ಪ್ರಧಾನಿ ಮೌನವಾಗಿದ್ದಾರೆ ಎಂದಾಕ್ಷಣ ಬಿಟ್ ಕಾಯಿನ್ ಹಗರಣ ಮುಚ್ಚಿ ಹಾಕುತ್ತಾರೆ ಎಂದರ್ಥವಲ್ಲ : ಎಚ್ಡಿಕೆ

 

ಬೆಂಗಳೂರು, ನ.13, 2021 : (www.justkannada.in news ) ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡದೇ ಇದ್ದಿದ್ದರೆ ಬಹುಶಃ ಬಿಟ್ ಕಾಯಿನ್ ಹಗರಣ ಬೆಳಕಿಗೆ ಬರುತ್ತಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಜನತಾ ಪರ್ವ 1.O ಎರಡನೇ ಹಂತದ ಕಾರ್ಯಗಾರ ‘ಜನತಾ ಸಂಗಮ’ದ ವೇಳೆ ಇಂದು ಮಾಧ್ಯಮ ಗೋಷ್ಠಿಯಲ್ಲಿ ಅವರು ಮಾತನಾಡಿ ಹೇಳಿದಿಷ್ಟು…

ನರೇಂದ್ರ ಮೋದಿ ಅವರು ಮೌನವಾಗಿದ್ದಾರೆ ಎಂದರೆ ಹಗರಣವನ್ನು ಮುಚ್ಚಿಹಾಕಲು ಹೊರಟಿದ್ದಾರೆ ಅಂತ ಹೇಳುವುದಕ್ಕೆ ಆಗುವುದಿಲ್ಲ. ಅಮೆರಿಕದಲ್ಲಿ ಅವರಿಗೆ ಆಗಿರುವ ಮುಜುಗರವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಅಮೆರಿಕದಲ್ಲಿ ಪ್ರಧಾನಿ ಅವರಿಗೆ ಕೆಲ ತನಿಖಾ ಸಂಸ್ಥೆಗಳ ಮುಖ್ಯಸ್ಥರು ಬಿಟ್ ಕಾಯಿನ್ ಹಗರಣದ ವಿವರ ನೀಡಿದ್ದಾರೆ. ಅಲ್ಲಿ ಅವರಿಗೆ ಕಸಿವಿಸಿ ಆಗಿರುವುದು ನಿಜ. ಹೀಗಾಗಿ ಪ್ರಧಾನಿ ಅವರು ಮೌನವಾಗಿದ್ದರೂ ಇಡೀ ಹಗರಣವನ್ನು ಸೂಕ್ಷ್ಮವಾಗಿ ಗಮನಿಸ್ತಿದ್ದಾರೆ.

ಬಿಟ್ ಕಾಯನ್ ಪ್ರಕರಣ ಕಳೆದ 15 ದಿನಗಳಿಂದ ಸದ್ದು ಮಾಡುತ್ತಿದೆ. ಸಾರ್ವಜನಿಕವಾಗಿ ಆರೋಪ ಪ್ರತ್ಯಾರೋಪ ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ನಡೆಯುತ್ತಿರುವುದನ್ನು ಗಮನಿಸುತ್ತಿದ್ದೇನೆ. ಸೂಕ್ಷ್ಮ ವಿಚಾರಗಳ ಬಗ್ಗೆ ಜವಾಬ್ದಾರಿಯುತವಾಗಿ ಮಾತನಾಡದಂತೆ ನಾಯಕರಿಗೆ ಹೇಳಲು ಬಯಸುತ್ತೇನೆ. ನಾನು ಹಾಗೆ ಮಾತನಾಡಲು ಬಯಸುವುದಿಲ್ಲ.

58,000 ಕೋಟಿ ರೂ. ಅವ್ಯವಹಾರ ಆಗಿದೆ ಅಂತ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದೆ. ನನ್ನಲ್ಲಿ ಇರುವ ಮಾಹಿತಿ ಪ್ರಕಾರ ಶ್ರೀಕಿ ಎಂಬ ಯುವಕನನ್ನು ಎಂಟರಿಂದ ಹತ್ತು ಬಾರಿ ಬಂಧನ ಮಾಡಲಾಗಿದೆ. 2020ರ ನವೆಂಬರ್ ನಿಂದ ಎಂಟ್ಹತ್ತು ಬಾರಿ ಪೊಲೀಸರು ಕರೆದುಕೊಂಡು ಅರೆಸ್ಟ್ ಮಾಡಿ ಬಿಡುಗಡೆ ಮಾಡಿದ್ದು ಆಗಿದೆ. ಇನ್ನು ಹದಿನೈದು ದಿನ ಸಮಯ ಕೊಡಿ, ಈ ಹಗರಣದ ಬಗ್ಗೆ ನಾನೇ ಪೂರ್ಣ ಮಾಹಿತಿ ಕೊಡುತ್ತೇನೆ ಎಂದರು ಹೆಚ್ ಡಿಕೆ.

ಕಾಂಗ್ರೆಸ್ ತನಿಖೆ ಹಾದಿ ತಪ್ಪಿಸುವುದು ಬೇಡ:

ನಾನು ಈಗಾಗಲೇ ಜನಧನ್ ಖಾತೆಗಳಿಂದ ಹಣ ಎತ್ತಿರುವುದನ್ನು ಕೂಡ ಹೇಳಿದ್ದೇನೆ. ಈ ಬಗ್ಗೆ ಕೂಡ ಕೇಂದ್ರ ಗಂಭೀರವಾಗಿದೆ ಎನ್ನುವುದು ನನ್ನ ಭಾವನೆ. ಸುಖಾಸುಮ್ಮನೆ ಕಾಂಗ್ರೆಸ್ ನಾಯಕರು ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಆ ತನಿಖೆಯ ಹಾದಿ ತಪ್ಪಿಸುವುದು ಬೇಡ. ಅದಕ್ಕೆ ಅವರು ಕಾರಣರಾಗುವುದು ಬೇಡ ಎಂದು ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರಿಗೆ ಕಿವಿಮಾತು ಹೇಳಿದರು.

ಬಿಜೆಪಿಗೆ ತಿರುಗೇಟು :

ಕಾಂಗ್ರೆಸ್ ಪಕ್ಷದ್ದು ಓಲೈಕೆ ರಾಜಕಾರಣ, ಜೆಡಿಎಸ್ ಪಕ್ಷದ್ದು ಕುಟುಂಬ ರಾಜಕಾರಣ ಎಂದು ಬಿಜೆಪಿ ಮಾಡಿರುವ ಟ್ವೀಟ್ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಖಾರವಾಗಿ ಪ್ರತಿಕ್ರಿಯಿಸಿದರು.
ನಮ್ಮ ಪಕ್ಷದ್ದು ಕುಟುಂಬ ರಾಜಕಾರಣವಾದರೆ ಬಿಜೆಪಿಯವರದ್ದು ಯಾವ ರಾಜಕಾರಣ? ಶಾಸಕ ಅಪ್ಪಚ್ಚು ರಂಜನ್ ಸಹೋದರ ಎಂಎಲ್ಸಿ, ಜಗದೀಶ್ ಶೆಟ್ಟರ್ ತಮ್ಮ ಕೂಡ ಎಂಎಲ್ಸಿ, ಉದಾಸಿ ಕುಟುಂಬದ ಕಥೆ ಏನು? ಕುಟುಂಬ ರಾಜಕಾರಣ ಅಲ್ಲಿಯೂ ಇಲ್ಲವೇ? ಎಂದು ಅವರು ತೀಕ್ಷ್ಣವಾಗಿ ಪ್ರಶ್ನೆ ಮಾಡಿದರು.

key words : Karnataka-Bangalore-jds-kumaraswamy-hdk-bit.coin-bjp-modi