ಲೆಕ್ಕ ತಪ್ಪಿದ ಕೆಪಿಎಸ್ಸಿ: ಅಡಕತ್ತರಿಯಲ್ಲಿ ಸಹಾಯಕರ ನೇಮಕಾತಿ

ಬೆಳಗಾವಿ:ಜೂ-3: ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಖಾಲಿ ಇರುವ ಲೆಕ್ಕ ಸಹಾಯಕರು ಹಾಗೂ ಕಿರಿಯ ಲೆಕ್ಕ ಸಹಾಯಕರ ಹುದ್ದೆಗಳ ನೇಮಕಾತಿ ಸಂಪೂರ್ಣವಾಗಿ ಲೆಕ್ಕ ತಪ್ಪಿದೆ. ನೇಮಕ ಪ್ರಕ್ರಿಯೆ ಆರಂಭವಾಗಿ 3 ವರ್ಷ ಕಳೆದಿದ್ದರೂ ಅರ್ಧದಷ್ಟು ಅಭ್ಯರ್ಥಿಗಳಿಗಷ್ಟೇ ನೇಮಕಾತಿ ಆದೇಶ ದೊರಕಿದೆ. ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟಿಸಲು ಹಿಂದೇಟು ಹಾಕುತ್ತಿರುವ ಕೆಪಿಎಸ್​ಸಿ, ಇದಕ್ಕೆ ಸ್ಪಷ್ಟ ಕಾರಣಗಳನ್ನೂ ನೀಡದಿರುವುದರಿಂದ ಅಭ್ಯರ್ಥಿಗಳು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ.

28 ಇಲಾಖೆಗಳಲ್ಲಿ ಖಾಲಿ ಇರುವ 2,039 ಗ್ರೂಪ್ ‘ಸಿ’ ತಾಂತ್ರಿಕೇತರ ಹುದ್ದೆಗಳ ಭರ್ತಿಗಾಗಿ ಸರ್ಕಾರ 2016ರ ಮಾ.3ರಂದು ಅಧಿಸೂಚನೆ ಹೊರಡಿಸಿತ್ತು. ಕೆಪಿಎಸ್​ಸಿ ಮುಖಾಂತರ ಲಿಖಿತ ಪರೀಕ್ಷೆ ನಡೆಸಿ ನೇಮಕಕ್ಕೆ ತೀರ್ವನಿಸಿತ್ತು. ಈ ಪೈಕಿ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ 445 ಲೆಕ್ಕ ಸಹಾಯಕರು ಹಾಗೂ 234 ಕಿರಿಯ ಲೆಕ್ಕ ಸಹಾಯಕರ ಹುದ್ದೆಗಳಿದ್ದವು. 2016ರ ಆಗಸ್ಟ್​ನಲ್ಲಿ ಲಿಖಿತ ಪರೀಕ್ಷೆ ನಡೆಸಿದ್ದ ಕೆಪಿಎಸ್​ಸಿ, ಅಕ್ಟೋಬರ್​ನಲ್ಲಿ 1:2 ಅನುಪಾತದಲ್ಲಿ ಅಭ್ಯರ್ಥಿಗಳ ಅರ್ಹತೆ ಪಟ್ಟಿ ಪ್ರಕಟಿಸಿತ್ತು. ಡಿಸೆಂಬರ್​ನಲ್ಲಿ ಮೂಲ ದಾಖಲೆ ಪರಿಶೀಲಿಸಿ, 2017ರ ಮಾರ್ಚ್-ಏಪ್ರಿಲ್​ನಲ್ಲಿ 1:1ರ ಅನುಪಾತದಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿತ್ತು.

ಕೆಲ ದಿನಗಳ ನಂತರ ಅಂತಿಮ ಪಟ್ಟಿಯೂ ಪ್ರಕಟವಾಗಿತ್ತು. 2018ರ ಜನವರಿಯಲ್ಲಿ 296 ಲೆಕ್ಕ ಸಹಾಯಕರು ಹಾಗೂ 150 ಕಿರಿಯ ಲೆಕ್ಕ ಸಹಾಯಕರಿಗೆ ನೇಮಕಾತಿ ಆದೇಶ ನೀಡಲಾಗಿದೆ. ಬಾಕಿ ಉಳಿದಿರುವ 149 ಲೆಕ್ಕ ಸಹಾಯಕರು ಮತ್ತು 84 ಕಿರಿಯ ಲೆಕ್ಕ ಸಹಾಯಕರ ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟಿಸಿ ನೇಮಕ ಆದೇಶ ನೀಡಬೇಕಿದೆ. ಹೆಚ್ಚುವರಿ ಪಟ್ಟಿಯನ್ನು ತಕ್ಷಣ ಪ್ರಕಟಿಸುವಂತೆ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ 2018ರ ಜು.19ರಂದು ಕೆಪಿಎಸ್​ಸಿಗೆ ಪತ್ರವನ್ನೂ ಬರೆದಿದೆ. ಇಷ್ಟಾದರೂ ಪಟ್ಟಿ ಬಿಡುಗಡೆಗೆ ಕೆಪಿಎಸ್​ಸಿ ಹಿಂದೇಟು ಹಾಕುತ್ತಿದೆ.

‘ಕಾರಣ ಕೇಳಿದರೆ ಕೆಪಿಎಸ್​ಸಿ ದಿನಕ್ಕೊಂದು ಉತ್ತರ ನೀಡಿ ನಮ್ಮ ದಿಕ್ಕು ತಪ್ಪಿಸುತ್ತಿದೆ. ವಯೋಮಿತಿ ಮೀರುವ ಹಂತದಲ್ಲಿರುವ ನಮಗೆ ಸಂಕಟ ಶುರುವಾಗಿದೆ. ಈ ನೇಮಕಾತಿ ನಿರೀಕ್ಷೆಯಲ್ಲೇ ದಿನದೂಡುತ್ತಿದ್ದು, ಬೇರ್ಯಾವ ಪರೀಕ್ಷೆ ಬರೆಯದಂಥ ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಿದ್ದೇವೆ’ ಎಂದು ನೊಂದ ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಶೀಘ್ರ ಪಟ್ಟಿ ಪ್ರಕಟ: ಕೆಲ ತಾಂತ್ರಿಕ ಕಾರಣಗಳಿಂದಾಗಿ ಲೆಕ್ಕ ಸಹಾಯಕರು ಹಾಗೂ ಕಿರಿಯ ಲೆಕ್ಕ ಸಹಾಯಕರ ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟಿಸಲಾಗಿಲ್ಲ. ಈಗ ಪಟ್ಟಿ ಸಿದ್ಧಗೊಂಡಿದ್ದು, ಶೀಘ್ರ ಪ್ರಕಟಿಸಲಾಗುವುದು. ಅಭ್ಯರ್ಥಿಗಳು ಆತಂಕ ಪಡಬೇಕಿಲ್ಲ ಎಂದು ಕೆಪಿಎಸ್​ಸಿ ಅಧಿಕಾರಿಗಳು ತಿಳಿಸಿದ್ದಾರೆ.
ಕೃಪೆ:ವಿಜಯವಾಣಿ

ಲೆಕ್ಕ ತಪ್ಪಿದ ಕೆಪಿಎಸ್ಸಿ: ಅಡಕತ್ತರಿಯಲ್ಲಿ ಸಹಾಯಕರ ನೇಮಕಾತಿ
kpsc-department-of-state-audit-and-accounting