ಮೈಸೂರಿನ ಪ್ರತಿಷ್ಟಿತ ಜವಳಿ ಕೇಂದ್ರದ ಮೇಲೆ ಐಟಿ ಅಧಿಕಾರಿಗಳಿಂದ ದಾಳಿ: 5.80 ಕೋಟಿ ರೂ. ನಗದು ವಶಕ್ಕೆ…

ಮೈಸೂರು,ಆ,22,2019(www.justkannada.in): ಮೈಸೂರು ನಗರದ ಪ್ರತಿಷ್ಟಿತ ಜವಳಿ ಕೇಂದ್ರದ ಮೇಲೆ  ಐಟಿ ಅಧಿಕಾರಿಗಳು ದಾಳಿ ಮಾಡಿ  5.80 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರು ನಗರದಲ್ಲಿನ ಧರ್ಮರಾಜ ಚೆಟ್ಟಿ ಅ್ಯಂಡ್ ಸನ್ಸ್ ಎಂಬವರಿಗೆ ಸೇರಿದ 13.75 ಕೋಟಿ ರೂಪಾಯಿ ಮೌಲ್ಯಕ್ಕೆ ಆಸ್ತಿಯನ್ನು ಮನ್ನಾರ್ಸ್ ಸಿಲ್ಕ್ ಜವಳಿ ಉದ್ಯಮದ ಮಾಲೀಕ ಸಂದೀಪ್ ಖರೀದಿಸಿದ್ದರು. ಈ  ಬಹುಕೋಟಿ ರುಪಾಯಿ ವ್ಯವಹಾರದ ಬಗ್ಗೆ ತೆರಿಗೆ ಇಲಾಖೆ ಅಧಿಕಾರಿಗಳು ಬೆನ್ನು ಹತ್ತಿ ತನಿಖೆ ಆರಂಭಿಸಿದ್ದರು.

ತನಿಖೆಯಲ್ಲಿ ಈ ವ್ಯವಹಾರವನ್ನು ಬ್ಯಾಂಕ್  ಹಾಗೂ ನೇರ ನಗದು ಮೂಲಕ ನಡೆಸಲಾಗಿರುವ ಮಾಹಿತಿಯನ್ನು ಪತ್ತೆ ಮಾಡಿದ್ದರು. ಖಚಿತ ‌ಮಾಹಿತಿ ಮೇಲೆ ನಗರದ ಒಲಂಪಿಯಾ ಚಿತ್ರಮಂದಿರ ಮುಂಭಾಗವಿರುವ ಮನ್ನಾರ್ಸ್ ಸಿಲ್ಕ್ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದಾಗ ಆಸ್ತಿ ಖರೀದಿಗಾಗಿ ಇಟ್ಡಿದ್ದ 5.80 ಕೋಟಿ ರೂ. ಮೊತ್ತ ಸಿಕ್ಕಿದೆ.

ಧರ್ಮರಾಜ ಚೆಟ್ಟಿ ಅ್ಯಂಡ್ ಸನ್ಸ್ ನಿಂದ 13.75 ಕೋಟಿ ರೂಪಾಯಿ ಮೌಲ್ಯಕ್ಕೆ ಆಸ್ತಿ ಖರೀದಿ ಒಪ್ಪಂದ  ಮಾಡಿಕೊಂಡು 8 ಕೋಟಿ ಹಣವನ್ನು ಬ್ಯಾಂಕ್ ಮೂಲಕ ನೀಡಿ ಉಳಿದ  5.80 ಕೋಟಿ ರೂಪಾಯಿಯನ್ನು ನಗದು ಮೂಲಕ ನೀಡಿ ತೆರಿಗೆ ವಂಚಿಸಲು ಪ್ರಯತ್ನಿಸಿರೋದು ಬಯಲಾಗಿದೆ. ಈ  ನಡುವೆ ಐಟಿ ಅಧಿಕಾರಿಗಳು ಸಂದೀಪ್ ಅವರ ಜವಳಿ ಕೇಂದ್ರ ಹಾಗೂ ನಿವಾಸದಲ್ಲಿ ಏಕಕಾಲಕ್ಕೆ ದಾಳಿ ಮಾಡಿ ಮಧ್ಯ ರಾತ್ರಿ ತನಕ ವಿಚಾರಣೆ ನಡೆಸಿದ್ದರು. ಆಸ್ತಿ ಖರೀದಿ ವಿಚಾರದಲ್ಲಿ ಇದೇ ಮೊದಲ ಬಾರಿಗೆ ಐಟಿ ಇಲಾಖೆ ಸಾಂಸ್ಕೃತಿಕ ನಗರಿಯಲ್ಲಿ ಲೆಕ್ಕ ಕೊಡದ ಭಾರೀ ಮೊತ್ತವನ್ನು ವಶಪಡಿಸಿಕೊಂಡಿದೆ.

Key words: IT  -attack-Mysore- prestigious -textile center