ಕೆಎಸ್ ಆರ್ ಟಿಸಿ ಬಸ್ ಟಿಕೆಟ್  ದರ ಏರಿಕೆ ಇಲ್ಲ- ಡಿಸಿಎಂ ಲಕ್ಷ್ಮಣ್ ಸವದಿ ಸ್ಪಷ್ಟನೆ.

kannada t-shirts

ಮೈಸೂರು,ಜುಲೈ,6,2021(www.justkannada.in): ಕೊರೋನಾ, ಲಾಕ್ ಡೌನ್ ಸಂಕಷ್ಟದಿಂದ ಬಳಲುತ್ತಿರುವ ಜನಸಾಮಾನ್ಯರಿಗೆ ರಾಜ್ಯ ಸರ್ಕಾರ ಕೆಎಸ್ ಆರ್ ಟಿಸಿ ಬಸ್ ಟಿಕೆಟ್ ದರ ಏರಿಕೆಯ ಶಾಕ್ ನೀಡಲಿದೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಡಿಸಿಎಂ ಹಾಗೂ ಸಾರಿಗೆ ಸಚಿವರು ಆದ ಲಕ್ಷ್ಮಣ್ ಸವದಿ, ಕೆಎಸ್‌ಆರ್‌ಟಿಸಿ ಬಸ್ ದರ ಏರಿಕೆ ಇಲ್ಲ ಎಂದಿದ್ದಾರೆ.jk

ಈ ಕುರಿತು ಮಾತನಾಡಿರುವ ಡಿಸಿಎಂ ಲಕ್ಷ್ಮಣ್ ಸವದಿ, ಬೆಲೆ ಏರಿಕೆ ಮಾಡುವಂತೆ ನಿಗಮಗಳಿಂದ ಪ್ರಸ್ತಾವನೆ ಬಂದಿದೆ. ಆದರೆ ಕೊರೊನಾ ಸಂಕಷ್ಟ ಇರುವ ಕಾರಣಕ್ಕಾಗಿ ಸದ್ಯಕ್ಕೆ ಬೆಲೆ ಏರಿಕೆ ಇಲ್ಲ. ಈಗಷ್ಟೇ ಅನ್‌ ಲಾಕ್ ಆಗಿದೆ. ಜನಕ್ಕೆ ಈಗಲೂ ಬಸ್‌ನಲ್ಲಿ ಓಡಾಡಿದರೆ ಕೊರೊನಾ ಬರುತ್ತೆ ಅನ್ನುವ ಭಯ ಇದೆ. ಜನರಿಗೂ ಲಾಕ್‌ಡೌನ್‌ ನಿಂದಾಗಿ ತೊಂದರೆ ಆಗಿದೆ.  ಈ ಸಂದರ್ಭದಲ್ಲಿ ಟಿಕೆಟ್ ದರ ಏರಿಸಿದರೆ ಇನ್ನಷ್ಟು ಸಮಸ್ಯೆ ಆಗುತ್ತೆ. ಆದ್ದರಿಂದ ಬೆಲೆ ಏರಿಕೆ ಮಾಡುತ್ತಿಲ್ಲ ಎಂದು ತಿಳಿಸಿದರು.

ಸಾರಿಗೆ ನೌಕರರ ಮುಷ್ಕರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿಸಿಎಂ ಲಕ್ಷ್ಮಣ್ ಸವದಿ, ನೌಕರರು 9 ಬೇಡಿಕೆ ಮುಂದಿಟ್ಟಿದ್ದರು. ಈ ಪೈಕಿ 8 ಬೇಡಿಕೆ ಈಡೇರಿಸಿದ್ದೇವೆ. ವೇತನ ಪರಿಷ್ಕರಣೆ ಮಾಡಬೇಕು ಅಂತ ಕೇಳುತ್ತಿದ್ದಾರೆ. ಲಾಕ್‌ ಡೌನ್‌ನಿಂದಾಗಿ ನಿಗಮಕ್ಕೆ 4000 ಕೋಟಿ ರೂ.ನಷ್ಟ ಆಗಿದೆ‌. ಸಾಮಾಜಿಕ ಅಂತರ ಕಾಪಾಡಲು ಶೇ.50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ಇದೆ. ಈಗ ಬರುತ್ತಿರುವ ಆದಾಯ ಇಂಧನಕ್ಕೂ ಸಾಲುತ್ತಿಲ್ಲ. ನಿಗಮಕ್ಕೆ ಆದಾಯ ಬರಲು ಶುರುವಾದ ನಂತರ ವೇತನ ಪರಿಷ್ಕರಣೆ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಡಿಸಿಎಂ ಲಕ್ಷ್ಮಣ್ ಸವದಿ, ಅದು ಕೆಲ ಶಾಸಕರ ವೈಯಕ್ತಿಕ ಅಭಿಪ್ರಾಯ ಅಷ್ಟೆ. ಆದರೆ ಹೈಕಮಾಂಡ್ ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಕೆಲವರು ಅಲ್ಲಿ ಇಲ್ಲಿ ಮಾತನಾಡುತ್ತಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ, ಪಕ್ಷದ ಅಭಿಪ್ರಾಯ ಅಲ್ಲ ಎಂದರು.

Key words: KSRTC bus –ticket-rate- hike- no-DCM Laxman Savadi

website developers in mysore