ಕೆಎಸ್ ಒಯು ಆನ್‍ಲೈನ್ ಮೂಲಕ ತರಬೇತಿ ನೀಡುತ್ತಿರುವ ಕಾರ್ಯ ಶ್ಲಾಘನೀಯ- ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ

kannada t-shirts

ಮೈಸೂರು,ನವೆಂಬರ್,9,2020(www.justkannada.in): ನಮ್ಮ ಜೀವನ ಮತ್ತು ಸುತ್ತಲಿನ ಸಮಾಜವನ್ನು ನೋಡಿ ನಾವು ಸಾಧನೆ ಮಾಡಲೇಬೇಕು ಹಾಗೂ ಉತ್ತೇಜನ ಮತ್ತು ಸ್ಪೂರ್ತಿ ಪಡೆಯಬೇಕು ಎಂದು ಐಪಿಎಸ್ ಅಧಿಕಾರಿ,  ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಏರ್ಪಡಿಸಿದ್ದ 50 ದಿನಗಳ ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ತರಬೇತಿ ಹೊಂದಿದವರಿಗೆ ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಆನ್‍ಲೈನ್ ಮುಖಾಂತರ ಶುಭಹಾರೈಸಿ ಮಾತನಾಡಿದರು.

ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ ಏಳೆಂಟು ತಿಂಗಳಿನಿಂದ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿಲ್ಲ, ಆದರೆ ಕರಾಮುವಿ ತರಬೇತಿ ಕೇಂದ್ರವು ಆನ್‍ಲೈನ್ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಚಟುವಟಿಕೆಗಳನ್ನು ನಡೆಸುತ್ತಿದ್ದು ಯುವಕರಿಗೆ ಉದ್ಯೋಗ ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಿದರು.

ದೇಶದ ಆರ್ಥಿಕ ಸಂಪತ್ತನ್ನು ಅಭಿವೃದ್ಧಿ ಪಡಿಸಲು ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷೆಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಆನ್‍ಲೈನ್ ಮೂಲಕ ತರಬೇತಿ ನೀಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು. KSOU -training - online - Laudable. -Mysore City Police Commissioner -Dr. Chandragupta.

ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದವಾಗುವಾಗ ಪ್ರತಿಯೊಬ್ಬ ಸ್ಪರ್ಧಿಯು ತನ್ನ ಮಾನಸಿಕ ಮತ್ತು ಭೌತಿಕ ಸಾಮಥ್ರ್ಯಗಳನ್ನು ಓರೆಗಲ್ಲಿಗೆ ಹಚ್ಚಿಕೊಳ್ಳಬೇಕು. ನಾನು ಯಾರು? ನನ್ನ ಜ್ಞಾನದ ಪರಿಮಿತಿಗಳೇನು? ನಾನು ಇನ್ನೊಬ್ಬರ ಜೊತೆ ಹೇಗೆ ಸ್ಪರ್ಧಿಸಬೇಕು ಎಂಬುದನ್ನು ಅರ್ಥೈಸಿಕೊಳ್ಳಬೇಕು. ಇಂದು ಸ್ಪರ್ಧಾ ಜಗತ್ತು ಅತ್ಯಂತ ಸೂಕ್ಷ್ಮವಾಗಿದೆ. ಜನರ ಜ್ಞಾನದ ಮಟ್ಟವು ಕೂಡ ವಿಕಾಸವಾಗಿದೆ ಹಾಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದವಾಗುವ ವಿದ್ಯಾರ್ಥಿಗಳು ಸಾಂಪ್ರಾದಾಯಿಕ ದೃಷ್ಟಿಕೋನಗಳನ್ನು ಬಿಟ್ಟು ಆಧುನಿಕ ಸವಾಲುಗಳಿಗೆ ಸಜ್ಜಾಗಬೇಕು. ಪ್ರತಿ ಸ್ಪರ್ಧಾರ್ಥಿಗಳು ಸ್ವಾವಲಂಬನೆ ಮತ್ತು ಸ್ವಾಭಿಮಾನಗಳನ್ನು ಬೆಳೆಸಿಕೊಳ್ಳಬೇಕು. ಸ್ವಾವಲಂಬನೆ ಮತ್ತು ಸ್ವಾಭಿಮಾನ ಜ್ಞಾನಾರ್ಜನೆಗೆ ಬಹಳ ಮುಖ್ಯ. ನಾವು ಜ್ಞಾನದ ಬಲದಿಂದ ಎಂತದೇ ಸವಾಲುಗಳನ್ನು ಜಯಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಐಎಎಸ್/ಕೆಎಎಸ್/ಬ್ಯಾಂಕ್ ಮತ್ತು ಇತರೆ ಅಧಿಕಾರಿಗಳಾಗುವುದು ಮುಖ್ಯವಲ್ಲ. ಸಮಾಜದಲ್ಲಿ ಇರುವ ಸಮಸ್ಯೆಗಳಿಗೆ ಆಸರೆಯಾಗುವವರಾಗಬೇಕು ಎಂದ ಅವರು ಕೇವಲ ಭಾಷಣ ಕೇಳುವುದರಿಂದ ಯಾವುದೇ ಪ್ರಯೋಜನವಿಲ್ಲ. ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಮುನ್ನ ನೀವು ಜೀವನದಲ್ಲಿ ಏನಾಗಬೇಕು ಎಂದು ಮೊದಲು ನಿಧರ್Àರಿಸಿಕೊಳ್ಳಿ. ಬಳಿಕ ಅದಕ್ಕೆ ಇಂದಿನಿಂದಲೇ ಕಾರ್ಯಪ್ರವೃತ್ತರಾಗಿ ಗುರಿಯನ್ನು ಕೇಂದ್ರೀಕರಿಸಿ ಎಂದು ಸಲಹೆ ನೀಡಿದರು.

ಕೆನರಾಬ್ಯಾಂಕ್ ಪ್ರಾದೇಶಿಕ ಡೆಪ್ಯೂಟಿ ಜನರಲ್ ಮ್ಯಾನೇಜರ್ ಐ.ಪಾಂಡುರಂಗ ಮಿತಂತಾಯ ಅವರು ಮಾತನಾಡಿ ಇಂದು ಎಲ್ಲಾ ಕ್ಷೇತ್ರಗಳಿಗಿಂತಲೂ ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗಗಳು ಆಕರ್ಷಕವಾಗಿದೆ. ಒಮ್ಮೆ ಆಯ್ಕೆಯಾದರೆ ಅನೇಕ ಎತ್ತರದ ಹುದ್ದೆಗಳನ್ನು ಪಡೆಯಬಹುದು ಆದುದರಿಂದ ನೀವು ಈ ಕ್ಷೇತ್ರಕ್ಕೆ ಹೆಚ್ಚಿನ ಗಮನ ನೀಡಿ ಎಂದು ಹೇಳಿದರು.

ಜನವರಿ ತಿಂಗಳಿಂದ ಮುಕ್ತ ವಿವಿ ತರಗತಿಗಳು ಸಂಪೂರ್ಣ ಆನ್‍ಲೈನ್‍ ನಲ್ಲಿ…

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೊ. ಎಸ್ ವಿದ್ಯಾಶಂಕರ್ ಅವರು ಪ್ರತಿಯೊಬ್ಬ ವಿದ್ಯಾರ್ಥಿಗಳು ಸಾಧನೆ ಮಾಡಲು ಸಮಾಜಸೇವೆ ಮಾಡುವಂಥ ನಿರ್ದಿಷ್ಟ ಗುರಿ ಮತ್ತು ಉದ್ದೇಶ ಹೊಂದಿರಬೇಕು. ವಿಶ್ವವಿದ್ಯಾನಿಲಯಗಳು ಕೇವಲ ಪದವೀಧರರನ್ನು ತಯಾರಿಸುವ ಸಂಸ್ಥೆಯಾಗದೇ ಜ್ಞಾನವನ್ನು ಪಸರಿಸುವ ಮೂಲಕ ವಿದ್ಯಾರ್ಥಿಗಳಿಗೆ ಜೀವನ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಬೇಕು. ಈ ಆಶಯದಿಂದ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ವನ್ನು ಪ್ರಾರಂಭಿಸಲಾಗಿದೆ ಎಂದರು. ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಲ್ಲಿ ಆನ್‍ಲೈನ್ ಈಗಾಗಲೇ 5 ವಿವಿಧ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಶಿಬಿರವನ್ನು ನಡೆಸಿದ್ದೇವೆ. ಮುಂದಿನ ತರಬೇತಿ ಐಎಎಸ್, ಐಪಿಎಸ್/ಕೆಎಎಸ್ ಪರೀಕ್ಷೆಗಳ ಕುರಿತು 60ದಿನದ ತರಬೇತಿ ಪ್ರಾರಂಭವಾಗಲಿದೆ. ಈಗಾಗಲೇ 500ಕ್ಕೂ ಹೆಚ್ಚು ಅಭ್ಯರ್ಥಿಗಳು ತರಬೇತಿ ಪಡೆಯಲು ನೋಂದಣಿ ಮಾಡಿಸಿಕೊಂಡಿರುತ್ತಾರೆ ಎಂದು ತಿಳಿಸಿದರು.

ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ, ಎಲ್ಲಾ ಸಮಯದಲ್ಲಿ ದೊರಕಬೇಕು ಎಂಬ ಉದ್ದೇಶದಿಂದ ಕರಾಮುವಿ ಕಾರ್ಯನಿರ್ವಹಿಸುತ್ತಿದೆ. ಬದಲಾದ ತಂತ್ರಜ್ಞಾನಕ್ಕೆ ತಕ್ಕಂತೆ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಮುಖೇನ ಮುಂದಿನ ಜನವರಿ ತಿಂಗಳಿಂದ ಮುಕ್ತ ವಿವಿ ತರಗತಿಗಳು ಸಂಪೂರ್ಣ ಆನ್‍ಲೈನ್‍ ನಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕರಾಮುವಿ ಕುಲಸಚಿವ ಪ್ರೊ. ಲಿಂಗರಾಜಗಾಂಧಿ, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಕೆನರಾ ಬ್ಯಾಂಕ್ ಅಧಿಕಾರಿ ಎಸ್. ರಾಧಾಕೃಷ್ಣ ಉಪಸ್ಥಿತರಿದ್ದರು.

Key words: KSOU -training – online – Laudable. -Mysore City Police Commissioner -Dr. Chandragupta.

website developers in mysore