ಬೆಂಗಳೂರು ಆಚೆ ಐಟಿ ಉದ್ಯಮ ವಿಸ್ತರಣೆ: 5 ವರ್ಷಗಳಲ್ಲಿ 30 ಲಕ್ಷ ಹೆಚ್ಚುವರಿ ಉದ್ಯೋಗ ಸೃಷ್ಟಿ-ಡಿಸಿಎಂ ಅಶ್ವಥ್ ನಾರಾಯಣ್….

kannada t-shirts

ಮಂಗಳೂರು,ಫೆಬ್ರವರಿ,24,2021(www.justkannada.in):  ರಾಜಧಾನಿ ಬೆಂಗಳೂರಿನಿಂದ ಹೊರಗೆ ಮಾಹಿತಿ ತಂತ್ರಜ್ಞಾನ ಉದ್ಯಮವನ್ನು ವಿಸ್ತರಿಸಲು ದೊಡ್ಡ ಪ್ರಯತ್ನ ಮಾಡುತ್ತಿರುವ ರಾಜ್ಯ ಸರಕಾರವು ಮಂಗಳೂರು ನಗರವನ್ನು ಅತ್ಯಂತ ಪ್ರಮುಖ ಕ್ಲಸ್ಟರ್‌ ಆಗಿ ಗುರುತಿಸಿದೆ ಎಂದು ಐಟಿ-ಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.jk

ಮಂಗಳೂರಿನಲ್ಲಿಂದು ಬೆಳಗ್ಗೆ ನಡೆದ ʼಮಂಗಳೂರು ಆವಿಷ್ಕಾರ ಸಮಾವೇಶʼವನ್ನು ಉದ್ಘಾಟಿಸಿ  ಭಾಷಣ ಮಾಡಿದ  ಡಿಸಿಎಂ ಅಶ್ವಥ್ ನಾರಾಯಣ್, ಅನೇಕ ವರ್ಷಗಳಿಂದ ತನ್ನಲ್ಲಿ ಅಡಗಿರುವ ಸಂಪನ್ಮೂಲಗಳಿಂದ ಬೆಂಗಳೂರು ಐಟಿ ನಗರವಾಗಿ ಸಹಜವಾಗಿಯೇ ಬೆಳೆದಿದೆ. ಇದೀಗ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳನ್ನು ಒಳಗೊಂಡಂತೆ ಮಂಗಳೂರನ್ನು ಉದಯೋನ್ಮುಖ ತಂತ್ರಜ್ಞಾನ ಕ್ಲಸ್ಟರ್ ಆಗಿ ಗುರುತಿಸಿದ್ದು, ಅದನ್ನು ವೇಗಗತಿಯಲ್ಲಿ ಮುಂದಕ್ಕೆ ಕೊಂಡಯ್ಯಲಾಗುವುದು ಎಂದರು.

ಮುಂದಿನ ದಿನಗಳಲ್ಲಿ ಐಟಿ ಉದ್ಯಮಗಳ ನೆಲೆಯಾಗುವುದರ ಜತೆಗೆ, ನವೋದ್ಯಮಗಳ ತಾಣವಾಗಿಯೂ ಮಂಗಳೂರು ಹೊರಹೊಮ್ಮಲಿದೆ. ಅದಕ್ಕೆ ಬೇಕಾದ ಎಲ್ಲ ಕ್ರಮಗಳನ್ನು ಸರಕಾರ ಕೈಗೊಳ್ಳುತ್ತಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದರು.

ಉತ್ತಮ ಪರಿಸರ, ಪ್ರವಾಸೋದ್ಯಮ, ಅತ್ಯುತ್ತಮ ಶೈಕ್ಷಣಿಕ ವ್ಯವಸ್ಥೆ ಮುಂತಾದ ಪೂರಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮಂಗಳೂರು ನಗರವನ್ನು ಆವಿಷ್ಕಾರ ಹಾಗೂ ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ರೂಪಿಸಲಾಗುವುದು ಎಂದರು

ಐಟಿ ಉದ್ಯಮದ ಜತೆಗೆ ಎಲೆಕ್ಟ್ರಾನಿಕ್‌ ಸಿಸ್ಟಮ್ಸ್‌ ಮತ್ತು ಅಭಿವೃದ್ಧಿ ನಿರ್ವಹಣೆ ಕ್ಷೇತ್ರದಲ್ಲೂ ಮಂಗಳೂರು ನಗರವನ್ನು ಪ್ರಮುಖ ಕ್ಲಸ್ಟರ್‌ ಆಗಿ ನಾವು ಪರಿಗಣಿಸಿದ್ದೇವೆ. ಅಲ್ಲದೆ, ಬೆಂಗಳೂರು ಹೊರಗಿನ ನಮ್ಮ ಯೋಜನೆಗಳ ಮುಖ್ಯ ಭಾಗವಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ರಾಜ್ಯದ ಎಲೆಕ್ಟ್ರಾನಿಕ್ಸ್‌, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಇಲಾಖೆಗಳು ರಾಜ್ಯಾದ್ಯಂತ ಆವಿಷ್ಕಾರ ಹಬ್‌ಗಳನ್ನು ಸ್ಥಾಪಿಸುತ್ತಿವೆ. ಈ ಪಟ್ಟಿಯಲ್ಲಿ ಮಂಗಳೂರು ಕೂಡ ಇದೆ ಎಂದರು ಉಪ ಮುಖ್ಯಮಂತ್ರಿ.

ಇದರ ಜತೆಗೆ ಮಂಗಳೂರು ಸೇರಿದಂತೆ ರಾಜ್ಯದ ಐದು ನಗರಗಳಲ್ಲಿ ಸಿಐಎಫ್‌ ವ್ಯವಸ್ಥೆ ಮಾಡಲಾಗಿದ್ದು, ಓ ಪಟ್ಟಿಯಲ್ಲಿ ಶಿವಮೊಗ್ಗ, ಬೆಳಗಾವಿ, ಮೈಸೂರು ಹಾಗೂ ಬೆಂಗಳೂರು ನಗರಗಳೂ ಇವೆ. ವ್ಯವಸ್ಥೆಯೂ ಕ್ಲಸ್ಟರ್‌ ಗಳ ಅಭಿವೃದ್ಧಿಗೆ ಪೂರಕವಾದ ಕೆಲಸ ಮಾಡುತ್ತವೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ನುಡಿದರು.

ಡಿಜಿಟಲ್‌ ಎಕಾನಮಿ ಮಿಷನ್:‌

ಬೆಂಗಳೂರಿನ ಆಚೆಗಿನ ಪ್ರದೇಶಗಳಲ್ಲಿ ಆವಿಷ್ಕಾರ ಮತ್ತು ತಂತ್ರಜ್ಞಾನದ ಬೆಳವಣಿಗೆಯನ್ನು ಉತ್ತೇಜಿಸಲು, ಡಿಜಿಟಲ್ ಉದ್ಯಮವನ್ನು ಪ್ರೋತ್ಸಾಹಿಸಲು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ರಚಿಸಿಸಲಾಗಿದೆ. ಉದ್ಯಮಗಳ ಬೆಳವಣಿಗೆ- ಹೂಡಿಕೆಗಳನ್ನು ಆಕರ್ಷಿಸಿ ತಂತ್ರಜ್ಞಾನ ಉದ್ಯಮವನ್ನು ಮುನ್ನಡೆಸುವ ನಿಟ್ಟಿನಲ್ಲಿ ಈ ಸಂಸ್ಥೆ ಕೆಲಸ ಮಾಡುತ್ತದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ಮುಂದಿನ 5 ವರ್ಷಗಳಲ್ಲಿ 30 ಲಕ್ಷ ಹೆಚ್ಚುವರಿ ಉದ್ಯೋಗಗಳ ಸೃಷ್ಟಿ

ಆವಿಷ್ಕಾರ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯದ ಆರ್ಥಿಕ ಶಕ್ತಿಯನ್ನು ವೃದ್ಧಿಸುವ ನಿಟ್ಟಿನಲ್ಲಿ ಈ ಮಿಷನ್‌ ಕೆಲಸ ಮಾಡುತ್ತದೆ. ಈ ಮೂಲಕ ನಮ್ಮ ರಾಜ್ಯದ ಜಿಎಸ್‌ಡಿಪಿಯನ್ನು 30% ಹೆಚ್ಚಿಸುವ ಹಾಗೂ ಮುಂದಿನ 5 ವರ್ಷಗಳಲ್ಲಿ 30 ಲಕ್ಷ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿ ಮಾಡುವ ಕಾರ್ಯಸೂಚಿಯೊಂದಿಗೆ ಅದು ಕೆಲಸ ಮಾಡುತ್ತಿದೆ. ಅಲ್ಲದೆ, ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕದ ಐಟಿ ರಫ್ತು ವಹಿವಾಟು 150 ಬಿಲಿಯನ್ ಡಾಲರ್‌ ಮೀರುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದರು ಉಪ ಮುಖ್ಯಮಂತ್ರಿ.

ಆವಿಷ್ಕಾರ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕವು ಜಾಗತಿಕ ಮಟ್ಟದಲ್ಲಿ ದಾಪುಗಾಲು ಇಡುತ್ತಿದ್ದು, ವಿಶ್ವಶಕ್ತಿಯಾಗಿ ಹೊರಹೊಮ್ಮುವ ಎಲ್ಲ ಸಾಮರ್ಥ್ಯವೂ ನಮ್ಮ ರಾಜ್ಯಕ್ಕಿದೆ ಎಂದ ಅವರು; ಇವತ್ತು ಎಲ್ಲರೂ ಡಿಜಿಟಲ್‌ ಕೃಷಿಯ ಬಗ್ಗೆಯೂ ಮಾತನಾಡುತ್ತಿದ್ದಾರೆ. ರಾಜ್ಯವೂ ಈ ನಿಟ್ಟಿನಲ್ಲಿ ವೇಗಗತಿಯಲ್ಲಿ ಸಾಗುತ್ತಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಕೂಡ ಪೂರಕವಾಗಿದೆ ಎಂದರು.

ಸಂಸ್ಕೃತಿ, ಪರಂಪರೆಗೆ ಧಕ್ಕೆ ಆಗದಿರಲಿ: ಕಟೀಲ್‌

ಸಮಾವೇಶದ ಅಧ್ಯಕ್ಷತೆ ವಹಿಸಿ ಮತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಮಂಗಳೂರು ಸಂಸದ ನಳೀನ್‌ ಕುಮಾರ್‌ ಕಟೀಲ್‌ ಅವರು; ರಾಜ್ಯ ಕರಾವಳಿಯ ಮಹತ್ವದ ನಗರವಾದ ಮಂಗಳೂರಿನಲ್ಲಿ ಹೆಚ್ಚೆಚ್ಚು ಉದ್ಯೋಗಾವಕಾಶ ಸೃಷ್ಟಿಯಾಗಬೇಕು, ಉದ್ಯಮಗಳು ಬರಬೇಕು, ಆರ್ಥಿಕ ಚಟುವಟಿಕೆಗಳು ಹೆಚ್ಚಬೇಕು. ಆದರೆ, ಇವೆಲ್ಲವೂ ಮಂಗಳೂರಿನ ಸಂಸ್ಕೃತಿ ಮತ್ತು ಪರಂಪರೆಗೆ ಧಕ್ಕೆಯಾಗದಂತೆ ಆಗಬೇಕು ಎಂದು ಸಲಹೆ ಮಾಡಿದರು.

ಬೆಂಗಳೂರು ಸಾಕಷ್ಟು ಅಭಿವೃದ್ಧಿಯಾಗಿದೆ. ಆದರೆ, ಅಲ್ಲಿ ಮೂಲ ನಿವಾಸಿಗಳನ್ನು ಹುಡಕಬೇಕಾಗಿದೆ. ಅಲ್ಲಿ ಅಪ್ಪಟ ಕನ್ನಡಿಗರನ್ನು ಬಿಟ್ಟು ಉಳಿದ ಎಲ್ಲರೂ ತುಂಬಿಹೋಗಿದ್ದಾರೆ. ಮಂಗಳೂರಿಗೆ ಇಂಥ ಸ್ಥಿತಿ ಬರಬಾರದು. ಮಂಗಳೂರಿಗರನ್ನು ಉಳಿಸಿಕೊಂಡೇ ಮಂಗಳೂರು ಬೆಳೆಯಬೇಕು ಎಂದು ಕಟೀಲ್‌ ಅವರು ಹೇಳಿದರು.

ಈ ಹಿನ್ನೆಲೆಯಲ್ಲಿ ಇಲ್ಲಿನ ಶಿಕ್ಷಣ ತಜ್ಞರು, ಕೈಗಾರಿಕೋದ್ಯಮಿಗಳು, ಅಧಿಕಾರಿಗಳು ಹಾಗೂ ರಾಜಕೀಯ ನಾಯಕರನ್ನು ಒಳಗೊಂಡಂತೆ ಒಂದು ದೊಡ್ಡ ಚರ್ಚೆಯೂ ಆಗಲಿ. ಮಂಗಳೂರಿನಲ್ಲಿ 2023ರ ಹೊತ್ತಿಗೆ ವಾರ್ಷಿಕ 7,500 ಕೋಟಿ ರೂ. ಐಟಿ ವಹಿವಾಟು ನಡೆಸುವಷ್ಟು ಅನುಕೂಲವಿದೆ ಎಂದು ಒಂದು ಸಮೀಕ್ಷೆ ಹೇಳಿದೆ. ಮುಂದಿನ ದಿನಗಳಲ್ಲಿ ಮಂಗಳೂರಿಗೆ ಹೆಚ್ಚೆಚ್ಚು ಉದ್ಯಮಗಳು ಬರಲಿ, ಆ ಉದ್ಯಮಗಳಿಗೆ ಏಕಗವಾಕ್ಷಿ ವ್ಯವಸ್ಥೆ ಮೂಲಕ ಅಲ್ಲ ಒಪ್ಪಿಗೆಗಳನ್ನು ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಕಿಯೋನಿಕ್ಸ್‌ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್‌, ಐಟಿ ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, ಸಿಸಿಐ ಅಧ್ಯಕ್ಷ ಸ್ಟೀವನ್‌ ಡೇವಿಡ್‌, ಕಿಯೋನಿಕ್ಸ್‌ ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್.‌ ಸಿದ್ದರಾಮಪ್ಪ ಮುಂತಾದವುರ ಸಮಾವೇಶದಲ್ಲಿ ಬಾಗಿಯಾಗಿದ್ದರು. ಬಳಿಕ ಕೆಲವಾರು ಚರ್ಚಾಗೋಷ್ಠಿಗಳು ನಡೆದವು.

ವಿದ್ಯಾರ್ಥಿ ದಿನಗಳನ್ನು ನೆನೆದ ಡಿಸಿಎಂ

ಮಂಗಳೂರಿನಲ್ಲಿ ತಮ್ಮ ವಿದ್ಯಾರ್ಥಿ ದಿಗಳಗಳನ್ನು ಮೆಲುಕು ಹಾಕಿದ ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರು; ನನ್ನ ಜೀವನದಲ್ಲಿ ಬಹಳ ಮುಖ್ಯ ಪಾತ್ರ ವಹಿಸಿದ್ದ ಜಾಗಗಳಲ್ಲಿ ಮಂಗಳೂರು ಕೂಡ ಒಂದು. ಈ ಊರಿನ ಋಣ ನನ್ನ ಮೇಲಿದೆ. ಅದೇ ರೀತಿ ಈ ನಗರವನ್ನು ಅಭಿವೃದ್ಧಿಗೊಳಿಸಬೇಕಾದ ಹೊಣೆಗಾರಿಕೆಯೂ ನನ್ನ ಮೇಲಿದೆ. ಇಲ್ಲಿ ಅವಕಾಶಗಳಿಗೆ ಅಂತ್ಯ ಎಂಬುದೇ ಇಲ್ಲ. ಈ ನಗರವು ಅವಕಾಶಗಳ ಹೆಬ್ಬಾಗಿಲು ಎಂದು ಹೇಳಿದರು.IT –business- expansion- beyond –Bangalore-DCM -Ashwath Narayan.

ಕೋವಿಡ್‌ ನಿಯಮ ಪಾಲಿಸಬೇಕು

ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೋವಿಡ್‌ ಮತ್ತೆ ಹೆಚ್ಚಾಗಿರುವ ಕಾರಣ ಸರಕಾರ ಕೆಲ ನಿರ್ಬಂಧಗಳನ್ನು ವಿಧಿಸಿದೆ. ಇದು ಜನರ ಒಳ್ಳೆಯದಕ್ಕೆ ಮಾಡಿರುವ ಕ್ರಮ. ಕೋವಿಡ್‌ ಪರೀಕ್ಷೆ ಮಾಡಿಸಕೊಂಡ ೭೨ ಗಂಟೆಗಳಲ್ಲಿ ರಾಜ್ಯವನ್ನು ಪ್ರವೇಶ ಮಾಡಿದರೆ ಅಭ್ಯಂತರ ಇಲ್ಲ. ಆದರೆ, ಆ ಸಮಯ ಮೀರಿದರೆ ಮತ್ತೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸಂಕಷ್ಟದ ಹೊತ್ತಿನಲ್ಲಿ ಎಲ್ಲರೂ ಸರಕಾರಕ್ಕೆ, ಅಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದು ಉಪ ಮುಖ್ಯಮಂತ್ರಿ ಸಮಾವೇಶದಲ್ಲಿ ಮನವಿ ಮಾಡಿದರು.

Key words: IT –business- expansion- beyond –Bangalore-DCM -Ashwath Narayan.

website developers in mysore