ಅಡ್ಡದಾರಿ ಬಿಡಿ, ಆನ್‌ ಲೈನ್ ಸೌಲಭ್ಯ ಬಳಸಿ ಓದಿ-  ಮೈಸೂರು ಎಸ್ಪಿ ಚೇತನ್ ಕಿವಿಮಾತು.

ಮೈಸೂರು.ಜುಲೈ,28,2021(www.justkannada.in):  ಯಾವುದೇ ಸಾಧನೆಗೆ ಅಡ್ಡದಾರಿ ಎನ್ನುವುದು ಇರುವುದಿಲ್ಲ. ಆನ್‌ ಲೈನ್‌ ನಂತಹ ಶಿಕ್ಷಣ ಸೌಲಭ್ಯಗಳನ್ನು ಬಳಕೆ ಮಾಡಿಕೊಂಡು ನಿಗದಿತ ಗುರಿ ತಲುಪಬೇಕು ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.jk

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಮೈಸೂರಿನ ಜ್ಞಾನಶಾರದಾ ಶ್ರೀ ವಿದ್ಯಾತೀರ್ಥ ಇನ್ಸ್ಟಿಟ್ಯೂಟ್ ಆಫ್ ಕಲ್ಚರ್ ಸಹಯೋಗದಲ್ಲಿ ಆಯೋಜಿಸಿರುವ 30 ದಿನಗಳ ಪಿಯುಸಿ ನಂತರದ ಉನ್ನತ ಶಿಕ್ಷಣಕ್ಕಾಗಿ ಸರ್ಕಾರ ನಡೆಸುವ ಸಿಇಟಿ ಪರೀಕ್ಷಾ  ತರಬೇತಿ ಕಾರ್ಯಕ್ರಮಕ್ಕೆ  ಬುಧವಾರ ವಿಶ್ವವಿದ್ಯಾನಿಲಯದ ಕುಲಪತಿಗಳ ಸಭಾಂಗಣಧಲ್ಲಿ ಚಾಲನೆ ನೀಡಿ ಮಾತನಾಡಿದರು.

ಕಷ್ಟ ಎನ್ನುವುದು ಎಲ್ಲರಿಗೂ ಇದ್ದೇ ಇರುತ್ತದೆ. ಕೆಲವರಿಗೆ ಆರ್ಥಿಕವಾಗಿ ಅಡಚಣೆಗಳಿದ್ದರೆ, ಸಾಮಾಜಿಕ ತೊಂದರೆ ಇರುವವರು ಹಲವರು. ಹಾಗೆಂದು ತೊಂದರೆಗಳನ್ನೇ ಮುಂದು ಮಾಡಿಕೊಂಡು ಕುಳಿತರೆ ಜೀವನದಲ್ಲಿ ಏನು ಮಾಡಲು ಸಾಧ್ಯವೇ ಇಲ್ಲ. ನಾನು ಏನಾಗಬೇಕು ಎನ್ನುವ ದೃಢ ನಿರ್ಧಾರದ ಜತೆಗೆ ಕಠಿಣ ಓದಿನಿಂದ ಮಾತ್ರ ಗುರಿ ತಲುಪಲು ಸಾಧ್ಯ ಎಂದು ಹೇಳಿದರು.

ನಾನು ಪಿಯುಸಿ ಓದುವಾಗ ಸಿಇಟಿ ತರಬೇತಿ ಪಡೆಯಲು ತುಮಕೂರಿಗೆ ಹೋಗಬೇಕಾಗಿತ್ತು. ನನ್ನದು ತಿಪಟೂರು ತಾಲೂಕು. ಆದರೂ ಅರಸಿಕೆರೆಯಲ್ಲಿ ಅಕ್ಕನ ಮನೆಯಲ್ಲಿದ್ದು ಓದುತ್ತಿದ್ದೆ. ಬೆಳಗ್ಗೆ 3.30ಕ್ಕೆ ಎದ್ದು 4.30ಕ್ಕೆ ರೈಲು ಹಿಡಿದು ತುಮಕೂರಿಗೆ ಹೋಗಬೇಕಿತ್ತು. ಅಲ್ಲಿ ಬೆಳಗ್ಗೆ 7ಕ್ಕೆ ಸಿಇಟಿ ತರಗತಿಗಳು ಇರುತ್ತಿದ್ದವು. ಮತ್ತೆ ವಾಪಾಸ್ ಬರಬೇಕಾಗಿತ್ತು. ಇಂಥ ಕಷ್ಟದ ನಡುವೆ ಚೆನ್ನಾಗಿ ಓದುವ ವಿಶ್ವಾಸವನ್ನು ಎಂದೂ ಬಿಡಲಿಲ್ಲ ಎಂದು ತಮ್ಮ ಅನುಭವ ಹಂಚಿಕೊಂಡರು.

ಹಿಂದೆಲ್ಲ ಸೌಲಭ್ಯಗಳು ಕಡಿಮೆ ಇದ್ದವು.ಹೆಚ್ಚು ಶ್ರಮ ಹಾಕಲೇಬೇಕಾಗಿತ್ತು. ಈಗ ಪರಿಸ್ಥಿತಿ ಹಾಗಿಲ್ಲ. ಆನ್ ಲೈನ್ ನಂಥ ಶಿಕ್ಷಣ ಬಂದ ಮೇಲೆ ಪ್ರಯಾಣ ಮಾಡುವ ಪ್ರಮೇಯವೇ ಬರುವುದಿಲ್ಲ. ಮನೆಯಲ್ಲೇ ಕುಳಿತು ಓದುವ ಅವಕಾಶ. ಎಲ್ಲವನ್ನೂ ಕುಳಿತಲ್ಲೇ ಪಡೆಯುವ ಸನ್ನಿವೇಶ ಇರುವುದರಿಂದ ಇದರ ಸದುಪಯೋಗಪಡಿಸಿಕೊಳ್ಳಿ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಬೆಳ್ಳಿ ಹಬ್ಬದ ಸಡಗರದಲ್ಲಿದೆ. ಮಕ್ಕಳಿಗೋಸ್ಕರ ಇಂಥಹ ಅತ್ಯುತ್ತಮ ತರಬೇತಿ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಾಜರಿದ್ದ ಮೈಸೂರು ಶಾಖೆಯ ಶ್ರೀ ಶೃಂಗೇರಿ ಮಠದ ಧರ್ಮಾಕಾರಿ ಹೆಚ್. ರಾಮಚಂದ್ರ,  ಜ್ಞಾನಶಾರದಾ ಶ್ರೀ ವಿದ್ಯಾತೀರ್ಥ ಇನ್ಸ್ಟಿಟ್ಯೂಟ್ ಆಫ್ ಕಲ್ಚರ್ ಕಾರ್ಯದರ್ಶಿ ಎಸ್.ಕೆ.ಭಾಸ್ಕರ್, ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪ್ರಯತ್ನ ಮುಖ್ಯ. ಕರಾಮುವಿ ಪಿಯು ವಿದ್ಯಾರ್ಥಿಗಳಿಗೂ ಇಂಥ ಕಾರ್ಯಕ್ರಮ ಆಯೋಜಿಸಿ ನಮ್ಮ ಸಂಸ್ಥೆಯ ಸಹಯೋಗ ಪಡೆದಿದ್ದು ಅಭಿನಂದನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಮಾತನಾಡಿ, ಕೋವಿಡ್‌ನಿಂದಾಗಿ ಒಂದೂವರೆ ವರ್ಷದಲ್ಲಿ ಶಿಕ್ಷಣ ಕ್ಷೇತ್ರದಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಆನ್‌ ಲೈನ್ ಶಿಕ್ಷಣ ಗಟ್ಟಿಗೊಳ್ಳುತ್ತಿದ್ದು, ಯುಜಿಸಿ ಕೂಡ ಹೊಸ ಆ್ಯಪ್‌ ಗಳ ಮೂಲಕ ಶಿಕ್ಷಣ ನೀಡುವ ಕಾರ್ಯಕ್ರಮ ರೂಪಿಸಿದೆ. ಇದರಿಂದ ಆಗುತ್ತಿರುವ ಉಪಯೋಗಗಳನ್ನು ವಿದ್ಯಾರ್ಥಿಗಳು ಪಡೆಯುವಂತಾಗಬೇಕು ಎಂದು ತಿಳಿಸಿದರು.

ಕುಲಸಚಿವ ಪ್ರೊ.ಆರ್.ರಾಜಣ್ಣ, ಹಣಕಾಸು ಅಧಿಕಾರಿ ಎ.ಖಾದರ್ ಪಾಷ, ಡೀನ್ ಅಧ್ಯಯನ ಕೇಂದ್ರ ಡಾ.ಷಣ್ಮುಖ,  ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಮತ್ತಿತರರು ಹಾಜರಿದ್ದರು.

Key words: KSOU- read -through –online- facility-Mysore -SP- Chethan