ಕುವೆಂಪು ಅವರ ಪಾಠ ಕೈಬಿಟ್ಟಿಲ್ಲ: ಶಿಕ್ಷಣ ಸಚಿವರು ಹೇಳಿರುವುದು ಅಪ್ಪಟ ತಪ್ಪು ಮಾಹಿತಿ- ಸ್ಪಷ್ಟನೆ ನೀಡಿದ ಬರಗೂರು ರಾಮಚಂದ್ರಪ್ಪ.

ಬೆಂಗಳೂರು,ಮೇ,24,2022(www.justkannada.in):  ನನ್ನ ಅಧ್ಯಕ್ಷತೆಯಲ್ಲಿ ಪಠ್ಯಪುಸ್ತಕಗಳ ಪರಿಷ್ಕರಣೆ ನಡೆದಾಗ ಕುವೆಂಪು, ಮಹಾತ್ಮ ಗಾಂಧಿ, ಅಂಬೇಡ್ಕರ್,ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕ, ಮದಕರಿ ನಾಯಕ ಕೆಂಪೇಗೌಡರ ಪಠ್ಯ ವಿಷಯಗಳನ್ನು ಕೈಬಿಟ್ಟಿರುವುದಾಗಿ  ಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್ ಹೇಳಿದ್ದಾರೆ. ಆದರೆ ಇದು ಅಪ್ಪಟ ತಪ್ಪು ಮಾಹಿತಿ. ನಾವು  ಈ ಪಠ್ಯವಿಷಯಗಳನ್ನ ಕೈಬಿಟ್ಟಿಲ್ಲ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಸ್ಪಷ್ಟನೆ ನೀಡಿದ್ದಾರೆ.

ಪಠ್ಯಪುಸ್ತಕ ಪರಿಷ್ಕರಣೆ ಕುರಿತು ನಡೆಯುತ್ತಿರುವ ವಾದ-ವಿವಾದಗಳಲ್ಲಿ ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತು ಸ್ಪಷ್ಟನೆ ನೀಡಿರುವ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿರುವುದಿಷ್ಟು….

ಕುವೆಂಪು ಅವರ ರಚನೆಗಳು 10 ಮತ್ತು 7ನೇ ತರಗತಿಯ ಕನ್ನಡ ಪಠ್ಯಪುಸ್ತಕಗಳಲ್ಲಿ ಇವೆ. ಖಂಡಿತ ಕೈಬಿಟ್ಟಿಲ್ಲಫ್ರೌಢಶಾಲೆ ಹಂತದಲ್ಲಿ ಇದ್ದ ಕುವೆಂಪು ಅವರ ಭರತ ಭೂಮಿ ನಮ್ಮ ತಾಯಿ ಎಂಬ ಪದ್ಯವನ್ನು ಚಿಕ್ಕಂದಿನಲ್ಲೇ ದೇಶಪ್ರೇಮದ ಭಾವನೆ ಬೆಳೆಯಲಿ ಎಂಬ ದೃಷ್ಠಿಯಿಂದ 7ನೇ ತರಗತಿಗೆ ಅಳವಡಿಸಲು ನಾವು ಸೂಚಿಸಿದ್ದವು ಅಷ್ಟೇ.

ಕುವೆಂಪು ಪಾಠ ಕೈಬಿಟ್ಟು ಕನ್ನಡ ಪಠ್ಯ ರಚಿಸಲು ಸಾಧ್ಯವೇ? 10ನೇ ತರಗತಿ, 7ನೇ ತರಗತಿಯಲ್ಲಿ ಕುವೆಂಪು ಪಾಠ ಇದೆ. 7ನೇ ತರಗತಿ ಸಮಾಜ ವಿಜ್ಞಾನದ ಭಾಗ 2ರಲ್ಲಿ ಮಹಾತ್ಮ ಗಾಂಧಿ ಪಾಠ ಇದೆ. ಸಾವರ್ಕರ್ ಕುರಿತಂತೆ ಯಾವುದೇ ಅಂಶಗಳನ್ನು ನಾವು ಸೇರಿಸಿಲ್ಲ. ಪ್ರೌಢಶಾಲೆಯವರೆಗೂ ಸಕಾರಾತ್ಮಕ ಅಂಶಗಳನ್ನು ಕೊಡಬೇಕು. ಪದವಿ ತರಗತಿಗಳಲ್ಲಿ ವಿದ್ಯಾರ್ಥಿಗಳು ಪರ-ವಿರೋಧ ಚರ್ಚೆ, ವಾಗ್ವಾದ ಕುರಿತಂತೆ ಅಧ್ಯಯನ ಮಾಡಬೇಕು. ಈ ವಿವಾದ ಅಂತ್ಯ ಮಾಡುವತ್ತ ಶಿಕ್ಷಣ ಸಚಿವರು ಗಮನಹರಿಸಲಿ. ಶೈಕ್ಷಣಿಕ ಕ್ಷೇತ್ರ ಕಲುಷಿತವಾಗದಿರಲಿ ಎಂದು ಬರಗೂರು ರಾಮಚಂದ್ರಪ್ಪ ಸಲಹೆ ನೀಡಿದ್ದಾರೆ.

ಅಂಬೇಡ್ಕರ್ ಕುರಿತಂತೆ 8ನೇ ತರಗತಿ ಭಾಗ 1ರಲ್ಲಿ ಪಾಠ ಇದೆ. ಹತ್ತನೇ ತರಗತಿಯ ಭಾಗ 2ರಲ್ಲಿ ಪಾಠ ಇದೆ. 9ನೇ ತರಗತಿಯ ಪಠ್ಯದಲ್ಲೂ ಸಂವಿಧಾನ ರಚನೆಯ ಬಗ್ಗೆ ಅಂಬೇಡ್ಕರ್ ಪೋಟೋ ಹಾಕಿ ವಿವರ ನೀಡಲಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಕುರಿತಂತೆ ಆರನೇ ತರಗತಿ ಭಾಗ 2ರಲ್ಲಿ , ಹತ್ತನೇ ತರಗತಿ ಭಾಗ 1ರಲ್ಲಿ ಮಾಹಿತಿ ಇದೆ. 5ನೇ ತರಗತಿಯಲ್ಲಿ ಪ್ರತೇಕ ಪಾಠ ಇದೆ. ಮದಕರಿ ನಾಯಕರ ಬಗ್ಗೆ ನಾಡಪ್ರಭು, ಪಾಳೇಗಾರರ ಬಗ್ಗೆ ಪ್ರತೇಕ ಪಾಠ ಬರೆಸಿದ್ದೇವೆ. ಅದರಲ್ಲಿ ಮದಕರಿ ನಾಯಕರ ಬಗ್ಗೆ ಪಾಠ ಇದೆ. ಅದರ ಜೊತೆಗೆ ಸುರಪುರ ನಾಯಕರ ಬಗ್ಗೆ 7ನೇ ತರಗತಿಯ ಸಮಾಜ ವಿಜ್ಞಾನ ಭಾಗ 1ರಲ್ಲಿ ಮಾಹಿತಿ ಇದೆ ಎಂದು ವಿವರಿಸಿದರು. ರಾಣಿ ಅಬ್ಬಕ್ಕರ ಬಗ್ಗೆ 7ನೇ ತರಗತಿಯ ಸಮಾಜ ವಿಜ್ಞಾನದ ಭಾಗ 2 ರಲ್ಲಿ ಅನೇಕ ವಿವರ ಕೊಟ್ಟಿದ್ದೇವೆ. ಯಲಹಂಕ ಪ್ರಭುಗಳ ಬಗ್ಗೆ 7ನೇ ತರಗತಿ ಭಾಗ 1 ರಲ್ಲಿ ಪ್ರತೇಕ ಪಾಠ ನೀಡಲಾಗಿದೆ ಎಂದು ವಿವರಿಸಿದರು.

ಮೈಸೂರು ಒಡೆಯರ್ ಬಗ್ಗೆ ಪಠ್ಯಗಳಲ್ಲಿ ಕಡಿಮೆ ಮಾಹಿತಿ ಇದೆ ಎಂದಾದರೆ ಕಡಿಮೆ ಇದ್ದರೆ, ಪರಿಷ್ಕರಣೆ ಮೂಲಕ ಹೆಚ್ಚಿಸಬಹುದಿತ್ತಲ್ಲವೇ ಎಂದು ಶಿಕ್ಷಣ ಸಚಿವರನ್ನು ಪ್ರಶ್ನಿಸಿದ ಬರಗೂರು ರಾಮಚಂದ್ರಪ್ಪ,  ವಾಸ್ತವದಲ್ಲಿ ಸಮಾಜ ವಿಜ್ಞಾನದ ಭಾಗ 1ರಲ್ಲಿ ಮೈಸೂರು ಒಡೆಯರ್ ಎಂಬ ಪ್ರತೇಕ ಅಧ್ಯಾಯವನ್ನೇ ಬರೆಯಲಾಗಿದೆ. ಇದರಲ್ಲಿ ಮೈಸೂರು ಒಡೆಯರ್ ಬಗ್ಗೆ ಎಲ್ಲ ವಿವರ ಕೊಡಲಾಗಿದೆ. ಮೈಸೂರು ಯುದ್ದಗಳ ಬಗ್ಗೆ ಪ್ರಸ್ತಾಪ ಮಾಡುವಾಗ ಹೈದರಾಲಿ, ಟಿಪ್ಪು ಸುಲ್ತಾನ್ ಬಗ್ಗೆ ವಿವರ ಕೊಡಲಾಗಿದೆ ಎಂದು ವಿವರಿಸಿದರು.

ಸಚಿವರು ತಪ್ಪು ಮಾಹಿತಿ ನೀಡಬಾರದು. ನನ್ನ ವಿರುದ್ಧ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡುತ್ತಿದ್ದೇನೆ ಎಂದು ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.

Key words: Kuvempu- lesson – Education-minister’s- statement-Baraguru Ramachandrappa