ಜಿ.ಎನ್ ಮೋಹನ್ ಸ್ಪೆಷಲ್ : ಒಂದು ನವಿಲುಕೋಸಿನಲ್ಲಿ ಏನೆಲ್ಲಾ..

 

ಬೆಂಗಳೂರು, ಜು.26, 2020 : (www.justkannada.in news) ಕಿಟಕಿಯಿಂದ ಇಣುಕಿ ನೋಡಿದೆ. ಬೆಳ್ಳಂಬೆಳಗ್ಗೆ ಆ ಕೆಂಪು ಕೆನ್ನೆಯ ರೇಷ್ಮೆ ಬಣ್ಣದ ಹುಡುಗಿ ತಲೆ ಮೇಲೆ ಕೈಹೊತ್ತು ಕುಳಿತಿದ್ದಳು. ಮುಖದಲ್ಲಿ ಚಿಂತೆಯ ಗೆರೆಗಳು ಆಗಲೇ ಜಾಗ ಹುಡುಕಿಕೊಂಡಿತ್ತು.

ಸಂಜೆ ಆಫೀಸಿನಿಂದ ಬಂದಾಗ ಆಕೆಯ ಮನೆಯೇ ಸೂತಕದಲ್ಲಿತ್ತು. ಯಾರೋ ಸತ್ತಿದ್ದಾರೆ ಎಂಬುದಕ್ಕೆ ಇನ್ಯಾವ ಸಾಕ್ಷಿಯೂ ಬೇಕಿರಲಿಲ್ಲ. ಎದುರಿಗಿದ್ದ ಮನೆಯ ಸಾವಿಗೆ ನಾನು ಸಂತಾಪ ಸೂಚಿಸದಿದ್ದರೆ ತಪ್ಪಾದೀತು ಎಂದು ಅವರ ಮನೆ ಹೊಕ್ಕೆ. ಏನಾಯ್ತು ಎಂದು ಕೇಳಿದೆ. ನೋಲ್ ಕೋಲ್ (ನವಿಲುಕೋಸು) ಸತ್ತು ಹೋಗಿದೆ ಎಂದರು.

ನನ್ನ ಹರಕು ಮುರುಕು ಹಿಂದಿ ಜ್ಞಾನಕ್ಕೆ ಅವರು ಹೇಳಿದ್ದು ದಕ್ಕುವುದಾದರೂ ಹೇಗೆ? ಒಂದಿಷ್ಟು ಹೊತ್ತು ಅವರೊಡನೆ ನಾನೂ ಮೌನ ಆಚರಿಸಿದೆ.

jk-logo-justkannada-logo

ಒಂದೆರಡು ದಿನ ಕಳೆದಿರಬೇಕು. ಭಾನುವಾರ ಬೆಳ್ಳಂಬೆಳಗ್ಗೆ ಇಡೀ ಮನೆಯೇ ಕಾರು ಸವಾರಿಗೆ ಸಜ್ಜಾಗಿತ್ತು. ಸಂಡೇ ಔಟಿಂಗ್ ಅಂದುಕೊಂಡೆ. ಆದರೆ ಗಂಟೆ ಕಳೆಯುವುದರೊಳಗೆ ಹೊರಗೆ ಮತ್ತೆ ಸದ್ದುಗದ್ದಲ. ಯಥಾಪ್ರಕಾರ ಕಿಟಕಿಯಲ್ಲಿ ಇಣುಕಿದೆ.
ಅದೇ ಹುಡುಗಿ. ಕೆಂಪು ಕೆನ್ನೆ, ರೇಷ್ಮೆ ಬಣ್ಣ. ಆದರೆ ಈ ಬಾರಿ ಸಂಭ್ರಮ ಮುಖದ ಎಲ್ಲಾ ಕಡೆ ಜಾಗ ಮಾಡಿಕೊಂಡಿತ್ತು.

ಗಣೇಶನ ಹಬ್ಬಕ್ಕೆ ಮನೆ ಮಂದಿಯೆಲ್ಲಾ ಹೋಗಿ, ಗಣಗಣ ಗಂಟೆ ಬಾರಿಸಿಕೊಂಡು, ಜೈಕಾರ ಹಾಕುತ್ತಾ, ಅಕ್ಕಿ ತಟ್ಟೆಯಲ್ಲಿ ಗಣೇಶ ತರುತ್ತಾರಲ್ಲಾ ಹಾಗೆ ಕಾರಿನಿಂದ ಇಳಿಸಿದ ಏನನ್ನೋ ಅಷ್ಟೇ ಭಯ ಭಕ್ತಿಯಿಂದ ತರುತ್ತಿದ್ದರು.
ಅರೆ! ನರ್ಸರಿಯಿಂದ ತಂದ ಗಿಡ.

ಇದಕ್ಯಾಕೆ ಇಷ್ಟೊಂದು ಗಲಾಟೆ?

kannada-media-journalist-g.n.mohan-special-book

ಒಂದೆರಡು ವಾರ ಕಳೆದಿತ್ತು. ಕಿಟಕಿಯಿಂದ ಇಣುಕಿದಾಗ ಕಂಡದ್ದು ಗಾಬರಿಯ ಮುಖಗಳು. ನರ್ಸರಿ ಗಿಡ ಕೈಕೊಟ್ಟಿತ್ತು. ಎಲೆಗಳೆಲ್ಲಾ ಪೊಗದಸ್ತಾಗಿ ಬೆಳೆದಿದ್ದರೂ ಹುಳು ತಿಂದು ಹಾಕಿತ್ತು.
ಮನೆಯವರಿಗೆ ಜ್ವರ ಬಂತೇನೋ ಎಂಬಷ್ಟು ಕಾತರದಿಂದ ಓಡಿದ ಕಾರು ಸ್ವಲ್ಪ ಹೊತ್ತಿನಲ್ಲೇ ಕ್ರಿಮಿನಾಶಕ ಹೊತ್ತು ತಂತು. ಗಿಡಗಳನ್ನು ಬದುಕಿಸುವ ಕೆಲಸ ನಡೆದಿತ್ತು.
ಒಂದಷ್ಟು ದಿನ ಕಳೆಯಿತು.
ಬೆಳ್ಳಂಬೆಳಗ್ಗೆ ಬಾಗಿಲು ಬಡಿದ ಸದ್ದು. ಕರೆಗಂಟೆ ಇದೆ ಎಂಬುದೇ ಮರೆತು ಹೋಗುವಷ್ಟು ಏಕಾಂಗಿಯಾಗಿ ಹೋಗಿದ್ದ ನನಗೆ ಆಶ್ಚರ್ಯ. ಬಾಗಿಲು ತೆರೆದಾಗ ಅದೇ ಹುಡುಗಿ ಕೈಯಲ್ಲಿ ಸ್ವೀಟ್ಸ್. ಮುಖದ ಕ್ಯಾನ್ ವಾಸ್ ನಲ್ಲಿ ಚೆಲ್ಲಾಡಿದ ಸಂಭ್ರಮದ ಬಣ್ಣ.
‘ನೋಲ್ ಕೋಲ್ ಆಗಯಾ?’ ಹುಡುಗಿ ಕುಣಿಯುತ್ತಾ ಇನ್ನಷ್ಟು ಮನೆಯತ್ತ ಜಿಗಿದಳು.
ಅರ್ಥವಾಗದೆ ಕಿಟಕಿಯಲ್ಲಿ ಇಣುಕಿದೆ. ಅಪಾರ್ಟ್ ಮೆಂಟಿನ ಎಲ್ಲರೂ ಗಿಡದ ಸುತ್ತಾ ನೆರೆದಿದ್ದರು. ನಾನೂ ಮೆಟ್ಟಿಲಿಳಿದೆ. ಇಣುಕಿ ನೋಡಿದಾಗ ಆ ಪುಟ್ಟ ಟ್ರೇಯ ಕ್ಯಾನ್ ವಾಸ್ ನಲ್ಲಿ ನವಿಲುಕೋಸು ಗಡ್ಡೆ ಮೂಡಿತ್ತು.
ಅಪಾರ್ಟ್ ಮೆಂಟಿನ ಅಷ್ಟೂ ಮನೆಗಳನ್ನೂ ಸಂತಸದಲ್ಲಿ ಮುಳುಗಿಸಿಬಿಡುವ ತಾಖತ್ತು ಒಂದು ಪುಟ್ಟ ನವಿಲುಕೋಸಿನ ಗಡ್ಡೆಗಿದೆ ಎಂದು ನನಗೆ ಗೊತ್ತಾದದ್ದೇ ಆಗ.

jk-logo-justkannada-logo
ರಾತ್ರಿ ಮಾತನಾಡುತ್ತ ಕುಳಿತಿದ್ದಾಗ ನನಗೆ ಆತ ಹೇಳಿದ್ದು ಇಷ್ಟೆ – ನಾವು ಕಾಶ್ಮೀರದವರಿಗೆ ಊಟ ತಿಂಡಿ ಏನೇ ಇರಲಿ ಪ್ರತೀ ದಿನ ಅದರಲ್ಲಿ ನೋಲ್ ಕೋಲ್ ಇರಲೇಬೇಕು. ಪ್ರತೀ ಮನೆ, ಪ್ರತೀ ಊಟ, ಪ್ರತೀ ಊರು ಅಥವಾ ಇಡೀ ಕಾಶ್ಮೀರ ಒಂದು ನೋಲ್ ಕೋಲ್ ನ ಅಂತರಗಂಗೆಯನ್ನು ಹೊಂದಿದೆ ಎಂದ.
ಕಾಶ್ಮೀರ ಬಿಟ್ಟು ಬಹುದೂರ ಬಂದಿದ್ದೇವೆ. ನಾನು ಓದಿದ ಶಾಲೆ, ಕೈ ಮುಗಿದು ನಿಂತಿದ್ದ ಗುಡಿ, ತೊರೆಗಳ ಮೇಲಿನ ಆ ಮರದ ಸೇತುವೆ, ಮಂಜು ಎಲ್ಲಾ ನೆನಪಾಗುತ್ತದೆ.
ಈಗಷ್ಟೇ ಅಪ್ಪ ಅಮ್ಮನನ್ನು ಬಿಟ್ಟು ಬಂದಿರೋ, ಇನ್ನೂ ಪುಟ್ಟ ಹುಡುಗಿ ಥರಾನೇ ಇರೋ ನನ್ನ ಹೆಂಡತಿಗೆ ತವರು. ಇವೆಲ್ಲಾ ಈ ದೂರದ ಊರಿಗೆ ಹೇಗೆ ತರಲಿ. ಬೇಕೆಂದರೂ ಕಾಶ್ಮೀರಕ್ಕೆ ದಿಢೀರನೆ ಹೇಗೆ ಹೋಗಲಿ ಎಂದ.
ತಕ್ಷಣ ಮಿಂಚೊಂದು ತಲೆಯಲ್ಲಿ ಸುಳಿಯಿತು. ಆತ ಮನೆಯ ಮುಂದಿನ ಪುಟ್ಟ ಟ್ರೇಯೊಳಗೆ ಕಾಶ್ಮೀರವನ್ನೇ ಸೃಷ್ಟಿಸಿಕೊಳ್ಳುತ್ತಿದ್ದ.
ಆ ಹಿಮ, ಆ ಶಾಲೆ, ಆ ಸೇತುವೆ ತರಲಾಗದ ಆ ಸುಂದರಿ ಒಂದು ನವಿಲುಕೋಸು ಬೆಳೆಯುವುದರ ಮೂಲಕ ಕಾಶ್ಮೀರವೇ ಅಲ್ಲಿ ಮೊಳಕೆಯೊಡೆಯುವುದನ್ನು ಕಾಣುತ್ತಿದ್ದರು.
ಗಿಡ ಸತ್ತಾಗ ಅವರ ಪಾಲಿಗೆ ಸೂತಕ ಆವರಿಸಿದ್ದು ಏಕೆ ಎಂದು ಗೊತ್ತಾಯಿತು.
ಒಂದು ನವಿಲುಕೋಸು ಏನೆಲ್ಲಾ ಆಗಿತ್ತು.
ಆ ಸುಂದರಿಗೆ ಸುಂದರ ತವರು. ಕಾಶ್ಮೀರದಲ್ಲಿ ಹುಟ್ಟದ ಮಗನಿಗೆ ಕಾಶ್ಮೀರದ ಪಾಠ. ಹನುಮಂತ ಇಡೀ ಸಂಜೀವಿನಿ ಪರ್ವತವನ್ನು ಹೊತ್ತು ತಂದನೋ ಇಲ್ಲವೋ ಗೊತ್ತಿಲ್ಲ. ಆದರೆ ಅವರು ಒಂದು ಪುಟ್ಟ ಟ್ರೇನಲ್ಲಿ ಇಡೀ ಕಾಶ್ಮೀರವನ್ನೇ ಬೆಳೆದಿದ್ದರು.
ಒಂದು ನವಿಲುಕೋಸಿನಲ್ಲಿ ಏನೆಲ್ಲಾ..

oooo

key words : kannada-media-journalist-g.n.mohan-special-book