‘’ಕರ್ನಾಟಕ – ಭಾರತ್‌ ಗೌರವ್‌ ಕಾಶಿ ದರ್ಶನ”: ಸಿದ್ದತೆ ಚುರುಕುಗೊಳಿಸಿ-ಸಚಿವೆ ಶಶಿಕಲಾ ಜೊಲ್ಲೆ ಸೂಚನೆ.

ಬೆಂಗಳೂರು ಅಕ್ಟೋಬರ್. 20,2022(www.justkannada.in):  ಅಕ್ಟೋಬರ್‌ 30 ರ ಒಳಗಾಗಿ ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿ “ಕರ್ನಾಟಕ – ಭಾರತ್‌ ಗೌರವ್‌ ಕಾಶಿ ದರ್ಶನ್‌” ರೈಲಿನ ಸಿದ್ದತೆಗಳನ್ನು ಪೂರ್ಣಗೊಳಿಸುವಂತೆ ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವೆ ಶಶಿಕಲಾ ಅ ಜೊಲ್ಲೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಇಂದು ಬೆಂಗಳೂರಿನ ವಿಕಾಸಸೌಧದಲ್ಲಿ ಐಆರ್‌ಸಿಟಿಸಿ, ಕೆಎಸ್‌ಟಿಡಿಸಿ ಮತ್ತು ರೈಲ್ವೇ ಅಧಿಕಾರಿಗಳು ಹಾಗೂ ಮುಜರಾಯಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಿದ್ದತೆಗಳನ್ನು ಚುರುಕುಗೊಳಿಸುವಂತೆ ಸೂಚನೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಭವ್ಯ ಕಾಶಿ – ದಿವ್ಯ ಕಾಶಿ ಯ ಭವ್ಯತೆಯನ್ನ ರಾಜ್ಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ನೋಡಿ ಆನಂದಿಸಬೇಕು ಎನ್ನುವ ಉದ್ದೇಶದಿಂದ ಈ ಬಾರಿಯ ಬಜೆಟ್‌ ನಲ್ಲಿ ರಿಯಾಯಿತಿ ದರದ ಪ್ಯಾಕೇಜ್‌ ಪ್ರವಾಸಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದರು. ಈ ಹಿನ್ನಲೆಯಲ್ಲಿ ಮಾನ್ಯ ಮುಜರಾಯಿ ಹಜ್‌ ಮತ್ತು ವಕ್ಫ್‌ ಸಚಿವರಾದ ಶಶಿಕಲಾ ಜೊಲ್ಲೆ ಅವರು ಮುತುವರ್ಜಿಯಿಂದ ಭಾರತ್‌ ಗೌರವ್‌ ಯೋಜನೆಯ ಅಡಿಯಲ್ಲಿ ವಿಶೇಷ ರೈಲನ್ನ ಸಿದ್ದಗೊಳಿಸಲಾಗಿದೆ. ಈ ಸಿದ್ದತೆಗಳು ಅಂತಿಮ ಹಂತಕ್ಕೆ ಬಂದಿದ್ದು, ಇನ್ನು ಕೆಲವೇ ದಿನಗಳಲ್ಲಿ ರೈಲು ಉದ್ಘಾಟನೆಗೆ ಸಿದ್ದವಾಗಲಿದೆ.

ಕೆಲವು ದಿನಗಳ ಹಿಂದೆ ಕೇಂದ್ರ ರೈಲ್ವೇ ಸಚಿವರನ್ನು ಭೇಟಿಯಾಗಿ ಈ ಮಹತ್ವಕಾಂಕ್ಷಿ ಯೋಜನೆ ಪ್ರಾರಂಭಕ್ಕೆ ಇದ್ದಂತಹ ಕೆಲವು ತಾಂತ್ರಿಕ ಸಮಸ್ಯೆಗಳ ಪರಿಹಾರಕ್ಕೆ ಮನವಿಯನ್ನು ಸಲ್ಲಿಸಲಾಗಿತ್ತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ರೈಲ್ವೇ ಇಲಾಖೆಯಿಂದ ಕೆಲಸಗಳಿಗೆ ಚುರುಕು ದೊರಕಿದೆ. ಇಂದು ಈ ಯೋಜನೆಗೆ ಸಂಬಂಧಿಸಿದಂತೆ ಎಲ್ಲಾ ಪ್ರಮುಖರೊಂದಿಗೆ ಸಭೆಯನ್ನು ನಡೆಸಿದ್ದೇನೆ. ಯೋಜನೆ ಸಿದ್ದಗೊಳಿಸುವ ನಿಟ್ಟಿನಲ್ಲಿ ಅಂತಿಮ ಸೂಚನೆಗಳನ್ನು ನೀಡಿದ್ದೇನೆ. ಅಲ್ಲದೇ, ಯೋಜನೆಗೆ “ಕರ್ನಾಟಕ ಭಾರತ್‌ ಗೌರವ್‌ ಕಾಶಿ ದರ್ಶನ” ಎಂದು ಹೆಸರನ್ನು ಅಂತಿಮಗೊಳಿಸಿದ್ದೇವೆ. ಅಕ್ಟೋಬರ್‌ 30 ರ ಒಳಗಾಗಿ ರೈಲು ಎಲ್ಲಾ ರೀತಿಯಲ್ಲೂ ಸಜ್ಜಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ. ಪ್ರತಿ ದಿನ ಈ ಯೋಜನೆಯ ಪ್ರಗತಿಯ ಬಗ್ಗೆ ವರದಿಯನ್ನು ತೆಗೆದುಕೊಳ್ಳುವುದಾಗಿ ಸಚಿವರು ಹೇಳಿದರು.

ಕೆಎಸ್‌ಟಿಡಿಸಿ ಹಾಗೂ ಐಆರ್‌ಸಿಟಿಸಿ ಯಿಂದ ಶೀಘ್ರದಲ್ಲೇ ಬುಕ್ಕಿಂಗ್‌:

“ಕರ್ನಾಟಕ ಭಾರತ್‌ ಗೌರವ್‌ ಕಾಶಿ ದರ್ಶನ” ರೈಲಿನಲ್ಲಿ ಯಾತ್ರೆಯನ್ನು ಕೈಗೊಳ್ಳಲು ಬುಕ್ಕಿಂಗ್‌ ನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. ಕೆಎಸ್‌ಟಿಡಿಸಿ ಹಾಗೂ ಐಆರ್‌ಸಿಟಿಸಿ ಸಂಸ್ಥೆಗಳು ಈ ಬಗ್ಗೆ ವೆಬ್‌ಸೈಟ್‌ ಹಾಗೂ ಇನ್ನಿತರೆ ಅಗತ್ಯ ವಿಷಯಗಳನ್ನು ಇನ್ನು ಕೆಲವೇ ದಿನಗಳಲ್ಲಿ ಪ್ರಕಟಿಸುವಂತೆ ಸಚಿವೆ ಶಶಿಕಲಾ ಜೊಲ್ಲೆ ಸೂಚನೆ ನೀಡಿದರು.

Key words: Karnataka – Bharat –Gaurav- Kashi –Darshan-Minister Shashikala Jolle