ಪತ್ರಕರ್ತರ ಬದುಕು ಹಾಗೆ ಮಾತ್ರವಲ್ಲ ಹೀಗೂ ಇರುತ್ತೆ!!

ಚಾಮರಾಜನಗರ,ಆ,21,2020(www.justkannada.in): ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕವಾಗಿ ಪತ್ರಕರ್ತರೂ ಸಹ ಹೆಚ್ಚೆಚ್ಚು ಟೀಕೆಗೆ ಒಳಗಾಗ್ತಿದ್ದಾರೆ. ಅದು ಸುದ್ದಿಯ ವಿಚಾರಕ್ಕೋ, ಸುದ್ದಿಯಲ್ಲಿನ ಪಕ್ಷಪಾತದ ವಿಚಾರಕ್ಕೋ, ಪೇಯ್ಡ್ ನ್ಯೂಸ್ ಕಾರಣಕ್ಕೋ ಹೀಗೆ ಹಲವು ವಿಷಯಗಳಿಗಾಗಿ.journalists-life-not-just-veerabadra-nayaka

ಇದರ ಜೊತೆಗೆ ಪತ್ರಕರ್ತರ ಜೀವನ ಅಂದ್ರೆ ಐಷಾರಾಮಿ ಇರಬಹುದೇನೋ ಎಂದು ಭಾವಿಸುವವರೂ ಉಂಟು. ಹಾಗೆ ಭಾವಿಸಿದ್ದರೆ ಅದರಲ್ಲಿ ತಪ್ಪೇನೂ ಇಲ್ಲ. ಮಾಧ್ಯಮ ಸಂಸ್ಥೆಗಳ ಆಯಕಟ್ಟಿನ ಹುದ್ದೆಗಳಲ್ಲಿ ಇರುವವರಿಗೆ ಎಸಿ ಕಚೇರಿ, ಎಸಿ ಕಾರು ಸಹ ಇರುತ್ತದೆ. ಆದರೆ ಅವರ ಕೆಳಹಂತದಲ್ಲಿ ಕೆಲಸ ಮಾಡುವವರದು ಅದಕ್ಕಿಂತ ತೀರಾ ಭಿನ್ನವಾಗಿರುತ್ತದೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಕೆಲಸ ಮಾಡುವ ವರದಿಗಾರರ ಬದುಕು ಹೇಗಿರಬಲ್ಲದು ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ.

ಓದಿಕೊಳ್ಳಿ….

ಈ ಚಿತ್ರದಲ್ಲಿ ಇರುವವರ ಹೆಸರು ಜಿ.ವೀರಭದ್ರನಾಯಕ. ಚಾಮರಾಜನಗರ-ಮೈಸೂರು ಭಾಗದ ಪತ್ರಕರ್ತರ ವಲಯದಲ್ಲಿ ಅಂಬಳೆ ವೀರಭದ್ರನಾಯಕ ಎಂದೇ ಖ್ಯಾತಿ.

ಯಳಂದೂರು ತಾಲೂಕಿನ ಅಂಬಳೆ ಗ್ರಾಮದವರಾದ ವೀರಭದ್ರನಾಯಕ, ತಮ್ಮ ಹದಿನಾಲ್ಕನೇ ವಯಸ್ಸಿನಲ್ಲೇ(1999) ಪತ್ರಿಕೋದ್ಯಮದೊಂದಿಗೆ ನಂಟು ಬೆಳೆಸಿಕೊಂಡವರು. ಯಳಂದೂರಿನ ಪ್ರಸಿದ್ಧ ಪ್ರಿಂಟಿಂಗ್ ಪ್ರೆಸ್ ಮಾಲೀಕರೂ, ಅಂದಿನ ಮೈಸೂರು ಮಿತ್ರ ವರದಿಗಾರರೂ ಆಗಿದ್ದ ದಿವಂಗತ ಮಲ್ಲಿಕಾರ್ಜುನಸ್ವಾಮಿ ಅವರ ಬಳಿ ಪ್ರೆಸ್ ನಲ್ಲಿ ಕೆಲಸ ಮಾಡುತ್ತಿರುತ್ತಾರೆ. ಅಲ್ಲಿರುವಾಗಲೇ ಮೈಸೂರು ಮಿತ್ರ ಪತ್ರಿಕೆ ಏಜೆನ್ಸಿ ಪಡೆದು, ಯಳಂದೂರು ಪಟ್ಟಣ ಮತ್ತು ಸುತ್ತಮುತ್ತ ಪತ್ರಿಕೆ ವಿತರಣೆ ಆರಂಭಿಸ್ತಾರೆ. ಮಲ್ಲಿಕಾರ್ಜುನಸ್ವಾಮಿಯವರ ಬಳಿಯೇ ವರದಿಗಾರಿಕೆ ಪಟ್ಟು ಕಲಿತು, ನಂತರ ಪ್ರಜಾನುಡಿ, ಆಂದೋಲನ ಪತ್ರಿಕೆಗಳ ಏಜೆನ್ಸಿ ಪಡೆಯುವುದರ ಜೊತೆಗೆ ಅವುಗಳಿಗೆ ವರದಿ ಮಾಡಲು ಆರಂಭಿಸುತ್ತಾರೆ. 2004 ರಿಂದ ಕನ್ನಡ ಪ್ರಭ ಪತ್ರಿಕೆ ತಾಲೂಕು ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ಕಳೆದೊಂದು ವರ್ಷದಿಂದ ಬಿಳಿಗಿರಿ ಎಕ್ಸ್‌ಪ್ರೆಸ್‌ ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿ, ಪಬ್ಲಿಷರ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಯಳಂದೂರು ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ, ಅಕ್ರಮ ಮರಳು ಸಾಗಾಣಿಕೆ, ಸರ್ಕಾರಿ ಕಚೇರಿಗಳ ಭ್ರಷ್ಟಾಚಾರ ಕುರಿತು ಬರೆದ ವರದಿಗಳಿಗೆ ಲೆಕ್ಕವಿಲ್ಲ. ಯಳಂದೂರು ಮಟ್ಟಿಗೆ ಅಗ್ರೆಸಿವ್ ಜರ್ನಲಿಸ್ಟ್ ಎಂದರೆ ಅದು ವೀರಭದ್ರನಾಯಕ.journalists-life-not-just-veerabadra-nayaka

ಇವರ ತಂದೆ ಯಳಂದೂರು ಪಟ್ಟಣದಲ್ಲಿ ಚಹಾ ಅಂಗಡಿ ಇಟ್ಟುಕೊಂಡು ಜೀವನ ಮಾಡುತ್ತಿದ್ದಾರೆ. ತನ್ನ ತಂಗಿ ಅಕಾಲಿಕ ಮರಣಕ್ಕೆ ತುತ್ತಾದಾಗ ಆಸ್ಪತ್ರೆ ಖರ್ಚುವೆಚ್ಚಗಳಿಗಾಗಿ ಲಕ್ಷಗಟ್ಟಲೇ ಸಾಲ ಮಾಡಿಕೊಳ್ತಾರೆ. ಪತ್ರಿಕೆ ವಿತರಿಸಿ ಸರಿಯಾಗಿ ಹಣ ವಸೂಲಿಯಾಗಲಿಲ್ಲ, ಸಾಲ ಇಮ್ಮಡಿಯಾಯ್ತು. ತಮ್ಮ ಮಾಲೀಕತ್ವದ ಪತ್ರಿಕೆಯ ಜವಾಬ್ದಾರಿಯನ್ನು ಬೇರೊಬ್ಬರಿಗೆ ವಹಿಸಿದ್ದಾರೆ. ಕನ್ನಡಪ್ರಭದಲ್ಲಿ ಇವರಿಗೆ ಸಿಗುತ್ತಿರುವುದು ಗೌರವ ಸಂಭಾವನೆಯೇ ಹೊರತು, ಸಂಬಳವಲ್ಲ. ಹೀಗಾಗಿ ತಂದೆತಾಯಿ, ಹೆಂಡತಿ ಮಕ್ಕಳನ್ನು ಸಾಕಲು ತುಂಬಾ ಕಷ್ಟವಾಗುತ್ತದೆ. ಹಾಗೆ ಸಂಕಷ್ಟಕ್ಕೆ ಸಿಲುಕಿದಾಗ ವೀರಭದ್ರನಾಯಕ ಧೃತಿಗೆಡಲಿಲ್ಲ ಬದಲಿಗೆ ಬೀದಿ ಬದಿಯಲ್ಲೇ ತರಕಾರಿ ವ್ಯಾಪಾರಕ್ಕಿಳಿದ್ರು. ಯಾವ ಕಾಲಕ್ಕೆ ಯಾವ ಹಣ್ಣು,ತರಕಾರಿಗೆ ಬೇಡಿಕೆ ಇರುತ್ತದೆಯೋ ಅದನ್ನೇ ತಂದು ಮಾರಲು ಶುರು ಮಾಡಿದ್ರು. ಹಬ್ಬಹರಿದಿನಗಳು ಬಂದಾಗಲಂತೂ ಇವರು ವ್ಯಾಪಾರದಲ್ಲಿ ತುಂಬಾನೇ ಬ್ಯುಸಿ. ‘ಏನಣ್ಣಾ ವ್ಯಾಪಾರ ಜೋರ ಅಂದ್ರೆ, ಹೌದು ಕಣಣ್ಣಾ, ಏನೋ ಹೊಟ್ಟೆ ಪಾಡು ನಡೀಬೇಕಲ್ವ?’ ಎಂಬ ನಗುಮುಖದ ಉತ್ತರ ಸಿಗುತ್ತೆ.

ಚಿಕ್ಕವಯಸ್ಸಿನಲ್ಲೇ ಪತ್ರಿಕೋದ್ಯಮ ಪ್ರವೇಶ ಮಾಡಿದ ನಾಯಕ್, ಈವರೆಗೆ ಹಲವು ಮಂದಿಯನ್ನು ಯಳಂದೂರು ತಾಲ್ಲೂಕಿಗೆ ಪತ್ರಕರ್ತರಾಗಿ ಪರಿಚಯಿಸಿದ್ದಾರೆ. ಇನ್ನೂ ಸಹ ನಾನು ಪತ್ರಕರ್ತ ಆಗಬೇಕೆಂದು ಬಯಸುವವರನ್ನು ಫೀಲ್ಡಿಗೆ ಇಳಿಸುತ್ತಲೇ ಇದ್ದಾರೆ. ಮಧ್ಯಾಹ್ನದ ನಂತರ ಆ ದಿನದ ಸುದ್ದಿ ಬಗ್ಗೆ ತಲೆಕೆಡಿಸಿಕೊಳ್ಳುವ ನಾಯಕ್, ಅಲ್ಲಿಯವರೆಗೆ ವ್ಯಾಪಾರ ಮಾಡುತ್ತಾರೆ. ಸಧ್ಯಕ್ಕೆ ವ್ಯಾಪಾರ ನನ್ನ ವೃತ್ತಿ. ಪತ್ರಿಕೋದ್ಯಮ ಪ್ರವೃತ್ತಿ ಎನ್ನುವುದನ್ನು ಮರೆಯುವುದಿಲ್ಲ. ವ್ಯಾಪಾರ ಮಾಡಲು ಬೀದಿಯಾದರೇನು, ಮಳಿಗೆಯಾದರೇನು? ಮನೆಮಂದಿಯ ಜೀವನ ನಡೆಯಬೇಕೆಂದರೆ ನಾನಿಲ್ಲಿ ಕೂರಲೇಬೇಕು ಎನ್ನುತ್ತಾರೆ.

ಪತ್ರಕರ್ತನೆಂಬ ಐಡಿ ಕಾರ್ಡು ಜೊತೆಗಿದ್ದರೆ ಏನೋ ಮಾಡಿಬಿಡ್ತೇನೆ ಎಂಬ ಹುಂಬರು ವೀರಭದ್ರನಾಯಕರನ್ನು ನೋಡಿ ಕಲಿಯುವುದು ಸಾಕಷ್ಟಿದೆ. ಪತ್ರಕರ್ತರೆಲ್ಲರೂ ವಸೂಲಿಕೋರರಿಬೇಕೆಂದು ಮನಸ್ಸಲ್ಲಿ ಪೂರ್ವಾಗ್ರಹ ಆಲೋಚನೆ ಇರುವವರು ವೀರಭದ್ರನಾಯಕರು ಮತ್ತು ಬೆಳಕಿಗೆ ಬರದ ರಾಜ್ಯದ ಉದ್ದಗಲಕ್ಕೂ ಸಿಗುವ ಇಂತಹ ಹಲವರ ಕುರಿತು ಏನು ಹೇಳ್ತಾರೋ?

ಕೃಪೆ

-ಗೌಡಹಳ್ಳಿ‌ ಮಹೇಶ್