ಬೆಂಗಳೂರಿನ ಜರಕಬಂಡೆ ಕಾವಲ್ ಬಳಿ ಇದ್ದ ಕೆರೆ ಕಣ್ಮರೆ…!

ಬೆಂಗಳೂರು, ಸೆಪ್ಟೆಂಬರ್ 15, 2021 (www.justkannada.in): ಉತ್ತರ ಬೆಂಗಳೂರು ಭಾಗದಲ್ಲಿರುವ ನಾಮಸೂಚಿತ ಮೀಸಲು ಅರಣ್ಯ ಪ್ರದೇಶದಲ್ಲಿದ್ದಂತಹ, ಒಂದು ಕಾಲದಲ್ಲಿ ವಿವಿಧ ಪ್ರಾಣಿಗಳಿಗೆ ಆಶ್ರಯವಾಗಿದ್ದಂತಹ ಜರಕಬಂಡೆಕೆರೆ ಸಂಪೂರ್ಣವಾಗಿ ಕಣ್ಮರೆಯಾಗಿದೆ.

ಕಂದಾಯ ಇಲಾಖೆಯ ‘ಚತುರ’ ಅಧಿಕಾರಿಗಳು ಇಲ್ಲಿದ್ದಂತಹ, ಸುಮಾರು ರೂ.೧೦೦ ಕೋಟಿ ಮೌಲ್ಯವುಳ್ಳ ಆರು ಎಕರೆ ಕೆರೆ ಭೂಮಿಯನ್ನು ನಾಲ್ಕು ಭಾಗಗಳಲ್ಲಿ ವಿಭಜಿಸಿ, ಅದನ್ನು ವಿವಿಧ ವ್ಯಕ್ತಿಗಳಿಗೆ ಹಂಚಿರುವುದೇ ಇದಕ್ಕೆ ಕಾರಣವಾಗಿದ್ದು, ಇದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಬೇಕಿದೆ.

ಕಳೆದ ಮೂರು ವರ್ಷಗಳಲ್ಲಿ, ಅರಣ್ಯ ಇಲಾಖೆ ಅಧಿಕಾರಿಗಳು ಕೆರೆ ಭೂಮಿಯನ್ನು ಉಳಿಸುವಂತೆ ಕೋರಿ, ಕರ್ನಾಟಕ ಕೆರೆಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಕೆಟಿಸಿಡಿಎ) ಹಾಗೂ ಕಂದಾಯ ಇಲಾಖೆಗಳು ಒಳಗೊಂಡಂತೆ ವಿವಿಧ ಸರ್ಕಾರಿ ಏಜೆನ್ಸಿಗಳಿಗೆ ಮನವಿ ಮಾಡಿದ್ದರು, ಆದರೆ ಅವರ ಮನವಿ ಕೈಗೂಡಿಲ್ಲ.

೧೯೮೮ರಲ್ಲಿ ಆಗಿನ ಸರ್ಕಾರ ಬೆಂಗಳೂರು ನಗರದಲ್ಲಿದ್ದಂತಹ ಸುಮಾರು ೧೧೫ಕ್ಕೂ ಹೆಚ್ಚಿನ ಸಂಖ್ಯೆಯ ಕೆರೆಗಳನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿತು, ಆದರೆ ೨೦೧೦ರಲ್ಲಿ ಐದನ್ನು ಬಿಟ್ಟು, ಉಳಿದ ಕೆರೆಗಳನ್ನು ಪುನಃ ಹಿಂದಕ್ಕೆ ಪಡೆಯಿತು. ಜರಕಬಂಡೆ ಕೆರೆ, ಜರಕಬಂಡೆ ಮೀಸಲು ಅರಣ್ಯ ಪ್ರದೇಶದ ಅಂಚಿನಲ್ಲಿ ಸುಮಾರು ಐದು ಎಕರೆ, ೩೬ ಗುಂಟೆ ಭೂವ್ಯಾಪ್ತಿಯನ್ನು ಹೊಂದಿದ್ದು, ಸರ್ಕಾರ ೨೦೧೦ರಲ್ಲಿ ಅರಣ್ಯ ಇಲಾಖೆಯ ಅಧಿಕಾರವ್ಯಾಪ್ತಿಯಿಂದ ಹಿಂದಕ್ಕೆ ಪಡೆಯದಿದ್ದಂತಹ ಐದು ಕೆರೆಗಳ ಪೈಕಿ ಒಂದಾಗಿದೆ.

ಈ ಕೆರೆ ಯಲಹಂಕದ ಜೆಬಿ ಕಾವಲ್‌ನ ಸರ್ವೆ ಸಂಖ್ಯೆ ೧೦೧ರ ಭಾಗವಾಗಿದ್ದು, ೫೯ ಎಕರೆ, ೨೫ ಗುಂಟೆ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿರುವಂತೆ ೨೦೧೩ರಲ್ಲಿ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಗಳನ್ನು ಮ್ಯುಟೇಷನ್ ರೆಕಾರ್ಡ್ ಗಳ ಕಾಲಂ ೯ ಹಾಗೂ ೧೧ರಿಂದ, ಮಾಲಿಕ ಹಾಗೂ ಕಸ್ಟೋಡಿಯನ್ (ಉಸ್ತುವಾರಿ) ಎಂಬ ಅಧಿಕಾರದಿಂದ ತೆಗೆದುಹಾಕಿದ ಸಂದರ್ಭದಲ್ಲಿ ರೆವೆನ್ಯೂ (ಆರ್‌ಟಿಸಿ) ದಾಖಲೆಪತ್ರಗಳನ್ನು ತಿರುಚಲಾಗಿದೆ.

ಈ ಸಂಬಂಧ ಮಾತನಾಡಿದ ಅರಣ್ಯ ಅಧಿಕಾರಿಯೊಬ್ಬರ ಪ್ರಕಾರ, “ಕಂದಾಯ ಕಾಯ್ದೆಯ ಪ್ರಕಾರ ಯಾವುದೇ ಕೆರೆ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ನೀಡುವಂತಿಲ್ಲ. ಹಾಗೂ ಅದನ್ನು ನೀರು ಶೇಖರಣೆ ಅಥವಾ ವೆಟ್‌ ಲ್ಯಾಂಡ್ (ಜಲಭೂಮಿ) ನಂತಲ್ಲದೆ ಮತ್ಯಾವುದೇ ಉದ್ದೇಶಕ್ಕಾಗಿ ಬಳಸುವಂತಿಲ್ಲ. ಹಾಗಾಗಿ, ಕರ್ನಾಟಕ ಕೆರೆಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ ಕಾಯ್ದೆಯ ಕಲಂ ೩೧ರಡಿ, ಹಗರಣಕ್ಕೆ ಜವಾಬ್ದಾರಿಯಾಗಿರುವ ಕಂದಾಯ ಅಧಿಕಾರಿಯನ್ನು ಶಿಕ್ಷೆಗೆ ಗುರಿಪಡಿಸಬೇಕು,” ಎಂದು ತಿಳಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಪಟ್ಟಂತೆ ವಿವರಗಳನ್ನು ನೀಡಿದ ಮತ್ತೋರ್ವ ಅಧಿಕಾರಿಯೊಬ್ಬರು ತಿಳಿಸಿದಂತೆ ಜರಕಬಂಡೆ ಕೆರೆ, ಭೂಮಾಫಿಯಾದ ಒಂದು ಅತ್ಯುತ್ತಮ ಉದಾಹರಣೆಯಾಗಿದೆ. “ದಕ್ಷಿಣ ಬೆಂಗಳೂರು ಭಾಗದಲ್ಲಿ ಇಂತಹ ಅನೇಕ ಪ್ರಕರಣಗಳಿವೆ. ಕಂದಾಯ ದಾಖಲೆಪತ್ರಗಳನ್ನು ಮೋಸದಿಂದ ತಿದ್ದುಪಡಿ ಮಾಡಿ, ಕೆರೆ ದಂಡೆ ಪ್ರದೇಶಗಳನ್ನು ಐಷಾರಾಮಿ ನಿವೇಶನಗಳಿರುವಂತಹ ವಸತಿ ಬಡಾವಣೆಗಳನ್ನಾಗಿ ಪರಿವರ್ತಿಸಲಾಗಿದೆ,” ಎಂದರು. ಕೆಟಿಸಿಡಿಎ ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವಂತೆ ಈ ಭೂಮಿಗೆ ಸಂಬಂಧಪಟ್ಟಂತಹ ಕಡತಗಳನ್ನು ಸರಿಪಡಿಸುವಂತೆ ಕಳೆದ ಎರಡು ವರ್ಷಗಳಿಂದ ಬೆಂಗಳೂರು ನಗರದ ಜಿಲ್ಲಾಧಿಕಾರಿಗೆ ನಿರಂತರವಾಗಿ ಮನವಿ ಪತ್ರಗಳನ್ನು ಬರೆಯಲಾಗುತ್ತಿದೆಯಂತೆ, ಆದರೂ ಏನೂ ಪ್ರಯೋಜನವಾಗಿಲ್ಲ.

“ರಾಜ್ಯಮಟ್ಟದ ಉನ್ನತ ಸಮಿತಿ ಸಭೆಯೊಂದರಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದೆವು. ಸಮಿತಿಯು ಜಿಲ್ಲಾ ಕಂದಾಯ ಅಧಿಕಾರಿಗಳಿಗೆ ಸಂಬಂಧಪಟ್ಟ ದಾಖಲೆಪತ್ರಗಳನ್ನು ಸರಿಪಡಿಸುವಂತೆ ಸೂಚನೆಯನ್ನೂ ನೀಡಿತ್ತು,” ಎನ್ನುತ್ತಾರೆ ಆ ಅಧಿಕಾರಿ.

ಬೆಂಗಳೂರು ನಗರದ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅವರು ಇತ್ತೀಚಿನ ದಿನಗಳಲ್ಲಿ ಭೂಮಿ ಒತ್ತುವರಿ ತೀರುವಳಿ ಅಭಿಯಾನಗಳನ್ನು ಹಮ್ಮಿಕೊಂಡಿದ್ದಾರೆ. ಅವರ ಪ್ರಕಾರ ಈ ಜರಕಬಂಡೆ ಕೆರೆ ಭೂಮಿಯನ್ನು ಖಾಸಗಿ ಭೂಮಿಯಲ್ಲಿರುವ ‘ಬಿ’ ಖರಾಬು ಭೂಮಿ ಎಂದು ಗುರುತಿಸಲಾಗಿದೆಯಂತೆ. “ಈ ವಿಷಯವನ್ನು ವಿವರವಾಗಿ ಪರಿಶೀಲಿಸಿದ ನಂತರ ಮಾತ್ರ ನಾವು ಯಾವುದೇ ಕ್ರಮವನ್ನು ಕೈಗೊಳ್ಳಬಹುದು. ಈ ಸಂಬಂಧ ತಹಸಿಲ್ದಾರ್ ಅವರಿಗೆ ಸೂಚಿಸಿದ್ದೇನೆ,” ಎಂದು ತಿಳಿಸಿದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: lake- disappeared near – Jarakabande Kaval – Bangalore.