ಕಣ್ಣೂರಿನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ರೈಲಿನ ಮೇಲೆ ಬಂಡೆಗಳು ಉರುಳಿ ಹಳಿ ತಪ್ಪಿದ 5 ಬೋಗಿಗಳು

ಬೆಂಗಳೂರು, ನವೆಂಬರ್ 12, 2021 (www.justkannada.in): ಇಂದು ಮುಂಜಾನೆ 3.50ಕ್ಕೆ ಕಣ್ಣೂರಿನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಂತಹ ರೈಲಿನ ಮೇಲೆ ದೊಡ್ಡ ಗಾತ್ರದ ಬಂಡೆಗಳು ಉರುಳಿ ಬಿದ್ದ ಕಾರಣದಿಂದಾಗಿ ಐದು ಬೋಗಿಗಳು ಹಳಿ ತಪ್ಪಿದೆ. ಈ ಘಟನೆ ಬೆಂಗಳೂರು-ಸೇಲಂ ವಿಭಾಗದಡಿ ಬರುವ ತಪ್ಪೂರು-ಶಿವದಿ ಮಾರ್ಗದಲ್ಲಿ ನಡೆದಿದೆ.

ರೈಲ್ವೆ ಮೂಲಗಳ ಪ್ರಕಾರ ಈ ರೈಲು (ಸಂಖ್ಯೆ ೦೭೩೯೦) ಕಣ್ಣೂರಿನಿಂದ ನಿನ್ನೆ ಅಂದರೆ ನವೆಂಬರ್ ೧೧, ೨೦೨೧ರಂದು ಸಂಜೆ ೬.೦೫ಕ್ಕೆ ಹೊರಟಿತ್ತು.

ವಿಭಾಗೀಯ ತಂಡದ ಹಿರಿಯ ಅಧಿಕಾರಿಗಳೊಂದಿಗೆ ಬೆಂಗಳೂರಿನ ಡಿವಿಷನಲ್ ರೈಲ್ವೆ ಮ್ಯಾನೇಜರ್ ಶ್ರೀ ಶ್ಯಾಂ ಸಿಂಗ್ ಅವರು ಅಪಘಾತ ಪರಿಹಾರ ರೈಲಿನಲ್ಲಿ (ಎಆರ್‌ಟಿ) ಹಾಗೂ ವೈದ್ಯಕೀಯ ಉಪಕರಣಗಳ ಬೋಗಿಯೊಂದಿಗೆ ೪.೪೫ರ ಸುಮಾರಿಗೆ ಸ್ಥಳಕ್ಕೆ ದೌಡಾಯಿಸಿದ್ದಾರೆ. ಆ ಕಡೆಯಿಂದ, ಅಂದರೆ ಸೇಲಂನ ಡಿವಿಷನಲ್ ರೈಲ್ವೆ ಮ್ಯಾನೇಜರ್ ಅವರೂ ಸಹ ಎಆರ್‌ಟಿ ಜೊತೆ ಈರೋಡ್‌ನಿಂದ ಬೆಳಿಗ್ಗೆ ೫.೩೦ಕ್ಕೆ ಹೊರಟಿದ್ದಾರೆ ಎನ್ನಲಾಗಿದೆ.

ಆದಾಗ್ಯೂ, ಎಲ್ಲಾ ೨,೩೪೮ ಪ್ರಯಾಣಿಕರು ಸುರಕ್ಷಿತವಾಗಿದ್ದು, ಯಾವುದೇ ಗಾಯಾಳುಗಳಾಗಲೀ, ಸಾವು ನೋವಾಗಲಿ ಸಂಭವಿಸಿಲ್ಲ ಎಂದು ತಿಳಿಸಲಾಗಿದೆ.

ಹಿಂಭಾಗದಲ್ಲಿದ್ದಂತಹ, ಹಳಿ ತಪ್ಪದೇ ಉಳಿದುಕೊಂಡಿದ್ದಂತಹ ಆರು ಬೋಗಿಗಳು ಹಾಗೂ ಎಸ್‌ಎಲ್‌ಆರ್ ಅನ್ನು ಪ್ರಯಾಣಿಕರ ಜೊತೆಗೆ ತೊಪ್ಪೂರು ಮೂಲಕ ಸೇಲಂ ಕಡೆಗೆ ಕಳುಹಿಸಿಕೊಡಲಾಗಿದೆ. ಈ ಬೋಗಿಗಳು ತೊಪ್ಪೂರಿನಲ್ಲಿ ನಿಲ್ಲಿಸಲಾಗುತ್ತದೆ. ಅಲ್ಲಿಂದ ಪ್ರಯಾಣಿಕರನ್ನು ಕರೆದೊಯ್ಯಲು ೧೫ ಬಸ್ಸುಗಳ ವ್ಯವಸ್ಥೆ ಮಾಡಲಾಗಿದ್ದು, ಅಪಘಾತ ಸಂಭವಿಸಿರುವ ಸ್ಥಳದಲ್ಲಿ ೫ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.

ಹೆಚ್ಚಿನ ವಿವರಗಳಿಗಾಗಿ ಸಹಾಯವಾಣಿ ಸಂಖ್ಯೆ ೦೪೩೪೪-೨೨೨೬೦೩ (ಹೊಸೂರು), ೦೮೦-೨೨೧೫೬೫೫೪ (ಬೆಂಗಳೂರು) ಹಾಗೂ ೦೪೩೪೨-೨೩೨೧೧೧ (ಧರ್ಮಪುರಿ)ಗೆ ಸಂಪರ್ಕಿಸಬಹುದು ಎಂದು ಮೂಲಗಳಿ ತಿಳಿಸಿವೆ.

ರೈಲುಗಳ ಓಡಾಟದ ಸಮಯದಲ್ಲಿ ವ್ಯತ್ಯಯ.

ಕಣ್ಣೂರು-ಬೆಂಗಳೂರು ಎಕ್ಸ್ಪ್ರೆಸ್ ರೈಲು ತೊಪ್ಪೂರು-ಶಿವದಿ (ಬೆಂಗಳೂರು- ಸೇಲಂ ಮಾರ್ಗ) ನಡುವೆ ಹಳಿ ತಪ್ಪಿರುವ ಕಾರಣದಿಂದಾಗಿ ಈ ಕೆಳಕಂಡ ಮಾರ್ಗಗಳಲ್ಲಿ ಸಂಚರಿಸುವ ಮಾರ್ಗವನ್ನು ಬದಲಾಯಿಸಲಾಗಿದೆ:
೧. ಬೆಳಿಗ್ಗೆ ೬:೧೦ಕ್ಕೆ ಹೊರಡುವ ಕೆಎಸ್‌ಆರ್‌ನಿಂದ ಹೊರಡುವ ಬೆಂಗಳೂರು- ಎರ್ನಾಕುಲಂ ರೈಲು (ಸಂಖ್ಯೆ ೦೨೬೭೭) ಬೈಯ್ಯಪ್ಪನಹಳ್ಳಿ, ಬಂಗಾರಪೇಟೆ ಹಾಗೂ ತಿರುಪಟ್ಟೂರು ಮಾರ್ಗವಾಗಿ ತೆರಳಲಿದೆ.
೨. ಬೆಳಿಗ್ಗೆ ೯:೧೦ಕ್ಕೆ ಬೆಂಗಳೂರಿಗೆ ಆಗಮಿಸುವಂತಹ ನಾಗರ್‌ಕೋಯಿಲ್ ಜಂಖ್ಷನ್-ಬೆAಗಳೂರು ಕೆಎಸ್‌ಆರ್ (ಸಂಖ್ಯೆ ೦೭೨೩೬) ಸೇಲಂ, ತಿರುಪಟ್ಟೂರು, ಬಂಗಾರಪೇಟೆ ಮಾರ್ಗವಾಗಿ ಬೆಂಗಳೂರಿನ ಕೆಂಪೇಗೌಡ ರೈಲು ನಿಲ್ದಾಣಕ್ಕೆ ಆಗಮಿಸಲಿದೆ.

Key words: Kannur to Bangalore-train – 5 bogies- Hill collapse