ಜೆಡಿಎಸ್ ಮೇಲೆ ‘ಕುಮಾರ’ಸ್ವಾಮಿ ಹಿಡಿತ: ಕುಟುಂಬ ರಾಜಕಾರಣಕ್ಕೆ ‘ಅಲ್ಪವಿರಾಮ’ !

ಬೆಂಗಳೂರು, ಏಪ್ರಿಲ್ 14, 2023 (www.justkannada.in): ಹಾಸನ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್ ವತಿಯಿಂದ ಸ್ಪರ್ಧಿಸುವವರು ದೇವೇಗೌಡರ ಕುಟುಂದವರೊ ಅಥವಾ ಪಕ್ಷದ ಕಾರ್ಯಕರ್ತರೊ? ಎಂಬ ಎರಡೂವರೆ ತಿಂಗಳ ಟಿಕೆಟ್ ಸಮರಕ್ಕೆ ಇಂದು ತೆರೆ ಬಿದ್ದಿದೆ.

ಟಿಕೆಟ್ ಹಗ್ಗ ಜಗ್ಗಾಟದಲ್ಲಿ ಗೆಲುವಿನ ನಗೆ ಬೀರಿದ್ದು ಯಾರು ಎಂದರೆ ಅದು ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದು ಬೀಗಬೇಕೋ ಅಥವಾ ಸೋತದ್ದು ಕುಟುಂಬ ರಾಜಕಾರಣವೋ?, ಜೆಡಿಎಸ್ ಪಕ್ಷಕ್ಕೆ ದೇವೇಗೌಡರ ನಂತರ ಏಕೈಕ ಉತ್ತರಾಧಿಕಾರಿ ಕುಮಾರಸ್ವಾಮಿ ಅವರೋ? ಎಂಬ ತರ್ಕಗಳು ವಿವಾದಗಳು ಏನೇ ಇರಲಿ, ಮೊಟ್ಟ ಮೊದಲ ಬಾರಿಗೆ ಜೆಡಿಎಸ್ ಕುಟುಂಬದವರಿಗೆ ಮಣೆ ಹಾಕುವ ಪರಂಪರೆಗೆ ಅಲ್ಪ ವಿರಾಮ ಘೋಷಿಸಿ, ದೇವೇಗೌಡರ ಪಕ್ಷದಲ್ಲಿ ಕಾರ್ಯಕರ್ತರಿಗೂ ಮನ್ನಣೆ ಸಿಗಬಹುದು ಎಂದು ತೋರಿಸಿದೆ ಹಾಸನ ಟಿಕೆಟ್ ಹಂಚಿಕೆ ವಿಷಯ.

ಇಂಗ್ಲೀಷ್ ನಲ್ಲಿ ಗಾದೆಯೊಂದಿದೆ ” blood is thicker than water” ( ನೀರಿಗಿಂತ ರಕ್ತ ಗಟ್ಟಿಯಾಗಿ ರುತ್ತದೆ) . ರಾಜಕೀಯ ವಲಯದಲ್ಲಿ ಜೆಡಿಎಸ್ ಎಂದರೆ ಅದು ಅಪ್ಪ-ಮಕ್ಕಳ ಪಕ್ಷ ಎಂದೇ ಜನಜನಿತ. ಇದುವರೆವಿಗೂ ನಡೆದ ವಿದ್ಯಮಾನಗಳು ಇದನ್ನು ಸಾಕ್ಷೀಕರಿಸಿವೆ. ಚುನಾವಣೆಯಲ್ಲಿ ಗೆಲ್ಲುವ ಅವಕಾಶವಿದ್ದೆಡೆ ಗೌಡರು ತಮ್ಮ ಕುಟುಂಬಕ್ಕೆ ಪ್ರಾಶಸ್ತ್ಯ ನೀಡಿದ್ದಾರೆ.

ಇನ್ನು ಹಾಸನ ವಿಚಾರಕ್ಕೆ ಬರುವುದಾದರೆ ಭವಾನಿ ರೇವಣ್ಣಅವರು ಈಗಾಗಲೇ ಹಾಸನ ಜಿಲ್ಲಾ ಪಂಚಾಯತಿ ಸದಸ್ಯ ರು. ರಾಜಕೀಯ ಪಟ್ಟುಗಳನ್ನು ಕರಗತ ಮಾಡಿಕೊಂಡಿರುವ ಗೌಡರ ಕುಟುಂಬದ ಸೊಸೆ. ತಮ್ಮ ಒಬ್ಬ ಪುತ್ರ ಪ್ರಜ್ವಲ್ನ್ ಅವರನ್ನು ಲೋಕಸಭೆಗೆ ಕಳುಹಿಸಿ, ಮತ್ತೊಬ್ಬ ಪುತ್ರ ಸುರಜ್ ಅವರನ್ನು ವಿಧಾನ ಪರಿಷತ್ತಿಗೆ ಕಳುಹಿಸುವಲ್ಲಿ ಸಫಲರಾಗಿದ್ದಾರೆ. ತಮ್ಮ ವಾರೆಗಿತ್ತಿ ತಮಗಿಂತಲೂ ಕಿರಿಯರಾದ ಅನಿತಾ ಕುಮಾರಸ್ವಾಮಿ ಎರಡು ಬಾರಿ ಶಾಸಕಿಯಾಸಗಿ ವಿಧಾನ ಸಭೆಯಲ್ಲಿ ಕುಳಿತಿರುವಾಗ, ಭವಾನಿ ಅವರಿಗೂ ಇಂತಹ ಬಯಕೆ ಇದ್ದರೆ ಅದರಲ್ಲಿ ತಪ್ಪೇನೂ ಇಲ್ಲ!

ಕುಮಾರಸ್ವಾಮಿ ಅವರಿಗೆ ಹಾಸನ ದಲ್ಲಿ ಕುಟುಂಬವೇ ಮುಖ್ಯ. ಕಾರ್ಯಕರ್ತ ರು ನಗಣ್ಯ ಎಂಬ ಹಣೆ ಪಟ್ಟಿ ಕಟ್ಟಿಕೊಳ್ಳುವ ಇರಾದೆ ಈ ಬಾರಿ ಇದ್ದಂತೆ ಕಾಣಲಿಲ್ಲ. ತಾವು ಈ ಮೊದಲೇ ಘೋಷಿಸಿದ ಸ್ವರೂಪ್ ಅವರಿಗೆ ಹಾಸನದ ಟಿಕೆಟ್ ನಿಕ್ಕಿ ಮಾಡಿದ್ದಾರೆ. ಒಡಲಲ್ಲಿ ಬಾರಿ ಸಂಕಟ ತುಂಬಿಕೊಂಡಿದ್ದರೂ ರೇವಣ್ಣ, ತಮ್ಮ ಸಹೋದರ ಕುಮಾರಸ್ವಾಮಿ ನಿರ್ಧಾರವನ್ನು ಒಲ್ಲದ ಮನಸ್ಸಿನಿಂದ ಒಪ್ಪಿದ್ದಾರೆ. ದೇವೇಗೌಡರ ನಂತರ ಜೆಡಿಎಸ್ ಪಕ್ಷದ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಅದು ನಿಸ್ಸಂಶಯವಾಗಿ ಕುಮಾರಸ್ವಾಮಿ.

  • ಎಂ.ಸಿದ್ದರಾಜು, ಹಿರಿಯ ಪತ್ರಕರ್ತರು, ಬೆಂಗಳೂರು
M.SIDDARAJU, SENIOR JOURNALIST