ಅಣ್ಣಾವ್ರ ಸಿನಿಮಾಗೆ ಹೋಲಿಸಿ ದರ್ಶನ್ ಕುರುಕ್ಷೇತ್ರ ವಿಮರ್ಶಿಸಿದ ದಿನಪತ್ರಿಕೆಗಳು..

 

ಬೆಂಗಳೂರು, ಆ.09, 2019 : (www.justkannada.in news) : ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅಭಿನಯದ ಬಹುತಾರಗಣದ,ಬಹುಕೋಟಿ ವೆಚ್ಚದ ‘ ಕುರುಕ್ಷೇತ್ರ ‘ ಸಿನಿಮಾ ಬಿಡುಗಡೆಗೊಂಡು ಭಾರಿ ಸದ್ದು ಮಾಡುತ್ತಿದೆ. ನಟ ದರ್ಶನ್ ಅಭಿನಯದ ಬಗ್ಗೆ ಹಾಗೂ ಚಿತ್ರದ ಮೇಕಿಂಗ್ ಬಗೆಗೆ ಶಹಬ್ಬಾಸ್ ಗಿರಿ ವ್ಯಕ್ತವಾಗುತ್ತಿದೆ.

ಕರ್ನಾಟಕದಲ್ಲಿ ವರುಣನ ಅಬ್ಬರದ ಕಾರಣ, ಕುರುಕ್ಷೇತ್ರದ ಬಿಡುಗಡೆಗೆ ಸಂಬಂಧಿಸಿದಂತೆ ಪ್ರಚಾರದ ಅಬ್ಬರ ಕೊಂಚ ಕಡಿಮೆಯಾಗಿದೆ. ಆದರೂ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಮಾತ್ರ ತಡರಾತ್ರಿಯಿಂದಲೇ ಸಿನಿಮಾ ವೀಕ್ಷಣೆಗೆ ದಾಂಗುಡಿಯಿಟ್ಟಿದ್ದಾರೆ. ಬಹುಭಾಷೆಯಲ್ಲಿ ನಿರ್ಮಾಣವಾಗಿರುವ ಕುರುಕ್ಷೇತ್ರದ ಬಗ್ಗೆ ಕನ್ನಡದ ಪ್ರಮುಖ ದಿನಪತ್ರಿಕೆಗಳ ವಿಮರ್ಶೆ ಹೀಗಿದೆ….

ವರನಟ ರಾಜಕುಮಾರ್‌ ಅವರ ಪೌರಾಣಿಕ ಮತ್ತು ಐತಿಹಾಸಿಕ ಸಿನಿಮಾಗಳೇ ನಮಗೆ ಇಂದಿಗೂ ಮಾದರಿ. ಅವರ ನಟನೆಯ ಪ್ರಭಾವದಿಂದಲೇ ರಂಗದ ಮೇಲೆ ಪೌರಾಣಿಕ ನಾಟಕವನ್ನು ಕುಶಲವಾಗಿ ಕಟ್ಟಿ ವೃತ್ತಿಪರತೆ ಮೆರೆಯುವ ಕಲಾವಿದರು ಗ್ರಾಮೀಣ ಜಗತ್ತಿನಲ್ಲಿ ಸಾಕಷ್ಟಿದ್ದಾರೆ. ಆದರೆ, ಕನ್ನಡದ ಹೊಸ ತಲೆಮಾರಿನ ನಟರು ಪ್ರಯೋಗಗಳಿಗೆ ಒಗ್ಗಿಕೊಳ್ಳದೆ ಹಿಂದಡಿ ಇಡುವುದೇ ಹೆಚ್ಚು. ಅಣ್ಣಾವ್ರ ಚಿತ್ರಗಳೊಂದಿಗೆ ಅವರ ಸಿನಿಮಾವನ್ನು ಹೋಲಿಕೆ ಮಾಡುವುದೇ ಇದಕ್ಕೆ ಕಾರಣ ಎಂದು ಬಿಡಿಸಿಹೇಳಬೇಕಿಲ್ಲ.
ಇಂತಹ ಸಂದಿಗ್ಧ ಸ್ಥಿತಿಯಲ್ಲಿ ‘ಮುನಿರತ್ನ ಕುರುಕ್ಷೇತ್ರ’ ಚಿತ್ರ ಕನ್ನಡದ ಹಳೆಯ ಪೌರಾಣಿಕ ಸಿನಿಮಾಗಳ ಮಟ್ಟಕ್ಕೆ ತಲುಪದಿದ್ದರೂ ನೋಡುಗರಿಗೆ ನಿರಾಶೆ ಮೂಡಿಸುವುದಿಲ್ಲ. ಮೂರು ಗಂಟೆಗಳ ಸುದೀರ್ಘ ಕಥನವನ್ನು ಪರದೆ ಮೇಲೆ ನಿರೂಪಿಸುವಲ್ಲಿ ನಿರ್ದೇಶಕ ನಾಗಣ್ಣ ಅವರ ಶ್ರಮ ಎದ್ದುಕಾಣುತ್ತದೆ. ಅದಕ್ಕೆ ವಿ. ಹರಿಕೃಷ್ಣ ಅವರ ಸಂಗೀತ ಮತ್ತು ಜಯನೆನ್ ವಿನ್ಸೆಂಟ್‌ ಅವರ ಛಾಯಾಗ್ರಹಣದ ಕೊಡುಗೆಯೂ ದೊಡ್ಡದಿದೆ.
ಇದು ದರ್ಶನ್ ಅವರ 50ನೇ ಸಿನಿಮಾ. ಇದರಿಂದ ಚಿತ್ರದ ಮೇಲೆ ನಿರೀಕ್ಷೆಯ ಭಾರ ಹೆಚ್ಚಿತ್ತು. ದುರ್ಯೋಧನನ ಪಾತ್ರದಲ್ಲಿ ಅವರು ತಮ್ಮ ನಿಲುವು, ಕಣ್ಣೋಟ, ಗತ್ತಿನಿಂದ ಮನ ಸೆಳೆಯುತ್ತಾರೆ. ಅವರ ಪ್ರಭಾವಳಿ ಮತ್ತು ವ್ಯಾಪಾರಿ ಸೂತ್ರದ ಚೌಕಟ್ಟಿನಲ್ಲಿಯೇ ರೂಪುಗೊಂಡಿರುವ ಸಿನಿಮಾ ಇದು. ಹಾಗಾಗಿ, ಪಾತ್ರದೊಳಗೆ ಅವರೆಷ್ಟು ಪರಕಾಯ ಪ್ರವೇಶ ಮಾಡಿದ್ದಾರೆಂಬ ಲೆಕ್ಕಾಚಾರ ಬದಿಗಿಟ್ಟು ಸಿನಿಮಾ ನೋಡುವುದು ಅನಿವಾರ್ಯ.
ದರ್ಶನ್‌ ಡೈಲಾಗ್‌ಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ. ಆದರೆ, ಅವರ ಕಣ್ಣಲ್ಲಿ ಕಣ್ಣಿಟ್ಟು ಕೌರವರ ನಾಶಕ್ಕೆ ಪಣತೊಡುವ ಶಕುನಿ ಪಾತ್ರಧಾರಿಯಾಗಿ ರವಿಶಂಕರ್‌ ಅವರು ಕ್ರೌರ್ಯವನ್ನೇ ಮೆತ್ತಿಕೊಂಡಂತೆ ಅಭಿನಯಿಸಿದ್ದಾರೆ. ಪಗಡೆಯಾಟದ ದೃಶ್ಯಗಳಲ್ಲಿ ಅವರ ನಟನೆಗೆ ಪ್ರೇಕ್ಷಕರು ಮನಸೋಲದೆ ಇರಲಾರರು. ಕನ್ನಡದ ಹಳೆಯ ಪೌರಾಣಿಕ ಮತ್ತು ಚಾರಿತ್ರಿಕ ಸಿನಿಮಾಗಳಲ್ಲಿನ ಸಂಭಾಷಣೆ ಜನರಿಗೆ ಬಹುಬೇಗ ಅರ್ಥವಾಗುತ್ತದೆ. ಇದೇ ಆ ಸಿನಿಮಾಗಳ ಶಕ್ತಿ. ಅಂತಹ ಶಕ್ತಿಯು ಕುರುಕ್ಷೇತ್ರಕ್ಕೆ ದಕ್ಕಿಲ್ಲ. ಹಲವು ಸನ್ನಿವೇಶಗಳಲ್ಲಿನ ಸಂಭಾಷಣೆ ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಹಾಗಾಗಿಯೇ, ಅನುಭವಿ ನಟರ ದೊಡ್ಡ ದಂಡೇ ಇದ್ದರೂ ಅವರ ಸಂಭಾಷಣೆ ಗಿಳಿಪಾಠ ಒಪ್ಪಿಸಿದಂತೆ ಕೇಳಿಸುತ್ತದೆ. ದರ್ಶನ್‌ ಜೊತೆಗಿನ ಹರಿಪ್ರಿಯಾ ನೃತ್ಯ ಕ್ಯಾಬರೆ ಡಾನ್ಸ್ ಅನ್ನು ನೆನಪಿಸುತ್ತದೆ. ದೃಶ್ಯ ಶ್ರೀಮಂತಿಕೆ ಹಾಗೂ ರಂಜನೆಗೆ ಹೆಚ್ಚು ಒತ್ತು ಕೊಟ್ಟಿರುವುದರಿಂದ ಸೊಗಸಾಗಿ ಕಥೆ ಹೇಳುವ ನಿರ್ದೇಶಕರ ಉಮೇದು ಹಿನ್ನೆಲೆಗೆ ಸರಿದಿದೆ. ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರದಲ್ಲಿ ನಿರ್ದೇಶಕ ನಾಗಣ್ಣ ರಣರಂಗದಲ್ಲಿನ ಯುದ್ಧೋನ್ಮಾದವನ್ನು ಭೀಭತ್ಸ ಸನ್ನಿವೇಶಗಳ ಮೂಲಕ ಚಿತ್ರಿಸಿದ್ದರು. ಅವರ ಆ ದಾಟಿ ಇಲ್ಲಿ ತುಸು ಬದಲಾಗಿದೆ. ಆದರೆ, ದ್ವಾಪರಯುಗದ ಸುದೀರ್ಘ ಕಥನವನ್ನು ಕೆಲವೆಡೆ ಜನರಿಗೆ ಅರ್ಥವಾಗದ ಸಂಭಾಷಣೆ ಮೂಲಕ ಹೇಳುವ ಅನಿವಾರ್ಯತೆ ಅವರಿಗೆ ಎದುರಾಗಿರುವುದು ವಿಪರ್ಯಾಸ.
ಪ್ರಸ್ತುತ ಕನ್ನಡದಲ್ಲಿ ಪೌರಾಣಿಕ ಸಿನಿಮಾಗಳ ಪರಂಪರೆಯೇ ಕ್ಷೀಣಿಸುತ್ತಿದೆ. ಹಲವು ಕೊರತೆಗಳ ನಡುವೆಯೂ 3ಡಿ ಪೋಷಾಕು ಧರಿಸಿರುವ ‘ಮುನಿರತ್ನ ಕುರುಕ್ಷೇತ್ರ’ಕ್ಕೆ ಮೆಚ್ಚುಗೆಗೆ ಅರ್ಹವಾಗಿದೆ. (ಪ್ರಜಾವಾಣಿ )

ಬೆಂಗಳೂರು:
ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಯನದ 50ನೇ ಚಿತ್ರ ಕುರುಕ್ಷೇತ್ರ ನಿನ್ನೆ ಮಧ್ಯರಾತ್ರಿಯಿಂದಲೇ ಥಿಯೇಟರ್ ಗೆ ಲಗ್ಗೆ ಹಾಕಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಬಹುತಾರಾಗಣ, ಗ್ರಾಫಿಕ್ಸ್, ಬೃಹತ್ ಸೆಟ್ ಗಳು, 3 ಡಿ ತಂತ್ರಜ್ಞಾನದ ಪೌರಾಣಿಕ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಹೊಸ ಹವಾ ಕಿಯೇಟ್ ಮಾಡಿದೆ. ಎರಡು ವರ್ಷಗಳಿಂದ ಕಾದು ಕುಳಿತಿದ ಪ್ರೇಕ್ಷಕರಿಗೆ ರಸದೌತಣ ಉಣಬಡಿಸುತ್ತಿದೆ.ಕಾಸ್ಟ್ಯೂಮ್ ನಿಂದ ಹಿಡಿದು ಎಲ್ಲದರಲ್ಲಿಯೂ ಚಿತ್ರದಲ್ಲಿ ಶ್ರೀಮಂತಿಕೆ ಎದ್ದುಕಾಣುವಂತಿದೆ.
ಮಹಾಭಾರತ ಯುದ್ಧ ಆಧಾರಿತ ಈ ಚಿತ್ರವನ್ನು ಮುನಿರತ್ನ ನಿರ್ಮಾಣ ಮಾಡಿದ್ದು, ದೇಶ ವಿದೇಶಗಳಲ್ಲಿ ಬಿಡುಗಡೆಯಾಗಲಿದೆ. ಇದೀಗ ಕನ್ನಡ ಹಾಗೂ ತೆಲುಗಿನಲ್ಲಿ 1 ಸಾವಿರ ಸ್ಕ್ರೀನ್ ಗಳಲ್ಲಿ ಚಿತ್ರ ತೆರೆ ಕಂಡಿದೆ. ಸದ್ಯದಲ್ಲಿಯೇ ಹಿಂದಿ, ಮಲಯಾಳಂ ಹಾಗೂ ತಮಿಳಿನಲ್ಲಿಯೂ ಚಿತ್ರ ಬಿಡುಗಡೆಯಾಗಲಿದೆ.
ಟ್ವಿಟರ್ ನಲ್ಲಿ ಕುರುಕ್ಷೇತ್ರ ಸಿನಿಮಾಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ರೆಬೆಲ್ ಸ್ಟಾರ್ ಅಂಬರೀಷ್ ಅವರ ಕೊನೆಯ ಚಿತ್ರವಾಗಿರುವ ಕುರುಕ್ಷೇತ್ರ ಸಿನಿಮಾಗಿಂತಲೂ ಭಾವನಾತ್ಮಕವಾಗಿ ಹೆಚ್ಚು ಪ್ರಭಾವ ಬೀರುತ್ತಿದೆ ಎಂದು ಸಂಸದೆ ಹಾಗೂ ನಟಿ ಸುಮಲತಾ ಅಂಬರೀಷ್ ಟ್ವೀಟ್ ಮಾಡಿದ್ದಾರೆ. (ಕನ್ನಡಪ್ರಭ)

key words : kannada-kurukshethra-darshan-karnataka

———–