“ಜನತಾದಳದ ಶಕ್ತಿಯನ್ನು ಸಿದ್ದರಾಮಯ್ಯ ಅವರಿಗೆ ತವರು ಜಿಲ್ಲೆಯಲ್ಲೇ ತೋರಿಸಿದ್ದೇವೆ” :  ಶಾಸಕ ಸಾ.ರಾ.ಮಹೇಶ್ ವಾಗ್ದಾಳಿ

kannada t-shirts

ಮೈಸೂರು,ಫೆಬ್ರವರಿ,28,2021(www.justkannada.in) : ಮೈಸೂರು ಮೈತ್ರಿ ಗೊಂದಲಕ್ಕೆ ಸಿದ್ದರಾಮಯ್ಯ ಕಾರಣ. ಜನತಾದಳದ ಶಕ್ತಿಯನ್ನು ಸಿದ್ದರಾಮಯ್ಯ ಅವರಿಗೆ ತವರು ಜಿಲ್ಲೆ ಮೈಸೂರಿನಲೇ  ತೋರಿಸಿದ್ದೇವೆ ಎಂದು ಶಾಸಕ ಸಾ.ರಾ.ಮಹೇಶ್ ವಾಗ್ದಾಳಿ ನಡೆಸಿದರು.

jk

ಸಾ.ರಾ.ಮಹೇಶ್ ಕಚೇರಿಯಲ್ಲಿ ಮೇಯರ್-ಉಪಮೇಯರ್ ಚುನಾವಣೆ ಸಂಬಂಧಿಸಿದಂತೆ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಕುರಿತು ಜೆಡಿಎಸ್ ಪಾಲಿಕೆ ಸದಸ್ಯರ ಜೊತೆ ಸುದ್ದಿಗೋಷ್ಠಿ ನಡೆಸಿ, ಮೈತ್ರಿ ಅನಿವಾರ್ಯ ಹಾಗೂ ಚುನಾವಣಾ ದಿನದ ಕಾರ್ಯತಂತ್ರಗಳ ಬಗ್ಗೆ ಶಾಸಕ ಸಾ.ರಾ.ಮಹೇಶ್ ಮಾತನಾಡಿದರು.

ಪ್ರಾದೇಶಿಕ ಪಕ್ಷವನ್ನು ಹಗುರವಾಗಿ ನೋಡಬೇಡಿ, ಚಿಕ್ಕದಾಗಿ ನೋಡಬೇಡಿ. ಕೊನೆ ಕ್ಷಣದಲ್ಲಿ ಕೈ ಮೈತ್ರಿ ಆಗಲು ಜಿ.ಟಿ.ದೇವೇಗೌಡ, ಸಂದೇಶ್ ನಾಗರಾಜ್ ಕಾರಣ. ಅವರು ಬಂದಿದ್ದರೆ ನಾವು ಮೈತ್ರಿ‌ ಮಾಡಿಕೊಳ್ಳುತ್ತಿರಲಿಲ್ಲ. ಬದಲಿಗೆ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಿದ್ದೆವು ಎಂದು ವಿವರಿಸಿದ್ದಾರೆ.

ಮುಂದಿನ ಸಾರಿ ಕಾಂಗ್ರೆಸ್‌ಗೆ ಮೇಯರ್ ಸ್ಥಾನ

ಮಾತಿನಂತೆ ಒಂದು ಬಾರಿ ಕೈ ಗೆ ಮೇಯರ್ ಸ್ಥಾನ. ಮುಂದಿನ ಸಾರಿ ಕಾಂಗ್ರೆಸ್‌ಗೆ ಮೇಯರ್ ಸ್ಥಾನ ನೀಡುತ್ತೇವೆ. ಆದರೆ, ಕಾಂಗ್ರೆಸ್ ನಾಯಕರ ಮಾತಿನ ಮೇಲೆ ಹಿಡಿತವಿರಬೇಕು. ಯಾವುದೇ ಡ್ರಾಮಾ, ಗೊಂದಲಗಳಿಲ್ಲದೆ ಮೇಯರ್ ಸ್ಥಾನ‌ ನೀಡಲಾಗುವುದು. ಈ ಬಾರಿಯೇ ಕೊಡುತ್ತಿದ್ದೆವು ಆದರೆ, ಪಕ್ಷದ ಬಗ್ಗೆ ಹೀನಾಯವಾಗಿ ಮಾತನಾಡಿದ್ದರಿಂದ ಕೊಡಲಿಲ್ಲ. ಶಕ್ತಿ ತೋರಿಸಲು ಅಭ್ಯರ್ಥಿ ಹಾಕಿದೆವು ಅಷ್ಟೇ ಎಂದಿದ್ದಾರೆ.

ತನ್ವೀರ್ ಸೇಠ್ ಜೆಡಿಎಸ್‌ಗೆ ಬಂದರೆ ಸ್ವಾಗತ

ಈ ಎಲ್ಲ ಘಟನೆಗೆ ಕಾರಣವಾದ ತನ್ವೀರ್ ಸೇಠ್ ಜೆಡಿಎಸ್‌ಗೆ ಬಂದರೆ ಸ್ವಾಗತ. ಕಾಂಗ್ರೆಸ್‌ನಲ್ಲಿ ಅವರಿಗೆ ಸಮಸ್ಯೆ ಆದರೆ, ಜೆಡಿಎಸ್‌ ಅವರನ್ನ ಸ್ವಾಗತಿಸುತ್ತದೆ ಎಂದು ಬಹಿರಂಗವಾಗಿ ತನ್ವೀರ್ ಸೇಠ್‌ರನ್ನ ಪಕ್ಷಕ್ಕೆ ಆಹ್ವಾನಿಸಿದರು.

ನಾವು ಯಾರ ಪಕ್ಷದಲ್ಲು ಬೆಂಕಿ ಹಚ್ಚಿಲ್ಲ. ಎಲ್ಲವು ಆ ಕ್ಷಣದಲ್ಲಿ ಆದ ನಿರ್ಧಾರ. ಇದರಿಂದ ತನ್ವೀರ್ ಸೇಠ್ ಗೆ ಸಮಸ್ಯೆ ಆದರೆ, ಅವರು ಜೆಡಿಎಸ್‌‌ಗೆ ಬರಲಿ. ಅವರ ವಿರುದ್ದ ಸ್ಪರ್ಧಿಸಿದ್ದ ಅಬ್ದುಲ್ಲ ಅವರೇ ಅವರನ್ನು ಸ್ವಾಗತ ಮಾಡುತ್ತಾರೆ. ಅವರೇನಾದರೂ ಪಕ್ಷಕ್ಕೆ ಬಂದರೆ ಟಿಕೆಟ್ ಕೊಡುವುದು, ಬಿಡುವುದು ಆಗ ನೋಡೋಣ ಎಂದರು.

ಪಕ್ಷದ ಬಗ್ಗೆ ಲಘುವಾಗಿ ಮಾತನಾಡಿದರು ನಮ್ಮ ಶಕ್ತಿ ತೋರಿಸುತ್ತೇವೆ

ಮೇಯರ್ ಚುನಾವಣೆ ಕಾಂಗ್ರೆಸ್ ಕಚ್ಚಾಟ ಹಿನ್ನೆಲೆ. ಇದು ನಮ್ಮ ಪಕ್ಷದ ಬಗ್ಗೆ ಮಾತನಾಡಿದಕ್ಕೆ ಸ್ಯಾಂಪಲ್ ಮಾತ್ರ. ಮತ್ತೆ ಪ್ರಾದೇಶಿಕ ಪಕ್ಷದ ಬಗ್ಗೆ ಮಾತನಾಡಿದರೆ, ಏನು ಬೇಕಾದರೂ ಆಗಬಹುದು. ಅವರ ಒಬ್ಬ ನಾಯಕರು ನಮ್ಮ ಪಕ್ಷದ ಬಗ್ಗೆ ಮಾತನಾಡಿದ್ದಕ್ಕೆ ಇಷ್ಟು ತೋರಿಸಿದ್ದೇವೆ. ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತನಾಡಿದರು ನಮ್ಮ ಶಕ್ತಿ ತೋರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಾವು ಹೋಟೆಲ್ ನಲ್ಲಿ ರಾಜಕಾರಣ ಮಾಡಲು ಕಾರಣ ಯಾರು?

ಜೆಡಿಎಸ್ ಗೆ 3 ಬಾರಿ ಮೇಯರ್ ಸ್ಥಾನ, ಕಾಂಗ್ರೆಸ್ ಗೆ 2 ಬಾರಿ ಮೇಯರ್ ಸ್ಥಾನ ಎಂದು ಮಾತುಕತೆಯಾಗಿತ್ತು. ರಾಜ್ಯದಲ್ಲಿ ಮೈತ್ರಿ ಮುರಿದು ಬಿದ್ದರಿಂದ ಕೆಲವು ಸನ್ನಿವೇಶಗಳು ಪ್ರಾರಂಭವಾಯಿತು. ಈ ಹಿಂದೆ ಸಿದ್ದರಾಮಯ್ಯ ಜೆಡಿಎಸ್ ಬಗ್ಗೆ ಹೋಟೆಲ್ ರಾಜಕಾರಣ ಮಾಡ್ತಾರೆ ಎನ್ನುತ್ತಿದ್ದರು. ನಾವು ಹೋಟೆಲ್ ನಲ್ಲಿ ಕುಳಿತು ರಾಜಕಾರಣ ಮಾಡಲು ಕಾರಣ ಯಾರು? ಎಂದು ಪ್ರಶ್ನಿಸಿದರು.

ಈ ಎಲ್ಲಾ ಕಾರಣಗಳಿಂದ ನಾವು ಮೈತ್ರಿಯಿಂದ ದೂರ ಸರಿದಿದ್ದೆವು. ನಾವು ವಾಸ್ತವವಾಗಿ ಯಾರೊಂದಿಗೂ ದೊಡ್ಡ ಮಟ್ಟದ ಮಾತುಕತೆ ನಡೆಸಿರಲಿಲ್ಲ. ಕಾಂಗ್ರೆಸ್ ನ ಅಧ್ಯಕ್ಷರು ಹಾಗೂ ಶಾಸಕ ತನ್ವಿರ್ ಸೇಠ್  ನನ್ನ ಕಚೇರಿಗೆ ಬರುತ್ತೇನೆ ಎಂದರೂ ಅದಕ್ಕೆ ನಾನು ಬನ್ನಿ ಅಂದೆ. ಅವರೇ ಹೇಳಿದ್ರು 3 ಬಾರಿ ಮೇಯರ್ ಸ್ಥಾನ ನಿಮಗೆ, 2 ಬಾರಿ ನಮಗೆ ಎಂದು ಮಾಹಿತಿ ನೀಡಿದರು.

ಕಾಂಗ್ರೆಸ್ ಬಗ್ಗೆ ಯಾವುದೇ ಬೇಸರವಿಲ್ಲ

ಸಿದ್ದರಾಮಯ್ಯ ಹೇಳಿಕೆ ಬಿಟ್ಟರೆ ಕಾಂಗ್ರೆಸ್ ಬಗ್ಗೆ ಯಾವುದೇ ಬೇಸರವಿಲ್ಲ ಎಂದು ಅವತ್ತೇ ಸ್ಪಷ್ಟಪಡಿಸಿದ್ದೆ. ಬಳಿಕ ಬಿಜೆಪಿ ಬಳಗ ನನ್ನ ಕಚೇರಿಗೆ ಬಂದರು. ನಾನು ರಾಜ್ಯ ನಾಯಕರ ಗಮನಕ್ಕೆ ತರುತ್ತೇವೆ ಎಂದು ಹೇಳಿದ್ದೆ. ಡಿ.ಕೆ.ಶಿವಕುಮಾರ್ ಕೂಡಾ ಎರಡು ಬಾರಿ ದೂರವಾಣಿ  ಮೂಲಕ ಮತನಾಡಿದರು. ನಾನು ರಾಜ್ಯಾಧ್ಯಕ್ಷನಾಗಿರುವಾಗ ಮೈಸೂರು ಮೇಯರ್ ಸ್ಥಾನ ಪಡೆಯಲಿಲ್ಲ ಎಂಬಂತಾಗುತ್ತದೆ. ಆದ್ದರಿಂದ, ಕಾಂಗ್ರೆಸ್ ಜೊತೆ ಬನ್ನಿ ಎಂದು ಹೇಳಿದರು.

ಸ್ವತಂತ್ರ ಸ್ಪರ್ಧೆಗೆ ತೀರ್ಮಾನಿಸಲಾಗಿತ್ತು

ಇದನ್ನ ನಾವು ಕುಮಾರಸ್ವಾಮಿ ಅವರಿಗೂ ತಿಳಿಸಿದ್ದೆವು. ಬಳಿಕ ತನ್ವಿರ್ ಸೇಠ್ ಮತ್ತೊಮ್ಮೆ ಬಂದು ಮಾತನಾಡಿದರು. ನಂತರ ಧ್ರುವನಾರಾಯಣ್ ಸಹ ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ್ದರು. ಆದರೆ, ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಸ್ವತಂತ್ರ ಸ್ಪರ್ಧೆಗೆ ತೀರ್ಮಾನ ಮಾಡಿದ್ದೆವು. ಸೆಮಿವುಲ್ಲಾ. ಕೆ.ವಿ.ಶ್ರೀಧರ್ ಹಾಗೂ ಮಾ.ವಿ.ರಾಮ್ ಪ್ರಸಾದ್ ಗೆ ವರ್ಕ್ ಕಮಿಟಿ ಕೊಡುವುದಾಗಿ ತೀರ್ಮಾನವಾಗಿ ಬೆಂಬಲ ಪಡೆದಿದ್ದೆವು. ಪಕ್ಷೇತರರ ಬೆಂಬಲ ಪಡೆದು ಸ್ವತಂತ್ರವಾಗಿ ಸ್ಪರ್ಧಿಸುವ ಇಂಗಿತವಿತ್ತು ಎಂದು ಚುನಾವಣಾ ಹಿಂದಿನ ರಣತಂತ್ರ ಬಿಚ್ಚಿಟ್ಟರು.

ಡಿ.ಕೆ.ಶಿವಕುಮಾರ್ ರಿಂದ ಮೈತ್ರಿಗೆ ಮನವಿ

ಪಕ್ಷೇತರರ ಜೊತೆ ಸ್ವತಂತ್ರವಾಗಿ ಪಕ್ಷದ ಬಲ ತೋರಿಸಲು ಮುಂದಾಗಿದ್ದೆವು. ಕಾಂಗ್ರೆಸ್ ಬಿಜೆಪಿಯಿಂದ ದೂರ ಇರಲು ನಿರ್ಧಾರ ಮಾಡಲಾಗಿತ್ತು.  ಮತ್ತೆ ಡಿಕೆ ಶಿವಕುಮಾರ್ ಕರೆ ಮಾಡಿದ್ದರು. ಆದರೆ, ನಾನು ಕಾಲ್ ರಿಸೀವ್ ಮಾಡಿರಲಿಲ್ಲ. ಆಗ ತನ್ವೀರ್‌ ಸೇಠ್ ಮೆಸೇಜ್ ಮಾಡಿದ್ದರು.  ಆಗ ಮತ್ತೆ ಡಿ.ಕೆ.ಶಿವಕುಮಾರ್ ಕರೆ ಮಾಡಿದಾಗ ಕುಮಾರಸ್ವಾಮಿ ಮಾತನಾಡಿದರು. ಆಗಲೂ, ಡಿ.ಕೆ.ಶಿವಕುಮಾರ್ ಮೈತ್ರಿಗೆ ಮನವಿ ಮಾಡಿದರು.

ಮೇಯರ್ ಅಭ್ಯರ್ಥಿಗಳಾಗಿ ಪ್ರೇಮಾ ಶಂಕರೇಗೌಡ, ರುಕ್ಮಿಣಿ ಮಾದೇಗೌಡ ಆಯ್ಕೆ ಮಾಡಿದೆವು. ಇಬ್ಬರು ಸಂದೇಶ್ ನಾಗರಾಜು, ಶಾಸಕ‌ ಜಿ.ಟಿ.ದೇವೇಗೌಡರ ಬಳಿ‌ ಮಾತನಾಡಿದರು. ಇಬ್ಬರು ಬಂದು ಮತದಾನ‌ ಮಾಡುವ ಭರವಸೆ ನೀಡಿದ್ದರು. ಸ್ವತಂತ್ರವಾಗಿ ಸ್ಪರ್ಧೆ ಮಾಡಲು ನಿರ್ಧರಿಸಲಾಗಿತ್ತು. ರಾತ್ರಿ 12.41 ನಿಮಿಷ ತನ್ವೀರ್ ಸೇಠ್‌ ಮೆಸೇಜ್ ಮಾಡಿದರು. ಶಾಸಕ ಜಿ.ಟಿ.ದೇವೇಗೌಡ, ಸಂದೇಶ್ ನಾಗರಾಜ್ ಜೊತೆ ಬಿಜೆಪಿ ಮಾತನಾಡಿದ್ದಾರೆ.

ಬಿಜೆಪಿ ಜೆಡಿಎಸ್ ಸದಸ್ಯರ ಕರೆದುಕೊಂಡು ಹೋಗುವ ಪ್ರಯತ್ನ

Janata Dal-Power-Siddaramaiah-home district-shown-legislator-sa.ra.Mahesh

ನೀನು ಮೊದಲ ಬಾರಿಗೆ ಬಿಜೆಪಿಗೆ ಅಧಿಕಾರ ಸಿಗುತ್ತದೆ. ನೀನು ಅದಕ್ಕೆ ಅವಕಾಶ ಮಾಡಿಕೊಡಬೇಡಿ. ಬಿಎಸ್‌ಪಿ ಸದಸ್ಯೆ ಸಹಾ ಬಿಜೆಪಿ ಪರ ಇದ್ದಾರೆ. ಬಿಜೆಪಿ ಸುಲಭವಾಗಿ ಮೇಯರ್ ಅಧಿಕಾರ ಹಿಡಿಯುತ್ತದೆ. 20 ವರ್ಷದಲ್ಲಿ ಆಗದೇ ಇರುವುದು ಈಗ ಆಗುತ್ತೇ.. ಬಿಜೆಪಿ ಅಧಿಕಾರ ಹಿಡಿಯುತ್ತದೆ ಅಂತಾ ಹೇಳಿದರು. ಬೆಳಗ್ಗೆ ಮತ್ತೆ ಕರೆ ಮಾಡಿ, ಮೇಯರ್ ಸ್ಥಾನ ನೀವೆ ತೆಗೆದುಕೊಳ್ಳಿ ನಮಗೆ ಉಪಮೇಯರ್ ಕೊಡಿ ಅಂದರು. ಅದಕ್ಕೂ ನಾವು ಒಪ್ಪಲಿಲ್ಲ. ಆದರೆ, ಬಿಜೆಪಿ ಜೆಡಿಎಸ್ ಸದಸ್ಯರನ್ನು ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದರು.

ಮೇಯರ್ ಚುನಾವಣೆ ದಿನ 11.30ಕ್ಕೆ ಡಿ ಕೆ ಶಿವಕುಮಾರ್ ಕರೆ ಮಾಡಿದ್ದರು. ಮೇಯರ್ ನಮಗೆ ಕೊಡಿ ಅಂತಾ ಮತ್ತೆ ಮನವಿ‌ ಮಾಡಿದರು. ಆಗಲೂ ನಾವು ಯಾವುದೇ ತೀರ್ಮಾನ ಕೈಗೊಂಡಿಲ್ಲ. ಮತ್ತೆ 11.49 ನಿಮಿಷಕ್ಕೆ ನಮ್ಮ ಶಾಸಕರು ಗೈರಾಗುವುದು ಗೊತ್ತಾಯಿತು. ಕೊನೆಗೆ ಸ್ಥಳೀಯ ಮಟ್ಟದಲ್ಲಿ ತೀರ್ಮಾನಕ್ಕೆ ಬಿಟ್ಟೆವು. ಹೀಗಾಗಿ, ಮೈಸೂರು ಮೇಯರ್ ನಮಗೆ ಸಿಕ್ಕಿದೆ, ಕಾಂಗ್ರೆಸ್ ಉಪಮೇಯರ್ ಆಗಿದೆ ಎಂದು ತಿಳಿಸಿದರು.

key words : Janata Dal-Power-Siddaramaiah-home district-shown-legislator-sa.ra.Mahesh

website developers in mysore