KSOU ಆನ್ ಲೈನ್ ಪ್ರವೇಶಾತಿ : 5 ದಿನದಲ್ಲೇ 9 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿ ಮಾಹಿತಿ ಸಂಗ್ರಹ.

 

ಮೈಸೂರು, ಮೇ 10, 2019 : (www.justkannada.in news) : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ನೂತನ ಪ್ರಯತ್ನವಾದ `ಆನ್ ಲೈನ್ ಆಡ್ಮಿಷನ್ ‘ ಗೆ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂಧನೆ ವ್ಯಕ್ತವಾಗಿದೆ. ಇದು ವಿಶ್ವವಿದ್ಯಾಲಯದ ಆಡಳಿತ ವರ್ಗದ ಸಂತಸಕ್ಕೆ ಕಾರಣವಾಗಿದೆ.

ಇದೇ ಮೊದಲ ಬಾರಿ ಕರ್ನಾಟಕ ರಾಜ್ಯ ಮುಕ್ತ ವಿವಿ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮೊ ಸೇರಿದಂತೆ ವಿವಿಧ ಕೋರ್ಸ್ ಗಳಿಗೆ ಆನ್ ಲೈನ್ ಪ್ರವೇಶಾತಿ ಆರಂಭಿಸಿದೆ. ಮಾ. 6 ರಿಂದ ಈ ಪ್ರವೇಶ ಆರಂಭಗೊಂಡಿತ್ತು , ಈ ತನಕ ಕೆಎಸ್ಒಯು ವೆಬ್ ಸೈಟ್ ಗೆ ಸಾವಿರಾರು ಮಂದಿ ಭೇಟಿ ನೀಡಿ ಪ್ರವೇಶಾತಿಗೆ ಸಂಬಂಧಿಸಿದಂತೆ ಅಗತ್ಯ ಮಾಹಿತಿ ಪಡೆದಿರುವುದು ವಿಶೇಷ.

ಈ ಸಂಬಂಧ ಜಸ್ಟ್ ಕನ್ನಡ ಡಾಟ್ ಇನ್ ಜತೆ ಮಾತನಾಡಿದ ಕೆಎಸ್ಒಯು ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಅವರು ಹೇಳಿದಿಷ್ಟು…

ರಾಜ್ಯದ ವಿವಿಧ ಭಾಗಗಳಿಂದ ದೂರ ಶಿಕ್ಷಣ ಪಡೆಯಲು ಲಕ್ಷಾಂತರ ಮಂದಿ ವಿದ್ಯಾರ್ಥಿಗಳು ತುದಿಗಾಲಲ್ಲಿ ನಿಂತಿರುತ್ತಾರೆ. ಈ ವಿದ್ಯಾರ್ಥಿಗಳ ಹಿತ ದೃಷ್ಠಿಯಿಂದ ಹಾಗೂ ಅವರ ಅಲೆದಾಟವನ್ನು ತಪ್ಪಿಸುವ ಸಲುವಾಗಿ ನೂತನ ವ್ಯವಸ್ಥೆ ಜಾರಿಗೊಳಿಸಲು ಉದ್ದೇಶಿಸಿ ಆನ್ ಲೈನ್ ಪ್ರವೇಶಾತಿ ಪ್ರಾರಂಭಿಸಿದೆವು. ಈ ನಮ್ಮ ಪ್ರಯತ್ನ ಫಲ ನೀಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗುವ ಮುನ್ಸೂಚನೆ ಸಿಕ್ಕಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ 5 ದಿನಗಳಲ್ಲಿ ಮುಕ್ತ ವಿವಿಯ ಕನ್ನಡ ವೆಬ್ ಸೈಟ್ ಅನ್ನು 6,500 ಕ್ಕೂ ಹೆಚ್ಚು ಮಂದಿ ಹಾಗೂ ಇಂಗ್ಲಿಷ್ ವೆಬ್ ಸೈಟ್ ಅನ್ನು 2,500 ಕ್ಕೂ ಹೆಚ್ಚು ಮಂದಿ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.
ಪ್ರವೇಶಾತಿಗೆ ಇನ್ನು ಕಾಲಾವಕಾಶ ಇರುವ ಕಾರಣ, ಈ ಶೈಕ್ಷಣಿಕ ಸಾಲಿನಲ್ಲಿ ನಾವು ನಿರೀಕ್ಷಿಸಿದ ಪ್ರಮಾಣದಲ್ಲಿ ವಿದ್ಯಾರ್ಥಿಗಳು ದಾಖಲಾಗುವ ವಿಶ್ವಾಸವಿದೆ. ಆನ್ ಲೈನ್ ಪ್ರವೇಶದ ಜತೆಗೆ ಯುಜಿಸಿ ಸಮಸ್ಯೆಯೂ ಬಗೆ ಹರಿದಿರುವುದು ವಿದ್ಯಾರ್ಥಿಗಳಲ್ಲಿ KSOU ಬಗ್ಗೆ ಭರವಸೆ ಮೂಡಿಸಿದೆ.


ksou-online-admission-mysore-vc