ಅಡಿಗಲ್ಲು ಫಲಕದಲ್ಲಿ ಕನ್ನಡ ಕಡೆಗಣನೆ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಕ್ರೋಶ

 

ಬೆಂಗಳೂರು,ಜನವರಿ,18,2021(www.justkannada.in):  ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಕ್ಷಿಪ್ರ ಕಾರ್ಯಪಡೆ (ರ‍್ಯಾಪಿಡ್ ಆಕ್ಷನ್ ಫೊರ್ಸ್) ಘಟಕದ ಶಂಕುಸ್ಥಾಪನೆಯ ಅಡಿಗಲ್ಲು ಫಲಕಗಳಲ್ಲಿ ಕನ್ನಡವನ್ನು ಕಡೆಗಣಿಸಿ ಕೇವಲ ಹಿಂದಿ ಮತ್ತು ಆಂಗ್ಲಭಾಷೆಯ ಅಡಿಗಲ್ಲು ಫಲಕಗಳನ್ನು ಅಳವಡಿಸಿ ಅನಾವರಣಗೊಳಿಸಲು ಕಾರಣರಾದ ಅಧಿಕಾರಿ/ನೌಕರರ ಮೇಲೆ ತ್ರಿಭಾಷಾ ನಿಯಮದ ಉಲ್ಲಂಘನೆ ಸಂಬಂಧ ಶಿಸ್ತುಕ್ರಮ ಜರುಗಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಒತ್ತಾಯಿಸಿದ್ದಾರೆ.

ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು, ಆಡಳಿತದಲ್ಲಿ ಕನ್ನಡವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಬದ್ಧತೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಶಯದಂತೆ 2020-21ನ್ನು ಕನ್ನಡ ಕಾಯಕ ವರ್ಷಾಚರಣೆ ಎಂದು ಘೋಷಿಸಿ ಕನ್ನಡಪರ ಚಟುವಟಿಕೆಗಳನ್ನು ಸಮರೋಪಾದಿಯಲ್ಲಿ ಹಮ್ಮಿಕೊಳ್ಳುವಂತೆ ನಿರ್ದೇಶಿಸಿ, ಈಗಾಗಲೇ ಆದೇಶವನ್ನೂ ಹೊರಡಿಸಲಾಗಿದೆ. ಮಾನ್ಯ ಕೇಂದ್ರ ಗೃಹಮಂತ್ರಿಗಳು ಆರ್.ಎ.ಎಫ್ (ಕ್ಷಿಪ್ರ ಕಾರ್ಯಪಡೆ) ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಫಲಕದಲ್ಲಿ ಕೇವಲ ಹಿಂದಿ ಮತ್ತು ಇಂಗ್ಲಿಷ್‍ನ್ನು ಮಾತ್ರ ಪರಿಗಣಿಸಲಾಗಿದೆ. ಪ್ರಧಾನವಾಗಿ ಬಳಸಬೇಕಿದ್ದ ರಾಜ್ಯಭಾಷೆಯಾದ ಕನ್ನಡವನ್ನು ಸಂಪೂರ್ಣವಾಗಿ ಕೈಬಿಟ್ಟಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತ್ರಿಭಾಷಾನೀತಿಯನ್ನು ಉಲ್ಲಂಘಿಸಿದಂತಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಗೃಹ ಇಲಾಖೆಗೆ ಬರೆಯಲಾಗಿರುವ ಪತ್ರದಲ್ಲಿ ಉಲ್ಲೇಖಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಹಿತ್ಯಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಕನ್ನಡ ಭಾಷೆಯ ಹೆಜ್ಜೆ ಗುರುತುಗಳು ಈಗಾಗಲೇ ವಿಶ್ವದಾದ್ಯಂತ ಪಸರಿಸಿದೆ. ಕರ್ನಾಟಕದಲ್ಲಿ ‘ಕನ್ನಡವೇ ಸಾರ್ವಭೌಮ’ ಭಾಷೆ. ಕನ್ನಡವನ್ನು ಆಡಳಿತ, ಶಿಕ್ಷಣ, ತಂತ್ರಜ್ಞಾನ ಹಾಗೂ ಸಾರ್ವಜನಿಕವಾಗಿ ಬಳಕೆಯಲ್ಲಿರುವಂತೆ ನೋಡಿಕೊಳ್ಳಲು ಪ್ರಾಧಿಕಾರ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಭಾಷಾನೀತಿ ಅನ್ವಯ ಹಲವು ಉಪಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವೇ 350ಕ್ಕೂ ಹೆಚ್ಚು ಕನ್ನಡಪರ ಆಜ್ಞೆ, ಆದೇಶಗಳನ್ನು ಹೊರಡಿಸಿ ಕನ್ನಡದ ಬಗೆಗಿನ ತನ್ನ ಬದ್ಧತೆಯನ್ನು ತೋರಿದೆ. ಕೇಂದ್ರವು ಕೂಡ ರಾಜ್ಯದಲ್ಲಿರುವ ಕೇಂದ್ರ ಸ್ವಾಮ್ಯದ ಕಛೇರಿ/ಸಂಸ್ಥೆಗಳಲ್ಲಿ ತ್ರಿಭಾಷಾ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶನ ನೀಡಲಾಗಿದ್ದರೂ ಕ್ಷಿಪ್ರ ಕಾರ್ಯಪಡೆ ಘಟಕದ ಶಂಕುಸ್ಥಾಪನೆ ಅಡಿಗಲ್ಲಿನಲ್ಲಿ ಮತ್ತು ಸದರಿ ಕಾರ್ಯಕ್ರಮಗಳ ವೇದಿಕೆ ಫಲಕಗಳಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ಅಧಿಕಾರಿಗಳ ಉದ್ಧಟತನವನ್ನು ತೋರಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ಇಂತಹ ಧೋರಣೆಯಿಂದಾಗಿ ಕನ್ನಡಪರ ಮನಸ್ಸುಗಳು ರಾಜ್ಯ ಸರ್ಕಾರದ ಭಾಷಾನೀತಿಯ ಅನುಷ್ಠಾನದ ಬದ್ಧತೆಯ ಬಗ್ಗೆ ಪ್ರಶ್ನಿಸುವಂತಾಗಿದೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ, ಮುದ್ರಣ ಮಾಧ್ಯಮ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಈ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಇದು ರಾಜ್ಯದ ಮಾನ್ಯ ಮುಖ್ಯಮಂತ್ರಿಗಳ ಆಡಳಿತ ಕನ್ನಡ ಬದ್ಧತೆಗೆ ಚ್ಯುತಿ ಉಂಟು ಮಾಡಿದ್ದು, ಖೇದಕರ ಸಂಗತಿಯಾಗಿದೆ ಎಂದಿದ್ದಾರೆ.

keywords: Kannada disregard in footer panel. Kannada Development Authority Outrage