು ಪಾಲ್ಗೊಳ್ಳಲು ಆಗಿರಲಿಲ್ಲ.

ಈ ವೇಳೆ ಮಾತನಾಡಿದ ಡಾ.ವಿಷ್ಣುಕಾಂತ ಚಟಪಲ್ಲಿ, ಈಗಿನ ಕಾಲದಲ್ಲಿ ಪ್ರಶಸ್ತಿಗಳಿಗೆ ಹುಡುಕಿ ಹೋಗುವವರೇ ಹೆಚ್ಚು. ಆದರೆ ಚಂದ್ರಶೇಖರ್ ಅವರು ಸಸ್ಯ ಶಾಮಲೆಯ ನಡುವೆಯೇ ಇದ್ದುಕೊಂಡು ಸಾಧನೆ ಮಾಡಿದವರು. ಅಲ್ಲದೇ ಹತ್ತು ಹಲವು ಜನರಿಗೆ ಮಾದರಿಯೂ ಆಗಿದ್ಧಾರೆ. ಅಂತವರಿಗೆ ಮನೆಗೆ ಗೌರವ ಹುಡುಕಿಕೊಂಡು ಬಂದಿರುವುದು ಅವರ ಸಾಧನೆಯ ಹಿರಿಮೆಯನ್ನು ತೋರುತ್ತದೆ. ಕಾಂಕ್ರಿಟ್ ಕಾಡಿನ ಬದಲು ಹಸಿರಿನ ನಡುವೆ ಪ್ರಶಸ್ತಿ ನೀಡುವಂತಹ ಸಂದರ್ಭ ಸೃಷ್ಟಿಯಾಗಿದ್ದು ಸಂತಸದಾಯಕ ಎಂದು ನುಡಿದರು.

ವಿಶ್ವವಿದ್ಯಾನಿಲಯಗಳು ಜನಮುಖಿ ಶಿಕ್ಷಣದ ಮೂಲಕ ಜನರ ನಂಬಿಕೆ ಉಳಿಸಿಕೊಳ್ಳಬೇಕು. ಅದರಲ್ಲೂ ಗ್ರಾಮೀಣಾಭಿವೃದ್ದಿಯಂತಹ ವಿಷಯದಲ್ಲಿ ಸಾಕಷ್ಟು ಕೆಲಸಗಳು ಆಗಬೇಕಾಗಿದ್ದು, ಇದಕ್ಕೆ ಚಂದ್ರಶೇಖರ್ ಅವರಂತಹ ಸಾಧಕರು ಕೈಜೋಡಿಸಬೇಕು. ಇಂತಹವರ ಬೆಂಬಲದಿಂದಲೇ ವಿವಿ ಗಟ್ಟಿಯಾಗಿ ಕೆಲಸ ಮಾಡುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ವಿವಿ ಹೆಜ್ಜೆ ಇಟ್ಟಿದೆ ಎಂದು ಹೇಳಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿಕ ವಿಶ್ವೇಶ್ವರ ಸಜ್ಜನ್ ಮಾತನಾಡಿ, ಕೃಷಿ ಭಂಡಾರವೇ ಆಗಿರುವ ಇಂದ್ರಪ್ರಸ್ಥ ನಿಜಕ್ಕೂ ಸಾಧಕನ ಅಂಗಳದಂತೆಯೇ ಇದೆ. ಕೃಷಿಕನಿಗೆ ತನ್ನ ಕೃಷಿ ಅಂಗಳವೇ ದೇವಾಲಯವಿದ್ದಂತೆ. ಅದೇ ರೀತಿ ಚಂದ್ರಶೇಖರ್ ಅವರು ಇದನ್ನು ರೂಪಿಸಿ ಸಾಧನೆ ಮಾಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ಲೇಖಕ ಹಾಗೂ ಮೈಸೂರು ಆಕಾಶವಾಣಿ ಕಾರ‌್ಯಕ್ರಮ ನಿರ್ವಾಹಕ ದಿವಾಕರ ಹೆಗಡೆ ಕೆರೆಹೊಂಡ ಮಾತನಾಡಿ, ಬದಲಾದ ಸನ್ನಿವೇಶದಲ್ಲಿ ರೈತನ ಆದ್ಯತೆಗಳು ಬದಲಾಗಿ ಇಡೀ ಕೃಷಿಯೂ ವಾಣಿಜ್ಯೀಕರಣದತ್ತ ಮಾರು ಹೋಗಿದೆ. ರಬ್ಬರ್ ಸೇರಿದಂತೆ ಬೇರೆ ಬೇರೆ ಉತ್ಪನ್ನಗಳನ್ನು ಬೆಳಯುವ ಹಂತಕ್ಕೆ ಹೋಗಿವುದು ಇದಕ್ಕೆ ಉದಾಹರಣೆ. ಅನ್ನ ಬೆಳೆಯುವ ರೈತನ ಆದ್ಯತೆಗಳು ಆಹಾರ ನೀಡುವತ್ತಲೇ ಇರಲಿ ಎಂದು ಆಶಿಸಿದರು.

ಭೈಫ್ ಸಂಸ್ಥೆ ಮಾಜಿ ನಿರ್ದೇಶಕ ಪ್ರಕಾಶ್ ಭಟ್ ಸ್ವಾಗತಿಸಿದರು. ಜಿ.ಎನ್.ಅನಂತವರ್ಧನ, ನಿರ್ಮಲಾ ಚಂದ್ರಶೇಖರ್, ಡಾ.ಎಪಿಸಿ ಅಭಿಜಿತ್ ಮತ್ತಿತರರು ಹಾಜರಿದ್ದರು.

ತೋಟ ಸುತ್ತಿದ ಕುಲಪತಿ: ದೂರದ ಗದಗದಿಂದ ಆಗಮಿಸಿ ಇಂದ್ರಪ್ರಸ್ಥ ತೋಟದಲ್ಲೇ ಕುಲಪತಿ ಡಾ.ವಿಷ್ಣುಕಾಂತ ಚಟಪಲ್ಲಿ ಹಾಗೂ ಇತರರು ನಾಲ್ಕು ಗಂಟೆಗೂ ಕಾಲ ಸುತ್ತು ಕಳೆದು ಪುಳಕಿತರಾದರು. ೧೪ ಎಕರೆಯಲ್ಲಿ ರೂಪುಗೊಂಡಿರುವ, ಬಗೆ ಬಗೆಯ ಮರ,ಗಿಡ, ಹಣ್ಣು, ಬೇರು, ಬಳ್ಳಿಗಳ ಮಾಹಿತಿಯನ್ನು ಪಡೆದ ವಿವಿ ತಂಡ ಸಂತಸ ವ್ಯಕ್ತಪಡಿಸಿತು. ನಂತರ ಅಪ್ಪಟ ದೇಸಿ ಶೈಲಿಯ ಊಟವೂ ಬಾಯಿ ರುಚಿ ತಣಿಸಿತು.