ಕಚೇರಿ ಬಿಟ್ಟು ಫೀಲ್ಡ್ ನಲ್ಲಿ ಕೆಲಸ ಮಾಡಿ- ಕೃಷಿ ಅಧಿಕಾರಿಗಳಿಗೆ ಸಚಿವ ಬಿ.ಸಿ ಪಾಟೀಲ್ ಎಚ್ಚರಿಕೆ

ಮೈಸೂರು,ಸೆಪ್ಟಂಬರ್,8,2020(www.justkannada.in):  ಕೃಷಿ ಅಧಿಕಾರಿಗಳು ಕಚೇರಿ ಬಿಟ್ಟು ಫೀಲ್ಡ್‌ನಲ್ಲಿ ಕೆಲಸ ಮಾಡಿ. ಇಲ್ಲವಾದರೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳಿಗೆ ಕೃಷಿ ಸಚಿವ ಬಿ ಸಿ ಪಾಟೀಲ್ ಖಡಕ್ ಎಚ್ಚರಿಕೆ ನೀಡಿದರು.jk-logo-justkannada-logo

ಸಚಿವ ಬಿ. ಸಿ. ಪಾಟೀಲ್ ನೇತೃತ್ವದಲ್ಲಿ ಮೈಸೂರು ವಿಭಾಗಿಯ ಮಟ್ಟದ ಬೆಳೆ ಸಮೀಕ್ಷೆ ಹಾಗೂ ಕೃಷಿ ಇಲಾಖೆಯ ವಿವಿಧ ಯೋಜನೆಗಳ ಕುರಿತು ಸಭೆ ನಡೆಯಿತು. ಮೈಸೂರು ವಿವಿಯ ರಾಣಿ ಬಹದ್ದೂರು ಆಡಿಟೋರಿಯಂನಲ್ಲಿ ನಡೆದ ಸಭೆಯಲ್ಲಿ ಕೃಷಿ ಚಟುವಟಿಕೆಗಳ ಯೋಜನೆಗಳು ಹಾಗೂ ಅನುಷ್ಠಾನ ಕುರಿತು ಅಧಿಕಾರಿಗಳೊಂದಿಗೆ ಸಚಿವ ಬಿ.ಸಿ ಪಾಟೀಲ್ ಚರ್ಚೆ ನಡೆಸಿದರು.

ಕೃಷಿ ಅಧಿಕಾರಿಗಳು ಕಚೇರಿ ಬಿಟ್ಟು ಫೀಲ್ಡ್‌ನಲ್ಲಿ ಕೆಲಸ ಮಾಡಿ. ಇಲ್ಲವಾದರೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಅಧಿಕಾರಿಗಳಿಗೆ ಕೃಷಿ ವಿಜ್ಞಾನಿಗಳಿಗೆ ಸೂಚನೆ ನೀಡಲಾಗಿದೆ. ಕೇವಲ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವುದಲ್ಲ. ಫೀಲ್ಡ್ ಗೆ ಹೋಗಿ ರೈತರ ಜೊತೆ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ರಸಗೊಬ್ಬರ ಕಳ್ಳ ಸಾಗಾಣೆ ಕಳ್ಳ ದಾಸ್ತಾನು ವಿಚಾರ ಸಂಬಂಧ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಈ‌ ರೀತಿಯ ಪ್ರಕರಣಗಳ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಬಿ.ಸಿ ಪಾಟೀಲ್ ತಿಳಿಸಿದರು. ಸಭೆಯಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ 8 ಜಿಲ್ಲೆಗಳ ಕೃಷಿ ಅಧಿಕಾರಿಗಳು ಭಾಗಿಯಾಗಿದ್ದರು.

ರೈತರ ಮನೆಗಳಲ್ಲಿ ವಾಸ್ತವ್ಯ:

ಸಭೆಗೂ ಮುನ್ನ ಮಾತನಾಡಿದ ಸಚಿವ ಬಿ.ಸಿ ಪಾಟೀಲ್, ರೈತರ ಮನೆಗಳಲ್ಲಿ ವಾಸ್ತವ್ಯ ಹೂಡಿ ರೈತರ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಈಗಾಗಲೇ ರಾಜ್ಯದ 30 ಜಿಲ್ಲೆಗಳಲ್ಲಿ ಪ್ರವಾಸ ಮುಗಿಸಿ ಬಂದಿದ್ದೇನೆ. ಕೊರೋನಾ ಮುಗಿದ ಮುಂದಿನ ದಿನಗಳಲ್ಲಿ ರೈತರ ಮನೆಗಳಲ್ಲಿ ವಾಸ್ತವ್ಯ ಮಾಡುತ್ತೇನೆ. ರೈತರಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯಕ್ಕೆ ಮುಂದಾಗಲ್ಲಿದ್ದೇವೆ. ಎಲ್ಲಾ ಅಧಿಕಾರಿಗಳೊಡನೆ  ವಾಸ್ತವ್ಯ ಹೂಡಿ ಸ್ಥಳದಲ್ಲೇ  ರೈತರ ಸಮಸ್ಯೆ  ಬಗೆಹರಿಸುತ್ತೇನೆ ಎಂದರು.

ರಾಜ್ಯದಲ್ಲಿ ಮುಂಗಾರು ಮಳೆ ಬಂದು ಎಲ್ಲ ಜಲಾಶಯಗಳು ಭರ್ತಿಯಾಗಿವೆ. ರೈತರಿಗೆ ಬೇಕಾಗುವ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ದಾಸ್ತಾನುಗಳಿವೆ. ರೈತರಿಗೆ ಯಾವುದೇ ರೀತಿಯ ಕೊರತೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.leave-office-work-field-agriculture-minister-bc-patil

ರೈತರಿಗೆ ಕೃಷಿ ಸಾಲ ನೀಡುವ ವಿಚಾರ ಸಂಬಂಧ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತಾಪಿವರ್ಗಗಳಿಗೆ ಹೊಸ ಕೃಷಿ ಸಾಲ. ಸಾಲ ನೀಡಲು ಈಗಾಗಲೇ ಸಹಕಾರಿ ಸಚಿವರು ಮುಂದಾಗಿದ್ದಾರೆ. ಹಂತ ಹಂತವಾಗಿ ರಾಜ್ಯದ ಎಲ್ಲಾ ಜಿಲ್ಲೆಯ ರೈತರಿಗೆ ಕೃಷಿ ಸಾಲ ನೀಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

Key words: Leave -office -work – field- Agriculture Minister – BC Patil