ಕಳಪೆ ಕಾಮಗಾರಿ, ಎಲ್ & ಟಿ ಗೆ ಬಿಸಿ ಮುಟ್ಟಿಸಿದ ಸಹಕಾರ ಸಚಿವ ಸೋಮಶೇಖರ್ .

 

ಬೆಂಗಳೂರು, ಮೇ 27, 2020 : (www.justkannada.in news ) ಎಲ್ & ಟಿ ವತಿಯಿಂದ ಕೈಗೊಂಡಿರುವ ಒಳಚರಂಡಿ ಕಾಮಗಾರಿಯ ಗುಣಮಟ್ಟ ಸರಿಯಾಗಿಲ್ಲ. ಹೀಗಿದ್ದರೂ ಅವರಿಂದಾದ ಕಾಮಗಾರಿಗಳಿಗೆ ಬಿಲ್ ಅನ್ನು ಹೇಗೆ ಪಾಸ್ ಮಾಡಲಾಗುತ್ತಿದೆ. ಸಮಸ್ಯೆಗಳಿಗೆ ಅವರು ಸ್ಪಂದಿಸದಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಿಬಿಎಂಪಿಗೆ ಸೇರ್ಪಡೆಗೊಂಡ 110 ಹಳ್ಳಿ ಪ್ರದೇಶಗಳಲ್ಲಿ ಹಾಲಿ ಪ್ರಗತಿಯಲ್ಲಿರುವ ಕಾವೇರಿ ಕುಡಿಯುವ ನೀರಿನ ಸಂಪರ್ಕ ಹಾಗೂ ಒಳಚರಂಡಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ ಮಾತನಾಡಿ, ಒಂದು ಕಾಲದಲ್ಲಿಎಲ್ & ಟಿ ಕಂಪನಿಯೆಂದರೆ ಒಳ್ಳೆಯ ಹೆಸರಿತ್ತು. ಈಗೇಕೆ ಕಾಮಗಾರಿಗಳ ಅನುಷ್ಠಾನದಲ್ಲಿ ಉದಾಸೀನ ತೋರಲಾಗುತ್ತಿದೆ. ಇಂಥವುಗಳನ್ನು ನಾನು ಸಹಿಸಲಾರೆ. ಕಾಮಗಾರಿಗಳ ತ್ವರಿತ ಅನುಷ್ಠಾನಕ್ಕೆ ಎರಡು ಇಲಾಖೆಗಳ ಇಂಜಿನಿಯರ್ ಗಳು ಸಮನ್ವಯ ಸಾಧಿಸಿ ಕೆಲಸ ನಿರ್ವಹಿಸಬೇಕು ಎಂದು ತಾಕೀತು ಮಾಡಿದರು.

ಮಣ್ಣು ಸಾಗಿಸದಿದ್ದರೆ ದಂಡ

110 ಹಳ್ಳಿ ವ್ಯಾಪ್ತಿಯಲ್ಲಿ ಎಲ್ & ಟಿ ವತಿಯಿಂದ ಕೈಗೊಂಡಿರುವ ಒಳಚರಂಡಿ ಕಾಮಗಾರಿಯ ಗುಣಮಟ್ಟ ಸರಿಯಾಗಿಲ್ಲ.ಬಿಬಿಎಂಪಿ ಸಹಾವಾಣಿಗೆ ಜನ ಕರೆ ಮಾಡಿ ಸಾಕಷ್ಟು ದೂರುಗಳನ್ನು ನೀಡುತ್ತಿದ್ದಾರೆ. ತಮಗೆ ಇದರಿಂದ ತೊಂದರೆಯಾಗುತ್ತಿದೆ. ಪರಿಹಾರ ನೀಡಿ ಎಂದು ಸಾರ್ವಜನಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ಒಳಚರಂಡಿ ಪೈಪ್ ಲೈನ್ ಕಾಮಗಾರಿ ಮುಗಿದ ನಂತರ ಒಂದು ಬಾರಿ ಮಣ್ಣು ಹಾಕಿ ಮತ್ತು ವಾರದ ಬಳಿಕ ಪುನಃ ಅದರ ಮೇಲೆ ಇನ್ನೊಂದು ಬಾರಿ ಮಣ್ಣು ಹಾಕಿ ಸಮತಟ್ಟು ಮಾಡಲಾಗುತ್ತದೆ. ಇಷ್ಟಾದರೂ ಅಲ್ಲಿ ಮಣ್ಣು ಉಳಿದಿರುತ್ತದೆ. ಆದರೆ, ಆ ಮಣ್ಣನ್ನು ತೆಗೆದುಕೊಂಡು ಬೇರೆಡೆ ಹಾಕುವ ಕೆಲಸವನ್ನು ಮಾಡದೇ ಅಲ್ಲಿಯೇ ಬಿಟ್ಟು ಹೋಗಲಾಗಿರುತ್ತದೆ. ಇದರಿಂದ ಸಾರ್ವಜನಿಕ ಸಂಚಾರಕ್ಕೆ ತೀವ್ರ ಸಮಸ್ಯೆಯಾಗುತ್ತಿದೆ. ಇನ್ನು ಮುಂದೆ ಕಾಮಗಾರಿ ನಡೆದು 15 ದಿನಗಳ ನಂತರ ಮಣ್ಣನ್ನು ಹೊತ್ತೊಯ್ಯದಿದ್ದರೆ ಎಲ್ & ಟಿ ಗುತ್ತಿಗೆದಾರರಿಗೆ 10 ಸಾವಿರ ರೂ. ದಂಡ ವಿಧಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಜಲಮಂಡಳಿ ಅಧ್ಯಕ್ಷರಾದ ತುಷಾರ್ ಗಿರಿನಾಥ್ ಸೂಚನೆ ನೀಡಿದರು.

 karnataka-bangalore-l and t-minister-somashekar-warns

ಅಮಾನತು ಮಾಡುವ ಎಚ್ಚರಿಕೆ

ಆರ್ ಸಿ ಚೇಂಬರ್ ಹಾಗೂ ಮ್ಯಾನ್ ಹೋಲ್ ಸರಿ ಮಾಡದೇ ಮುಂದಿನ ಒಳಚರಂಡಿ ಪೈಪ್ ಲೈನ್ ಅಳವಡಿಸುವ ಕೆಲಸಕ್ಕೆ ಅನುಮತಿ ಕೊಡಲೇಬಾರದು ಎಂದು ಸೂಚಿಸಿದಾಗ, ಎಲ್ & ಟಿ ಅವರಿಂದ ಯಾವುದೇ ಸಹಕಾರ ಸಿಗುತ್ತಿಲ್ಲ ಎಂದು ಇಂಜಿನಿಯರಿಂಗ್ ಆರೋಪಿಸಿದರು. ಎಲ್ & ಟಿ ಅವರು ಮಾತು ಕೇಳುತ್ತಿಲ್ಲ, ಸರಿಯಾಗಿ ಕೆಲಸ ಮಾಡಿಲ್ಲ ಎಂದರೆ ಅವರ ಬಿಲ್ ಅನ್ನು ಹೇಗೆ ಕ್ಲಿಯರ್ ಮಾಡಲಾಯಿತು. ಕೆಲಸ ಮಾಡಲು ಆಸಕ್ತಿ ಇಲ್ಲದಿದ್ದರೆ ಎಂಜಿನಿಯರ್ ಗಳನ್ನು ಬದಲಾಯಿಸುವುದಿಲ್ಲ. ಬದಲಾಗಿ ತನಿಖೆ ನಡೆಸಿ, ಎಲ್ & ಟಿ ಇಲ್ಲವೇ ಇಂಜಿನಿಯರ್ ಗಳಲ್ಲಿ ಯಾರದ್ದು ತಪ್ಪು ಎಂದು ತಿಳಿಯುತ್ತದೋ ಅಂಥವರನ್ನು ಅಮಾನತು ಮಾಡಲಾಗುವುದು ಎಂದು ತುಷಾರ್ ಗಿರಿನಾಥ್ ಎಚ್ಚರಿಸಿದರು.

ಆಗಿದ್ದು 35.70 ಕಿ.ಮೀ. ಮಾತ್ರ

110 ಹಳ್ಳಿ ವ್ಯಾಪ್ತಿಯಲ್ಲಿಯುಜಿಡಿ ವತಿಯಿಂದ 348.5 ಕಿ.ಮೀನಷ್ಟು ಕಾಮಗಾರಿಗಳಿಗೆ ಈಗಾಗಲೇ ಅನುಮತಿ ದೊರೆತಿದ್ದರೆ, ಅದರಲ್ಲಿ 181.1 ಕಿ.ಮೀ ನಷ್ಟು ಪೈಪ್ ಅಳವಡಿಕೆ ಮತ್ತು ಎಂಎಚ್ ಲೈಯಿಂಗ್ ಕಾಮಗಾರಿ ಪೂರ್ಣಗೊಂಡಿದೆ. ಇದರಲ್ಲಿ ಎಲ್ಲ ಹಂತಗಳೂ ಪೂರ್ಣಗೊಂಡು ರಸ್ತೆ ಡಾಂಬರೀಕರಿಸಲು ಸಿದ್ಧವಿರುವುದು ಕೇವಲ 35.70 ಕಿ.ಮೀ. ಮಾತ್ರ ಎಂಬ ಮಾಹಿತಿಯನ್ನು ಸಭೆಯಲ್ಲಿ ನೀಡಲಾಯಿತು.

2010ರಲ್ಲಿ ಕೆಎಂಆರ್ ಪಿಎಲ್ (KMRPL) ವತಿಯಿಂದ ಯಶವಂತಪುರ ವಿಧಾನಸೌಧ ಕ್ಷೇತ್ರದ ವ್ಯಾಪ್ತಿಯಲ್ಲಿ ಹಾದುಹೋಗಿರುವ ಸ್ಯಾನಿಟರಿ ಪೈಪ್ ಲೈನ್ ನಲ್ಲಿ ಶಿಲ್ಟಪ್ ಆಗಿ ಒಳಚರಂಡಿ ನೀರು ವಾಪಸ್ ಬಂದು ನಿಲ್ಲುತ್ತಿದೆ. ಆದ್ದರಿಂದ ಸಂಪೂರ್ಣವಾಗಿ ಲೈನ್ ಪರಿಶೀಲಿಸಿ ಶಿಲ್ಟ್ ತೆಗೆಯುವ ಕೆಲಸ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.

ಈಗಾಗಲೇ ಯುಜಿಡಿ ಪೈಪ್ ಲೈನ್ ಅಳವಡಿಸಿ ಮ್ಯಾನ್ ಹೋಲ್ ಚೇಂಬರ್ ಹಾಗೂ ರಿಸೀವಿಂಗ್ ಚೇಂಬರ್ ನಿರ್ಮಿಸಿರುವ ರಸ್ತೆಗಳನ್ನು ರಿಸ್ಟೋರೇಷನ್ ಗೊಳಿಸಲು ಬಿಬಿಎಂಪಿಯಿಂದ ಬಂದಿರುವ ಪ್ರಸ್ತಾವನೆಯಂತೆ ಜೂನ್ ಅಂತ್ಯಕ್ಕೆ 25 ಕಿ.ಮೀ.ಗೆ ಅನುದಾನ ನೀಡುವುದಾಗಿ ಜಲಮಂಡಳಿ ಅಧ್ಯಕ್ಷರಾದ ತುಷಾರ್ ಗಿರಿನಾಥ್ ಭರವಸೆ ನೀಡಿದರು.

ಬಿಬಿಎಂಪಿ ವತಿಯಿಂದ ಅನುದಾನ ಲಭ್ಯವಿರುವ ರಸ್ತೆಗಳ ಪಟ್ಟಿ ಕೊಟ್ಟರೆ ಈ ರಸ್ತೆಗಳಲ್ಲಿ ಪ್ರಾಮುಖ್ಯತೆ ಮೇರೆಗೆ ಯುಜಿಡಿ ಕಾಮಗಾರಿ ಕೈಗೊಳ್ಳಲಾಗುವುದು. ಸದ್ಯ ಬಿಬಿಎಂಪಿಗೆ ಜಲಮಂಡಳಿ ಕೆಲಸದಿಂದ ದುರಸ್ತಿಯಾಗಿರುವ ರಸ್ತೆಗಳ ಅಭಿವೃದ್ಧಿಗಳಿಗೆ ಕೇವಲ ಏಳೂವರೆ ಕೋಟಿ ರೂಪಾಯಿ ಅನುದಾನ ಮಾತ್ರ ನೀಡಲಾಗಿದ್ದು, ಬಾಕಿ ರಸ್ತೆ ಪುನರ್ ನಿರ್ಮಾಣ ಮಾಡಲು ತಕ್ಷಣ ಅವಕಾಶ ಕೊಡಿ ಎಂದು ಬಿಬಿಎಂಪಿ ಅಭಿಯಂತರರು ಕೋರಿದರು.

ಇನ್ನು ತ್ವರಿತ ಕಾಮಗಾರಿ ಭರವಸೆ

ಈಗಾಗಲೇ ಪ್ರಗತಿಯಲ್ಲಿರುವ ಯುಜಿಡಿ ಕಾಮಗಾರಿಯಲ್ಲಿ ಎಲ್ & ಟಿ ಅವರಿಂದ ರಿಸೀವಿಂಗ್ ಚೇಂಬರ್ ಪ್ರೋಗ್ರೆಸ್ ತುಂಬಾ ಕಡಿಮೆ ಇದ್ದು, ಇದರಿಂದ ಅಗೆದಿರುವ ರಸ್ತೆಗಳೆಲ್ಲ ಹಾಳಾಗಿರುವ ಕಾರಣ ಬಿಬಿಎಂಪಿ ಅನುದಾನದಲ್ಲಿ ರಸ್ತೆ ನಿರ್ಮಾಣಗೊಂಡರೆ, ಪುನಃ ಬಿಡಬ್ಲ್ಯುಎಸ್ ಎಸ್ ಬಿ ವತಿಯಿಂದ ಅಗೆಯುವ ಅವಕಾಶವಿದ್ದು, ರಸ್ತೆ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪಗಳು ಸಭೆಯಲ್ಲಿ ಕೇಳಿಬಂತು. ಸದ್ಯ ಕೋವಿಡ್ -19 ಸಮಸ್ಯೆಯಿಂದ ಕಾರ್ಮಿಕರು ಹೊರ ಹೋಗಿರುವ ಕಾರಣ ಮುಂದಿನ ದಿನಗಳಲ್ಲಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಎಲ್ & ಟಿ ಗುತ್ತಿಗೆದಾರರು ತಿಳಿಸಿದರು.

ಬನಶಂಕರಿ 6ನೇ ಹಂತದ 11ನೆ ಬ್ಲಾಕ್ ಗೆ ನೀರು ಪೂರೈಸಿ

ಬನಶಂಕರಿ 6ನೇ ಹಂತದ 11ನೆ ಬ್ಲಾಕ್ ಗೆ ಹೊಂದಿಕೊಂಡಿರುವ ಗಾಣಕಲ್ ಗ್ರಾಮಕ್ಕೆ ನೀರು ಪೂರೈಸಲು ಸಿದ್ಧವಿದ್ದು, ಇದರೊಂದಿಗೆ ಈ ಹಿಂದೆ ಬಿಡಿಎ ವತಿಯಿಂದಲೇ ಪೈಪ್ ಲೈನ್ ಅಳವಡಿಸಿರುವ ಬನಶಂಕರಿ 6ನೇ ಹಂತದ 11ನೇ ಬ್ಲಾಕ್ ಗೆ ಸಹ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಯಿತು.

ಕಾಮಗಾರಿ ಚುರುಕಿಗೆ ಆದೇಶ

ರಸ್ತೆಗಳು ಕಿರುದಾಗಿರುವ ಜಾಗದಲ್ಲಿ ಬ್ರಿಕ್ಸ್ ಮೆಷನರಿ ಚೇಂಬರ್ ಮಾಡಲು ವರ್ಕ್ ಆರ್ಡರ್ ನಲ್ಲಿರುವ ಷರತ್ತುಗಳನ್ನು ಸಡಿಲಗೊಳಿಸಿ ಅನುಮತಿ ಕೊಡಲಾಗಿದ್ದರೂ ಎಲ್ & ಟಿ ಅವರಿಂದ ಸರಿಯಾಗಿ ಸ್ಪಂದನೆ ಸಿಗದ ಕಾರಣ, ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಇನ್ನು ಮುಂದೆ ಎಲ್ಲವೂ ಚುರುಕುಗೊಳ್ಳಬೇಕು ಎಂದು ಸೂಚಿಸಲಾಯಿತು.

ಯುಜಿಡಿ ಯಿಂದ ರಿಸೀವಿಂಗ್ ಚೇಂಬರ್ಸ್ ಅನ್ನು ರಸ್ತೆಗಿಂತ ಮೇಲ್ಮಟ್ಟದಲ್ಲಿ ನಿರ್ಮಿಸುತ್ತಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಮನೆ ಸಂಪರ್ಕ ಸಮಯದಲ್ಲಿ ಒಳಚರಂಡಿ ನೀರು ಸುಗಮವಾಗಿ ಹರಿಯದೇ ಮನೆಯೊಳಗೆ ನುಗ್ಗಬಹುದಾಗಿದ್ದು, ಅವೈಜ್ಞಾನಿಕವಾಗಿ ಪ್ಲಾನ್ ಮಾಡಕೂಡದು. ಹೀಗೆ ರಿಸೀವಿಂಗ್ ಚೇಂಬರ್ ನಿರ್ಮಿಸುವಾಗ ಸಂಬಂಧಪಟ್ಟ ಎಲ್ಲ ಇಲಾಖೆಗಳ ಗಮನಕ್ಕೆ ತಂದು ಅನುಷ್ಠಾನ ಮಾಡಬೇಕು. ಮುಂದೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ತುಷಾರ್ ಗಿರಿನಾಥ್ ಸೂಚನೆ ನೀಡಿದರು.

ಸಿಎಂಸಿ ಟಿಎಂಸಿ ಭಾಗದಿಂದ ಬಿಬಿಎಂಪಿಗೆ ಸೇರ್ಪಡೆಗೊಂಡಿರುವ ಪ್ರದೇಶಗಳಿಗೆ ನೀರು ಹಂಚಿಕೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಹೆಮ್ಮಿಗೆಪುರ ವಾರ್ಡ್ ಗೆ ನೀರಿನ ಫೋರ್ಸ್ ಇರಿವುದಿಲ್ಲ ಎಂಬ ಆರೋಪದ ಬಗ್ಗೆ ಸಭೆಯ ಗಮನಕ್ಕೆ ಬಂದಾಗ, ರಭಸದಿಂದ ನೀರು ಹರಿಸಲು ಬೇಕಾದ ಕ್ರಮ ವಹಿಸಬೇಕು. ತಾಂತ್ರಿಕ ಅಡಚಣೆಗಳಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಬಗೆಹರಿಸಬೇಕು ಎಂದು ಸೂಚನೆ ನೀಡಲಾಯಿತು.

key words : karnataka-bangalore-l and t-minister-somashekar-warns