ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್ ನಿಧನ: ಹಲವು ಗಣ್ಯರಿಂದ ಸಂತಾಪ.

ಮೈಸೂರು,ಮಾರ್ಚ್,11,2023(www.justkannada.in):  ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್​.ಧ್ರುವನಾರಾಯಣ್(61) ಅವರು ಹೃದಯಾಘಾತದಿಂದ ನಿಧನರಾಗಿದ್ದು, ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಇಂದು ಬೆಳಗ್ಗೆ 6.40ಕ್ಕೆ ಕಾರಿನಲ್ಲಿ ತೆರಳುವಾಗ ಹೃದಯಾಘಾತವಾಗಿದ್ದು ಮೈಸೂರಿನ ಡಿಆರ್​​ಎಂಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಧ್ರುವನಾರಾಯಣ ಅವರ  ನಿಧನಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಶಾಸಕ ಜಿ.ಟಿ.ದೇವೇಗೌಡ ಸೇರಿ ಅನೇಕರು ಸಂತಾಪ ಸೂಚಿಸಿದ್ದಾರೆ.

ಧ್ರುವನಾರಾಯಣ ನಿಧನದ ಸುದ್ದಿ ತಿಳಿದು ನನಗೆ ದಿಗ್ಭ್ರಾಂತವಾಗಿದೆ. ಎಂದೂ ಕೂಡ ದ್ವೇಷದ ರಾಜಕಾರಣ ಮಾಡಿದವರಲ್ಲ. ಚಾಮರಾಜನಗರ ಜಿಲ್ಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದರು. ಅಭಿವೃದ್ಧಿ ಕೆಲಸಗಳಿಂದ ಜಿಲ್ಲೆಯ ಜನರ ಮನಸು ಗೆದ್ದಿದ್ದರು. ಸ್ನೇಹಿತನ ಅಗಲಿಕೆಯಿಂದ ತುಂಬಾ ದುಃಖ ಆಗಿದೆ. ಕುಟುಂಬಸ್ಥರಿಗೆ ದುಃಖ ಸಹಿಸುವ ಶಕ್ತಿ ದೇವರು ನೀಡಲಿ ಎಂದು ಶಾಸಕ ಜಿ.ಟಿ.ದೇವೇಗೌಡ ಸಂತಾಪ ಸೂಚಿಸಿದ್ದಾರೆ.

ಸತೀಶ್ ಜಾರಕಿಹೊಳಿ ಸಹ ಸಂತಾಪ ಸೂಚಿಸಿದ್ದು, ಮಾಜಿ ಸಂಸದರು, ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಆತ್ಮೀಯ ಸ್ನೇಹಿತರಾಗಿದ್ದ ಆರ್. ಧ್ರುವ ನಾರಾಯಣ ಅವರ ಅಕಾಲಿಕ ನಿಧನ ತುಂಬಾ ನೋವು ಉಂಟುಮಾಡಿದೆ. ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಧ್ರುವ ನಾರಾಯಣ ಅವರ ಅಗಲಿಕೆ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಕ್ಕೆ ಸಂತಾಪ ಸೂಚಿಸುತ್ತ ಅವರ ಮತ್ತು ಅವರ ಅಭಿಮಾನಿಗಳ ನೋವಿನಲ್ಲಿ ನಾನೂ ಕೂಡ ಭಾಗಿಯಾಗಿದ್ದೇನೆ ಎಂದಿದ್ದಾರೆ.

ಕಾಂಗ್ರೆಸ್ ನಾಯಕ ಎಸ್​.ಆರ್​ ಪಾಟೀಲ್ ಕೂಡ ಸಂತಾಪ ಸೂಚಿಸಿದ್ದು, ರಾಜ್ಯ ಕಾಂಗ್ರೆಸ್​ ಪಕ್ಷದ ಮುಂಚೂಣಿ ನಾಯಕರು, ನನ್ನ ಆತ್ಮೀಯರು,ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಶ್ರೀ ಆರ್.ಧ್ರುವನಾರಾಯಣ ಹೃದಯಾಘಾತದಿಂದ ನಿಧನ ಹೊಂದಿರುವ ಸುದ್ಧಿ ದಿಗ್ಭ್ರಮೆ ಗೊಳಿಸಿದೆ.ಸರಳ ಸಜ್ಜನಿಕೆಯ ವ್ಯಕ್ತಿತ್ವದ ಅವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾಗದ ನಷ್ಟ.ಶ್ರೀಯುತರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಕುಟುಂಬ ವರ್ಗದವರಿಗೆ,ಬಂಧು ಬಳಗದವರಿಗೆ ,ಅಭಿಮಾನಿಗಳಿಗೆ,ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಆರ್.ಧೃವನಾರಾಯಣ್ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದರು. ಹಾಗೆಯೇ ಎರಡು ಬಾರಿ ಸಂಸದರಾಗಿದ್ದರು. ಈ ಬಾರಿ ನಂಜನಗೂಡು ಕ್ಷೇತ್ರದಿಂದ ಸ್ಪರ್ಧೆಗೆ ಮುಂದಾಗಿದ್ದರು.

Key words: KPCC- Working President -R. Dhruvanarayan -passes away-Condolences