ನಮ್ಮ ಆಗ್ರಹ ಈಡೇರುವವರೆಗೂ ಅಧಿವೇಶನ ನಡೆಯಲು ಬಿಡುವುದಿಲ್ಲ- ಡಿ.ಕೆ ಶಿವಕುಮಾರ್.

kannada t-shirts

ಬೆಂಗಳೂರು,ಫೆಬ್ರವರಿ,19,2022(www.justkannada.in): ನಾವು ಬಚ್ಚಲು ಬಾಯಿ ಈಶ್ವರಪ್ಪನ ರಾಜೀನಾಮೆ ಕೇಳುತ್ತಿಲ್ಲ. ಅವನನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದ್ದೇವೆ. ನಮ್ಮ ಆಗ್ರಹ ಈಡೇರುವವರೆಗೂ ನಾವು ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದರು.

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳಿಗೆ ಮಾತನಾಡಿದ ಡಿ.ಕೆ ಶಿವಕುಮಾರ್ ಹೇಳಿದ್ದಿಷ್ಟು.

ನಾವು ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿಯನ್ನು ಎರಡು ದಿನ ಪೂರೈಸಿದ್ದು, ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ಈ ಹೋರಾಟವನ್ನು ಮುಂದುವರಿಸುತ್ತೇವೆ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿ, ಈಗ ದೊಡ್ಡ ಸಾಧನೆ ಮಾಡಿರುವಂತೆ ಬೀಗುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದೆ. ರಾಷ್ಟ್ರಗೀತೆ, ಧ್ವಜ, ಪ್ರಜಾಪ್ರಭುತ್ವ, ಸಂವಿಧಾನ ನೀಡಿದ್ದೇವೆ. ನಾವು ಅಧಿವೇಶನದ ಸಮಯದಲ್ಲಿ ರಾಷ್ಟ್ರಧ್ವಜ ಹಾರಿಸಿ ತಪ್ಪು ಮಾಡಿದ್ದರೆ ನಮ್ಮ ಮೇಲೆ ಕೇಸ್ ದಾಖಲಿಸಲಿ. ಕಾನೂನು ಕ್ರಮ ಕೈಗೊಳ್ಳಲಿ. ಇನ್ನು ಯಾಕೆ ದಾಖಲಿಸಿಲ್ಲ? ಅದಕ್ಕಿಂತ ಮೊದಲು ದೇಶದ ಧ್ವಜಕ್ಕೆ ಅಪಮಾನ ಮಾಡಿರುವ ಈಶ್ವರಪ್ಪ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಿ ಎಂದು ಆಗ್ರಹಿಸಿದರು.

ರಾಜ್ಯಾದ್ಯಂತ ತಾಲೂಕು ಕೇಂದ್ರಗಳಲ್ಲಿ ಸೋಮವಾರ ಈಶ್ವರಪ್ಪರನ್ನು ವಜಾಗೊಳಿಸುವಂತೆ ಆಗ್ರಹಿಸಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸುತ್ತೇವೆ. ನಂತರ ಹಳ್ಳಿ, ಹಳ್ಳಿಗೂ ಹೋಗಿ ಜನರ ಮಧ್ಯೆ ಹೋರಾಟ ಮಾಡುತ್ತೇವೆ. ಈಶ್ವರಪ್ಪ ದೊಡ್ಡ ಸಾಧನೆ ಮಾಡಿರುವಂತೆ ಅವರಿಗೆ ಸ್ವಾಗತ ಕೋರಲು ಐನೂರು ಮಂದಿ ಸೇರಿದ್ದಾರಂತೆ. ಸಂತೋಷ ಅವರು ಏನಾದರೂ ಮಾಡಿಕೊಳ್ಳಲಿ. ಆದರೆ ದೇಶದ್ರೋಹದ ಹೇಳಿಕೆ ಕೊಟ್ಟ ಈಶ್ವರಪ್ಪನ ವಿರುದ್ಧ ಪ್ರಕರಣ ದಾಖಲಿಸದೆ, ಅವರ ಹೇಳಿಕೆ ವಿರುದ್ಧ ಕಪ್ಪು ಬಾವುಟ ಹಾರಿಸಲು ಹೋದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ನಾನು ಎಸ್ಪಿ ಹಾಗೂ ಡಿಜಿ ಜೊತೆ ಮಾತನಾಡುತ್ತೇನೆ. ಅವರು ಪೊಲೀಸ್ ಸಮವಸ್ತ್ರ ಕಳಚಿ ಕೇಸರಿ ಬಟ್ಟೆ ಧರಿಸಿ ಬಿಜೆಪಿಯ ಕಾರ್ಯಕರ್ತರಾಗಿ ಕೆಲಸ ಮಾಡುವಂತೆ ಹೇಳುತ್ತೇನೆ. ಈಶ್ವರಪ್ಪನಿಗೆ ಸ್ವಾಗತ ಕೋರಲು ಐನೂರು ಜನ ಸೇರಬಹುದಂತೆ, ಅವರ ವಿರುದ್ಧ ಪ್ರಕರಣವಿಲ್ಲವಂತೆ, ಆದರೆ ಪ್ರತಿಭಟನೆ ಮಾಡಲು ಹೋದ 15-20 ಮಂದಿ ವಿರುದ್ಧ ಪ್ರಕರಣವಂತೆ. ಇದೆಂಥ ನ್ಯಾಯ? ಎಂದು ಡಿಕೆಶಿ ಪ್ರಶ್ನಿಸಿದರು.

ನಾವು ಪಾದಯಾತ್ರೆ ಮಾಡಿದಾಗ ನಮ್ಮ ಮೇಲೆ ಪ್ರಕರಣ ದಾಖಲಿಸಿದ್ದರು, ಬಿಜೆಪಿಯ ಹಲವು ನಾಯಕರು ಸಾವಿರಾರು ಜನ ಸೇರಿಸಿ ಕಾರ್ಯಕ್ರಮ ಮಾಡಲಿಲ್ಲವೇ? ಅವರ ವಿರುದ್ಧ ಯಾಕೆ ಕೇಸ್ ಹಾಕಿಲ್ಲ? ಮುಖ್ಯಮಂತ್ರಿಗಳು ನಿಷ್ಪಕ್ಷಪಾತರಾಗಿರುತ್ತಾರೆ ಎಂದು ಭಾವಿಸಿದ್ದೆ. ಆದರೆ ಅವರೂ ಅವರ ಕೈಗೊಂಬೆಯಾಗಿದ್ದಾರೆ. ಅವರು ಮುಖ್ಯಮಂತ್ರಿ ಕೆಲಸ ಮಾಡುತ್ತಿಲ್ಲ. ಅವರ ಮೊದಲ ಆದ್ಯತೆ ಅವರ ಪಕ್ಷದ ಅಜೆಂಡಾ. ಸಂವಿಧಾನದ ಮೇಲೆ ಪ್ರಮಾಣ ಮಾಡಿ, ಈಗ ಅದರಂತೆ ಅವರು ನಡೆದುಕೊಳ್ಳುತ್ತಿಲ್ಲ.

ಫೆ.27ರಿಂದ ಮೇಕೆದಾಟು ಪಾದಯಾತ್ರೆ ಪುನಾರಂಭ.

ಇದೇ 27ರಿಂದ ಮತ್ತೆ ಮೇಕೆದಾಟು ಪಾದಯಾತ್ರೆ ಆರಂಭಿಸುತ್ತಿದ್ದು, ಈ ವಿಚಾರವಾಗಿ ಮುಖ್ಯಮಂತ್ರಿಗಳಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಹೀಗಾಗಿ ನಾವು ತಯಾರಿ ಮಾಡಿಕೊಳ್ಳುತ್ತಿದ್ದು ಬೆಳಗ್ಗೆ ಎದ್ದು ನಡೆಯುತ್ತಿದ್ದೇವೆ. ರಾಜ್ಯ ಹಾಗೂ ರಾಷ್ಟ್ರದ ಹಿತಕ್ಕಾಗಿ ನಾವು ಹೋರಾಟ ಮಾಡುತ್ತಿದ್ದು, ಬೆಂಗಳೂರು ಜನರ ಕುಡಿಯುವ ನೀರಿಗೆ, ರೈತರ ಹಿತಕ್ಕೆ ಮೇಕೆದಾಟು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.

ಬಿಜೆಪಿಯವರಿಗೆ ರಾಜ್ಯದ ನೀರಾವರಿ ವಿಚಾರವಾಗಿ ಆಸಕ್ತಿ ಇಲ್ಲ. ಅವರಲ್ಲಿ ಡಬಲ್ ಇಂಜಿನ್ ಸರ್ಕಾರವಿದ್ದರೂ ಅವರು ಯಾವಾಗ ಬೇಕಾದರೂ ಕೆಲಸ ಆರಂಭಿಸಬಹುದು. ಈ ಯೋಜನೆ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳೇ ಹೇಳಿದ್ದು, ಕೇವಲ ಹೇಳಿದರೆ ಸಾಲದು. ಅಧಿಸೂಚನೆ ಹೊರಡಿಸಿ, ಜಾಗ ವಶಪಡಿಸಿಕೊಳ್ಳಬೇಕು, ಭೂಮಿ ಪೂಜೆ ಮಾಡಬೇಕು ಎಂದರು.

Key words: kpcc-president-DK Shivakumar-protest

website developers in mysore