ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ: ಸಾಧಕರ ಆಯ್ಕೆಗೆ ತಜ್ಞರ ಸಮಿತಿ

ಬೆಂಗಳೂರು, ಜೂನ್ 19, 2022 (www.justkannada.in): ಬೆಂಗಳೂರು ಸಂಸ್ಥಾಪಕ, ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ಹಲವು ರಂಗಗಳ ಸಾಧಕರಿಗೆ `ಅಂತಾರಾಷ್ಟ್ರೀಯ ಪ್ರಶಸ್ತಿ’ಯನ್ನು ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಅರ್ಹರನ್ನು ಆಯ್ಕೆ ಮಾಡಲು ಸರ್ಕಾರದ ನವೋದ್ಯಮ ವಿಷನ್ ಗ್ರೂಪ್ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಈ  ಬಗ್ಗೆ ಮಾತನಾಡಿದ ಅವರು, ಉದ್ಯಮಿ ಟಿ.ವಿ.ಮೋಹನದಾಸ್ ಪೈ, ವಿದ್ವಾಂಸ ಡಾ.ರಾಮಸ್ವಾಮಿ ಬಾಲಸುಬ್ರಹ್ಮಣ್ಯಂ, ನಿವೃತ್ತ ಐಎಎಸ್ ಅಧಿಕಾರಿ ಎಂ.ಕೆ.ಶಂಕರಲಿಂಗೇಗೌಡ ಅವರು ಈ ಆಯ್ಕೆ ಸಮಿತಿಯ ಸದಸ್ಯರಾಗಿದ್ದು, ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ವಿನಯ ಅವರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ ಎಂದು ವಿವರಿಸಿದರು.

ಕೆಂಪೇಗೌಡರ ಜಯಂತಿಯು ಈ ವರ್ಷ ಇದೇ 27ರಂದು ಇದ್ದು ಅಂದೇ‌ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ವೇಳೆಗೆ ಸಮಿತಿಯು ಅರ್ಹ ಸಾಧಕರನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಿದೆ. ನಾಡಪ್ರಭುವಿನ ಜಯಂತಿಯನ್ನು ಸರಕಾರದ ವತಿಯಿಂದ ಸಂಭ್ರಮದಿಂದ ಮತ್ತು ಅರ್ಥಪೂರ್ಣವಾಗಿ ಆಚರಿಸಲು ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.