ಸಹಕಾರ ಇಲಾಖೆ ಮೂಲಕ ಪ್ರತಿ ಹಳ್ಳಿಗೂ ಜನೌಷಧ ಕೇಂದ್ರ- ಸಚಿವ ಎಸ್.ಟಿ ಸೋಮಶೇಖರ್ ಘೋಷಣೆ…

ವಿಜಯಪುರ,ನವೆಂಬರ್,20,2020(www.justkannada.in):  ಪ್ರತಿ ಹಳ್ಳಿಹಳ್ಳಿಗೂ ಜನೌಷಧ ಕೇಂದ್ರವನ್ನು ತೆಗೆದುಕೊಂಡು ಹೋಗಬೇಕು ಎಂಬ ನಿಟ್ಟಿನಲ್ಲಿ ಸಹಕಾರ ಇಲಾಖೆ ಮೂಲಕ ನಾವು ಚಿಂತನೆ ಮಾಡಿದ್ದೇವೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.janasudha-center-every-village-cooperative-department-minister-st-somashekhar-vijayapur

ವಿಜಯಪುರದಲ್ಲಿ ನಡೆದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ 2020ರ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ  ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಪ್ರಧಾನ ಮಂತ್ರಿಗಳ ಜನೌಷಧಿ ಕೇಂದ್ರವನ್ನು ಸಹಕಾರ ಇಲಾಖೆಯ ಮಾರ್ಕೆಟಿಂಗ್ ಫೆಡರೇಷನ್ ಮೂಲಕ ತೆರೆಯುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಚಾಲನೆ ಕೊಟ್ಟಿದ್ದು, ಇದಕ್ಕೆ ಕೇಂದ್ರ ಸಚಿವರಾದ ಸದಾನಂದ ಗೌಡರ ಪಾತ್ರ ಬಹಳ ದೊಡ್ಡದಿದೆ. ರಾಜ್ಯದಲ್ಲಿ ಇನ್ನೂ 600 ಜನೌಷಧ ಮಳಿಗೆಯನ್ನು ತೆರೆಯಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಆದರೆ, ಇವಿಷ್ಟೇ ಅಲ್ಲದೆ ಸಹಕಾರ ಇಲಾಖೆ ಮೂಲಕ ನಾವು ಪ್ರತಿ ಹಳ್ಳಿಯಲ್ಲೂ ಜನೌಷಧ ಮಳಿಗೆಯನ್ನು ಸ್ಥಾಪಿಸುವತ್ತ ಕಾರ್ಯಯೋಜನೆ ಹಾಕಿಕೊಳ್ಳುತ್ತೇವೆ ಎಂದು ಸಚಿವರಾದ ಸೋಮಶೇಖರ್ ಘೋಷಿಸಿದರು.

ಪ್ರತಿ ಜಿಲ್ಲೆ ಸಹಕಾರಿ ಸಂಸ್ಥೆಗಳ ಸಾಧನೆಯ ಕಿರು ಹೊತ್ತಿಗೆ

ಪ್ರತಿ ಜಿಲ್ಲೆಯ ಸಹಕಾರ ಸಂಘ-ಸಂಸ್ಥೆಗಳಿಂದ ಏನೆಲ್ಲ ಕಾರ್ಯಗಳಾಗಿವೆ? ಯಾವ ಮಹನೀಯರು ಸಹಕಾರ ಸಂಸ್ಥೆಯನ್ನು ಕಟ್ಟಿದ್ದಾರೆ? ಎಷ್ಟು ಜನರಿಗೆ ಉದ್ಯೋಗ ಸಿಕ್ಕಿದೆ? ಯಾವೆಲ್ಲ ರೀತಿಯಾಗಿ ಜನರಿಗೆ ಸಹಕಾರಿಯಾಗಿವೆ? ಸಹಕಾರ ಸಂಸ್ಥೆಗಳಿಂದ ಜನರಿಗೆ ಯಾವೆಲ್ಲ ಯೋಜನೆಗಳನ್ನು ನೀಡಬಹುದು ಎಂಬ ನಿಟ್ಟಿನಲ್ಲಿ ಕಿರು ಹೊತ್ತಿಗೆಯನ್ನು ಮಾಡಿ ಎಲ್ಲರಿಗೂ ವಿತರಿಸುವ ಕೆಲಸವನ್ನು ಮುಂದಿನ ವರ್ಷದ ಸಹಕಾರ ಸಪ್ರಾಹ ಕಾರ್ಯಕ್ರಮದೊಳಗೆ ಮಾಡಲಿದ್ದೇವೆ. ಈ ಮೂಲಕ ಸಾರ್ವಜನಿಕರಿಗೂ ಸಹ ಸಹಕಾರ ಇಲಾಖೆ ಬಗ್ಗೆ ಸಂಪೂರ್ಣ ಚಿತ್ರಣ ದೊರೆತು ಇನ್ನಷ್ಟು ಹತ್ತಿರವಾಗಲು ಸಹಾಯಕವಾಗಲಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

ಇದೇ ಮೊದಲ ಬಾರಿಗೆ 30 ಮಂದಿಗೆ ಸಹಕಾರ ರತ್ನ ಪ್ರಶಸ್ತಿ…

ಪ್ರತಿ ವರ್ಷ 6 ಜನರಿಗೆ ಮಾತ್ರ ಸಹಕಾರ ರತ್ನ ಪ್ರಶಸ್ತಿಯನ್ನು ಕೊಡಲಾಗುತ್ತಿತ್ತು. ಆದರೆ, ನಾನು 28 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದಂತಹ ಸಂದರ್ಭದಲ್ಲಿ ಸಹಕಾರ ಕ್ಷೇತ್ರದಲ್ಲಿ ದುಡಿದ ಅನೇಕರ ಬಗ್ಗೆ ಗಮನಕ್ಕೆ ಬಂತು. ಹೀಗಾಗಿ 30 ಜನರಿಗೆ ಸಹಕಾರ ರತ್ನ ಪ್ರಶಸ್ತಿಯನ್ನು ಕೊಡುವ ನಿರ್ಧಾರ ಮಾಡಿ, ಸಹಕಾರ ಇಲಾಖೆ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇವರೆಲ್ಲಗೂ ಸಹಕಾರ ರತ್ನ ಪ್ರಶಸ್ತಿಯನ್ನು ಕೊಡುವ ಕೆಲಸವನ್ನು ಮಾಡಿದ್ದೇವೆ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

ಸಹಕಾರಿ ಇಲಾಖೆಯಿಂದ ಎಲ್ಲರಿಗೂ ಸಾಲವನ್ನು ನೀಡುವುದು ನಮ್ಮ ಧ್ಯೇಯ. 1700 ಕೋಟಿ ರೂಪಾಯಿ ಹೆಚ್ಚುವರಿ ಅನುದಾನವನ್ನು ನಬಾರ್ಡ್ ನಿಂದ ಕೊಟ್ಟಿದ್ದು, ಅದನ್ನೂ ಸಹ ಅಪೆಕ್ಸ್ ಹಾಗೂ 21 ಡಿಸಿಸಿ ಬ್ಯಾಂಕ್ ಮೂಲಕ ಸಾಲವನ್ನು ನೀಡುವ ಕೆಲಸಕ್ಕೆ ಚಾಲನೆ ನೀಡಿದ್ದೇವೆ.

ಆತ್ಮನಿರ್ಭರ ಅನುಷ್ಠಾನದಲ್ಲಿ ಕರ್ನಾಟಕ ಸಹಕಾರ ಇಲಾಖೆ ನಂ.1

ಕೇಂದ್ರ ಸರ್ಕಾರದಿಂದ ಘೋಷಣೆ ಮಾಡಲಾಗಿರುವ ಆತ್ಮನಿರ್ಭರ ಯೋಜನೆಯಡಿ 20 ಲಕ್ಷ ಕೋಟಿಯಲ್ಲಿ ಕರ್ನಾಟಕದ ಪಾಲು 4750 ಕೋಟಿ ರೂಪಾಯಿಯಲ್ಲಿ ಮೊದಲನೇ ವರ್ಷದಲ್ಲಿ ಸುಮಾರು 635 ಕೋಟಿ ರೂಪಾಯಿ ಆರ್ಥಿಕ ನೆರವನ್ನು ಕರ್ನಾಟಕಕ್ಕೆ ಸಿಗಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಈ ಮೂಲಕ ಸಾಲಸೌಲಭ್ಯವನ್ನು ವಿತರಿಸಿ ಆರ್ಥಿಕ ಬಲ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಮಾಹಿತಿ ನೀಡಿದರು.janasudha-center-every-village-cooperative-department-minister-st-somashekhar-vijayapur

ಹೀಗೆ ಆತ್ಮನಿರ್ಭರ ಯೋಜನೆಯಡಿ ರಾಜ್ಯದ ಪಾಲು ಕೇಳಿದ ರಾಜ್ಯಗಳಲ್ಲಿ ಕರ್ನಾಟಕವೇ ಮುಂದಿದೆ. ಈ ನಿಟ್ಟಿನಲ್ಲಿ ರಾಜ್ಯದ ಸಹಕಾರ ಇಲಾಖೆ ನಂ. 1 ಸ್ಥಾನದಲ್ಲಿದೆ ಎಂದು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಧಾರವಾಡದಲ್ಲಿ ನಡೆದಿದ್ದ ಆರ್ಥಿಕ ಸ್ಪಂದನ ಕಾರ್ಯಕ್ರಮದಲ್ಲಿ ಮೆಚ್ಚುಗೆ ಸೂಚಿಸಿದ್ದರು. ಆ ನಿಟ್ಟಿನಲ್ಲಿ ನಮ್ಮ ಕಾರ್ಯವೈಖರಿ ಸಾಗಿದೆ ಎಂದು ತಿಳಿಸಿದರು.

ಸಹಕಾರ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ

40 ಸಾವಿರ ಸಹಕಾರ ಸಂಘಗಳ ಮೂಲಕ ರಾಜ್ಯಾದ್ಯಂತ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗವನ್ನು ಕೊಡುವ ಕೆಲಸವಾಗಬೇಕು. ಆ ನಿಟ್ಟಿನಲ್ಲಿ ಅರ್ಬನ್ ಬ್ಯಾಂಕ್ ಸಹಿತ ಎಲ್ಲ ಸಹಕಾರ ಬ್ಯಾಂಕ್ ಗಳು ಕೋವಿಡ್ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾಗಿ ಉದ್ಯೋಗ ಕಳೆದುಕೊಂಡವರಿಗೆ ಹಾಗೂ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಸಹಾಯವಾಗುವ ನಿಟ್ಟಿನಲ್ಲಿ ಉದ್ಯೋಗವನ್ನು ನೀಡುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕಾರ್ಯಯೋಜನೆ ಹಾಕಿಕೊಳ್ಳೋಣ ಎಂದು ಸಚಿವ ಎಸ್.ಟಿ ಸೊಮಶೇಖರ್ ಹೇಳಿದರು.

ವಿಜಯಪುರ ಡಿಸಿಸಿ ಬ್ಯಾಂಕ್ ನಂ. 1

ವಿಜಯಪುರ ಡಿಸಿಸಿ ಬ್ಯಾಂಕ್ ಮೂಲಕ 1200 ಕೋಟಿ ಸಾಲವನ್ನು ನೀಡುವ ಗುರಿಯನ್ನು ಹಾಕಿಕೊಂಡಿದ್ದಾರೆ. ಬಡವರ ಬಂಧು, ಕಾಯಕ ಸೇರಿದಂತೆ ಹಲವು ಯೋಜನೆಗಳ ಮೂಲಕ ವಿತರಿಸುವ ಗುರಿಯನ್ನು ಹಾಕಿಕೊಂಡಿರುವುದು ಹೆಮ್ಮೆಯ ವಿಷಯ. 21 ಡಿಸಿಸಿ ಬ್ಯಾಂಕ್ ಗಳಲ್ಲಿ ವಿಜಯಪುರ ಡಿಸಿಸಿ ಬ್ಯಾಂಕ್ ನಂಬರ್ 1 ಆಗಿ ಬೆಳೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ವಿಜಯಪುರ ಜಿಲ್ಲೆಯ ಜನರಿಗೆ ನಮ್ಮ ಪರವಾಗಿ ಸಹಕಾರ ಕ್ಷೇತ್ರವಿದೆ, ಸರ್ಕಾರವಿದೆ ಎಂಬ ವಿಶ್ವಾಸ ಮೂಡುವಲ್ಲಿ ಇವುಗಳು ಸಹಾಯಕವಾಗಿವೆ. ಈ ಮೂಲಕ ಎಲ್ಲರಿಗೂ ಸಾಲವನ್ನು ನೀಡುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.

ಸಹಕಾರ ಇಲಾಖೆ ಮೂಲಕ ಆಶಾ ಕಾರ್ಯಕರ್ತೆಯರಿಗೆ 12.75 ಕೋಟಿ ಪ್ರೋತ್ಸಾಹ ಧನ

ಕೋವಿಡ್ 19ರ ಸಂಕಷ್ಟದ ಕಾಲದಲ್ಲಿ ಲಾಭದಲ್ಲಿರುವ ಸಹಕಾರ ಸಂಸ್ಥೆಗಳಿಂದ ಹಾಗೂ ಎಪಿಎಂಸಿಗಳಿಂದ ದೇಣಿಗೆ ಸಂಗ್ರಹಿಸಿ 53 ಕೋಟಿ ರೂಪಾಯಿಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಟ್ಟಿದ್ದೇವೆ. ಇನ್ನು ಕೊರೋನಾ ವಾರಿಯರ್ಸ್ ಗಳಾದ 42540 ಆಶಾ ಕಾರ್ಯಕರ್ತೆಯರಿಗೂ ಸಹ ತಲಾ 3000 ದಂತೆ ಒಟ್ಟು 12.75 ಕೋಟಿ ರೂಪಾಯಿಯನ್ನು ವಿತರಣೆ ಮಾಡಿದ್ದೇವೆ. ಇದು ನೂರಕ್ಕೆ ನೂರರಷ್ಟು ಯಶಸ್ವಿಯಾಗಿದ್ದಕ್ಕೆ ಸಂತಸವಿದೆ ಎಂದು ಸಚಿವರು ತಿಳಿಸಿದರು.

ಹಾಲು ಉತ್ಪಾದಕರಿಗೆ ಕೆಎಂಎಫ್ ನಿಂದ ಪ್ರೋತ್ಸಾಹ

ಕೆಎಂಎಫ್ ವತಿಯಿಂದ ಲಾಕ್ ಡೌನ್ ಸಂದರ್ಭದಲ್ಲಿ ರೈತರು ಹಾಲು ಮಾರಾಟ ಮಾಡಲು ಸಾಧ್ಯವಾಗದೆ ಚರಂಡಿಗೆ ಚೆಲ್ಲಿದ ಘಟನೆ ನಡೆದಾಗ ಮುಖ್ಯಮಂತ್ರಿಗಳು ಇದಕ್ಕೆ ಪರಿಹಾರ ಸೂಚಿಸಿದರು. ಯಾವ ರೈತನೂ ಸಹ ಹಾಲನ್ನು ಚರಂಡಿಗೆ ಚೆಲ್ಲುವಂತಾಗಬಾರದು, ನಷ್ಟವಾಗಬಾರದು ಎಂಬ ಉದ್ದೇಶದಿಂದ ಸುಮಾರ 2 ಕೋಟಿ 11 ಲಕ್ಷ ಲೀಟರ್ ಹಾಲನ್ನು ಕರ್ನಾಟಕ ರಾಜ್ಯಾದ್ಯಂತ ಉಚಿತವಾಗಿ ಹಂಚುವ ಕಾರ್ಯಕ್ರಮವನ್ನು ಕೆಎಂಎಫ್ ಮೂಲಕ ಮಾಡಿದರು. ಸುಮಾರು 79 ಕೋಟಿ ರೂಪಾಯಿ ಅನುದಾನವನ್ನು ಕೆಎಂಎಫ್ ಗೆ ಮುಖ್ಯಮಂತ್ರಿಗಳು ನೀಡಿದರು ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.

4 ವಿಭಾಗ ಮೂಲಕ ಆರ್ಥಿಕ ಸ್ಪಂದನಕ್ಕೆ ಚಾಲನೆ

ಕೋವಿಡ್ ಸಂಕಷ್ಟ ಕಾಲದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ನಾಗರಿಕರಿಗೆ ಆರ್ಥಿಕ ಬಲ ತುಂಬುವ ನಿಟ್ಟಿನಲ್ಲಿ ಆತ್ಮನಿರ್ಭರ ಯೋಜನೆಯಡಿ ರಾಜ್ಯ ಸರ್ಕಾರ ಹಾಗೂ ಸಹಕಾರ ಇಲಾಖೆ ನೇತೃತ್ವದಲ್ಲಿ ಆರ್ಥಿಕ ಸ್ಪಂದನ ಕಾರ್ಯಕ್ರಮಕ್ಕೆ ಇತ್ತೀಚೆಗೆ ಮುಖ್ಯಮಂತ್ರಿಗಳು ಬೆಂಗಳೂರಿನ ಬ್ಯಾಂಕ್ವೆಟ್ ಹಾಲ್ ನಲ್ಲಿ ಚಾಲನೆ ನೀಡಿದರು. ಇದರ ಮೂಲಕ 39,600 ಕೋಟಿ ರೂಪಾಯಿ ಸಾಲ ವಿತರಣೆ ಗುರಿಯನ್ನು ಹಾಕಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಒಟ್ಟು 4 ವಿಭಾಗಗಳಲ್ಲಿ ಅನುಷ್ಠಾನಕ್ಕೆ ತರುತ್ತಿದ್ದು, ಬೆಂಗಳೂರಿನಲ್ಲಿ ಮೊದಲ ಕಾರ್ಯಕ್ರಮ, ಮೈಸೂರು ವಿಭಾಗದ ಕಾರ್ಯಕ್ರಮವನ್ನು ಮೈಸೂರಿನಲ್ಲಿ, ಕಲಬುರಗಿ ವಿಭಾಗದ ಮೂರನೇ ದಿನದ ಕಾರ್ಯಕ್ರಮವನ್ನು ಬೀದರ್ ನಲ್ಲಿ ಹಾಗೂ ಬೆಳಗಾವಿ ವಿಭಾಗದ ನಾಲ್ಕನೇ ದಿನದ ಕಾರ್ಯಕ್ರಮವನ್ನು ಧಾರವಾಡದಲ್ಲಿ ನಡೆಸಿ ಸಾಲ ಸೌಲಭ್ಯ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ. ಯಾರಿಗೂ ಸಹ ಕೋವಿಡ್ ಸಂಕಷ್ಟದಿಂದ ಸಮಸ್ಯೆಯಾಗಬಾರದು. ಹೀಗಾಗಿ ಎಲ್ಲರಿಗೂ ಸಾಲ ಸಿಗುವಂತೆ ಅಪೆಕ್ಸ್ ಬ್ಯಾಂಕ್ ಹಾಗೂ 21 ಡಿಸಿಸಿ ಬ್ಯಾಂಕ್ ಗಳ ಮುಖಾಂತರ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಸಹಕಾರ ಸಚಿವರಾದ ಸೋಮಶೇಖರ್ ಅವರು ಬಹಳ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಈ ಹಿಂದೆ ಬಹುತೇಕ ಸಹಕಾರ ಸಚಿವರು ಬೆಂಗಳೂರಿನಲ್ಲಿ ಸಹಕಾರ ಸಪ್ತಾಹ ಕಾರ್ಯಕ್ರಮಗಳನ್ನು ಮಾಡಿ ಸುಮ್ಮನಾಗುತ್ತಾರೆ. ಆದರೆ, ಸಚಿವರಾದ ಸೋಮಶೇಖರ್ ಅವರು ಪ್ರತಿ ಜಿಲ್ಲೆಯ ಕಾರ್ಯಕ್ರಮದಲ್ಲೂ ಭಾಗಿಯಾಗುತ್ತಾರೆ. ಆ ಮೂಲಕ ಸರ್ಕಾರ ಯೋಜನೆಗಳನ್ನು ತಿಳಿಸುವ ಜೊತೆಗೆ ಆಯಾ ಜಿಲ್ಲೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯವನ್ನು ಮಾಡುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಈ ವೇಳೆ ಶಾಸಕರಾದ ಶಿವಾನಂದ್ ಪಾಟೀಲ್, ಎಂ.ಸಿ. ಮನಗೂಳಿ, ಯಶವಂತರಾಯಗೌಡ ಪಾಟೀಲ್,  ಸೇರಿದಂತೆ ಹಿರಿಯ ಸಹಕಾರಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Key words: Janasudha Center – every -village -Cooperative Department-Minister- ST Somashekhar-vijayapur