ಬಿಜೆಪಿಯ ಸಚಿವರು, ಸಂಸದರಿಂದ ಶೂ, ಚಪ್ಪಲಿ ಧರಿಸಿಯೇ ಪೂಜೆ !

ಚಿಕ್ಕಬಳ್ಳಾಪುರ, 17 ನವೆಂಬರ್ 2020: ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಒಕ್ಕೂಟದ ನೂತನ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಚಿವರು, ಸಂಸದರು ಸೇರಿದಂತೆ ಅಧಿಕಾರಿಗಳೆಲ್ಲ ಶೂ, ಚಪ್ಪಲಿ ಧರಿಸಿಯೇ ಪಾಲ್ಗೊಂಡಿದ್ದು ವಿವಾದದ ಜತೆಗೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಚಿಕ್ಕಬಳ್ಳಾಪುರದ ಹಾರೋಬಂಡೆ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸಹಕಾರ ಇಲಾಖೆ ನಿವೇಶನದಲ್ಲಿ ನಡೆದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಸಂಸದ ಬಚ್ಚೇಗೌಡ, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹಾಗೂ ನಗರಾಭಿವೃದ್ಧಿ ಖಾತೆ ಸಚಿವ ಭೈರತಿ ಬಸವರಾಜ ಶೂ, ಚಪ್ಪಲಿ ಧರಿಸಿಯೇ ಪೂಜೆ ನೆರವೇರಿಸಿದರು.

ಸಂಸ್ಕೃತಿ, ಸಭ್ಯತೆ, ಶಿಸ್ತಿನ ಕುರಿತು ಮಾತನಾಡುವ ಬಿಜೆಪಿ ಪಕ್ಷದ ಸಚಿವರು, ಸಂಸದರೇ ಈ ರೀತಿ ಚಪ್ಪಲಿ ಧರಿಸಿ ಪೂಜೆ ಮಾಡಿದರೆ ಹೇಗೆ ? ಇದೇನಾ ಸಂಸ್ಕೃತಿ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್. ಲತಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಕೂಡ ಉಪಸ್ಥಿತರಿದ್ದರು.