ಕರಾವಳೀಲಿ ರೆಡ್ ಅಲರ್ಟ್: ನೈಋತ್ಯ ಮುಂಗಾರು ಚುರುಕು, ಜು. 24ರವರೆಗೆ ಭಾರಿ ಮಳೆ ಸಾಧ್ಯತೆ

ಬೆಂಗಳೂರು:ಜುಲೈ-22: ರಾಜ್ಯಾದ್ಯಂತ ನೈಋತ್ಯ ಮುಂಗಾರು ಚುರುಕುಗೊಂಡಿದ್ದು, ಕರಾವಳಿ ಕರ್ನಾಟಕದಲ್ಲಿ ಮತ್ತೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಜು.24ರವರೆಗೆ ಭಾರಿ ಮಳೆಯಾಗಲಿದೆ. ಮಲೆನಾಡು ಜಿಲ್ಲೆಗಳಲ್ಲಿ ಕನಿಷ್ಠ 115.6ರಿಂದ 204.4 ಮಿ.ಮೀ. ಮಳೆ ಬೀಳುವ ಅಂದಾಜಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿಯಲ್ಲಿ ಕನಿಷ್ಠ 204.5 ಮಿ.ಮೀ. ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಭಾನುವಾರ ಬೆಂಗಳೂರಿನ ರಾಜಾಜಿನಗರ, ಯಶವಂತಪುರ, ಚಾಮರಾಜಪೇಟೆ, ಬಸವನಗುಡಿ ಮುಂತಾದೆಡೆ ತುಂತುರು ಮಳೆಯಾಗಿದೆ. ಇನ್ನೆರಡು ದಿನ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ. ರಾಮನಗರ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ.

ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲೂ ಜು. 24ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗಳಲ್ಲಿ ಜು.24ರ ನಂತರ ಮಳೆ ಪ್ರಮಾಣ ಕೊಂಚ ತಗ್ಗಲಿದೆ, ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ವರುಣನ ಅಬ್ಬರ ಮುಂದುವರಿಯಲಿದೆ.

ತ್ರಿವೇಣಿ ಸಂಗಮ ಭರ್ತಿ: ಕೊಡಗು ಜಿಲ್ಲೆಯಲ್ಲಿ 2 ದಿನಗಳಿಂದ ಮಳೆ ಮುಂದುವರಿದಿದ್ದು, ಭಾಗಮಂಡಲ ತ್ರಿವೇಣಿ ಸಂಗಮ ಭರ್ತಿಯಾಗಿದೆ. ಹಾರಂಗಿ ಜಲಾಶಯದಲ್ಲಿ ಭಾನುವಾರ 2825.45 ಅಡಿ ನೀರು ಸಂಗ್ರಹವಾಗಿದೆ. 1673 ಕ್ಯೂಸೆಕ್ ಒಳಹರಿವಿದ್ದು, ನದಿಗೆ 30, ನಾಲೆಗೆ 20 ಕ್ಯೂಸೆಕ್ ನೀರು ಬಿಡಲಾಗುತ್ತಿದೆ.

ತಮಿಳುನಾಡಿಗೆ ಕಡಿಮೆ ನೀರು

ಕೆಆರ್​ಎಸ್​ನಿಂದ ತಮಿಳುನಾಡಿಗೆ ಬಿಡುತ್ತಿದ್ದ ನೀರಿನ ಪ್ರಮಾಣವನ್ನು ಭಾನುವಾರ ಸಂಜೆ ವೇಳೆಗೆ 2147 ಕ್ಯೂಸೆಕ್​ನಷ್ಟು ಕಡಿಮೆ ಮಾಡಲಾಗಿದೆ. ಭಾನುವಾರ ಬೆಳಗ್ಗೆ ಡ್ಯಾಂನಿಂದ 7742 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿತ್ತು. ಸಂಜೆ ವೇಳೆಗೆ ನೀರಿನ ಪ್ರಮಾಣ 5595 ಕ್ಯೂಸೆಕ್​ಗೆ ಇಳಿಸಲಾಗಿದೆ. ಅಂತೆಯೇ, ನೀರು ಹರಿಸುತ್ತಿದ್ದ ಐದು ಗೇಟ್ ಪೈಕಿ ಎರಡನ್ನು ಮುಚ್ಚಲಾಗಿದೆ. ಭಾನುವಾರ ಸಂಜೆ ಡ್ಯಾಂನಲ್ಲಿ 88.52 ಅಡಿ ನೀರಿದ್ದು, ಒಳಹರಿವು 374 ಕ್ಯೂಸೆಕ್ ಇತ್ತು. ಮೂರು ದಿನದಿಂದ ನದಿಗೆ ನೀರು ಹರಿಸಿದ್ದರಿಂದಾಗಿ ಜಲಾಶಯದ ನೀರಿನ ಮಟ್ಟ 1.48 ಅಡಿ ಕಡಿಮೆಯಾಗಿದೆ.

ಬರೆ ಕುಸಿದು ಮನೆ ಜಖಂ

ಮಡಿಕೇರಿ ತಾಲೂಕಿನ ಜೋಡುಪಾಲ ಸಮೀಪ ಬರೆ ಕುಸಿದಿದ್ದರಿಂದ ನಿರ್ಮಾಣ ಹಂತದಲ್ಲಿರುವ ವೀರೇಂದ್ರ ಎಂಬುವರ ಮನೆ ಜಖಂಗೊಂಡಿದೆ. ಕಳೆದ ವರ್ಷ ಭಾರಿ ಮಳೆ ಸುರಿದು ಗುಡ್ಡ ಕುಸಿದ ಹಿನ್ನೆಲೆಯಲ್ಲಿ ಅಧ್ಯಯನ ನಡೆಸಿದ್ದ ಭೂ ವಿಜ್ಞಾನಿಗಳು ಜೋಡುಪಾಲ ಬಳಿ ಸೇರಿ ಕೆಲವು ಪ್ರದೇಶಗಳಲ್ಲಿ ಗುಡ್ಡ ಕುಸಿಯಬಹುದು ಎಂಬ ಎಚ್ಚರಿಕೆ ನೀಡಿದ್ದರು. ಎನ್​ಒಸಿ ನೀಡದಿದ್ದರೂ ಮನೆ ನಿರ್ವಿುಸಿದ್ದರಿಂದ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿ.ಪಂ. ಸಿಇಒ ಲಕ್ಷ್ಮೀಪ್ರಿಯ ತಿಳಿಸಿದ್ದಾರೆ. ಮಡಿಕೇರಿಯ ಹಳೇ ಖಾಸಗಿ ಬಸ್ ನಿಲ್ದಾಣದ ಸಮೀಪವಿದ್ದ ಬರೆಯೂ ಅಲ್ಪ ಪ್ರಮಾಣದಲ್ಲಿ ಕುಸಿದಿದೆ. ಕಳೆದ ವರ್ಷದ ಮಳೆಗೆ ಗುಡ್ಡ ಜರಿದ ಪರಿಣಾಮ ಇಲ್ಲಿದ್ದ ಖಾಸಗಿ ಬಸ್ ನಿಲ್ದಾಣ ನೆಲಸಮ ಮಾಡಲಾಗಿತ್ತು. 1.07 ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ವಣಕ್ಕೆ ಮುಂದಾಗಿದ್ದರೂ ಕಳೆದ 2 ದಿನಗಳಿಂದ ಮಳೆ ಆಗುತ್ತಿರುವುದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು.

ಶುರುವಾಗದ ರೈಲು ಸಂಚಾರ

ಸುಬ್ರಹ್ಮಣ್ಯ ರಸ್ತೆ ಮತ್ತು ಸಕಲೇಶಪುರ ಘಾಟಿ ಪ್ರದೇಶದಲ್ಲಿ ಆಗಾಗ ಸುರಿಯುತ್ತಿರುವ ಮಳೆ-ಗಾಳಿಯಿಂದ ರೈಲು ಹಳಿ ಮತ್ತು ಸಮೀಪದಲ್ಲಿ ನಡೆಯುತ್ತಿರುವ ತುರ್ತು ಕಾಮಗಾರಿ ಭಾನುವಾರ ಪೂರ್ಣಗೊಂಡಿಲ್ಲ. ಪರಿಣಾಮ ಈ ಮಾರ್ಗದಲ್ಲಿ ಮಂಗಳೂರು- ಬೆಂಗಳೂರು ರೈಲು ಸಂಚಾರ ಸ್ಥಗಿತ ಮುಂದುವರಿದಿದೆ.

ಕರಾವಳಿ-ಮಲೆನಾಡಲ್ಲಿ ಸಾಧಾರಣ ಮಳೆ

ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ ತಾಲೂಕಿನಲ್ಲಿ ವರ್ಷಧಾರೆಯಾಗಿದ್ದು, ಘಟ್ಟ ಪ್ರದೇಶ ಹೊರತುಪಡಿಸಿ ಉಳಿದೆಡೆ ತುಂತುರು ಮಳೆ ಬಿದ್ದಿದೆ. ಲಿಂಗನಮಕ್ಕಿ ಅಣೆಕಟ್ಟೆಗೆ 9580, ಭದ್ರಾ ಜಲಾಶಯಕ್ಕೆ 3936, ತುಂಗಾ ಡ್ಯಾಂಗೆ 10,676 ಕ್ಯೂಸೆಕ್ ಒಳಹರಿವಿದೆ. ಚಿಕ್ಕಮಗಳೂರು ಜಿಲ್ಲೆಯ ಕೆಲವೆಡೆ ಮಳೆಯಾಗಿದ್ದು, ತುಂಗಾ ಮತ್ತು ಭದ್ರಾ ನದಿ ಹರಿವು ತುಸು ಏರಿದೆ.

ರೆಡ್ ಅಲರ್ಟ್ ಇದ್ದರೂ ದಕ್ಷಿಣಕನ್ನಡ- ಉಡುಪಿ ಜಿಲ್ಲೆಯಲ್ಲಿ ಭಾನುವಾರ ಸಾಧಾರಣ ಮಳೆಯಾಗಿದೆ. ಸಮುದ್ರದಿಂದ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಮಂಗಳೂರಿನಿಂದ ಕಾರವಾರದವರೆಗೆ 3.7-4.3 ಮೀ. ಎತ್ತರದ ಅಲೆಗಳು ದಡದತ್ತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಇಲಾಖೆ ಎಚ್ಚರಿಸಿದೆ. ಘಟ್ಟ ಪ್ರದೇಶದಲ್ಲಿನ ಮಳೆಯಿಂದಾಗಿ ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ಏರಿದೆ. ಭಟ್ಕಳದಲ್ಲಿ ಧಾರಾಕಾರ ಮಳೆಯಾಗಿದ್ದು, ತಗ್ಗು ಪ್ರದೇಶವೆಲ್ಲ ಜಲಾವೃತಗೊಂಡಿದೆ. ಐಆರ್​ಬಿ ಸಂಸ್ಥೆ ನಿರ್ವಿುಸಿದ ರಸ್ತೆ ಕುಸಿದು ಬಿದ್ದಿದೆ. ಪಟ್ಟಣದ ರಂಗಿನಕಟ್ಟೆಯಂತೂ ಅಕ್ಷರಶಃ ಕೆರೆಯಂತೆ ಕಾಣುತ್ತಿತ್ತು. ಹೊನ್ನಾವರ, ಕುಮಟಾ ಕಾರವಾರ ಸೇರಿ ಹಲವೆಡೆ ಸಣ್ಣ ಮಳೆಯಾಗಿದೆ.

ಪ್ರವಾಸಿಗನ ರಕ್ಷಣೆ: ಮುರ್ಡೆಶ್ವರದ ಕಡಲ ತೀರದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿದ್ದ ಪ್ರವಾಸಿಗನನ್ನು ಲೈಫ್​ಗಾರ್ಡ್​ಗಳು ಭಾನುವಾರ ರಕ್ಷಿಸಿದ್ದಾರೆ. ಏಳು ಜನ ಕುಟುಂಬ ಸದಸ್ಯರೊಂದಿಗೆ ಮುರ್ಡೆಶ್ವರ ಪ್ರವಾಸಕ್ಕೆ ಬಂದಿದ್ದ ಮಂಡ್ಯ ಜಿಲ್ಲೆ ಮದ್ದೂರಿನ ಮಂಜುನಾಥ ಅರಮುಗಮ್ ಲೀಳ್(19) ದೇವರ ದರ್ಶನ ಪಡೆದ ಬಳಿಕ ಸಮುದ್ರದಲ್ಲಿ ಈಜಾಡಲು ತೆರಳಿದಾಗ ನೀರಿನ ಸೆಳೆತಕ್ಕೆ ಸಿಲುಕಿದ್ದರು. ಇದನ್ನು ಗಮನಿಸಿದ ಲೈಫ್​ಗಾರ್ಡ್​ಗಳಾದ ಶಶಿಧರ ನಾಯ್ಕ, ಚಂದ್ರಶೇಖರ ದೇವಾಡಿಗ ಸ್ಥಳೀಯ ಮೀನುಗಾರರಾದ ವಿನೋದ ಹರಿಕಾಂತ, ಉಮೇಶ ಹರಿಕಾಂತ, ಶಂಕರ ಹರಿಕಾಂತ ಅವರು ಪ್ರವಾಸಿಗನನ್ನು ರಕ್ಷಿಸಿದ್ದಾರೆ.
ಕೃಪೆ: ವಿಜಯವಾಣಿ

ಕರಾವಳೀಲಿ ರೆಡ್ ಅಲರ್ಟ್: ನೈಋತ್ಯ ಮುಂಗಾರು ಚುರುಕು, ಜು. 24ರವರೆಗೆ ಭಾರಿ ಮಳೆ ಸಾಧ್ಯತೆ
kodagu-heavy-rain-red-alert-department-of-meteorology-udupi-dakshina-kannada-shivamogga