ಬಿಜೆಪಿ ನಾಯಕರ ವಿರುದ್ಧ ಭ್ರಷ್ಟಾಚಾರ ಆರೋಪ ಬಂದಾಗ ಐಟಿ, ಇಡಿ ಎಲ್ಲಿದ್ದವು?: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನೆ.

ನವದೆಹಲಿ,ಆಗಸ್ಟ್,5,2021(www.justkannada.in):  ‘ಆಪರೇಷನ್ ಕಮಲ, ಸಮ್ಮಿಶ್ರ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ರಚಿಸುವಲ್ಲಿ ಬಿಜೆಪಿ ನಾಯಕರು ಹಣ ಖರ್ಚು ಮಾಡಿದ ಬಗ್ಗೆ ಆರೋಪ ಕೇಳಿ ಬಂದಾಗ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಸಂಸ್ಥೆಗಳು ಎಲ್ಲಿದ್ದವು? ಬಿಜೆಪಿಯವರ ವ್ಯವಹಾರಗಳೆಲ್ಲಾ ಸರಿಯಾಗಿದ್ದಾವಾ..? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಅವರ ನಿವಾಸ, ಕಚೇರಿ ಮೇಲೆ ಇಡಿ ಅಧಿಕಾರಿಗಳ ದಾಳಿ ಸಂಬಂಧ ನವದೆಹಲಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ  ಶಿವಕುಮಾರ್ ಅವರು ಹೇಳಿದ್ದಿಷ್ಟು;

‘ನಮ್ಮ ಪಕ್ಷದ ಶಾಸಕರಾದ ಜಮೀರ್ ಅಹ್ಮದ್ ಅವರ ಮನೆ, ಕಚೇರಿ ಮೇಲಿನ ಇ.ಡಿ. ದಾಳಿ ಖಂಡನೀಯ. ಕಾನೂನು ಪ್ರಕಾರ ಅದನ್ನು ಎದುರಿಸಲು ಜಮೀರ್ ಅವರು ಸಮರ್ಥರಿದ್ದಾರೆ. ಎರಡು ವರ್ಷಗಳ ಹಿಂದೆ ಇ.ಡಿ. ಅಧಿಕಾರಿಗಳು ಜಮೀರ್ ಅವರಿಗೆ ನೋಟೀಸ್ ಜಾರಿ ಮಾಡಿ, ಅವರನ್ನು ಕರೆಸಿ ವಿಚಾರಣೆ ಮಾಡಿದ್ದಾರೆ. ಅವರ ಪ್ರಶ್ನೆಗಳಿಗೆ ಉತ್ತರ ನೀಡಿರುವುದಾಗಿ ಜಮೀರ್ ಅವರೇ ನನಗೆ ತಿಳಿಸಿದ್ದರು. ಈಗಿನ ಸಂದರ್ಭದಲ್ಲಿ ದಾಳಿ ಅಗತ್ಯ ಇರಲಿಲ್ಲ. ಯಾವ ರೀತಿ ಈ ಕಿರುಕುಳ ನೀಡಲಾಗುತ್ತದೆ ಎಂಬುದು ನನಗೂ ಗೊತ್ತಿದೆ.

‘ಜಮೀರ್ ಹೇಳಿಕೆಗಳು ಮುಗಿದಿರುವಾಗ ಅವರ ನಿವಾಸ ಹಾಗೂ ಆಪ್ತರ ಮನೆಗಳ ಮೇಲೆದಾಳಿ ಮಾಡಿ, ಕಿರುಕುಳ ನೀಡುತ್ತಿರುವುದು ಖಂಡನೀಯ. ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ಎಸಿಬಿ ನಿಜಕ್ಕೂ ಕಾರ್ಯಪ್ರವೃತ್ತವಾಗಿದ್ದರೆ, ಮಾಜಿ ಸಚಿವ ಶ್ರೀನಿವಾಸಗೌಡರು ವಿಧಾನಸಭೆಯಲ್ಲಿ ಆಪರೇಷನ್ ಕಮಲದ ವಿಚಾರವಾಗಿ ಸಿ.ಪಿ. ಯೋಗೇಶ್ವರ್ ಹಾಗೂ ಅಶ್ವಥ್ ನಾರಾಯಣ ಅವರು 30 ಕೋಟಿ ಹಣದ ಆಮಿಷ ನೀಡಿ, 5 ಕೋಟಿ ಹಣವನ್ನು ನನ್ನ ಮನೆಯಲ್ಲಿ ಇಟ್ಟು ಹೋಗಿದ್ದರು ಎಂದು ಆರೋಪ ಮಾಡಿದಾಗ ಈ ಇಲಾಖೆಗಳು ಎಲ್ಲಿ ಹೋಗಿದ್ದವು. ಸಿ.ಪಿ. ಯೋಗೇಶ್ವರ್ ಮನೆ ಮಾರಿ 9 ಕೋಟಿ ಹಣ ಖರ್ಚು ಮಾಡಿ ಸರ್ಕಾರ ರಚನೆ ಮಾಡಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಅವರು ಹೇಳಿದಾಗ ಈ ಇಲಾಖೆಗಳು ಏನಾಗಿದ್ದವು? ‘ಅವರ ಮನೆ ಮೇಲೆ ದಾಳಿ ಆದವಾ? ಅವರಿಗೆ ಈ ತನಿಖಾ ಸಂಸ್ಥೆಗಳಿಂದ ನೋಟೀಸ್ ಜಾರಿಯಾಯ್ತಾ? ವಿಧಾನಸಭೆಯಲ್ಲೇ ನೀಡಿದ ಹೇಳಿಕೆಗಿಂತ ಬೇರೆ ಸಾಕ್ಷಿ ಏನು ಬೇಕಿತ್ತು..? ಇವುಗಳು ಭ್ರಷ್ಟಾಚಾರ, ಹಣ ಅವ್ಯವಹಾರದ ಪ್ರಕರಣಗಳಲ್ಲವೇ? ಯಾಕೆ ಈ ಬಗ್ಗೆ ಪ್ರಕರಣಗಳು ದಾಖಲಾಗಲಿಲ್ಲ. ನಾನು ಅವರ ವೈಯಕ್ತಿಕ ವ್ಯವಹಾರಗಳ ಬಗ್ಗೆ ಮಾತನಾಡುತ್ತಿಲ್ಲ. ಅವರ ಬಾಯಿಂದ ಬಂದ ನುಡಿಮುತ್ತುಗಳನ್ನೇ ಆಧರಿಸಿ ಪ್ರಶ್ನೆ ಮಾಡುತ್ತಿದ್ದೇನೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

‘ಯಾರ್ಯಾರ ಅನುಕೂಲಕ್ಕೆ ಹೇಗೆ ಬೇಕೋ, ಹಾಗೆ ಈ ಸಂಸ್ಥೆಗಳು ನಡೆದುಕೊಳ್ಳುತ್ತಿವೆ. ಅಧಿಕಾರ ಇದೆ ಎಂದು ಈ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ವಿಚಾರವಾಗಿ ಕಾನೂನು ರೀತಿಯಲ್ಲಿ ಜಮೀರ್ ಅವರು ಉತ್ತರ ನೀಡಲಿದ್ದಾರೆ. ಅವರಿಗೆ ಆ ಶಕ್ತಿ ಇದೆ. ಆದರೆ ಕಾಂಗ್ರೆಸ್ ನಾಯಕರಿಗೆ ಒಂದು ಕಾನೂನು, ಬಿಜೆಪಿಯವರಿಗೆ ಇನ್ನೊಂದು ಕಾನೂನು ಎಷ್ಟು ಸರಿ? ಬಿಜೆಪಿಯವರೆಲ್ಲಾ ಬಹಳ ಸಾಚಾತನದಲ್ಲಿ ವ್ಯವಹಾರ ಮಾಡುತ್ತಿದ್ದಾರಾ..? ಏಕೆ ಈ ತಾರತಮ್ಯ ಆಗುತ್ತಿದೆ?’

‘ಕಾನೂನು ಪ್ರಕಾರ ವಿಚಾರಣೆ ನಡೆಯಲಿ, ಅದನ್ನು ಪ್ರಶ್ನಿಸುವುದಿಲ್ಲ. ಈ ಹಿಂದೆ ಐಎಂಎ ವಿಚಾರವಾಗಿಯೇ ಇಡಿ ಅವರು ಕೊಟ್ಟ ನೋಟೀಸ್ ಗೆ ಜಮೀರ್ ಖಾನ್ ಅವರು ವಿಚಾರಣೆಗೆ ಹಾಜರಾಗಿ ಉತ್ತರ ನೀಡಿದ್ದಾರೆ. ಇದು ಮುಗಿದು ಎಷ್ಟೋ ದಿನ ಆಗಿದೆ. ಎಲ್ಲ ಮುಗಿದ ಮೇಲೆ ಈಗ ಐಎಂಎ ಪ್ರಕರಣದ ಹೆಸರಲ್ಲಿ ದಾಳಿ ಮಾಡುವ ಅಗತ್ಯ ಏನಿತ್ತು? ಇಷ್ಟು ದಿನ ಯಾಕೆ ಸುಮ್ಮನಿದ್ದರು? ಎಂದು ಕಿಡಿಕಾರಿದರು.

‘ಏಳು ಬಾರಿ ಶಾಸಕರಾಗಿದ್ದ ರೋಷನ್ ಬೇಗ್ ಅವರು ಏನಾಗಿದ್ದಾರೆ ಎಂಬ ವಿಚಾರವಾಗಿ ನಾನು ಈಗ ಮಾತನಾಡುವುದಿಲ್ಲ. ನಿರ್ದಿಷ್ಟ ವರ್ಗಕ್ಕೆ ತೊಂದರೆ ನೀಡಲು ಈ ರೀತಿ ದಾಳಿಗಳು ನಡೆಯುತ್ತಿವೆ ಎಂಬುದು ಸ್ಪಷ್ಟವಾಗುತ್ತಿದೆ.’

ಕೋವಿಡ್ ದುಸ್ಥಿತಿ ಬಗ್ಗೆ ಕಮಲ್ ನಾಥ್ ಜತೆ ಚರ್ಚೆ:

‘ಕಮಲ್ ನಾಥ್ ಅವರು ಮಧ್ಯ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ಕೋವಿಡ್ ಸಾವು-ನೋವುಗಳ ಬಗ್ಗೆ ಡೆತ್ ಆಡಿಟ್ ವಿಚಾರವಾಗಿ ಚರ್ಚೆ ಮಾಡಿದೆವು. ಮಧ್ಯಪ್ರದೇಶದಲ್ಲಿಯೂ ಸಾವಿನ ವಿಚಾರದಲ್ಲಿ ಸರ್ಕಾರ ಸುಳ್ಳು ಲೆಕ್ಕ ನೀಡುತ್ತಿದ್ದು, ನಾವು ರಾಜ್ಯದಲ್ಲಿ ಡೆತ್ ಆಡಿಟ್ ಮಾಡುವ ರೀತಿಯಲ್ಲಿ ಅವರು ಚಿತಾಗಾರದಲ್ಲಿ ಅಂತ್ಯಸಂಸ್ಕಾರಗೊಂಡ ಶವಗಳ ಲೆಕ್ಕ ಹಾಕುತ್ತಿದ್ದಾರೆ. ಇತರ ವಿಚಾರಗಳ ಬಗ್ಗೆಯೂ ನಾವು ಚರ್ಚೆ ಮಾಡಿದೆವು ಎಂದು ಡಿಕೆಶಿ ಹೇಳಿದರು.

ಇನ್ನು ನೂರು ವರ್ಷವಾದ್ರೂ ತಮಿಳುನಾಡು ಅನುಮತಿ ನೀಡಲ್ಲ:

‘ಮೇಕೆದಾಟು ಯೋಜನೆ ರಾಜಕೀಯ ಇಚ್ಛಾಶಕ್ತಿ ವಿಚಾರ. ನಮ್ಮ ರಾಜ್ಯದಲ್ಲಿ ನಮ್ಮ ಹಣದಲ್ಲಿ ನಮ್ಮ ನೀರನ್ನು ಬಳಸಿಕೊಳ್ಳಲು ಈ ಯೋಜನೆ ರೂಪಿಸುತ್ತಿದ್ದೇವೆ. ನಾವು ಯಾರ ಪಾಲಿನ ನೀರನ್ನೂ ತಡೆಯುತ್ತಿಲ್ಲ. ನೀರು ಬಿಡುಗಡೆ ವಿಚಾರದಲ್ಲಿ ಕೇಂದ್ರದ ಸಮಿತಿಯದ್ದೇ ಪರಮಾಧಿಕಾರ. ಈ ಯೋಜನೆಗೆ ಕೆಲವು ಇಲಾಖೆಗಳ ಅನುಮತಿ ಬೇಕಿದೆ ಅಷ್ಟೇ. ಅದನ್ನು ಕೊಡಬೇಕಾದ್ದು ಕೇಂದ್ರ ಸರ್ಕಾರದ ಕರ್ತವ್ಯ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಇದೆ. ರಾಜ್ಯ ಸರ್ಕಾರ ಯಾವುದೇ ರೀತಿಯ ಒತ್ತಡ  ಬೇಕಾದರೂ ಹಾಕಲಿ. ನಾವು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಅವರು ಕೂಡ  ನೀರಾವರಿ ಸಚಿವರಾಗಿದ್ದವರು. ಅವರು ಕೂಡಲೇ ಗುದ್ದಲಿ ಪೂಜೆ ಮಾಡಿ ಕೆಲಸ ಆರಂಭಿಸಲಿ. ಅವರಿಗೆ ನಾವು ಬೆಂಬಲ ನೀಡುತ್ತೇವೆ. ಇದು ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಯೋಜನೆಯೇ ಹೊರತು ನೀರಾವರಿ ಯೋಜನೆ ಅಲ್ಲ. ಈ ವಿಚಾರದಲ್ಲಿ ತಮಿಳುನಾಡು ಇವತ್ತಲ್ಲ ಇನ್ನೂ ನೂರು ವರ್ಷವಾದರೂ ಅನುಮತಿ ನೀಡುವುದಿಲ್ಲ. ಈ ಯೋಜನೆಯಿಂದ ಹೆಚ್ಚುವರಿ ನೀರು ಅಗತ್ಯದ ಸಮಯದಲ್ಲಿ ಅವರಿಗೇ ದೊರೆಯುತ್ತದೆ. ತಮಿಳುನಾಡಿನವರು ಏನಾದರೂ ಮಾಡಿಕೊಳ್ಳಲಿ. ಆದರೆ ಇಲ್ಲಿ ಆಡಳಿತ ಮಾಡುತ್ತಿರುವವರು ಏನು ಮಾಡುತ್ತಿದ್ದಾರೆ ಎಂಬುದು ಮುಖ್ಯವಾಗುತ್ತದೆ ಎಂದರು.

ಅನ್ಯಾಯಕ್ಕೊಳಗಾದವರಿಗೆ ಸರ್ಕಾರ ನ್ಯಾಯ ಒದಗಿಸಲಿ:

‘ಐಎಂಎ ವಿಚಾರದಲ್ಲಿ ಯಾರು ಹಣ ಕಳೆದುಕೊಂಡಿದ್ದಾರೆ, ಯಾರಿಗೆ ಅನ್ಯಾಯ ಆಗಿದೆ ಅವರೆಲ್ಲರಿಗೂ ನ್ಯಾಯ ಒದಗಿಸಬೇಕು ಎಂದು ಕಾಂಗ್ರೆಸ್ ಪಕ್ಷ ಒತ್ತಾಯ ಮಾಡುತ್ತಿದೆ. ಈಗಾಗಲೇ ನಮ್ಮ ಸಮ್ಮಿಶ್ರ ಸರ್ಕಾರ ಇದ್ದ ಸಮಯದಲ್ಲಿ ತನಿಖೆಗೆ ಆದೇಶ ಮಾಡಿದ್ದೆವು. ಇದರಲ್ಲಿ ಯಾರೇ ಆಗಲಿ ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ನೊಂದವರಿಗೆ ಮತ್ತೆ ಹಣ ಸಿಗುವಂತಾಗಬೇಕು ಎಂದು ಸರ್ಕಾರವನ್ನು ಒತ್ತಾಯ ಮಾಡುತ್ತೇನೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

‘ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಒಂದು ಮಾತಿನಲ್ಲಿ ಹೇಳುವುದಾದರೆ, ‘There is no Royalty on loyalty’ ಎಂಬಂತಾಗಿದೆ.’

‘ಸರ್ಕಾರ ಹೇಳಿದ ಮೇಲೆ ನಾವು ಲಸಿಕೆ ಪಡೆದಿದ್ದೇವೆ. ಆದರೆ ಈಗ ನಮ್ಮ ಮಕ್ಕಳು ಹೊರ ದೇಶಗಳಿಗೆ ವಿದ್ಯಾಭ್ಯಾಸಕ್ಕೆ ಹೋಗುವಾಗ ತೊಂದರೆ ಆಗುತ್ತಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎಂದರು.

Key words: IT -ED -BJP- leaders -corruption-KPCC President -D.K. Shivakumar