ಪತ್ರಕರ್ತ ಎಂ.ಸಿ.ಮಂಜುನಾಥ್ ಅವರ ಶವ ಆಪೆ ಆಟೋದಲ್ಲಿ ಸಾಗಿಸಿದ ವಿಚಾರ: ತನಿಖೆ ನಡೆಸಿ, ಕಾನೂನು ಕ್ರಮ ಜರುಗಿಸಲು ಆಗ್ರಹ…

ಬೆಂಗಳೂರು,ನ,21,2019(www.justkannada.in): ಅಪಘಾತದಲ್ಲಿ ಮೃತಪಟ್ಟ ಹಾವೇರಿ ಜಿಲ್ಲಾ ಪ್ರಜಾವಾಣಿ ವರದಿಗಾರ ಎಂ.ಸಿ.ಮಂಜುನಾಥ ಅವರ ಶವವನ್ನು ಆಪೆ ಆಟೋದಲ್ಲಿ ಸಾಗಿಸಿದ್ದು ಪತ್ರಕರ್ತರ ಸಮೂಹಕ್ಕೆ ಮಾಡಿದ ಅವಮಾನ. ಹೀಗಾಗಿ ಸಾವನ್ನು ಅವಮಾನಿಸಿದ ಘಟನೆಗೆ ಕಾರಣರಾದವರ ಮೇಲೆ ತನಿಖೆ ನಡೆಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಬೆಂಗಳೂರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷರಾದ ಶಿವಾನಂದ ತಗಡೂರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಪತ್ರಿಕೆಯ ಹಾವೇರಿ ಜಿಲ್ಲಾ ವರದಿಗಾರ ಮಂಜುನಾಥ್ ಎಂ.ಸಿ.(30) ಅವರು ದಾವಣಗೆರೆ ಜಿಲ್ಲೆ ಮಾಯಕೊಂಡ ಸಮೀಪದ ಕೊಡಗನೂರು ಬಳಿ ಬೈಕ್ ನಲ್ಲಿ ಹೋಗುತ್ತಿದ್ದಾಗ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದರು. ಈ ವೇಳೆ ಎಂ.ಸಿ.ಮಂಜುನಾಥ್ ಅವರ ಶವವನ್ನು ಆಪೆ ಆಟೋದಲ್ಲಿ ಸಾಗಿಸಲಾಗಿತ್ತು.

ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ  ಬೆಂಗಳೂರು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಅಧ್ಯಕ್ಷರಾದ ಶಿವಾನಂದ ತಗಡೂರು, ಎಂ.ಸಿ.ಮಂಜುನಾಥ್ ಅವರ ಶವವನ್ನು ಪ್ರಾಣಿಗಳಿಗಿಂತ ನಿಕೃಷ್ಟವಾಗಿ ಆಪೆ ಆಟೋದಲ್ಲಿ ಸಾಗಿಸಲಾಗಿದ್ದು,  ಮಾನವಂತವರ ಹೃದಯ ಕದಡಿದೆ. ಈ ಘಟನೆ ಅತ್ಯಂತ ನೋವಿನ ಮತ್ತು ನಾಚಿಕೆಗೇಡಿನ ಹಾಗೂ ಖಂಡನಾರ್ಹ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಎರಡು ವರ್ಷದ ಹಿಂದೆ ಹೀಗೆ ಅಪಘಾತದಲ್ಲಿ ಮೃತಪಟ್ಟ ಪತ್ರಕರ್ತ ಮೌನೇಶ ಬಡಿಗೇರ ಅವರ ಶವವನ್ನು ಲಾರಿಯಲ್ಲಿ ಸಾಗಿಸಿದ್ದು ತಲೆತಗ್ಗಿಸುವ ಘಟನೆ ಮರೆಯುವ ಮುನ್ನವೇ ಮತ್ತೊಂದು ಘಟನೆ ನಡೆದದ್ದು ಕಳವಳಕಾರಿ ಸಂಗತಿಯಾಗಿದೆ. ಇಬ್ಬರು ಪತ್ರಕರ್ತರ ಸಾವಿನ ಸಂದರ್ಭದ ಘಟನೆಗಳು ಪತ್ರಕರ್ತರ ಸಮೂಹಕ್ಕೆ ಮಾಡಿದ ಅವಮಾನ. ಸಾವು, ಒಂದು ಗೌರವ, ಘನತೆ ಬಯಸುತ್ತದೆ. ಸಾವನ್ನು ಅವಮಾನಿಸಿದ ಘಟನೆಗೆ ಕಾರಣರಾದವರ ಮೇಲೆ ತನಿಖೆ ನಡೆಸಿ, ಕಾನೂನು ಕ್ರಮ ಜರುಗಿಸಬೇಕು. ಮುಂದೆ ಯಾವುದೇ ಇಂತಹ ಅಮಾನವೀಯ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಗೃಹ ಇಲಾಖೆ ಮೂಲಕ ಸುತ್ತೋಲೆ ಹೊರಡಿಸಬೇಕು ಎಂದು ಶಿವಾನಂದ ತಗಡೂರು ಒತ್ತಾಯಿಸಿದ್ದಾರೆ.

Key words: journalist -MC Manjunatha- body – Ape Auto- Investigate –      KUWJ-president-Shivananda Tagadur