ನೆರೆಪೀಡಿತರ ಬದುಕು ಕಟ್ಟುವುದೇ ಸವಾಲು: ಸರ್ಕಾರದ ಎದುರು ಸಮಸ್ಯೆಗಳ ಸಾಗರ

kannada t-shirts

ನವದೆಹಲಿ:ಆ-18: ಮುಕ್ಕಾಲು ರಾಜ್ಯದ ಬದುಕನ್ನು ಮೂರಾಬಟ್ಟೆ ಮಾಡಿರುವ ನೆರೆಯಿಂದ ತೊಂದರೆಗೊಳಗಾಗಿರುವ ಸಂತ್ರಸ್ತರಿಗೆ ಹೊಸ ಬದುಕು ಕಟ್ಟಿಕೊಡಲು ಸರ್ಕಾರಕ್ಕೀಗ ಹಣ ಹೊಂದಿಸುವುದೇ ದೊಡ್ಡ ಸವಾಲಾಗಿದೆ. ಒಂದೆಡೆ ತೆರಿಗೆ ಸಂಗ್ರಹಣೆ ಮೇಲೆ ಕವಿದಿರುವ ಆರ್ಥಿಕ ಹಿಂಜರಿತದ ಕಾಮೋಡ, ಮತ್ತೊಂದೆಡೆ ಸಾಲಮನ್ನಾದಂತಹ ಯೋಜನೆಗಳಿಗೆ ಹಣ ಮೀಸಲಿಟ್ಟಿರುವ ಕಾರಣದಿಂದ ಸಂಪನ್ಮೂಲದ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾರದ ಸಂದಿಗ್ಧತೆ ಸರ್ಕಾರವನ್ನು ಸಂಕಟಕ್ಕೆ ದೂಡಿದೆ. ಪರಿಣಾಮ ಕೇಂದ್ರ ಸರ್ಕಾರದ ಮೇಲೆಯೇ ಹೆಚ್ಚು ಅವಲಂಬಿತವಾಗಬೇಕಾದ ಸ್ಥಿತಿಗೆ ತಲುಪಿದೆ. ನೆರೆ ಸಂತ್ರಸ್ತರ ಪುನರ್ವಸತಿ ಕಲ್ಪಿಸುವುದಕ್ಕಾಗಿಯೇ ಸರ್ಕಾರಕ್ಕೆ 50 ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತ ಬೇಕಾಗಬಹುದೆಂಬ ಅಂದಾಜಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ ಒಟ್ಟಾರೆ 40 ಸಾವಿರ ಕೋಟಿ ರೂ. ನಷ್ಟವಾಗಿದೆ. ಆದರೆ ಈ ಮೊತ್ತ ನೆರೆ ಇಳಿದ ಬಳಿಕ ಇನ್ನಷ್ಟು ಹೆಚ್ಚಾದರೂ ಅಚ್ಚರಿಯಿಲ್ಲ.

ತೆರಿಗೆ ಸಂಗ್ರಹ ಕುಸಿತ: ರಾಜ್ಯದ ಬಜೆಟ್ ಗಾತ್ರ 2.34 ಲಕ್ಷ ಕೋಟಿ ರೂ.ಗಳಾಗಿದೆ. ರಾಜ್ಯದ ಸ್ವಂತ ತೆರಿಗೆಗಳ ಸಂಗ್ರಹ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಪ್ರಗತಿ ಕಡಿಮೆ ಇದೆ. ಜಿಎಸ್​ಟಿ ಸರಾಸರಿ ಪ್ರತಿ ತಿಂಗಳು 7000 ಕೋಟಿ ರೂ.ಗಳಿಗಿಂತ ಹೆಚ್ಚಾಗಿರಬೇಕು. ಆದರೆ 6250 ಕೋಟಿ ರೂ.ಗಳಷ್ಟೇ ಇದೆ. ಅಬ್ಕಾರಿಯಲ್ಲಿ ಜುಲೈ ಅಂತ್ಯಕ್ಕೆ ಸಂಗ್ರಹವಾಗಿರುವುದು 7411 ಕೋಟಿ ರೂ. ಮಾತ್ರ, ನೋಂದಣಿ ಮತ್ತು ಮುದ್ರಾಂಕದಲ್ಲಿ 3517.08 ಕೋಟಿ ರೂ.ಗಳು ಸಂಗ್ರಹಣೆ ನಡೆದಿದೆ. ವಾಹನಗಳ ನೋಂದಣಿ ಶೇ. 30ಕ್ಕೂ ಹೆಚ್ಚು ಕುಸಿತ ಕಂಡಿರುವುದರಿಂದ ಆ ವಲಯದಲ್ಲಿ ನಿರೀಕ್ಷಿತ ಪ್ರಗತಿ ಕಾಣಿಸುತ್ತಿಲ್ಲ. ತೆರಿಗೆಯೇತರ ಆದಾಯ ಸಹ ಕಡಿಮೆಯಾಗಿದೆ. ಇಡೀ ದೇಶವನ್ನು ಕಾಡುತ್ತಿರುವ ಆರ್ಥಿಕ ಹಿಂಜರಿತದ ಪರಿಣಾಮ ಇದು. ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳ ಪ್ರಕಾರವೇ ಆರ್ಥಿಕ ವರ್ಷದ ಉತ್ತರಾರ್ಧದ ಪರಿಸ್ಥಿತಿ ಭೀಕರವಾಗಿದೆ. ನೌಕರರ ವೇತನ, ಪಿಂಚಣಿ, ಸಾಲ ಮರುಪಾವತಿ, ಬಡ್ಡಿ ಮರುಪಾವತಿ, ಸಹಾಯಧನ ಆಧಾರಿತ ಯೋಜನೆಗಳಿಗೆ ಹಣ ಹೊಂದಾಣಿಕೆಯನ್ನು ಹಿಂಜರಿತದ ಪರಿಣಾಮದೊಂದಿಗೆ ಹೇಗೆ ಎದುರಿಸಬೇಕು ಎಂಬ ಚಿಂತೆ ಆವರಿಸಿದೆ.

ಕೊಟ್ಟಿಗೆಹಾರ ದಾಖಲೆ

ರಾಜ್ಯದ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿ ಗುರುತಿಸಿಕೊಂಡಿರುವ ಶಿವಮೊಗ್ಗ ಜಿಲ್ಲೆಯ ಹುಲಿಕಲ್ ಅನ್ನು ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಹಿಂದಿಕ್ಕಿದೆ. ಶನಿವಾರ ಒಂದೇ ದಿನ ಕೊಟ್ಟಿಗೆಹಾರದಲ್ಲಿ ಬರೋಬ್ಬರಿ 572 ಮಿ.ಮೀ ಮಳೆಯಾಗಿದೆ. ಇದು 56 ವರ್ಷದ ಬಳಿಕ ಒಂದು ದಿನದಲ್ಲಿ ಬಿದ್ದ ಅತಿ ಹೆಚ್ಚು ಮಳೆಯಾಗಿದೆ.

ಎಷ್ಟು ಮೊತ್ತ ಬೇಕು?

ಮನೆಗಳ ನಿರ್ಮಾಣಕ್ಕೆ ಸುಮಾರು 10 ಸಾವಿರ ಕೋಟಿ ರೂ. ಬೇಕಾಗುತ್ತದೆ. ಸರ್ಕಾರದ ಪರಿಹಾರದ ಮೊತ್ತವೇ ಪೂರ್ಣ ಹಾನಿಯಾಗಿರುವ ಮನೆಗೆ 5 ಲಕ್ಷ ಹಾಗೂ ಸ್ವಲ್ಪ ಹಾನಿಗೆ ಒಳಗಾದ ಮನೆಗೆ 1 ಲಕ್ಷ ರೂ.ಗಳಿದೆ. ರಸ್ತೆ ಮತ್ತು ಸೇತುವೆ ನಿರ್ವಣಕ್ಕೆ 8000 ಕೋಟಿ ರೂ.ಗೂ ಅಧಿಕ ಮೊತ್ತ ಬೇಕಾಗುತ್ತದೆ. ಬೆಳೆ ಹಾನಿ ಪರಿಹಾರಕ್ಕೆ 1000 ಕೋಟಿ ರೂ., ಗ್ರಾಮೀಣ ಭಾಗದ ಜಾಕ್​ವೆಲ್​ಗಳಲ್ಲಿ ಹೂಳು ತೆಗೆಯಲು ಹಾಗೂ ಗ್ರಾಮೀಣ ರಸ್ತೆಗಳ ನಿರ್ವಣಕ್ಕೆ 2000 ಕೋಟಿ ರೂ., ವಿದ್ಯುತ್ ಮಾರ್ಗ ದುರಸ್ತಿ, ಟ್ರಾನ್ಸ್​ಫಾರ್ಮರ್, ವಿದ್ಯುತ್ ಕಂಬಗಳಿಗೆ 500 ಕೋಟಿ ರೂ. ಬೇಕಾಗುತ್ತದೆ. ಶಾಲಾ ಕೊಠಡಿ, ನಾಲೆಗಳ ದುರಸ್ತಿಗೂ ಕೋಟ್ಯಂತರ ರೂ. ಬೇಕಾಗುತ್ತದೆ. ಅಂಕಪಟ್ಟಿಗಳನ್ನು ಪುನರ್ ಮುದ್ರಣ ಮಾಡಲು ಹತ್ತಾರು ಕೋಟಿ ರೂ.ಗಳು ಬೇಕಾಗುತ್ತದೆ. ಈ ಮೊತ್ತ ಇನ್ನೂ ಹೆಚ್ಚಾದರೂ ಆಶ್ಚರ್ಯವಿಲ್ಲವೆಂದು ಅಧಿಕಾರಿಗಳು ಹೇಳುತ್ತಾರೆ. ಈ ಮೊತ್ತದ ಶಾಶ್ವತ ಪುನರ್ವಸತಿಗಾದರೆ ತಾತ್ಕಾಲಿಕವಾಗಿ ಪರಿಹಾರ ನೀಡಲು ಸಹ ಹಣದ ಅಗತ್ಯವಿದೆ.

ಯಾವುದಕ್ಕೆ ಹಣ ಬೇಕು?

* ಬಿದ್ದುಹೋಗಿರುವ ಲಕ್ಷಾಂತರ ಮನೆಗಳ ಮರುನಿರ್ವಣ
* ಲಕ್ಷಾಂತರ ಹೆಕ್ಟೇರ್​ನಲ್ಲಾಗಿರುವ ಬೆಳೆ ನಾಶ
* ಸಾವಿರಾರು ಕಿ.ಮೀ ರಸ್ತೆ ದುರಸ್ತಿ, ನಾಲೆಗಳ ರಿಪೇರಿ
* ಶಾಲಾ ಕೊಠಡಿ ದುರಸ್ತಿ, ಸೇತುವೆಗಳ ಮರುನಿರ್ವಣ
* ಗುಡಿ, ಚರ್ಚ್, ಮಸೀದಿಗಳ ಮರುನಿರ್ವಣ,
* ಸಾವಿರಾರು ಗ್ರಾಮಗಳ ಸ್ಥಳಾಂತರ, ಸರ್ಕಾರಿ ಭೂಮಿ ಲಭ್ಯವಿಲ್ಲದಿದ್ದರೆ ಖಾಸಗಿಯಿಂದ ಮಾರುಕಟ್ಟೆ ಬೆಲೆ ನೀಡಿ ಖರೀದಿ ಮಾಡಬೇಕಾಗುತ್ತದೆ.

ಪ್ರತ್ಯೇಕ ಸಚಿವರೇ ಬೇಕು…!

ಪ್ರವಾಹ ಸಂತ್ರಸ್ತರ ಪುನರ್ವಸತಿ ಕಾರ್ಯಕ್ಕೆ ಮೂರು ವರ್ಷಕ್ಕೂ ಅಧಿಕ ಕಾಲ ಬೇಕಾಗುವ ಸಾಧ್ಯತೆ ಇರುವುದರಿಂದ ಇದಕ್ಕೆ ಪ್ರತ್ಯೇಕ ಸಚಿವರನ್ನು ನೇಮಕ ಮಾಡಿ, ಬೆಳಗಾವಿಯ ಸುವರ್ಣಸೌಧದಲ್ಲಿ ಅವರು ಕಾರ್ಯ ನಿರ್ವಹಿಸುವಂತೆ ಮಾಡಬೇಕು. ಪ್ರಾಮಾಣಿಕ ಅಧಿಕಾರಿಗಳ ತಂಡವನ್ನು ಅವರೊಂದಿಗೆ ನೇಮಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

ಹಾನಿಯ ಅಂದಾಜು

* 10 ಲಕ್ಷ ಹೆಕ್ಟೇರ್​ನಷ್ಟು ಭೂಮಿಯಲ್ಲಿ ಹಾನಿ
* 2 ಸಾವಿರ ಕಿ.ಮೀಗೂ ಹೆಚ್ಚು ರಸ್ತೆ ಹಾಳು
* 1 ಸಾವಿರ ಗ್ರಾಮಗಳ ಸ್ಥಳಾಂತರ ಅನಿವಾರ್ಯ
* 1 ಸಾವಿರ ಸೇತುವೆಗಳಿಗೆ ಹಾನಿ
* 50 ಸಾವಿರಕ್ಕೂ ಅಧಿಕ ವಿದ್ಯುತ್ ಕಂಬ ಧರೆಗೆ
* 4 ಸಾವಿರ ಕಿ.ಮೀ ವಿದ್ಯುತ್ ಮಾರ್ಗಕ್ಕೆ ಹಾನಿ
* 9 ಸಾವಿರಕ್ಕೂ ಅಧಿಕ ಟ್ರಾನ್ಸ್​ಫಾರ್ಮರ್​ಗಳು ಹಾಳು
* 1 ಸಾವಿರಕ್ಕೂ ಅಧಿಕ ಶಾಲಾ ಕೊಠಡಿಗಳ ದುರಸ್ತಿ ಸವಾಲು
* ಗ್ರಾಮ ಸ್ಥಳಾಂತರಕ್ಕೆ 1 ಲಕ್ಷ ಎಕರೆಗಿಂತ ಹೆಚ್ಚಿನ ಭೂಮಿ ಅವಶ್ಯ
* ದಾಖಲೆಗಳ ಚಿಂತೆ ಶುರು

ಪರಿಹಾರ ಪಡೆಯಬೇಕಾದರೆ ದಾಖಲೆಗಳನ್ನು ಒದಗಿಸುವುದು ಅನಿವಾರ್ಯ. ಆದರೆ ಅನೇಕ ಕಡೆ ದಾಖಲೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಮನೆ ಹಾನಿಗೆ ಮನೆಯ ಪೋಟೋ, ಬ್ಯಾಂಕ್ ಪಾಸ್​ಬುಕ್, ಆಧಾರ್ ಕಾರ್ಡ್, ಜಮೀನಿನ ದಾಖಲೆ ನೀಡಬೇಕಾಗುತ್ತದೆ. ಈ ದಾಖಲೆಗಳನ್ನು ಸಂತ್ರಸ್ತರಿಗೆ ಒದಗಿಸಿಕೊಡುವುದು ಸರ್ಕಾರಕ್ಕೆ ಸವಾಲಿನ ಕೆಲಸವಾಗುತ್ತದೆ.
ಕೃಪೆ:ವಿಜಯವಾಣಿ

ನೆರೆಪೀಡಿತರ ಬದುಕು ಕಟ್ಟುವುದೇ ಸವಾಲು: ಸರ್ಕಾರದ ಎದುರು ಸಮಸ್ಯೆಗಳ ಸಾಗರ
karnataka-floods-floods-effect-reports-flood-relief-flood-victims

website developers in mysore