ಭೂ ಕಬಳಿಕೆ ಆರೋಪ: ಅಕ್ರಮ ಎಸಗಿಲ್ಲ ಎಂದ ಎಚ್ವಿ ಪುತ್ರ ಅಮಿತ್ ದೇವರಹಟ್ಟಿ

ಬೆಂಗಳೂರು, ಜೂನ್ 13, 2021 (www.justkannada.in): ನಾನು ಕಳೆದ 2017ರಲ್ಲಿ ಹಿ‌ನಕಲ್ ಬಳಿ ನಿಯಮಾನುಸಾರ ಜಮೀನು ಖರೀದಿಸಿದ್ದೇನೆ. ಪೊಲೀಸರ ಸಮ್ಮುಖದಲ್ಲಿ ಜಮೀನಿನ ಸುತ್ತ ಕಾಂಪೌಂಡ್ ಹಾಕಿಕೊಂಡಿದ್ದೇನೆ ಎಂದು ಮಾಜಿ ಸಚಿವ ಎಚ್ ವಿಶ್ವನಾಥ್ ಪುತ್ರ, ಮೈಸೂರು ಜಿಲ್ಲಾ ಪಂಚಾಯತಿ ಸದಸ್ಯ ಅಮಿತ್ ದೇವರಹಟ್ಟಿ ಸ್ಪಷ್ಟನೆ ನೀಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ.ನಡೆಸಿ ಮಾತನಾಡಿದ ಅವರು, ಮೈಸೂರಿನಲ್ಲಿ ನಡೆದಿರುವ ಭೂ ಕಬಳಿಕೆ ಪ್ರಕರಣಗಳ ಆರೋಪದಲ್ಲಿ ಮಾಜಿ ಸಚಿವ ಎಚ್ ವಿಶ್ವನಾಥ್ ಹಾಗೂ ಅವರ ಪುತ್ರ ಅಮಿತ್ ದೇವರಹಟ್ಟಿ ವಿರುದ್ದವೂ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಆ ಜಮೀನನ್ನು ಖಾತೆ ಮಾಡಿಸಿಕೊಂಡಿರುವುದಾಗಿ ಯೋಗೀಶ್ ಎಂಬುವರು ಹೇಳಿಕೊಂಡಿದ್ದು, ಈ ವಿಚಾರ ನ್ಯಾಯಾಲಯ ಸುಪರ್ದಿಯಲ್ಲಿದೆ. ಹಾಗಾಗಿ ಇಷ್ಟು ದಿನಗಳ ಕಾಲ ಈ ಬಗ್ಗೆ ಮಾತನಾಡಿರಲಿಲ್ಲ. ಆದರೀಗ ನನ್ನ ವಿರುದ್ಧ ಆರೋಪ ಮಾಡಿರುವುದರಿಂದ ಸ್ಪಷ್ಟನೆ ನೀಡಲು ಬಂದಿದ್ದೇನೆ ಎಂದು ತಿಳಿಸಿದ್ದಾರೆ.

ಅದಕ್ಕೆ ಸೂಕ್ತ ದಾಖಲೆಗಳಿವೆ ಎಂದು ಕೆಲ ಕಾಗದ ಪತ್ರಗಳನ್ನು ಪ್ರದರ್ಶಿಸಿದ ಅಮಿತ್ ದೇವರಹಟ್ಟಿ. ತಮ್ಮ ವಿರುದ್ಧ ಕೇಳಿ ಬಂದಿರುವ ಭೂ ಕಬಳಿಕೆ ಆರೋಪವನ್ನು ತಳ್ಳಿಹಾಕಿದ್ದಾರೆ. ನನ್ನ ವಿರುದ್ಧ ವೃಥಾ ಆರೋಪ ಮಾಡಲಾಗುತ್ತಿದೆ.ಈ ವಿಚಾರದಲ್ಲಿ ನನ್ನ ತಂದೆಯ ಹೆಸರನ್ನು ಉಲ್ಲೇಖಿಸುವ ಮೂಲಕ ಅಪಪ್ರಚಾರ ಮಾಡಲಾಗುತ್ತಿದೆ. ಮೈಸೂರಿನಲ್ಲಿ ನಡೆದಿರುವ ಭೂ ಕಬಳಿಕೆ ವಿರುದ್ದ ಧನಿ ಎತ್ತಿರುವ ಎಚ್ ವಿಶ್ವನಾಥ್ ಅವರನ್ನು ಹತ್ತಿಕ್ಕುವ ಸಲುವಾಗಿ ಇಲ್ಲಸಲ್ಲದ ಆರೋಪವನ್ನು ಮಾಡಲಾಗುತ್ತಿದೆ. ನನ್ನ ವಿರುದ್ಧ ಮಾಡಿರುವ ಆರೋಪ ಸಾಬೀತಾದರೆ ಜಮೀನನ್ನು ಹಿಂತಿರುಗಿಸುತ್ತೇನೆ ಎಂದು ಅಮಿತ್ ದೇವರಹಟ್ಟಿ ಸ್ಪಷ್ಟನೆ ನೀಡಿದ್ದಾರೆ.