ಸಿಎಂ ಹೆಚ್,ಡಿ ಕುಮಾರಸ್ವಾಮಿ ಗ್ರಾಮವಾಸ್ತವ್ಯಕ್ಕೆ ಕರೇಗುಡ್ಡ ಗ್ರಾಮ ಸಜ್ಜು: ಸಿದ್ಧತೆ ಪರಿಶೀಲಿಸಿದ ಸಚಿವ ವೆಂಕಟರಾವ್ ನಾಡಗೌಡ

ಮಾನ್ವಿ,ಜೂ,25,2019(www.justkannada.in): ಮಾನ್ವಿ ತಾಲೂಕಿನ ಕರೇಗುಡ್ಡದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜೂ.26ರಂದು(ಬುಧವಾರ) ಗ್ರಾಮವಾಸ್ತವ್ಯ ಮಾಡುತ್ತಿರುವ ಹಿನ್ನೆಲೆ ಜನರ ಅಹವಾಲು ಸ್ವೀಕರಿಸುವ ಜನತಾದರ್ಶನದ ಬೃಹತ್ ವೇದಿಕೆ ಹಾಗೂ ಸಿಎಂ ವಾಸ್ತವ್ಯ ಮಾಡಲಿರುವ ಶಾಲೆ, ಪಾರ್ಕಿಂಗ್, ವಿವಿಧ ಮಳಿಗೆಗಳು ಸೇರಿದಂತೆ ನಡೆದಿರುವ ಸಿದ್ದತೆಗಳನ್ನು ಪಶುಸಂಗೋಪನಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ ನಾಡಗೌಡ ಅವರು ಮಂಗಳವಾರ ಪರಿಶೀಲನೆ ನಡೆಸಿದರು.

ಬೃಹತ್ ವೇದಿಕೆ ಹಾಗೂ ವಿವಿಧೆಡೆಯಿಂದ ಆಗಮಿಸುವ ಜನರಿಗೆ ಕುಳಿತುಕೊಳ್ಳಲು ಕುರ್ಚಿ ವ್ಯವಸ್ಥೆ, ಪಾರ್ಕಿಂಗ್ ಹಾಗೂ ಇನ್ನೀತರ ವ್ಯವಸ್ಥೆಗಳನ್ನು ಪರಿಶೀಲಿಸಿದ ಸಚಿವ ನಾಡಗೌಡ ಅವರು ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಇವರಿಗೆ ಸ್ಥಳೀಯ ಶಾಸಕ ರಾಜವೆಂಕಟಪ್ಪ ನಾಯಕ್ ಹಾಗೂ ಇನ್ನೀತರ ಮುಖಂಡರು ಸಾಥ್ ನೀಡಿದರು.

ಇದೇ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು ತುಂಗಭದ್ರಾ ಜಲಾಶಯದ ಎಡದಂಡೆ ನಾಲೆಯ ಸಮಸ್ಯೆ ಕುರಿತು ಬೆಂಗಳೂರಿಗೆ ಹೋಗಿ ಎಲ್ಲರನ್ನು ಕರೆದು ಐಸಿಸಿ ಸಮಿತಿ ಸಭೆ ಕರೆದು 31 ಟಿಎಂಸಿ ಹೂಳೆತ್ತುವುದರ, ಸಮಾನಾಂತರ ಜಲಾಶಯ ಮತ್ತು ನದಿ ಜೋಡಣೆ ಕುರಿತು ಚರ್ಚೆಯಾಗಿದೆ. ನವಲಿ ಬಳಿ ಸಮಾನಂತರ ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಿಪಿಎಆರ್ ಮಾಡಿ ಬೋರ್ಡಗೆ ನೀಡಲಾಗುವುದು. ಉಭಯ ರಾಜ್ಯಗಳೊಂದಿಗೆ ಚರ್ಚಿಸಿ ಇದೇ ವರ್ಷವೇ ಕಾಮಗಾರಿ ಆರಂಭಿಸಲಾಗುವುದು ಎಂದರು.

ರಾಯಚೂರು ವಿವಿಗೆ ಸಂಬಂಧಿಸಿದಂತೆ ರಾಜ್ಯಪಾಲರನ್ನು ಭೇಟಿಯಾಗಿ ಇದರ ತುರ್ತು ವಿವರಿಸಿ ಮನವಿ ಪತ್ರ ಸಲ್ಲಿಸಿ ಕಾರ್ಯಾರಂಭಕ್ಕೆ ಕ್ರಮವಹಿಸಲಾಗುವುದು. ಮಾನ್ವಿಗೆ ಮಿನಿವಿಧಾನಸೌಧ, ರಿಂಗ್ ರೋಡ್ ನಿರ್ಮಾಣ, ರಾಯಚೂರು ಐಐಟಿ, ಮಾನ್ವಿ ಕ್ರೀಡಾಂಗಣ ನಿರ್ಮಾಣ ಸೇರಿದಂತೆ ಬಹುತೇಕ ಬೇಡಿಕೆಗಳನ್ನು ಮುಖ್ಯಮಂತ್ರಿಗಳು ಈಡೇರಿಸಲಿದ್ದಾರೆ ಎಂದರು.

ಬಿಜೆಪಿಯವರು 25ಸಾವಿರ ಜನರೊಂದಿಗೆ ಜನತಾದರ್ಶನ ವೇದಿಕೆ ಎದುರುಗಡೆಯೇ ಪ್ರತಿಭಟನೆ ಮಾಡುವುದಾಗಿ ತಿಳಿಸಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವ ನಾಡಗೌಡ ಅವರು ಅದನ್ನು ಪೊಲೀಸ್ ಇಲಾಖೆ ನೋಡಿಕೊಳ್ಳುತ್ತದೆ. ಸಿಎಂ ಬಂದ ಸಂಧರ್ಭದಲ್ಲಿ ಯಾವ ರೀತಿ ಭದ್ರತಾ ವ್ಯವಸ್ಥೆ ಮಾಡಬೇಕು ಎಂಬುದನ್ನು ಎಂದು ಹೇಳಿದರು.

ಗಲಾಟೆ ಮಾಡಿದರೇ ಕೆಲಸ ಮಾಡುತ್ತಾರೆ ಎಂಬುದು ತಪ್ಪು ಕಲ್ಪನೆ. ಅವರು ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದರು.25-30 ಸ್ವಾಮೀಜಿಗಳು ನೀರಾವರಿ ವಿಷಯ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳ ಸಮಯ ಕೇಳಿದ್ದು, ಅವರಿಗೆ ಸಂಜೆ 6ರ ನಂತರ ಸಮಯ ನೀಡಲಾಗುವುದು ಎಂದು ತಿಳಿಸಿದರು.

Key words: Karegudda -village -CM H, D Kumaraswamy- Gramavastavya.