9 ವಿವಿಗಳ ಕುಲಪತಿಗಳಿಗೆ ರಾಜೀನಾಮೆ ನೀಡುವಂತೆ ಕೇರಳ ರಾಜ್ಯಪಾಲರಿಂದ ಆದೇಶ.

ನವದೆಹಲಿ, ಅಕ್ಟೋಬರ್ 24, 2022 (www.justkannada.in): ಕೇರಳ ರಾಜ್ಯದ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅವರು ಭಾನುವಾರದಂದು ಕೇರಳ ರಾಜ್ಯದ ಒಂಬತ್ತು ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ರಾಜೀನಾಮೆ ಸಲ್ಲಿಸುವಂತೆ ಆದೇಶಿಸಿದ್ದಾರೆ.

ಈ ಪೈಕಿ ಕ್ಯಾಲಿಕಟ್, ಸಂಸ್ಕೃತ, ಕೆಟಿಯು, ಸಿಯುಎಸ್‌ ಎಟಿ, ಮೀನುಗಾರಿಕೆ ಮಲಯಾಳಂ, ಎಂಜಿ, ಕಣ್ಣೂರು, ಹಾಗೂ ವೈದ್ಯಕೀಯ ವಿಶ್ವವಿದ್ಯಾಲಯಗಳ ಕುಲಪತಿಗಳು ಸೇರಿದ್ದಾರೆ.

ಸರ್ವೋಚ್ಛ ನ್ಯಾಯಾಲಯದ ನಾಗರೀಕ ಮನವಿ ಸಂಖ್ಯೆ 2022ರ 7634 -7635 ಎಸ್‌ಎಲ್‌ಪಿ(ಸಿ) ಸಂಖ್ಯೆ 21108 -21109 -2021)ರ ಆದೇಶವನ್ನು ಎತ್ತಿಹಿಡಿಯುತ್ತಾ ರಾಜ್ಯಪಾಲ ಆರೀಫ್ ಮೊಹಮ್ಮದ್ ಅವರು ಕೇರಳದ ಈ ಮೇಲಿನ 9 ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ರಾಜೀನಾಮೆ ಸಲ್ಲಿಸುವಂತೆ ಸೂಚಿಸಿದ್ದಾರೆ ಎಂದು ಕೇರಳ ರಾಜ ಭವನದ ಪಿಆರ್‌ ಓ ತಮ್ಮ ಟ್ವಿಟ್ ಒಂದರಲ್ಲಿ ಮಾಹಿತಿ ನೀಡಿದ್ದಾರೆ.

ಜೊತೆಗೆ ಖಾನ್ ಅವರು ಈ ರಾಜೀನಾಮೆಗಳು ತಮಗೆ ಸೋಮವಾರ ಬೆಳಿಗ್ಗೆ ವೇಳೆಗೆ ತಲುಪಬೇಕೆಂದು ಸಹ ನಿರ್ದೇಶಿಸಿದ್ದಾರೆ.

ತಿರುವನಂತಪುರಂನಲ್ಲಿರುವ ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ನೇಮಕಗೊಂಡಿದ್ದಂತಹ ಕುಲಪತಿಗಳ ವಿಚಾರದಲ್ಲಿ ಮಾನ್ಯ ಸರ್ವೊಚ್ಛ ನ್ಯಾಯಾಲಯವು ಆ ನೇಮಕಾತಿ ಕಾನೂನುಬಾಹಿರ ಮತ್ತು ಯುಜಿಸಿ ನಿಬಂಧನೆಗಳಿಗೆ ವಿರುದ್ಧವಾಗಿದೆ ಎಂದು ಸೂಚಿಸಿ ಆ ನೇಮಕಾತಿಯನ್ನು ರದ್ದು ಪಡಿಸಿತು.

ನ್ಯಾಯಾಧೀಶರಾದ ಎಂ.ಆರ್. ಷಾ ಮತ್ತು ಸಿ.ಟಿ. ರವಿಕುಮಾರ್ ಅವರನ್ನೊಳಗೊಂಡ ಪೀಠವು, ಯೂನಿವರ್ಸಿಟಿ ಗ್ರ್ಯಾಂಡ್ ಕಮೀಷನ್‌ ನ ಪ್ರಕಾರ, ರಾಜ್ಯ ಸರ್ಕಾರದಿಂದ ರಚಿಸಲ್ಪಟ್ಟಿದ್ದಂತಹ ಪರಿಶೋಧನಾ ಸಮಿತಿಯು, ಇಂಜಿನಿಯರಿಂಗ್ ವಿಜ್ಞಾನ ಕ್ಷೇತ್ರವನ್ನೂ ಒಳಗೊಂಡಂತೆ ಕುಲಪತಿಗಳ ಹುದ್ದೆಗೆ ಕನಿಷ್ಠ ಮೂರು ಸಮರ್ಥ ಅಭ್ಯರ್ಥಿಗಳನ್ನು ಗುರುತಿಸಿ ಶಿಫಾರಸ್ಸು ಮಾಡಬೇಕಿತ್ತು. ಆದರೆ ಕೇವಲ ಡಾ. ರಾಜಶ್ರೀ ಎಂ.ಎಸ್. ಅವರ ಹೆಸರನ್ನು ಮಾತ್ರ ಕಳುಹಿಸಲಾಗಿತ್ತು ಎಂದು ತಿಳಿಸಿದೆ.

ಸುದ್ದಿ ಮೂಲ: ಟೈಮ್ಸ್ ಆಫ್ ಇಂಡಿಯಾ

Key words: Kerala Governor -orders -resignation – VC-9 universities.