JK EXCLUSIVE : ಹೆಚ್ಚುತ್ತಿದೆ ಮಕ್ಕಳ ಭಿಕ್ಷಾಟನೆ, ಹೇಳಿ ಇದಕ್ಕೆ ಯಾರು ಹೊಣೆ..?

Mysore-child-beggars-increases-District Child Protection Unit-not-working

 

ಮೈಸೂರು, ನ.04, 2021 : (www.justkannada.in news) : ಸಂಕಷ್ಟ ಪರಿಸ್ಥಿತಿಯಲ್ಲಿನ ಮಕ್ಕಳಿಗೆ ಹಾಗೂ ಸಮಾಜದ ಇತರ ದುರ್ಬಲ ವರ್ಗದ ಮಕ್ಕಳಿಗೆ ಸರ್ಕಾರ ಮತ್ತು ನಾಗರೀಕ ಸಮಾಜದ ಸಹಭಾಗಿತ್ವದಲ್ಲಿ ರಕ್ಷಣಾತ್ಮಕ ವಾತಾವರಣವನ್ನು ನಿರ್ಮಿಸುವ ಸಲುವಾಗಿ ರಾಜ್ಯ ಹಾಗೂ ಕೇಂದ್ರ ಸರಕಾರ ಸಮಗ್ರ ಮಕ್ಕಳ ರಕ್ಷಣಾ ಯೋಜನೆ ಜಾರಿಗೊಳಿಸಿದೆ. ಆದರೆ ಇದು ಯಶಸ್ವಿಯಾಗಿ ಅನುಷ್ಠಾನಕ್ಕೆ ತರುವಲ್ಲಿ ಅಧಿಕಾರಿಗಳ ದಿವ್ಯ ನಿರ್ಲಕ್ಷ ಎದ್ದು ಕಾಣುತ್ತಿದೆ.

ಪರಿಣಾಮ ನಗರ ಪ್ರದೇಶಗಳಲ್ಲಿ ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿರುವುದು ಸಾಮಾನ್ಯವಾಗಿದೆ. ಸಾಂಸ್ಕೃತಿಕ ನಗರಿ, ಪ್ರವಾಸಿಗರ ನೆಚ್ಚಿನ ಸ್ಥಳ ಅದರಲ್ಲೂ ವಿದೇಶಿಗರು ಅತಿ ಹೆಚ್ಚು ಭೇಟಿ ನಿಡುವ ಮೈಸೂರು ಹಾಗೂ ಅರಮನೆ ಸುತ್ತಮುತ್ತ ಮಕ್ಕಳ ಭಿಕ್ಷಾಟನೆ ಹೆಚ್ಚಾಗಿ ಕಂಡು ಬರುತ್ತಿರುವುದು, ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.

ಹೊಟ್ಟೆ ಹಸಿವು, ಪೆನ್ನು ಖರೀದಿಸಿ ಎಂದು ಬಾಲಕರು ಸರ್ಕಲ್ ಗಳಲ್ಲಿ, ಜನನಿಭಿಡ ಸ್ಥಳಗಳಲ್ಲಿ ಕಂಡು ಬರುತ್ತಿದ್ದಾರೆ. ಇದರ ಜತೆಗೆ, ಅರೆ ಪ್ರಜ್ಞಾಹೀನಾ ಸ್ಥಿತಿಯಲ್ಲಿರುವ ಪುಟಾಣಿ ಮಕ್ಕಳನ್ನು ಕಂಕುಳಲ್ಲಿ ಹೊತ್ತ ಮಹಿಳೆಯರು, ಮಗುವಿನ ಹಾಲಿಗೆ ದುಡ್ಡಿಲ್ಲ ಎಂದು ಭಿಕ್ಷೆ ಕೇಳುತ್ತಿರುವುದು ನಿತ್ಯ ಕಂಡು ಬರುತ್ತದೆ.

ಸರಕಾರದ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯು ನಿರ್ಲಕ್ಷತೆಗೊಳಗಾದ, ಪರಿತ್ಯಜಿಸಲ್ಪಟ್ಟ, ದೌರ್ಜನ್ಯಕ್ಕೆ – ಶೋಷಣೆಗೆ ಒಳಗಾದ ಮತ್ತು ಕುಟುಂಬದಿಂದ ಬೇರ್ಪಟ್ಟ ಮಕ್ಕಳು ದುರ್ಬಲ ಸ್ಥಿತಿಗೆ ತಲುಪದಿರುವಂತೆ ತಡೆಯಲು ಹಾಗೂ ಇಂತಹ ಪ್ರಕರಣಗಳನ್ನು ಕಡಿಮೆ ಮಾಡಲು ಮತ್ತು ಸಂಕಷ್ಟದಲ್ಲಿರುವ ಮಕ್ಕಳ ಪರಿಸ್ಥಿತಿಯನ್ನು ಉತ್ತಮಪಡಿಸುವ ಉದ್ದೇಶ ಹೊಂದಿದೆ. ಆದರೆ ವಿಪರ್ಯಾಸವೆಂದರೆ ಇದ್ಯಾವುದು ಕಾರ್ಯರೂಪಕ್ಕೆ ಬಾರದೆ ಕೇವಲ ಘೋಷಣೆಯಾಗಿ ಮಾತ್ರ ಉಳಿದುಕೊಂಡಿರುವುದು.

ಮೈಸೂರಿನ ವಿವಿಧೆಡೆ ಭಿಕ್ಷಾಟನೆಯಲ್ಲಿ ನಿರತ ಮಕ್ಕಳು..

ಸಂಕಷ್ಟ ಪರಿಸ್ಥಿತಿಯಲ್ಲಿರುವ ಎಲ್ಲಾ ಮಕ್ಕಳನ್ನು ನಿರ್ಧಿಷ್ಟವಾಗಿ ತಲುಪುವ ಸಲುವಾಗಿ ಸರ್ಕಾರ ಮತ್ತು ನಾಗರೀಕ ಸಮಾಜದ ಭಾಗವಹಿಸುವಿಕೆ ಅಡಿಯಲ್ಲಿ ಮಕ್ಕಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿರ್ದೇಶನ ಮತ್ತು ಜವಾಬ್ದಾರಿಯಲ್ಲಿ ಸಮಗ್ರ ಮಕ್ಕಳ ರಕ್ಷಣಾ ಯೋಜನೆ (ಐಸಿಪಿಎಸ್) ಯನ್ನು ಅನುಷ್ಠಾನಗೊಳಿಸಲಾಗಿದೆ. ಇದಕ್ಕಾಗಿ ಲಕ್ಷಾಂತರ ರೂ.ಗಳನ್ನು ನೀಡಲಾಗಿದೆ. ಆದರೆ ಇದ್ಯಾವುದು ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂಬುದಕ್ಕೆ ಈ ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿರುವುದೇ ಸಾಕ್ಷಿ.

ಬೇಜಾವಾಬ್ದಾರಿ ಸಂಸ್ಥೆ :

ಈ ರೀತಿ ಮಕ್ಕಳ ಭಿಕ್ಷಾಟನೆ ಹಾಗೂ ಪುಟಾಣಿ ಮಕ್ಕಳನ್ನು ತೋರಿಸುತ್ತ ಹಣ ವಸೂಲಿ ಮಾಡುತ್ತಿರುವ ವ್ಯವಸ್ಥೆ ಬಗ್ಗೆ ಜಸ್ಟ್ ಕನ್ನಡ ಜತೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ರವೀಂದ್ರ ಅವರು ಹೇಳುವುದಿಷ್ಟು..

ಮಕ್ಕಳ ಹಕ್ಕು ರಕ್ಷಣೆಗಾಗಿಯೇ ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ( District Child Protection Unit) ಸ್ಥಾಪಿಸಿ ಒರ್ವ ಅಧಿಕಾರಿಯನ್ನು ( District child protection officer – DCPO ) ನೇಮಿಸಲಾಗಿದೆ. ಆದರೆ ಮೈಸೂರು ಜಿಲ್ಲೆಯ ಮಟ್ಟಿಗೆ ಈ ಅಧಿಕಾರಿ ಅತ್ಯಂತ ಬೇಜಾವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳ ಹಕ್ಕು ಸಂರಕ್ಷಣೆಗೆ ಸಂಬಂಧಿಸಿದಂತೆ ಈ ತನಕ ಹಲವಾರು ಬಾರಿ ದೂರುಗಳನ್ನು ನೀಡಿದರು ಯಾವುದೇ ಕ್ರಮ ಜರುಗಿಸಿಲ್ಲದಿರುವುದೇ ಬೇಜಾವಾಬ್ದಾರಿತನಕ್ಕೆ ಸಾಕ್ಷಿ.

ಮಕ್ಕಳ ಕಾನೂನಿನ್ವಯ 17 ವರ್ಷಕ್ಕಿಂತ ಕೆಳಗಿನ ಮಕ್ಕಳ ಮೇಲಿನ ದೌರ್ಜನ್ಯ ಕಂಡು ಬಂದಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗಿ ಮಕ್ಕಳ ರಕ್ಷಣೆಗೆ ಸೂಕ್ತ ಕ್ರಮ ಜರುಗಿಸಬೇಕು. ಆದರೆ, ಖುದ್ದು ದೂರು ನೀಡಿದರು ಯಾವುದೇ ಕ್ರಮಕ್ಕೆ ಮುಂದಾಗದೆ ಬೇಜಾವಾಬ್ದಾರಿಯಿಂದ ವರ್ತಿಸುತ್ತಿರುವುದು ವಿಪರ್ಯಾಸವೇ ಸರಿ.

KEY WORDS : Mysore-child-beggars-increases-District Child Protection Unit-not-working