ಜಿ.ಎನ್.ಮೋಹನ್ ಕ್ವಾರಂಟೈನ್ ಮೆಲುಕು : ಏನೆಲ್ಲಾ ಕಥೆ ಇದೆ ಈ ಜೆರ್ಸಿ ನಂಬರ್ ಗಳಲ್ಲಿ

ಬೆಂಗಳೂರು, ಮೇ 19, 2020 :

7 ಈಗ 18 ಕ್ಕೆ ದಾರಿ ಮಾಡಿಕೊಟ್ಟಿದೆ
7 ಸಾಧಿಸಿದ ದಿಗ್ವಿಜಯ ಇನ್ನಿಲ್ಲದ್ದು
18 ಸಹಾ ಇನ್ನು ಮುಂದೆ ಅಂತಹದೇ ದಿಗ್ವಿಜಯ ಸಾಧಿಸುತ್ತದೆ ಅನ್ನುವುದು ಎಲ್ಲರ ನಿರೀಕ್ಷೆ
ಇದು ಸುಳ್ಳಾಗುವುದಿಲ್ಲ ಎನ್ನುವುದನ್ನು 18 ಈಗಾಗಲೇ ಸಾಬೀತು ಪಡಿಸಿದೆ.
ಎದುರಿಗೆ ಎಂತ ದೇಶವಾದರೂ ಇರಲಿ ಅವರನ್ನು ಕಟ್ಟಿ ಹಾಕಿ, ಅವರನ್ನು ಮಣಿಸಿ ಜಯದ ನಗು ಚೆಲ್ಲಿದೆ
7 ಎನ್ನುವುದು ಶಾಂತ ಸಮುದ್ರವಾದರೆ, 18 ಅಬ್ಬರ- ಆರ್ಭಟದ ಸಮುದ್ರ
ಏನಿದು, ಏನಿದೇನಿದು??
ಎನ್ನುತ್ತೀರಾ
ಇದು ಸಂಖ್ಯಾಶಾಸ್ತ್ರದ ಕಾಲ. ಹಾಗಾಗಿ ನಾನೂ ಅಂಕಿ ಸಂಖ್ಯೆಯ ಬೆನ್ನಟ್ಟಿ ಹೋಗಿದ್ದೇನೆ ಎಂದು ಷರಾ ಬರೆದಿರಾ..?
ಒಂದು ನಿಮಿಷ ತಾಳಿ
ಒಂದು ಪುಟ್ಟ ಕ್ಲೂ ಕೊಡುತ್ತೇನೆ
7 ಎನ್ನುವುದನ್ನು ಮಹೇಂದ್ರ ಸಿಂಗ್ ಧೋನಿ, 18 ಎನ್ನುವುದನ್ನು ವಿರಾಟ್ ಕೊಹ್ಲಿ ಎಂದು ಓದಿಕೊಳ್ಳಿ
ಆಹಾ! ಎಲ್ಲಾ ಅರ್ಥವಾಯಿತು ಅಂದಿರಾ..?
ಆಗಿರಬಹುದು, ಆದರೆ ಅರ್ಥ ಆಗದಿರುವ ಸಂಗತಿ ಇನ್ನೂ ಇದೆ.
ಮಹೇಂದ್ರ ಸಿಂಗ್ ಧೋನಿಗೆ ನಾನೇಕೆ 7 ಎಂದೂ, ವಿರಾಟ್ ಕೊಹ್ಲಿಯನ್ನು 18 ಎಂದೇ ಗುರುತಿಸಿದ್ದು ಏಕೆ?
ನೀವು ಸದಾ ಕ್ರಿಕೆಟ್ ಅನ್ನೇ ಉಸಿರಾಡಿದ್ದರೆ, ಅದೇ ನಿಮ್ಮ ದೇವರಾಗಿದ್ದರೆ, ಖಂಡಿತಾ ಉತ್ತರ ನಿಮಗೆ ನೀರು ಕುಡಿದಷ್ಟೇ ಸುಲಭ.
7 ಧೋನಿಯ ಜೆರ್ಸಿ ಸಂಖ್ಯೆಯಾದರೆ, 18 ವಿರಾಟ್ ಕೊಹ್ಲಿಯ ಜೆರ್ಸಿ ಸಂಖ್ಯೆ
ಜೆರ್ಸಿ ಅಂದರೆ ಮತ್ತೆ ಇದೇನೋ ಅಂತ ಹುಬ್ಬೇರಿಸುತ್ತಾ ಕೂರುವುದು ಬೇಡ. ಸಿಂಪಲ್ಲಾಗಿ ಹೇಳಬೇಕೆಂದರೆ ಮೈದಾನದಲ್ಲಿ ಆಟಗಾರರು ಧರಿಸುವ ಮೇಲಂಗಿ ಅಷ್ಟೇ

 

kannada-media-journalistg.n.mohan-story
ಇದ್ಯಾವಾಗ ನೀವು ಈ ಸಂಖ್ಯಾ ಶಾಸ್ತ್ರಕ್ಕೆ ಜೋತು ಬಿದ್ದದ್ದು ಎನ್ನುತ್ತೀರಾ..?
ಇದೆ ಅದಕ್ಕೆ ಕಾರಣ ಖಂಡಿತಾ ಇದೆ.
ಆ ಒಂದು ದಿನ ನಾನು ಕಣ್ಣುಜ್ಜಿ ಎದ್ದು ಕುಳಿತಾಗ ಜಗತ್ತು ಎಂದಿನಂತೆ ಇರಲಿಲ್ಲ
ಆ ‘ದಯಾಮಯ’ನು ಜಗತ್ತಿನಿಂದ ಎಲ್ಲಾ ಸಂಖ್ಯೆಗಳನ್ನು ಅಳಿಸಿಹಾಕಿ ಕೇವಲ 10 ಎನ್ನುವ ಸಂಖ್ಯೆಯನ್ನೇ ಉಳಿಸಿಹೋಗಿದ್ದಾನೆನೋ ಎನ್ನುವಂತೆ ಕಾಣುತ್ತಿತ್ತು.
ಪತ್ರಿಕೆ ಪುಟ ತೆರೆದರೆ 10, ಟಿ ವಿ ಆನ್ ಮಾಡಿದರೆ 10, ಹೊರಗೆ ಕಾಲಿಟ್ಟರೆ ಗೋಡೆಗಳ ಮೇಲೆ 10, ನಾಲ್ಕು ಜನರ ಜೊತೆ ಮಾತನಾಡಿದರೆ 10, ಕಣ್ಣೀರಿಡುತ್ತಿರುವವರ ಬಳಿ ಕಾರಣ ಕೇಳಿದರೆ ಉತ್ತರ 10, ಕೈನಲ್ಲಿ ಫಲಕ ಹಿಡಿದಿದ್ದರೆ ಅದರಲ್ಲಿ ಬರೆದ ಸಂಖ್ಯೆ 10, ನೂರೆಂಟು ಜನ ಹಿಡಿದ ಬ್ಯಾನರ್ ನಲ್ಲಿ ಅದೇ ಸಂಖ್ಯೆ- 10..
ಹೀಗೆ ಜಗತ್ತು ಅಂದು 10ಮಯವಾಗಿ ಹೋಗಿತ್ತು
ಆಗಲೇ ನನಗೆ ಇನ್ನಿಲ್ಲದ ಕುತೂಹಲ ಮೂಡಿದ್ದು ಏನಪ್ಪಾ ಇದು 10 ಅಂತ
ಇಡೀ ಜಗತ್ತು ಈ ದಿನ ಈ ಸಂಖ್ಯೆಯ ಬೆನ್ನು ಬಿದ್ದಿದೆಯಲ್ಲ ಅಂತ ಹುಡುಕ ಹೊರಟವನಿಗೆ ಉತ್ತರ ಸಿಗಲು ತುಂಬಾ ತಡವೇನೂ ಆಗಲಿಲ್ಲ
ಅಂದು ಡಿಯಾಗೋ ಮರಡೋನ ಫುಟ್ ಬಾಲ್ ಗೆ ವಿದಾಯ ಹೇಳಿದ್ದ.
ಜಗತ್ತು ಶಾಕ್ ಗೆ ಒಳಗಾಗಿತ್ತು
ದೇವರ ಮಹಾನ್ ಸೃಷ್ಟಿ ಎನಿಸಿಹೋಗಿದ್ದ, ಮಿಂಚಿನ ಕಾಲ್ಚಳಕದ, ಗಾಳಿಯೂ ಇವನೂ ಅವಳಿ ಜವಳಿ ಇರಬೇಕು ಎಂದು ಜಗತ್ತು ಅಂದುಕೊಳ್ಳುವಷ್ಟು ವೇಗವಾಗಿ ಚಲಿಸುತ್ತಿದ್ದ ಮರಡೋನ ಇನ್ನು ನಾನು ಫುಟ್ ಬಾಲ್ ಆಡುವುದಿಲ್ಲ ಎಂದು ವಿದಾಯ ಹೇಳಿದ ದಿನ. ಆತನ ಜೆರ್ಸಿ ಆರ್ಥಾತ್ ಕ್ರೀಡಾಂಗಣದಲ್ಲಿ ಆತನ ಅಂಗಿಯ ಸಂಖ್ಯೆ 10
ಹಾಗಾಗಿ ಎಲ್ಲೆಲ್ಲೂ ಆ 10 ನಂಬರ್ ಟಿ ಶರ್ಟ್ ತೊಟ್ಟು, ಆ 10 ನಂಬರ್ ಫಲಕ ಹಿಡಿದವರ ಜಾತ್ರೆ.
ಇಂತಹದೇ ಇನ್ನೊಂದು ದಿನ ಬಂತು. ದೇಶದ ಮೂಲೆ ಮೂಲೆಯಲ್ಲಿ ಜಗತ್ತಿನ ಎಲ್ಲೆಡೆ ಮತ್ತೆ 10 ಆರ್ಭಟಿಸಿದ ದಿನ.
ಜಗತ್ತಿನ ಕ್ರಿಕೆಟ್ ದೇವರು ಆಟಕ್ಕೆ ವಿದಾಯ ಹೇಳಿದ ದಿನ
ಸುಂದರ ಆಟದ, ಅದಕ್ಕಿಂತಲೂ ಆಕರ್ಷಕ ವ್ಯಕ್ತಿತ್ವದ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಗೆ ವಿದಾಯ ಹೇಳಿದ್ದರು
ಅವರ ಜೆರ್ಸಿ ಸಂಖ್ಯೆಯೂ 10
ಅಲ್ಲಿಂದ ಆರಂಭವಾಯಿತು ನೋಡಿ ನನ್ನ ಸಂಖ್ಯಾಶಾಸ್ತ್ರ.
ಎಲ್ಲರೂ ಕ್ರಿಕೆಟ್ ಆಟದ ವರದಿ ಓದುತ್ತಿದ್ದರೆ ನಾನು ಅವರ ಜೆರ್ಸಿ ಸಂಖ್ಯೆ ಗುರುತು ಹಾಕಿಕೊಳ್ಳುತ್ತಿದ್ದೆ. ಟಿವಿಯಲ್ಲಿ ಒಲಂಪಿಕ್ಸ್ ಪಂದ್ಯಾವಳಿಗಳಲ್ಲಿ ನನ್ನ ಕಣ್ಣು ಹೋಗುತ್ತಿದ್ದದ್ದು ಆಟದ ವೈಖರಿಗಿಂತ ಟಿ ಶರ್ಟ್ ಹೊತ್ತಿದ್ದ ಸಂಖ್ಯೆಯತ್ತ…
ಎಲ್ಲರಿಗೂ ಆಟವಾದರೆ, ನನಗೆ ಮಾತ್ರ ಅದು ಪಾಠ
ಜೆರ್ಸಿ, ಯೂನಿಫಾರ್ಮ್, ಸ್ವೆಟರ್, ಶರ್ಟ್ ಅಂತೆಲ್ಲ ಮೊದಲು ಹಲವಾರು ರೀತಿ ಕರೆಯಲಾಗುತ್ತಿತ್ತು. ಅದಕ್ಕೂ ಒಂದೇ ಹೆಸರು ಚಾಲ್ತಿಗೆ ಬಂದರೆ ಒಳ್ಳೆಯದಲ್ಲವಾ ಅಂತ ಯೋಚಿಸಿ ಜಗತ್ತಿನ ಎಲ್ಲಾ ಕ್ರೀಡೆಗಳೂ ಈಗ ಬಹುತೇಕ ಅಲಿಖಿತವಾಗಿ ಒಪ್ಪಿಕೊಂಡಿರುವುದು ಜೆರ್ಸಿ ಎನ್ನುವ ಹೆಸರನ್ನು.
ತಂಡವಾಗಿ ಆಡುವ ಆಟಗಳಲ್ಲಿ ನಂಬರ್ ಎನ್ನುವುದು ಈಗ ತೀರಾ ತೀರಾ ಪ್ರಮುಖವಾಗಿ ಹೋಗಿದೆ. ಅದಕ್ಕೆ ಇಂತಹದ್ದು ಅನ್ನುವುದೊಂದೇ ಅಲ್ಲ ಹಲವಾರು ಕಾರಣಗಳು. ಟಿ ವಿ ಯಲ್ಲಿ ನೋಡುವಾಗ ಗುರುತು ಹಿಡಿಯಲು ಈ ನಂಬರ್ ಎಷ್ಟು ಸುಲಭ ಉಪಾಯ ನೋಡಿ.
ಹಾಗಾಗಿಯೇ ಯಾವಾಗ ಕ್ರಿಕೆಟ್, ಫುಟಬಾಲ್, ಕಬಡ್ಡಿ ಹೀಗೆ ತಂಡದ ಆಟಗಳು ಟಿ ವಿ ಯುಗಕ್ಕೆ ಕಾಲಿಟ್ಟವೋ ಅದಕ್ಕೆ ತಕ್ಕಂತೆಯೇ ಹೊಸ ಹೊಸ ಬದಲಾವಣೆಯೂ ಆಗಿದೆ. ಅದರಲ್ಲಿ ಈ ನಂಬರ್ ನಮೂದಿಸುವ ಕ್ರಮವೂ ಒಂದು. ಟೆಲಿವಿಷನ್ ಒಂದೇ ಕಾರಣ ಎಂದುಕೊಂಡುಬಿಡಬೇಡಿ ಒಂದು ತಂಡದಲ್ಲಿ ಆಟಗಾರರು, ಕೋಚ್ ಗಳು, ಸ್ಕೋರ್ ಬರೆದುಕೊಳ್ಳುವವರು, ಅಧಿಕಾರಿಗಳು ಹೀಗೆ ಹಲವು ವರ್ಗದ ಗುರುತು ಹಿಡಿಯಲೂ ಸಹಾ ಇದು ಒಳ್ಳೆಯದೇ.
ಅಷ್ಟೇನಾ ಅನ್ನುತ್ತೀರಾ, ಅಷ್ಟೇ ಅಲ್ಲ.. ಈ ಸಂಖ್ಯಾ ಶಾಸ್ತ್ರದ ಹಿಂದಿನ ಕಥೆ.
ಸಂಖ್ಯೆ ಕೊಡಬೇಕು ಅಂತೇನೋ ಆಯಿತು. ಆದರೆ ಈ ಸಂಖ್ಯೆಯನ್ನು ಎಲ್ಲಿ ಬರೆಯುವುದು.. ಜೆರ್ಸಿಯ ಹಿಂಬದಿಯಲ್ಲೋ, ಮುಂಬದಿಯಲ್ಲೋ, ತೋಳಿನ ಮೇಲೋ, ಅಥವಾ ಆಟಗಾರರ ಶಾರ್ಟ್ಸ್ ಮೇಲೋ, ಅಥವಾ ಅವರು ಬಳಸುವ ಹೆಡ್ ಗೇರ್ ಗಳ ಮೇಲೋ .. ಹೀಗೆ ಸಮಸ್ಯೆ ಸಣ್ಣದೇನಲ್ಲಾ.
ಅಷ್ಟೇ ಅಲ್ಲ.. ಸಂಖ್ಯೆ ಮಾತ್ರ ಬರೆಯಬೇಕೋ ಅಥವಾ ಅದರ ಜೊತೆಗೆ ಹೆಸರೂ ಬರೆಯಬೇಕೋ . ಕೊನೆಗೆ ಒಂದು ಕಾಮನ್ ಆದ ಸೂತ್ರವಂತೂ ಇದೆ ಜೆರ್ಸಿಯ ಹಿಂಬಾಗದಲ್ಲಿ ಸಂಖ್ಯೆ ಅದರ ಕೆಳಗೆ ಹೆಸರಲ್ಲ, ಸರ್ ನೇಮ್ ಬರೆಯಬೇಕು ಅಂತ
ಒಮ್ಮೆ ನಿಮ್ಮ ಫೇವರೈಟ್ ಆಟಗಾರರ ಜೆರ್ಸಿಯನ್ನ ಮನಸಿನಲ್ಲೇ ಒಂದು ಸುತ್ತು ಹಾಕಿ ಬನ್ನಿ
ಕರೆಕ್ಟ್ ಅಲ್ಲವಾ..
ಒಂದು ನಿಮಿಷ.. ನಿಮ್ಮ ಫೇವರೈಟ್ ಆಟಗಾರರ ಜೆರ್ಸಿ ನಂಬರ್ ಗೊತ್ತಾಯ್ತು ಅಂತ ಖುಷಿ ಪಡೋಕೆ ಮುಂಚೆ ನಾನು ಇನ್ನೂ ಒಂದು ಕ್ವಿಜ್ ಕೇಳ್ತೀನಿ ಆ ನಂಬರ್ ರೇ ಯಾಕೆ ಅವರಿಗೆ ಕೊಟ್ಟಿದ್ದಾರೆ. ಹೇಳಿ ನೋಡೋಣ.
ಅದನ್ನ ಊಹೆ ಮಾಡ್ತಾ ಇರಿ ಅಷ್ಟೊತ್ತಿಗೆ ನಾನು ಈ ನಂಬರ್ ಕಥೆ ಹೇಗೆ ಶುರು ಆಯ್ತಪ್ಪಾ ಅನಂತ ಒಂದು ಝಲಕ್ ಕೊಟ್ಟುಬಿಡ್ತೀನಿ
ಫುಟ್ ಬಾಲ್ ನ ಚರಿತ್ರೆ ಹಾಗೂ ಅಂಕಿಸಂಖ್ಯೆ ಗಾಗಿಯೇ ಇರುವ ಅಂತಾರಾಷ್ಟ್ರೀಯ ಮಂಡಳಿ ಪ್ರಕಾರ ಫುಟ್ ಬಾಲ್ ನಲ್ಲಿ ಈ ಜೆರ್ಸಿ ನಂಬರ್ ಆರಂಭಿಸುವ ಪರಿಪಾಠ ಶುರು ಆದದ್ದು 1911 ರಲ್ಲಿ. ಸಿಡ್ನಿಯಲ್ಲಿ ಜರುಗಿದ ಆಸ್ಟ್ರೇಲಿಯನ್ ರೂಲ್ಸ್ ಫುಟ್ ಬಾಲ್ ನಲ್ಲಿ. ಆದರೆ ಇದೇ ಸರಿ ಅಂತೇನೂ ಇಲ್ಲ. ಯಾಕೆಂದರೆ 1903 ರಲ್ಲಿ ಸಿಕ್ಕಿರುವ ಫುಟ್ ಬಾಲ್ ಫೋಟೋಗಳಲ್ಲೂ ನಂಬರ್ ಇದೆ. ಕ್ರಿಕೆಟ್ ನಲ್ಲಿ 1995-96 ರಲ್ಲಿ ಆಸ್ಟ್ರೇಲಿಯಾದಲ್ಲಿ ಜರುಗಿದ ವರ್ಲ್ಡ್ ಕಪ್ ಸೀರಿಸ್ ನಲ್ಲಿ ನಂಬರ್ ಕೊಡುವ ಪದ್ಧತಿ ಆರಂಭ ಆಯ್ತು. ವರ್ಲ್ಡ್ ಕಪ್ ನಲ್ಲಿ ಇದು ಜಾರಿಗೆ ಬಂದಿದ್ದು 1999 ರಲ್ಲಿ.
ಅದೇ ರೀತಿ ಯಾವುದೇ ಟೀಮ್ ಆಟಗಳಿರಲಿ ಆ ಎಲ್ಲಕ್ಕೂ ಒಂದೊಂದು ಕಾಲದಲ್ಲಿ ಈ ಜೆರ್ಸಿ ಸಂಖ್ಯೆ ಮೆಲ್ಲನೆ ಹೆಜ್ಜೆ ಹಾಕಿ ಒಳಗಡೆ ಬಂದಿದೆ. ಈ ಸಂಖ್ಯೆ ಒಂದೊಂದು ಆಟಕ್ಕೆ ಒಂದೊಂದು ಥರ, ಒಂದೊಂದು ದೇಶಕ್ಕೆ ಒಂದು ಥರ, ಒಂದೇ ಆಟದಲ್ಲಿ ವಿವಿಧ ಪ್ರಾಕಾರಕ್ಕೆ ವಿವಿಧ ಹೀಗೆ..
ಈ ನಂಬರ್ ಕೊಡೋದು ಹೇಗಪ್ಪಾ ಅಂತ ತಲೆ ಕೆಡಿಸಿಕೊಂಡಿದ್ದ ಕಥೆಗಳೂ ಇದೆ. ಆಗ ಫುಟ್ ಬಾಲ್ ತಂಡಗಳು ಮೊದಲು ಇದಕ್ಕೆ ಪರಿಹಾರ ಹುಡುಕಿಕೊಂಡು ಬಿಟ್ಟವು. ಅವರ ಪ್ರಕಾರ ಗೋಲ್ ಕೀಪರ್ ಗೆ 1 ನೇ ನಂಬರ್ ಮೀಸಲು ಉಳಿದ ನಂಬರ್ ಗಳಲ್ಲಿ ಮೊದಲು ಡಿಫೆಂಡರ್ ಗಳಿಗೆ, ನಂತರ ಮಿಡ್ ಪ್ಲೇಯರ್ ಗಳಿಗೆ, ಆಮೇಲೆ ಫಾರ್ವರ್ಡ್ ಗಳಿಗೆ.
ಆಮೇಲೆ ಅದೂ ಬದಲಾಗಿದೆ. ಫುಟ್ ಬಾಲ್ ಇರಲಿ, ಕ್ರಿಕೆಟ್ ಇರಲಿ ಇವತ್ತು ನೀವು 00 ಯಿಂದ 99 ರವರೆಗೂ ಇರೋ ಜೆರ್ಸಿನ ನೋಡಬಹುದು ಅಂದಹಾಗೆ 99 ಯಾರ ಜೆರ್ಸಿ ನಂಬರ್ ಹೇಳಿ, ನಮ್ಮ ಕ್ರಿಕೆಟ್ ಟೀಮ್ ನಲ್ಲಿ. ‘ದಾದಾ’ದು. ಸೌರವ್ ಗಂಗೂಲಿ 99 ನಂಬರ್ ಜೊತೆಗೆ ಆಡಿದ್ದು.
ಈ 10 ನಂಬರ್ ಇದೆಯಲ್ಲ ಅದಕ್ಕೆ ಡಿಮ್ಯಾಂಡ್ ಅಪ್ಪೋ ಡಿಮ್ಯಾಂಡ್ ..
ಯಾಕೆ ಅಂದ್ರೆ ಫುಟ್ ಬಾಲ್ ನಲ್ಲಿ ಪೀಲೆ, ಮರಡೋನ ಈ ನಂಬರ್ ಜೊತೆ ಆಟ ಆಡಿದ್ರು. ಕ್ರಿಕೆಟ್ ನಲ್ಲಿ ಸಚಿನ್ ತೆಂಡೂಲ್ಕರ್
ಹಾಗಾಗಿ ಈ 10 ಸಂಖ್ಯೆ ಸಹಾ ದೇವರ ಸ್ಥಾನ ಪಡೆದುಕೊಂಡು ಬಿಡ್ತು.
ಎಲ್ಲರಿಗೂ ದೇವರು ಸಿಗಲ್ವಲ್ಲ ಹಾಗಾಗಿ ಈ 10 ಯಾರು ಬೇಕಾದ್ರೂ ತಗೊಳ್ಳಬಹುದಾ ಅನ್ನೋ ಚರ್ಚೆ ಶುರುವಾಗೋಯ್ತು. 10 ಹಾಕಿದೋರೆಲ್ಲಾ ದೇವರು ಆಗೋದಿಕ್ಕೆ ಸಾಧ್ಯ ಇಲ್ವಲ್ಲಾ.. ಅಥವಾ ಯಾರು ಬೇಕಾದರೂ ದೇವರ ವೇಷದಲ್ಲಿ ಬರೋದಿಕ್ಕೆ ಆಗೋದಿಲ್ವಲ್ಲ..
ಏನು ಮಾಡೋದು 10 ಅನ್ನೋದು ಸಂಖ್ಯೆ ಮಾತ್ರ ಅಲ್ಲ ಅದು ಉನ್ಮಾದ, ಪ್ರೀತಿ, ಹುಚ್ಚಿನ ಪರಮ ಅವತಾರ ಹಾಗಾಗಿ ಕ್ರೀಡಾ ರಂಗ ಒಂದು ಯೋಚನೆ ಮಾಡ್ತು ಕೆಲವು ನಂಬರ್ ಗಳನ್ನ ಶಾಶ್ವತವಾಗಿ ದೇವರ ಸ್ಥಾನಕ್ಕೆ ಏರಿಸಿ ಸುಮ್ಮನಾಗಿಬಿಡೋದು ಅಂತ. ಅಂದ್ರೆ ಅದನ್ನ ಇನ್ನು ಮುಂದೆ ಯಾರೂ ಬಳಸೋ ಹಾಗಿಲ್ಲ. ಅವರ ಜೊತೆ ಅವರು ಬಳಸುತ್ತಿದ್ದ ನಂಬರ್ ಗೂ ನಿವೃತ್ತಿ ಕೊಟ್ಟು ಬಿಡೋದು ಅಂತ.
ಇನ್ನೂ ಕೆಲವು ಯೋಚನೆ ಬಂತು ಒಬ್ಬ ಆಟಗಾರ ತಾನು ಬಳಸುತ್ತಿದ್ದ ಜೆರ್ಸಿ ಸಂಖ್ಯೆಯನ್ನ ತಾನು ನಿವೃತ್ತಿ ಹೊಂದುವಾಗ ಅವನಿಗೆ ಬೇಕಾದವರಿಗೆ ಕೊಡಬಹುದು ಅಂತ. ಇನ್ನೂ ಒಂದಷ್ಟು ಕ್ರಮ ಬಂತು ಅಪ್ಪ, ಮಗ ಇಬ್ಬರೂ ಅದೇ ಕ್ರೀಡೆಯಲ್ಲಿದ್ದರೆ ಅಪ್ಪನ ನಂತರ ಮಗ ಬೇಕಾದ್ರೆ ಅದನ್ನ ಬಳಸಬಹುದು ಅಂತ.
ಅಮಿತಾಬ್ ಬಚ್ಚನ್ ದೊಡ್ಡ ಹೆಸರು ಮಾಡಿಬಿಟ್ಟರು, ಸಹಜವಾಗೇ ಅಭಿಷೇಕ್ ಮೇಲೂ ಜನ ಅದೇ ನಿರೀಕ್ಷೆ ಮಾಡ್ತಾರೆ. ಆತ ಸೂಪರ್ ಡೂಪರ್ ಪರ್ಫಾರ್ಮೆನ್ಸ್ ಕೊಡಬೇಕು ಅಂತ
ಅಷ್ಟು ಸುಲಭಾನಾ.. ದೊಡ್ಡವರ ಷೂ ಮಕ್ಕಳಿಗೂ ಆಗಿಬರೋದು?. ಹಾಗಾಗಿ ಬೇಕಾದಷ್ಟು ಮಕ್ಕಳು ಅಪ್ಪನ ಆ ಸಂಖ್ಯೆಯ ಭಾರವೇ ನಮಗೆ ಬೇಡ ಅಂತ ಅದನ್ನು ತಗೊಳ್ಳದೆ ದೂರ ಉಳಿದ ಪ್ರಸಂಗ ಸಹಾ ಉಂಟು. ಇನ್ನು ಕೆಲವರು ದಿಢೀರ್ ಜನಪ್ರಿಯ ಆಗಿಬಿಡ್ತೀವಿ ಅನ್ನೋ ಆಸೆಗೆ ತಗೊಂಡು ಸುಸ್ತು ಹೊಡೆದದ್ದೂ ಉಂಟು.
ಒಂದು ನೆನಪಿರಲಿ ಸುಮ್ನೆ ಜೆರ್ಸಿ ಹೊಲಿಸಿಕೊಂಡು ಮೈದಾನಕ್ಕೆ ಇಳಿದುಬಿಡೋದಿಕ್ಕೆ ಆಗೋದಿಲ್ಲ.ಆಟಗಾರರ ಯೂನಿಫಾರ್ಮ್ ಹೇಗಿರಬೇಕು ಅನ್ನೋದಕ್ಕೆ 92 ಪುಟದ ಸ್ಟೈಲ್ ಗೈಡ್ ಇದೆ.
ಇರ್ಲಿಬಿಡಿ, ಈಗ ನಮ್ಮ ಟೀಮ್ ಕಡೆ ಬರೋಣ..
‘ಮಿಸ್ಟರ್ ಕೂಲ್’ ಯಾಕೆ 7 ನೇ ನಂಬರ್ ಆನ್ ಆಯ್ಕೆ ಮಾಡಿಕೊಂಡರು?. ಉತ್ತರ ಸಿಂಪಲ್ ಅವರ ಬರ್ತ್ ಡೇ ಜುಲೈ 7 . ಯುವರಾಜ್ ಸಿಂಗ್ ಡಿಟ್ಟೋ . ಅವರ ಬರ್ತ್ ಡೇ 12 ರಂದು. ಜೆರ್ಸಿ ನಂಬರ್ ಸಹಾ 12. ಗೌತಮ್ ಗಂಭೀರ್ ಉತ್ತರಾನೂ ಡಿಟ್ಟೋ ಆದ್ರೆ ಸ್ವಲ್ಪ ಟ್ವಿಸ್ಟ್. ಗೌತಿ ಹುಟ್ಟಿದ ಹಬ್ಬ 14 ಹಾಗಾಗಿ ಎರಡೂ ಸಂಖ್ಯೆ ಕೂಡಿಸಿ ಜೆರ್ಸಿ ನಂಬರ್ 5. ರಾಹುಲ್ ದ್ರಾವಿಡ್ ಉತ್ತರ ಮಾತ್ರ ಬೆಸ್ಟ್. ಜಗತ್ತಿನ ಹೆಂಗಳೆಯರೆಲ್ಲಾ ಫಿದಾ ಆಗಬೇಕು. ಯಾಕೆಂದರೆ ಅವರ ಜೆರ್ಸಿ ನಂಬರ್ ಆಯ್ಕೆ ಮಾಡಿದ್ದು ತಮ್ಮ ಬರ್ತ್ ಡೇಟ್ ಗಾಗಿ ಅಲ್ಲ ತನ್ನ ಹೆಂಡತಿಯ ಬರ್ತ್ ಡೇಟ್ ಮೇಲೆ -19
ಹಾಗಾದ್ರೆ ‘ಮಿಸ್ಟರ್ ಅಬ್ಬರ’ ವಿರಾಟ್ ಕೊಹ್ಲಿ 18 ಯಾಕೆ ಆಯ್ಕೆ ಮಾಡಿಕೊಂಡಿದ್ದು. ಇದಕ್ಕೆ ಸಿಂಪಲ್ಲಾಗಿ ಏನೇನೋ ಉತ್ತರ ಇದೆ. ಆದರೆ ಹಾರ್ಟ್ ಟಚಿಂಗ್ ಏನು ಗೊತ್ತಾ 18 ನೇ ತಾರೀಕು ಅವರ ತಂದೆ ಇಲ್ಲವಾದರು. ಆಗ ವಿರಾಟ್ ವಯಸ್ಸು 18. ಆ ನೆನಪು ಕಾಡಿಯೇ ಅವರ ಜೆರ್ಸಿ ನಂಬರ್ 18.
ವೀರೇಂದ್ರ ಸೆಹ್ವಾಗ್ ನಂಬರ್ ಮಾತ್ರ ವಿಚಿತ್ರ 00. ಮೊದಲು ಇವರ ಜೆರ್ಸಿ ನಂಬರ್ 88 ಇತ್ತು. ಆದರೆ ಜ್ಯೋತಿಷಿ ಹೇಳಿದ್ರು. ಬಿಲ್ಕುಲ್ ಲಕ್ ಇಲ್ಲ ಅಂತ ಕೊನೆಗೆ 00 ಗೆ ಸೆಟ್ಲ್ ಆದರು. ಸುರೇಶ್ ರೈನಾ ದು ಇನ್ನೊಂದು ಥರಾ ಮಜಾ ಕಥೆ. ಅವರಿಗೆ 13 ನಂಬರ್ ಬಂತು. ಪಾಪ ಆ ಸಂಖ್ಯೆ ಕಡೆ ಯಾರೂ ಮುಖ ತಿರುವು ನೋಡೋಲ್ಲ. ಹಾಗಾಗಿ ರೈನಾ ಫೀಲ್ಡ್ ಗೆ ಇಳಿದಾಗ ಒಂದರ ಮೇಲೆ ಟೇಪ್ ಅಂಟಿಸ್ಕೊಂಡು ಅದನ್ನ 3 ಅನ್ನೋ ಹಾಗೆ ಕಾಣೋ ಥರಾ ಮಾಡಿಕೊಳ್ತಾರೆ.
ಜಹೀರ್ ಖಾನ್ ಗೆ 7 ಬೇಕಿತ್ತು. ಅದು ಅವರ ಲಕಿ ನಂಬರ್ ಅಂತೆ. ಆದರೆ ಕ್ಯಾಪ್ಟನ್ ನಂಬರ್ಸಹಾ 7. ನನಗೆ ಬೇಕು ಕೊಡು ಅಂತ ಕೇಳೋಕೆ ಆಗುತ್ತಾ. ಒಂದು ಐಡಿಯಾ ಮಾಡಿದ್ರು 34 ತಗೊಂಡ್ರು ಎರಡೂ ಸಂಖ್ಯೆ ಸೇರಿದ್ರೆ 7 ಆಲ್ವಾ. ರವೀಂದ್ರ ಜಡೇಜಾ ಹುಟ್ಟಿದ್ದು 6-12-1988. ಈ ಎಲ್ಲಾ ಸಂಖ್ಯೆ ಸೇರಿಸಿದರೆ 44. ಹಾಗಾಗಿ ಈ ಎರಡೂ ಸಂಖ್ಯೆ ಸೇರಿಸಿ 8 ಮಾಡಿಕೊಂಡ್ರು.
ಹೀಗೆ ನನ್ನ ಸಂಖ್ಯಾ ಶಾಸ್ತ್ರ ಮುಂದುವರೆದಿದೆ.
ನೀವು ಹೇಳಿದ್ರಲ್ಲಿ ಇದು ಕರೆಕ್ಟು, ಅದಲ್ಲ ಅಂತ ನೀವು ಹೇಳೋ ಹಾಗೇ ಇಲ್ಲ. ಯಾಕಂದ್ರೆ ನಾನು ಫುಟ್ ಬಾಲೂ ಆಡಲ್ಲ, ಕ್ರಿಕೆಟ್ ಸಹಾ ಆಡಲ್ಲ. ಬರೀ ಜೆರ್ಸಿ ನೋಡ್ತೀನಿ, ನಂಬರ್ ಬರ್ಕೊಳ್ತೀನಿ, ಗೂಗಲ್ ಮಾಡ್ತೀನಿ, ಸಿಕ್ಕ ಕಥೆ ನಿಮ್ಮ ಮುಂದೆ ಬಿಚ್ಚಿಡ್ತೀನಿ..

 

—-
key words : kannada-media-journalistg.n.mohan-story