ರಾಷ್ಟ್ರೀಯ ಶಿಕ್ಷಣ ನೀತಿ ಮಾರ್ಗಸೂಚಿ ಹೊರಡಿಸಿ

* ಭಾರತದ ವಿಶ್ವವಿದ್ಯಾನಿಲಯಗಳ ಸಂಘದ ಅಧ್ಯಕ್ಷ ಪ್ರೊ. ತಿರುವಾಸಗಂ ಪ್ರತಿಪಾದನೆ

ಮೈಸೂರು, 21, 03, 2022 (www.justkannada.in): ರಾಷ್ಟ್ರೀಯ ಶಿಕ್ಷಣ ನೀತಿ ಘೋಷಣೆಯಾಗಿ ಒಂದೂವರೆ ವರ್ಷ ಕಳೆಯುತ್ತ ಬಂದರೂ ಸರಕಾರವಾಗಲಿ, ಕೇಂದ್ರ ಸಚಿವಾಲಯವಾಗಲಿ ಸೂಕ್ತ ಮಾರ್ಗಸೂಚಿ ಹೊರಡಿಸಿಲ್ಲ. ಹೀಗಾದರೆ ಎನ್‌ಇಪಿ ಸಮರ್ಥ ಅನುಷ್ಠಾನ ಮಾಡಲು ಹೇಗೆ ಸಾಧ್ಯ ಎಂದು ಭಾರತದ ವಿಶ್ವವಿದ್ಯಾನಿಲಯಗಳ ಸಂಘದ ಅಧ್ಯಕ್ಷ ಪ್ರೊ. ತಿರುವಾಸಗಂ ಪ್ರಶ್ನಿಸಿದ್ದಾರೆ.

ಕ್ರಾರ್ಡ್ ಹಾಲ್ ಶೈಕ್ಷಣಿಕ ಮಂಡಳಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ ಒಳ್ಳೆಯ ಯೋಜನೆ. ಆದರೆ, ಸರಕಾರ ಅಥವಾ ಯುಜಿಸಿ ಇದಕ್ಕೊಂದು ಗೈಡ್‌ಲೈನ್ ಹಾಕಿಕೊಟ್ಟಿಲ್ಲಘಿ. ಹೀಗಾಗಿ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ಸಹಜವಾಗಿ ಗೊಂದಲ ಮೂಡಿದೆ. ಮಾ.23ರಿಂದ ಮೈಸೂರು ವಿಶ್ವವಿದ್ಯಾಲಯದಲ್ಲಿ ಮೂರು ದಿನ ವಿಶ್ವವಿದ್ಯಾನಿಲಯ ಕುಲಪತಿಗಳ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನದಲ್ಲಿ ಎನ್‌ಇಪಿ ಜಾರಿ, ಸರಕಾರದ ಪಾತ್ರ, ವಿವಿಗಳ ಆದ್ಯತೆ ಮುಂತಾದ ಸಂಗತಿಗಳ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಅಂತಿಮವಾಗಿ ಕೈಗೊಳ್ಳುವ ನಿರ್ಣಯಗಳನ್ನು ಸರಕಾರಕ್ಕೆ ಕಳುಹಿಸಲಾಗುತ್ತದೆ ಎಂದರು.

ಪ್ರತಿವರ್ಷ ಭಾರತದ ವಿಶ್ವವಿದ್ಯಾನಿಲಯಗಳ ಸಂಘವು ಐದು ವಿಭಾಗೀಯ ಸಮ್ಮೇಳ ಹಾಗೂ 1 ರಾಷ್ಟ್ರೀಯ ಸಮ್ಮೇಳನವನ್ನು ನಡೆಸುತ್ತದೆ. ಈ ವರ್ಷ ಐದು ವಿಭಾಗೀಯ ಸಮ್ಮೇಳನವನ್ನು ಈಗಾಗಲೇ ಮಾಡಲಾಗಿದ್ದುಘಿ, ರಾಷ್ಟ್ರೀಯ ಸಮ್ಮೇಳನವನ್ನು ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿದೆ. ಸಂಶೋಧನೆ, ಶೈಕ್ಷಣಿಕ ಚಟುವಟಿಕೆ, ಕ್ರೀಡೆ, ಸಾಂಸ್ಕೃತಿಕ ಕಾರ‌್ಯಕ್ರಮಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ ಮಾಡಿ ಸರಕಾರಕ್ಕೆ ಸಲಹೆ ನೀಡುವ ಕೆಲಸ ಮಾಡಲಾಗುತ್ತದೆ. ಕಳೆದ ವರ್ಷ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಬಗ್ಗೆ ಥೀಮ್ ಇಟ್ಟುಕೊಳ್ಳಲಾಗಿತ್ತು. ಸದ್ಯ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಎನ್‌ಇಪಿ ಅನುಷ್ಠಾನಕ್ಕೆ ಸ್ಪಂದಿಸಿಲ್ಲ ಎಂದರು.
ಏಕರೂಪದ ಸೇವಾವಧಿ ಬರಲಿ
ಕುಲಪತಿಗಳ ಸೇವಾ ಅವಧಿಯು ಸದ್ಯ ಭಾರತದಲ್ಲಿ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿ ಇದೆ. ಕರ್ನಾಟಕದಲ್ಲಿ 4 ವರ್ಷ ಇದ್ದರೆ, ತಮಿಳುನಾಡಿನಲ್ಲಿ ಮೂರು ವರ್ಷ ಇದೆ. ಉತ್ತರದ ಬಹುತೇಕ ರಾಜ್ಯಗಳಲ್ಲಿ ಐದು ವರ್ಷ ಅವಧಿ ಇದೆ. ಹೀಗಾಗಿ ಇಡೀ ಭಾರತದ ಎಲ್ಲಾ ವಿವಿಗಳಲ್ಲಿ ಏಕರೂಪದ ಸೇವಾ ಅವಧಿ ಬರಬೇಕು. ಅಲ್ಲದೆ, ಭಾರತದಲ್ಲಿ 1800 ವಿವಿಗಳಿದ್ದು, ಇದರಲ್ಲಿ 523 ಡೀಮ್ಡ್ ಹಾಗೂ ಖಾಸಗಿ ವಿವಿಗಳಿವೆ. ಉನ್ನತ ಶಿಕ್ಷಣದಲ್ಲಿ ಶೇ.20ರಷ್ಟು ಕೊಡುಗೆಯನ್ನು ಖಾಸಗಿ ಹಾಗೂ ಡ್ರೀಮ್ಡ್ ವಿವಿಗಳು ನೀಡುತ್ತಿವೆ.ಆದರೆ, ಅನುದಾನ ಹಂಚಿಕೆಯಲ್ಲಿ ಸರಕಾರಿ ಹಾಗೂ ಖಾಸಗಿ ವಿವಿ ಎಂಬ ಬೇಧಭಾವ ಮಾಡಬಾರದು. ಅದರಲ್ಲೂ ಎನ್‌ಇಪಿ ಅನುಷ್ಠಾನಕ್ಕೆ ಬಿಡುಗಡೆ ಆಗುವ ಅನುದಾನ ಸಮಾನವಾಗಿ ಹಂಚಿಕೆಯಾಗಬೇಕೆಂದು ಒತ್ತಾಯಿಸಿದರು.

ಅನುದಾನ ಇಲ್ಲ
ಕಳೆದ ಮೂರು ವರ್ಷದಲ್ಲಿ ಕೋವಿಡ್ ಕಾರಣದಿಂದ ಭಾರತದ ಯಾವ ವಿವಿಗಳಿಗೂ ಯುಜಿಸಿ ಹಾಗೂ ಸರಕಾರಗಳು ಯಾವುದೇ ಅನುದಾನವನ್ನು ಬಿಡುಗಡೆ ಮಾಡಿಲ್ಲಘಿ. ಇದರಿಂದ ಸಂಶೋಧನಾ ಚಟುವಟಿಕೆಗಳು ಕುಂಠಿತವಾಗಿದೆ. ಹಾಗಾಗಿ ಈ ಬಾರಿ ಸಮ್ಮೇಳನದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಹಾಗೂ ಅನುದಾನ ಹಂಚಿಕೆ ಬಗ್ಗೆ ಚರ್ಚಿಸಿ ಸರಕಾರಕ್ಕೆ ವರದಿ ನೀಡಲಾಗುವುದು ಎಂದರು. ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ಎನ್‌ಇಪಿ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿರುವುದು ಸಂತೋಷದ ವಿಷಯ. ಅಲ್ಲದೆ, ರಾಜ್ಯದಲ್ಲಿ ಮೈಸೂರು ವಿಶ್ವವಿದ್ಯಾಲಯ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡ ಮೊದಲ ವಿವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೆ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರನ್ನು ಅಭಿನಂದಿಸುತ್ತೇನೆ ಎಂದರು.